‘ಇಡೀ ಜಗತ್ತೇ ಒಂದು ನಾಟಕ ರಂಗ’ ಎಂದ ಷೇಕ್ಸ್‌ಪಿಯರ್.
ಅದು ಅಕ್ಷರಶಃ ನಿಜ ಎಂಬುದನ್ನು ವಿವಿಧ ವ್ಯಕ್ತಿಗಳ- ವೈವಿಧ್ಯಮಯ ಬದುಕನ್ನು ಸೂಕ್ಷ್ಮವಾಗಿ ಗಮನಿಸಿದಾಗ ವೇದ್ಯವಾಗುವುದು ಸತ್ಯ.
ಓಹೋ! ಅಲ್ಲಿ ಎಷ್ಟೊಂದು ವರ್ಣಮಯ ವ್ಯಕ್ತಿಗಳಿದ್ದಾರೆ.
ಅವರ ಅಂತರಂಗ-ಬಹಿರಂಗಗಳಿಗೆ ಕನ್ನಡಿ ಹಿಡಿಯುತ್ತ ಹೋದರೆ, ನಾವು ಮಹಾಯೋಗ್ಯ ಎಂದು ಕೊಂಡವನು ಅಯೋಗ್ಯನಾಗಿರುತ್ತಾನೆ, ನಯವಂಚಕನಂತೆ ಅದರಿಂದಲೆ ನಿಮಗೂ ಬಹಳಷ್ಟು ಕಹಿ ಅನುಭವಗಳಾದಾಗ ಯಾವುದು ಬಂಗಾರ? ಯಾವುದು ಕಾಗೆ ಬಂಗಾರ? ಯಾವುದು ಸತ್ಯ-ಯಾವುದು ಮಿಥ್ಯ ಎಂಬುದರ ಬಗ್ಗೆ ಗೊಂದಲವಾಗುವುದು ನಿಜ.
ಅಂಥ ಗೊಂದಲದ ಗೋಜಿಗೆ ನಾನೂ ಬಹಳಷ್ಟು ಬಾರಿ ಸಿಲುಕಿರುವುದುಂಟು-ಎದುರಿಗೊಂದು ಮಾತು, ಹಿಂದೊಂದು ಮಾತು, ಮುಂದೆ ಹೊಗಳಿಕೆ ಮತ್ತೊಂದೆಡೆ ತೆಗಳಿಕೆ-ಹೀಗೆ ಮುಖವಾಡದ ಬದುಕನ್ನೇ ತಮ್ಮ ಉಸಿರಾಗಿಸಿಕೊಂಡ ‘ಘ’ಗಳನ್ನು ಕಂಡು ನಕ್ಕಿದ್ದೇವೆ.
ಅಂಥವರಿಗೆ ಬದುಕೂ ಒಂದು ಆಟ. ನಿಜ. ಆದರೆ ಕಂಡವರ ಬದುಕಿನಲ್ಲಿ ಆಟವಾಡುವ ಅಂಥ ಮಂದಿ ಮಹಾ ಡೇಂಜರಸ್.
ಮೊನ್ನೆ ಒಬ್ಬ ಜಾದೂಗಾರ ಮೂರು ಬಣ್ಣದ ಚೆಂಡುಗಳನ್ನು ರಂಗದ ಮೇಲೆ ತಂದು ತನ್ನ ಎರಡು ಕೈಗಳಿಂದ ಅದರೊಡನೆ ಚೆಲ್ಲಾಟವಾಡಿದಾಗ ‘ವಾರೆವ’ ಎನಿಸಿತು-ಅವನ ಕೈ ಚಳಕಕ್ಕೆ ನಾನೂ ಮಾರುಹೋದೆ. ಅದು ರಂಗದ ಮೇಲೆ ನಾವು ಕಾಣುವ ಹೊರಗಿನಾಟ. ಅಂಥ ಆಟ ಪ್ರತಿಯೊಬ್ಬರ ಮನದ ಅಂತರಾಳದಲ್ಲೂ ಪ್ರತಿನಿಮಿಷ ಪ್ರತಿಕ್ಷಣ ನಡೆಯುತ್ತಿರುತ್ತದೆ. ಅದು ಒಳಗಿನಾಟ. ಒಳಗೇನಾಗುತ್ತಿದೆ ಎಂಬುದು ನಮಗೆ ತಿಳಿಯುವುದು ಅವನು ಬಾಯಿಬಿಟ್ಟಾಗ ಮಾತ್ರ. ಇಂಥ ಊಸರವಳ್ಳಿಗಳನ್ನು ನೀವು ಕಂಡಿರಬೇಕು.
