ಸಿನಿಮಾ ನಟ-ನಟಿಯರ ಗೊಂದಲ?

ಕಳೆದವಾರ ‘ಅಭಿ’ ಮುಹೂರ್ತ ಸಮಾರಂಭದಂದು ಡಾ. ರಾಜ್‌ಕುಮಾರ್ ತುಂಬ ಮುಕ್ತವಾಗಿ ಚಿತ್ರರಂಗ ಬೆಳೆದು ಬಂದ ದಾರಿ ಬಣ್ಣಿಸುತ್ತ-ಶರತ್‌ಚಂದ್ರರರ ಕೃತಿ ಬಗ್ಗೆಯೂ ಪ್ರಸ್ತಾಪಿಸಿ, ಕೊನೆಗೂ ಉಳಿಯುವ ‘ಶೇಷ ಪ್ರಶ್ನೆ’ ಬಗ್ಗೆ ಪ್ರಸ್ತಾಪಿಸಿದರು.

ಒಬ್ಬ ಕಲಾವಿದ ಎತ್ತರಕ್ಕೆ ಬೆಳೆಯಲು ಸ್ವವಿಮರ್ಶೆ ಹೇಗೆ ಅಗತ್ಯವೋ ಹಾಗೆ ಚಿತ್ರಕ್ಕೆ ಕಥೆ ಅಣಿ ಮಾಡುವಾಗ, ಚರ್ಚೆಯ ಹೊತ್ತಿನಲ್ಲಿ ಏಳುವ ಪ್ರಶ್ನೆಗಳು ಕತೆಗೊಂದು ಗಟ್ಟಿರೂಪ ಬರಲು ಬಹುಮುಖ್ಯವಾಗುತ್ತವೆ ಎಂದರು… ಆ ಕುರಿತು ಚಿಂತಿಸುತ್ತ ನಡೆದಾಗ ಅನಿಸಿದ್ದು….

ಟಿ.ವಿ. ಛಾನೆಲ್‌ಗಳು: ಈಗ ಛಾನೆಲ್‌ಗಳು ಅತಿಯಾದಂತೆ ಎಲ್ಲ ಕಾರ್ಯಕ್ರಮಗಳೂ ಒಂದಲ್ಲ ಒಂದು ರೀತಿ ಸಿನಿಮಾ ಓರಿಯೆಂಟೆಡ್ ಎನುವಂತಾಗಿದೆ, ನಟ- ನಟಿಯರ ಗ್ಲಾಮರ್ ಕಾರ್ಯಕ್ರಮದ ಜನಪ್ರಿಯತೆ ಹೆಚ್ಚಿಸೀತು ಎಂಬ ಕಾರಣಕ್ಕೆ ಜೀ ಟಿವಿ, ಸೋನಿ ಮುಂತಾದವು ತುಂಬ ಸೃಜನಾತ್ಮಕ ಕಾರ್ಯಕ್ರಮ ಹಮ್ಮಿ ಕೊಳ್ಳುತ್ತಿವೆ. ಕನ್ನಡ ಛಾನೆಲ್‌ಗಳೂ ಈ ದಿಕ್ಕಿನಲ್ಲಿ ಚಿಂತಿಸಿದಾಗ ಕಿರುತೆರೆಯಲ್ಲಿ ‘ಧುತ್’ ಎಂದು ಬಗೆ ಬಗೆ ಕಾರ್ಯಕ್ರಮಗಳು ಪ್ರತ್ಯಕ್ಷವಾದರೂ ಅದು ‘ತುಥ್’ ಎನುವಂತಿವೆ.

ನಟ-ನಟಿಯರು ತಮ್ಮ ಗೊಂದಲಗಳನ್ನು ಏಕಾಂತದಲ್ಲಿ ಕುರಿತು ಚಿಂತಿಸಿದಲ್ಲಿ ಸರಿದಿಕ್ಕು ಕಂಡೀತು. ಅದರೀಗ ಎಲ್ಲ ಚಿತ್ರ ರಸಿಕರಿಗೆ ಅಜೀರ್ಣವಾಗುವಷ್ಟು ಪ್ರಶ್ನೆಗಳನ್ನು ಎಸೆಯುತ್ತಿದ್ದಾರೆ. ಉತ್ತಮ ಉತ್ತರ ನೀಡಿದವರಿಗೆ ಬಹುಮಾನಗಳನ್ನು ಘೋಷಿಸಿ ಕಲಾವಿದ ರೊಂದಿಗೆ ಭೇಟಿಯಾಗುವ ಸದವಕಾಶವೆಂಬ ಆಸೆಯನ್ನೂ ಇಡುತ್ತಿದ್ದಾರೆ ಛಾನೆಲ್‌ಗಳವರು.

