ಮುಖಾರಿ ಝಂಪೆ
ಏನು ಮಡಿದರೇನು ಭವ ಹಿಂಗದು
ದಾನವಾಂತಕ ನಿನ್ನ ದಯವಾಗದನಕ ಪ
ಅರುಣೋದಯದಲೆದ್ದು ಅತಿಸ್ನಾನಗಳ ಮಾಡಿ
ಬೆರಳೆಣಿಸದೆ ಅದರ ನಿಜವರಿಯದೆ
ಚರಣ ಸಾಷ್ಟಾಂಗವನು ಮಾಡಿ ನಾ ದಣಿದೆನೊ
ಹರಿ ನಿನ್ನ ಕರುಣಕಟಾಕ್ಷವಾಗದನಕ ೧
ಶ್ರುತಿಶಾಸ್ತ್ರ ಪುರಾಣಗಳನೋದಿ ಬೆಂಡಾದೆ
ಅತಿಶೀಲಗಳನೆಲ್ಲ ಮಾಡಿ ದಣಿದೆ
ಗತಿಯ ಪಡೆವೇನೆಂದು ಕಾಯ ದಂಡಿಸಿದೆನೊ
ರತಿಪತಿಪಿತ ನಿನ್ನ ದಯವಾಗದನಕ ೨
ಧ್ಯಾನವನು ಮಾಡಿದೆನು ಮೌನವನು ತಾಳಿದೆನು
ನಾನು ಪುರುಷಾರ್ಥಕೆ ಮನವನಿಕ್ಕಿ
ಅನಾಥ ಬಂಧು ಶ್ರೀ ಪುರಂದರವಿಠ್ಠಲನ
ಧ್ಯಾನಿಸುವರೊಡಗೂಡಿ ನೆಲೆಗಾಣದನಕ ೩
*****