ಅಂಥ ಒಂದು ಕತೆ ಕೇಳಿ. ಒಬ್ಬ ಚಿತ್ರಕಲಾವಿದೆ. ಆಕೆ ಚಿತ್ರಿಸುತ್ತಿದ್ದುದು ಪ್ರಕೃತಿ ಚಿತ್ರಗಳೂ ಅಲ್ಲ-ವಾಸ್ತವ ಚಿತ್ರಗಳು ಅಲ್ಲ.
ಮನಸ್ಸಿನ ಭಾವನೆಗಳಿಗೆ-ವ್ಯಕ್ತಿಯನ್ನು ಕಂಡಾಗ ತಕ್ಷಣ ಆಕೆಗೆ ಅನಿಸಿದ ಅನಿಸಿಕೆಗಳಿಗೆ, ಸ್ವಭಾವದ ವಿಚಿತ್ರ ವಿಕೃತಿಗಳಿಗೆ, ಹೊರನೋಟಕ್ಕೆ ಚೆಂದವಲ್ಲದಿದ್ದರೂ ಆತನ ಮೃದು ಮಧುರ ಭಾವನೆಗಳು ಅಂದ ಚೆಂದಕ್ಕೆ ಆಕೆ ಮಹತ್ವವೀಯುತ್ತಿದ್ದುದರಿಂದ ಆಕೆಯ ಕೃತಿಗಳಲ್ಲಿ ಇಲ್ಲಿಯ ಮಣ್ಣಿನ ವಾಸನೆ ಇರುತ್ತಿತ್ತು ಮತ್ತು ಮೊದಲ ನೋಟಕ್ಕೆ ಅರ್ಥವಾಗುವುದು ಕಷ್ಟವೆನಿಸುತ್ತಿತ್ತು.
ಭಾರಿ ಭಾರಿ ಆರ್ಟ್ಸ್ ಗ್ಯಾಲರಿಯಲ್ಲಿ ಆಕೆಯ ಕಲಾ ಪ್ರದರ್ಶನಗಳಾದಾಗ ಪ್ರತಿಬಾರಿಯೂ ಒಬ್ಬ ಶ್ರೀಮಂತ ಯುವಕ ಕಾರಿನಲ್ಲಿ ಬಂದಿಳಿಯುತ್ತಿದ್ದ. ಪ್ರತಿ ಕೃತಿಯನ್ನೂ ತುಂಬಾ ಕುತೂಹಲದಿಂದ ವೀಕ್ಷಿಸಿ. ಹೊರಡುವಾಗ ಒಂದೆರಡು ಕೃತಿ ಕೊಳ್ಳುತ್ತಿದ್ದ. ಇದರಿಂದ ಕಲಾವಿದೆಗೆ ಆತನ ಬಗ್ಗೆ ತುಂಬ ಒಲವಿತ್ತು.
ಈ ಸಾರಿಯೂ ಆತ ೧೦ ಸಾವಿರ ರೂ. ಗೆ ಒಂದು ಕೃತಿ ಕೊಂಡ. ಆಕೆಯ ಕಲ್ಪನೆಯನ್ನ, ವರ್ಣವೈಖರಿಯ ಸೊಗಸನ್ನ, ಕಾನ್‌ಸೆಪ್ಟನ್ನ ಕ್ಯಾನ್‌ವಾಸಿನ ಮೇಲೆ ಬಿಡಿಸಿಟ್ಟಿರುವ ರೀತಿ ಪ್ರಶಂಸಿದ. ಹಿರಿಹಿರಿ ಹಿಗ್ಗಿದ ಕಲಾವಿದೆ ತೆರಳಿದಳು ಕಾಫಿಗೆ ಆತನೊಂದಿಗೆ. ಕಲಾವಲಯದ ಎಲ್ಲ ಪ್ರಕಾರಗಳ ಬಗ್ಗೆ ಮಾತು ಹಕ್ಕಿಯಂತೆ ಹಾರಾಡಿದಾಗ ಆತ್ಮೀಯತೆಯ ಶೃತಿ ಮಿಡಿದು ಪ್ರೀತಿ-ಪ್ರೇಮಗಳ ಕಂಪುನುಸುಳಿ ನಾಲ್ಕು ಕಣ್ಣುಗಳು ಒಂದಾಗಿ ಒಬ್ಬರನ್ನೊಬ್ಬರು ಒಪ್ಪಿದರು ಅಪ್ಪಿದರು. ತನ್ನ ಕಲಾಕೃತಿಗಳನ್ನು ಬಹುವಾಗಿ ಮೆಚ್ಚಿ ಎಲ್ಲ ಏಕವ್ಯಕ್ತಿ ಕಲಾಪ್ರದರ್ಶನಕ್ಕೂ ಬಂದು ತನ್ನ ಕೃತಿಗಳನ್ನು ಕೊಂಡ ಈತನೇ ನನ್ನ ಬಾಳ ಸಂಗಾತಿ ಎಂದು ನಿರ್ಧರಿಸಿದಳು.