ವಿಚಿತ್ರ ಪ್ರಶ್ನೆಗಳು: “ನಾನು ಕನ್ನಡ ಚಿತ್ರರಂಗದಲ್ಲಿ ಜನಪ್ರಿಯ ನಟನಾಗಿರುವೆ. ಜತೆ ಜತೆಯಲ್ಲೇ ಚಿತ್ರ ನಿರ್ದೇಶನವನ್ನೂ ಮಾಡುತ್ತಿರುವೆ. ಮುಂದೆ ನಾನೇನು ಮಾಡಲಿ? ನಟನಾಗಿ ಮುಂದುವರಿಯಲೊ-ನಿರ್ದೇಶಕನಾಗಿ ಮುಂದುವರಿಯಲೋ?” ಎಂದು ಒಬ್ಬ ನಟ ಕೇಳಿದರೆ.

“ನಾನು ಇಂಥವರನ್ನು ಮೆಚ್ಚಿ ಮದುವೆಯಾದೆ. ಈ ಜನಪ್ರಿಯ ನಟನನ್ನು ನಾನು ಯಾವಕಾರಣಕ್ಕೆ ಮೆಚ್ಚಿದೆ ಎಂಬುದನ್ನು ಹೇಳಬಲ್ಲಿರಾ?” ಎಂದು ಒಬ್ಬ ಜನಪ್ರಿಯ ನಟಿ ಕೇಳುತ್ತಾಳೆ.

“ನಾನೀಗ ನಾಯಕನ ಪಾತ್ರಗಳೂ ಮಾಡುತ್ತಿರುವೆ. ರೌಡಿ ಪಾತ್ರಗಳನ್ನೂ ಮಾಡುತ್ತಿರುವೆ, ಸೆಂಟಿಮೆಂಟ್ ಪಾತ್ರಗಳನ್ನೂ ಮಾಡುತ್ತಿರುವೆ. ಮುಂದೆ ನಮ್ಮಪ್ಪನಂತೆ ವಿಲನ್ ಪಾತ್ರಗಳನ್ನು ಮಾಡಿದರೆ ಒಪ್ಪವಿರಾ? ಬೇಗ ಹೇಳಿ ಮುಂದೆ ನಾನೆಂಥ ಪಾತ್ರಗಳು ಮಾಡಲಿ?” ಎಂದೊಬ್ಬ ಯುವನಟ ಪ್ರಶ್ನಿಸಿದರೆ,

“ನನ್ನಂತ ಹೊಸ ಈರೊಯಿನ್‌ಗಳ ಬಗ್ಗೆ ಚಿತ್ರ ವಿಚಿತ್ರವಾದ ಗಾಸಿಪ್ ಸುದ್ದಿಗಳು ಬರುತ್ತೆ, ಅದನ್ನ ನಾನೇನು ಕೇರ್ ಮಾಡಿಲ್ಲ ತರಹಾವಾರಿ ರೋಲ್‌ಗಳು ಮಾಡ್ತಾ ಇವ್ನಿ. ನೀವು ನನ್ನ ಎಂಥ ಪಾತ್ರದಾಗೆ ನೋಡಾಕೆ ಇಷ್ಟಪಡ್ತೀರಿ. ತಂಗಿ ಪಾತ್ರಗಳಾಗೆ ಮಾಡ್ತಾ- ಈಜುಡುಗೆ ಪಾತ್ರಗಳಾಗೇ ಅಭಿನಯಿಸ್ಲಾ?” ಅಂತಲೂ ಇದೀಗ ನಾಯಿಕಿಯಾಗಿ ಮಿಂಚುತ್ತಿರುವ ನಟಿ ಕಣ್ಣು ಮಿಟುಕಿಸಿ ಕೇಳುತ್ತಾಳೆ. ಹೀಗೆ ಒಬ್ಬೊಬ್ಬರು ಒಂದೊಂದು ಪ್ರಶ್ನೆ ಎಸೆಯುತ್ತಿದ್ದಾರೆಯೇ ಹೊರತು-ಆ ಕುರಿತು ಗಂಭೀರವಾಗಿ ಚಿಂತಿಸುವ ಮನ ಮಾಡಿಯೇ ಇಲ್ಲ… ಎಲ್ಲೂ ಹುಡುಕಾಟವಿಲ್ಲ ಬರೀ ಹುಡುಗಾಟ ಪ್ರಶ್ನೆಗಳ ಜೂಟಾಟ.

