ಭಕ್ತಿಯಿಲ್ಲದ ನರಗೆ ಮುಕ್ತಿಯಹುದೆ?

ರಾಗ — ಕಾಂಬೋದಿ
ತಾಳ — ಝಂಪೆ

ಬಾಯಿ ನಾರಿದ ಮೇಲೆ ಏಕಾಂತವೆ |
ತಾಯಿ ತೀರಿದ ಮೇಲೆ ತವರಾಸೆಯೆ? ||ಪ||

ಕಣ್ಣು ಕೆಟ್ಟಮೇಲೆ ಕಡುರೂಪ ಚೆಲ್ವಿಕೆಯೆ |
ಬಣ್ಣಗುಂದಿದ ಮೇಲೆ ಬಹುಮಾನವೆ ||
ಪುಣ್ಯ ತೀರಿದ ಮೇಲೆ ಪರಲೋಕಸಾಧನವೆ |
ಸುಣ್ಣವಿಲ್ಲದ ವೀಳ್ಯವದು ಸ್ವಾದುಮಯವೆ? ||೧||

ಕಿಲುಬಿನಾ ಬಟ್ಟಲೊಳು ಹುಳಿ ಕಲಸಿ ಉಣಬಹುದೆ |
ಚಳಿಯುರಿಗೆ ಚಂದನದ ಲೇಪ ಹಿತವೆ ||
ಮೊಲೆ ಬಿದ್ದ ಹೆಣ್ಣಿನೊಳು ಮೋಹಕ್ಕೆ ಸೊಗಸಹುದೆ |
ಬೆಲೆಬಿದ್ದ ಸರಕಿನೊಳು ಲಾಭವುಂಟೆ? ||೨||

ಪಥ್ಯ ಸೇರದ ಮೇಲೆ ನಿತ್ಯ ಸುಖವೆನೆಬಹುದೆ |
ಸತ್ತ್ವ ತಗ್ಗಿದ ಮೇಲೆ ಸಾಮರ್ಥ್ಯವೆ ||
ಪೃಥ್ವಿಯೊಳು ಕಾಗಿನೆಲೆಯಾದಿಕೇಶವ ನಿನ್ನ |
ಭಕ್ತಿಯಿಲ್ಲದ ನರಗೆ ಮುಕ್ತಿಯಹುದೆ? ||೩||
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.