ಎಂಗೇಜ್ ಮೆಂಟಿಗೊಂದು ದಿನ ಗೊತ್ತಾಯಿತು.
ಕಲಾವಿದೆ ಸಂಭ್ರಮದಿಂದ ಅಣಿಯಾದಳು ಅವನ ಮನೆಗೆ ತೆರಳಲು.
ಟೈಂ ಕೀಪಪ್ ಮಾಡುವುದರಲ್ಲಿ ಯುವ ಪ್ರೇಮಿಗಳು ಅಗ್ರಗಣ್ಯರು. ಬಂದ ಆತ ಕಾರಿನಲ್ಲಿ ಇಬ್ಬರೂ ತೆರಳಿದರು ಅವರ ಮನೆಯತ್ತ.
ದಾರಿಯುದ್ದಕ್ಕೂ ಇವರ ಜಗತ್ತೇ ಬೇರೆ. ಕಲ್ಪನಾಲೋಕದಲ್ಲಿ ವಿಹರಿಸುತ್ತಿದ್ದಾಳೆ ಆಕೆ.
ಇಂಥ ಒಳ್ಳೆ ಕಲಾಭಿರುಚಿ ಇರುವ ತನ್ನ ಪ್ರೇಮಿಯ ‘ಮನೆ ಹೇಗಿದ್ದೀತು? ಆತ ಗೋಡೆಯ ಮೇಲೆ ತನ್ನ ಎಲ್ಲ ಕಲಾಕೃತಿಗಳನ್ನು ಕಲಾತ್ಮಕವಾಗಿ ವಿನ್ಯಾಸ ಮಾಡಿರುವ ರೀತಿ ಹೇಗಿದ್ದೀತು? ಮುಂದೆ ಅಲ್ಲೊಂದು ಆರ್ಟ್ ಗ್ಯಾಲರಿ ಮಾಡಬಾರದೇಕೆ? ಎಂದು ಚಿಂತಿಸುವ ಹೊತ್ತಿಗೆ ಮನೆ ಬಂದೇ ಬಿಟ್ಟಿತು.
‘ಕಮಾನ್ ಡಾರ್ಲಿಂಗ್’ ಎಂದ ಆತ ಕಾರ್ ಡೋರ್ ತೆಗೆದು ಸ್ವಾಗತಿಸಿದಾಗಲೆ ಅವಳು ಮತ್ತೆ ಎಚ್ಚರವಾದದ್ದು.
ಲಗುಬಗೆಯಿಂದ ಒಳ ನಡೆದಳು ಸಂಭ್ರಮದಿಂದ. ತನ್ನ ಕಲಾಕೃತಿಗಳನ್ನು ಕಾಣುವ ಖುಶಿಯಿಂದ ಅವಳ ಕಣ್ಣುಗಳು ಜಿಂಕೆಯಂತೆ ಅತ್ತಿತ್ತ ಅಡ್ಡಾಡುತ್ತಿತ್ತು.
‘ಫಸ್ಟ್ ಟೈಂ ನಂ ಮನೆಗೆ ಬರ್ತಿದಿ, ವೆಲ್‌ಕಂ’ ಎಂದ.
ಒಳ ನಡೆದಾಗ ಅವಳಿಗೆ ಭರ್ಜರಿ ಷಾಕ್, ನಾಲ್ಕೂ ಗೋಡೆಗಳೂ ಖಾಲಿ. ತನ್ನ ಒಂದು ಚಿತ್ರಗಳೂ ಅಲ್ಲಿರಲಿಲ್ಲ.
ಈ ಕಲಾವಿದೆ ಆಶಾವಾದಿ.
ಮನೆಯಲ್ಲಿ ಒಂದು ಆರ್ಟ್ ಗ್ಯಾಲರಿ ಇರಬಹುದು ಎಂದು ಭಾವಿಸಿ ‘ನೋಡೋಣ’ ಮನೆ ಎಲ್ಲ’ ಅಂದಳು. ಮಹಡಿ ಹತ್ತಿ ಇಳಿದರು. ಇಟ್ ವಾಸ್ ಎ ಫೆಂಟಾಸ್ಟಿಕ್ ಹೌಸ್.
‘ಅದ್ಸರಿ, ಎಲ್ಲಿ ಎಲ್ಲೂ ನನ್ನ ಒಂದೂ ಪೈಂಟಿಂಗೂ ಕಾಣಲಿಲ್ಲವಲ್ಲ ಎಂದಳು.