ಈ ವಿಚಿತ್ರ ಪರಂಪರೆ ಹೀಗೆ ಮುಂದುವರೆದರೆ ನಾಳೆ ಎಂತೆ<ಥಹ ಪ್ರಶ್ನೆಗಳು ಮೂಡಿಬರಬಹುದು ಎಂಬುದರ ‘ಸ್ಯಾಂಪಲ್’ ಇಗೋ…

ನಾಳೆಗಳ ಸ್ಯಾಂಪಲ್: “ನಾನು ಇಂಥವರನ್ನು ಡೈವರ್ಸ್ ಮಾಡಿದ್ದೇನೆ. ಯಾವ ಕಾರಣಕ್ಕೆ ಡೈವರ್ಸ್ ಮಾಡಿದೆ ಹೇಳಬಲ್ಲಿರಾ? ಚಿತ್ರರಂಗದಲ್ಲಿ ದೊಡ್ಡ ಹೆಸರಾಗಿರುವ ಇಂಥ ನಟನನ್ನು ಮದುವೆಯಾಗಲಿರುವೆ. ಅವರಿಗೆ ಮದುವೆಯಾಗಿ ಮಕ್ಕಳಿದೆ ಎಂದು ತಿಳಿದೂ ನಾನವರನ್ನು ಮದುವೆಯಾಗಬೇಕಾದರೆ ಅವರ ಯಾವ ಗುಣ ನನಗೆ ಒಪ್ಪಿಗೆಯಾಗಿದೆ ಹೇಳಬಲ್ಲಿರಾ?” ಎಂದೊಬ್ಬ ನಟಿ ಕೇಳಬಹುದು.

“ಹೊಸ ನಟ-ನಟಿಯರನ್ನು ಹೊಸಕಿ ಹಾಕುವವರೆ ಗಾಂಧೀನಗರದಲ್ಲಿ ಜಾಸ್ತಿ ಹೀಗಾಗಿ ನನ್ನನ್ನು ಪ್ರೋತ್ಸಾಹಿಸುವಿರಾ?” ಎಂದೂ ಒಬ್ಬ ಕೇಳಬಹುದು.

“ಇಂಥ ಒಂದು ಚಿತ್ರದಲ್ಲಿ ಹೀರೂಯಿನ್ ಆಗಿ ಮಿಂಚಲು ನನ್ನ ಶೀಲವನ್ನೇ ಬಲಿಗೊಟ್ಟು ಬಿಚ್ಚಮ್ಮನಾಗಿ ಕುಣಿದೆ. ಆದರೆ ನನ್ ಕಾಲ್‌ಷೀಟ್ ಎಲ್ಲ ಕೇಳುತ್ತಿರುವುದು ಬೆಡ್‌ರೂಮಿಗೆ ಹೊರ್ತು ಸಿನಿಮಾದಲ್ಲಿ ಪಾತ್ರ ಮಾಡಲಿಕ್ಕಲ್ಲ. ನಾನೇನು ಮಾಡಲಿ-ನಟಿಯಾಗಲೋ, ಮೈಮಾರುವ ವೇಶ್ಯಯಾಗಲೋ?” ಎಂದು ಕಣ್ಣೀರಿಟ್ಟು ಒಬ್ಬಾಕೆ ಕೇಳುವ ದಿನವೂ ಬಂದೀತು.

‘ಕೋಟಿ ಕೋಟಿ ಖರ್ಚು ಮಾಡಿ ನಾಯಕ ನಾಯಕಿಯರ ಹನಿಮೂನಿಗೆ ಖರ್ಚು ಮಾಡಲಿ ಅದರಿಂದ ನಾನೇ ನಾಯಕಿಯೊಂದಿಗೆ ವಿದೇಶದಲ್ಲಿ ಕುಣಿಯಲಿರುವೆ. ಈ ಚಿತ್ರಕ್ಕೆ ಹೀರೋ ನಾನೆ. ನಿತ್ಯ ಕನ್ನಡಿಯಲ್ಲಿ ನನ್ನ ಮುಖ ನಾನು ನೋಡಿಕೊಂಡಿರುವೆ. ಈಗ ಬರುತ್ತಿರುವ ಹೀರೋಗಳಿಗಿಂತ ನಾನೇನು ಕಮ್ಮಿ ಇಲ್ಲ ಅಲ್ಲವೇ-ನೀವೇಹೇಳಿ’ ಎಂದೂ ಒಬ್ಬ ನಿರ್ಮಾಪಕ ಕಂ ಹೀರೋ ಕೇಳಬಹುದಲ್ಲವೆ.