‘ಅನ್ಕೋತಿದ್ದೆ, ಏನು ಇಷ್ಟು ಹೊತ್ತಾದರೂ ಈ ಪ್ರಶ್ನೆ ಕೇಳಲಿಲ್ಲವಲ್ಲ ಅಂತ. ಕಮಾನ್ ಅದು ಇಟ್ಟಿರೋ ಜಾಗ ತೋರಿಸ್ತೀನಿ ಅಂತ ಒಂದು ಕೋಣೆ ಬಾಗಿಲು ತೆಗೆದ. ಅದು ಒಂದು ರೀತಿ ಗೋಡೌನ್ ಅಲ್ಲಿ ಚಿತ್ರಗಳು ಅಡ್ಡಾದಿಡ್ಡಿ ಬಿದ್ದಿದ್ದವು. ಅವುಗಳನ್ನು ಕಂಡು ಇವಳ ರೋಷ ಉಕ್ಕಿತು.
‘ಇವುಗಳನ್ನು ಕೊಂಡಿದದು ಯಾಕೆ?’ ಅಂದಳು.
‘ನಿನ್ನ ಒಲಿಸ್ಕೊಳ್ಳಕ್ಕೆ ಅಷ್ಟೆ. ನಿನ್ನ ಬ್ಯೂಟಿ ಮುಂದೆ ಇವೆಲ್ಲ ನಿವ್ವಾಳಿಸಿ ಬಿಸಾಕಬೇಕು’
‘ನನ್ನ ಪೈಂಟಿಂಗ್ ಅಂದ್ರೆ ಪ್ರಾಣ ಅನ್ನೋ ಹಾಗೆ ಬಿಹೇವ್ ಮಾಡಿದಿರಿ ಇದುವರೆಗೆ’
‘ಏನು ಮಾಡಿದರೆ ಯಾರ್ಯಾರನ್ನು ಹ್ಯಾಗೆ ಬುಟ್ಟಿಗೆ ಹಾಕ್ಕೋಬಹುದು ಅನ್ನೋದು ನಂಗೆ ಚೆನ್ನಾಗಿ ಗೊತ್ತು. ಡೋಂಟ್ ವರಿ. ನೀನು ಪೈಂಟಿಂಗ್ ಮಾಡಿ-ಅದನ್ನು ಮಾರಿ ಬಂದ ದುಡ್ಡಿನಿಂದ ಬದುಕಬೇಕಾಗಿಲ್ಲ. ನಾನು ಲಕ್ಷಾಧೀಶ’ ಎಂದ
ತಕ್ಷಣ ಆಕೆ ರೇಗಿ “ಐ ಕೇರ್ ಟು ಹೂಟ್ಸ್ ಫಾರ್… ಛೇ… ಐ ಹೇಟ್ ಯೂ” ಎಂದು ಬಿರಬಿರನೆ ನಡೆದೇ ಬಿಟ್ಟಳು. ಅವರಿಬ್ಬರ ಎಂಗೇಜ್‌ಮೆಂಟ್ ಆಗಲೇ ಇಲ್ಲ. ಈಗ ಆಕೆ ಇಂಟರ್‌ನ್ಯಾಷನಲ್ ಪೈಂಟರ್… ಆತ ಮಾತ್ರ ಇಂದೂ ಸುಂದರಿಯರನ್ನು ಹಂಟ್ ಮಾಡುತ್ತಿರುವ ಹಂಟರ್.
ಇಂಥ ಸ್ವಭಾವದವರು ಇದೀಗ ರಾಜಕೀಯ, ಕಲಾರಂಗ, ಪತ್ರಿಕಾ ವಲಯ, ಕಾಲೇಜು ರಂಗ, ಚಲನಚಿತ್ರರಂಗ ಹೀಗೆ ಎಲ್ಲೆಡೆ ತುಂಬಿ ತುಳುಕಿದ್ದಾರೆ.
ಅಂಥವರನ್ನು ಗುಮಾನಿಯಿಂದ ನೋಡದೆ ಅವರ ಮಾತಿಗೆ, ನಗುವಿಗೆ-ಹೊಗಳಿಕೆಗೆ ಮೆಚ್ಚುಗೆ ಬರಹಗಳಿಗೆ ಮಾರು ಹೋದರೆ ಬದುಕು ಒಡಕು ಮಡಕೆಯಾಗುತ್ತದೆ.
ಎಚ್ಚರ ತಪ್ಪಿದರೆ ರೈಲು ಹೋದ ಮೇಲೆ ಟಿಕೇಟ್ ತಗೊಂಡಂತೆ ಆಗುತ್ತದೆ. ಅದರಿಂದಲೇ ‘ಹುಶಾರ್’ ಎನ್ನುತ್ತಿರುವುದು.
*****
(೧೧-೧೦-೨೦೦೨)