“ನನ್ನ ಚಿತ್ರ ಮೊದಲವಾರವೇ ಡಬ್ಬ ಸೇರಿತು. ಅದಕ್ಕೆ ನಿರ್ಮಾಪಕ ಕಾರಣನೊ- ನಿರ್ದೇಶಕ ಕಾರಣನೋ ನಾನು ಕಾರಣನೋ? ನಾನು ಬೇಸಾಯಕ್ಕೆ ಹೋಗಲೋ-ನಟನಾಗಿ ಉಳಿಯಲೋ” ಎಂದೊಬ್ಬ ಕೇಳಿದರೆ ಜನ ಏನು ಹೇಳಿಯಾರು?

ಪ್ರಚಾರದ ಗಿಮಿಕ್ಸ್ : ಅವರಿಗೆ ೭೦ ಲಕ್ಷ ನನಗೆ ಬರೀ ೭ ಲಕ್ಷ ಹೇಗೆ ಸರಿ” ಎಂದು ನಾಳೆ ಮತ್ತೊಬ್ಬ ನಾಯಕ ಕೇಳಬಹುದು. ನೋಡುಗ ನಿಮಗೆ ೫೦ ಲಕ್ಷ ಕೊಡಬೇಕು ಎಂದ ಮಾತ್ರಕ್ಕೆ ನಿರ್ಮಾಪಕ ಕೊಡುವನೆ? ಮತ್ತೊಬ್ಬ ಚಿತ್ರ ರಸಿಕ “ಚಿತ್ರರಂಗಕ್ಕೆ ನೀವು ವಿದಾಯ ಹೇಳುವುದು ಕ್ಷೇಮ” ಎಂದ ಮಾತ್ರಕ್ಕೆ ನಟ-ನಟಿಯರು ಕೇಳುವರೆ? ಅವರವರ ಬದುಕನ್ನು ರೂಪಿಸಿಕೊಳ್ಳಬೇಕಾದವರು ಅವರವರೇ ಅದರಿಂದ ಏಕಾಂತದಲ್ಲಿ ಕುಳಿತು ಅವರವರೇ ಪ್ರಶ್ನಿಸಿಕೊಂಡು, ಮುಂದೆ ಎಚ್ಚರದ ಹೆಜ್ಜೆ ಇಡಬೇಕಾದುದು ಅಗತ್ಯ.

ನೀವೇನಂತೀರಿ? ಈ ಟ್ರೆಂಡೇ ಛಾನೆಲ್‌ಗಳಲ್ಲಿ ಜನಪ್ರಿಯವಾಗುವ ದಿನ ಬಂದರೆ ನಾಳೆ ಸಿನಿಪತ್ರಕರ್ತರೂ ಇಂಥಾ ಪ್ರಶ್ನೆಗಳನ್ನು ಕೇಳಬಹುದು.

“ನಾನು ಇಂಥ ಪತ್ರಿಕೆಯಲ್ಲಿರುವೆ ಇಂಥ ಪತ್ರಿಕೆಯವರು ಕರೆಯತ್ತಿದ್ದಾರೆ. ಇಲ್ಲಿರಲೋ ಅಲ್ಲಿಗೆ ಹೋಗಲೋ? ನನ್ನ ಸಿನಿವರದಿಗಳು ಪ್ರಿಯವೇನೋ ಬಗೆ ಬಗೆಯ ಗಾಸಿಪ್ ಇಷ್ಟಾವೇನೋ?…. ನಾನು ಪೆನ್ನಿನಲ್ಲಿ ಬರೆಯಲೊ, ಡಾಟ್‌ಪೆನ್‌ನಲ್ಲಿ ಬರೆಯಲೋ ಇಲ್ಲ ಡಿ.ಟಿ.ಪಿ ಮಾಡಿಸಲೋ?”

ಏನು ಹೇಳಬಹುದು ಓದುಗ? ಎಲ್ಲೆ ಇರು-ಹೇಗೇ ಇರು ಪತ್ರಿಕಾನಿಷ್ಠೆ ಮರೆಯದಿರು ಎನ್ನಬಹುದಷ್ಟೆ.
*****
(೦೨-೧೧-೨೦೦೨)