ಗಾಳಿಸುದ್ದಿ (ಎಂದರೆ ಗಾಸಿಪ್ ಪ್ರಕರಣಗಳಿಂದ) ಎಷ್ಟೋ ಮನೆಗಳು ಒಡೆದಿವೆ ಹಲವು ಒಡೆಯುವ ಹಂತ ತಲುಪಿವೆ- ಡೈವರ್ಸ್‌ಗಳಾಗಿವೆ-ಮನೆಮಠಗಳು ಹರಾಜಾಗಿವೆ. ನಗೆ ಇದ್ದ ಮನೆಗಳಲಿ ನೋವು ಕಣ್ಣೀರಾಗಿ ಹರಿದಿದೆ-ಒಂದಾಗಿದ್ದ ಮನಸುಗಳು ಒಡೆದ ಕನ್ನಡಿಯಂತೆ ಛಿದ್ರವಾಗಿವೆ.
ಈ ಗಾಸಿಪ್ ಮೂಲ ಹುಡುಕುವುದು ತುಂಬ ಕಷ್ಟ. ಇದೊಂದು ರೀತಿ ನದಿಮೂಲ ಋಷಿಮೂಲ ಹುಡುಕಿದಂತೆ.
ಹಳ್ಳಿಯಲ್ಲಿ: ಕೆರೆ ಬಳಿ ಮೂರು ಕರಿಯರನ್ನು ಕೊಲೆ ಮಾಡಿದ್ದಾರೆ. ಹೆಣ ಅನಾಥವಾಗಿ ಬಿದ್ದಿದೆ’ ಎಂಬ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿದಾಗ ಗೌಡರ ಅಧ್ಯಕ್ಷತೆಯಲ್ಲಿ ಪಂಚಾಯತಿ ನಡೆದು ಯಾರು ಕೊಲೆ ಮಾಡಿರಬಹುದೆಂದು ‘ಬಿಸಿಬಿಸಿ’ ಚರ್ಚೆ ನಡೆಯಿತು. ಕಣ್ಣಾರೆ ನೋಡೇ ಬಿಡೋಣ ಆ ಹೆಣಗಳನ್ನು ಅಂತ ಹೋದಾಗ ಅಲ್ಲಿ ಸತ್ತು ಬಿದ್ದಿದ್ದಿದ್ದು ಮೂರು ಕರಿ ಕಾಗೆಗಳು ಎಂಬುದು ಸ್ಪಷ್ಟವಾದಾಗ ‘ಯಾರೂ ಗಾಳಿ ಸುದ್ದಿ ನಂಬಬೇಡಿ ಇನ್ನು ಮುಂದೆ’ ಎಂದರು ಗೌಡರು. ಇನ್ನು ಚಿತ್ರರಂಗದಲ್ಲಂತೂ ಗಾಸಿಪ್ ಸುದ್ದಿ ಮಾಮೂಲು.
ಬಿಸಿಬಿಸಿ ದೋಸೆಯಂತೆ ಖರ್ಚಾದ ಪತ್ರಿಕೆಯಲ್ಲಿನ ಗಾಸಿಪ್ ಸುದ್ದಿಯ ಬಾಕ್ಸ್ ಐಟಂ ಹೀಗಿತ್ತು.
‘ನಿರ್ದೆಶಕರ ಕಾಮಕೇಳಿಗೆ ಬಲಿಯಾದಳು. ನಟೀಮಣಿ’
ಸುದ್ದಿ ಓದಿ ಕಿಡಿಕಿಡಿಯಾದ ನಿರ್ದೇಶಕ, ಪತ್ರಿಕಾ ಕಛೇರಿಗೆ ಬಂದು ‘ಏನ್ರಿ ಈಥರಾ ಸುಳ್ಳು ಬರೆದಿದೀರಿ’ ಎಂದು ಹಾರಾಡಿದ.
‘ಸ್ವಾಮಿ ಇದು ಗಾಸಿಪ್ ಅಲ್ರೀ ನಾನೇ ಕಿವಿಯಾರೆ ಕೇಳಿದ್ದೆ’
‘ಏನು ಕೇಳಿಸಿಕೊಂಡ್ರಿ ಹೇಳಿ ಸ್ವಾಮಿ’
‘ನಾನು ಬಂದಿದ್ದು ನಿಮ್ಮ ಸಂದರ್ಶನಕ್ಕೆ ಅಂತೇ. ತಾವು ಹೀರೋಯಿನ್ ಜತೆ ಮಾತಾಡ್ತಿದೀರಿ ಅಂದ್ರು, ನಿಮ್ಮಿಬ್ಬರ ಮಾತು ಜೋರಾಗಿ ಕೇಳುತ್ತಿತ್ತು’.
‘ಏನು ಕೇಳಸ್ತು ಹೇಳಿಸ್ವಾಮಿ’
ನಟಿ ಹೇಳಿದ್ದಳು ನಿಮಗೆ. ‘NO ಅನ್ನಬೇಡಿ ಡಾರ್ಲಿಂಗ್. ನಂಗೀಗ ಮೂರು ತಿಂಗಳು ಅಂತ’
‘ಎಲ್ಲಿ ಅಂದ್ರೆ ಅಲ್ಲಿ ಬಂದು ನೀನು ಹೀಗೆ ಕಾಡಿಸಬೇಡ ನನ್ನ’ ಅಂತ ನೀವು ಅಂದ್ರಿ. ಅವಳು ಅಳ್ತಾ ‘ನೀವು ಹೀಗಂದ್ರೆ ನಾನು ಸೂಸೈಡ್ ಮಾಡ್ಕೋ ಬೇಕಾಗುತ್ತೆ’ ಅಂದಾಗ, ತಾವು ‘ನಾನು ಶೂಟಿಂಗ್ ಟೆನ್‌ಷನ್‌ಲ್ಲಿರೋವಾಗ ಪ್ರಾಣ ಹಿಂಡ್ತೀಯಲ್ಲ. ನಾನು ಅಂದ್ರೇನು- ನನ್ನ ಇಮೇಜ್ ಏನು ಈ ಸುದ್ದಿ ಲೀಕ್ ಆದ್ರೆ ನನ್ನ ಮಾನ-ಮರ್ಯಾದೆ ಬೀದಿಗೆ ಬರುತ್ತೆ. ಸುಮ್ಮನೆ ಎದ್ದು ಹೊರಡ್ತಿರು’ ಅಂತಿದ್ರಿ. ಅವಳು ‘ಅಳತಿದ್ದಳು. ಸಿಕ್ತು ಸ್ಕೂಪ್ ಅಂತ ಹೊರಟೆ. ರೆಡ್ ಹ್ಯಾಂಡ್ ಆಗಿ ಸಿಕ್ಕಿಹಾಕಿಕೊಂಡಿದೀರಿ. ನಾನು ಕಿವಿಯಾರೆ ಕೇಳಿದ್ದು ಸುಳ್ಳು’ ಎಂದು ಗಡ್ಡದ ಪತ್ರಕರ್ತ ರೋಫಿನಿಂದ ಹೊಗೆ ಬಿಟ್ಟು ಗರ್ವದಿಂದಲೇ ನೋಡಿದ ನಿರ್ದೇಶಕನತ್ತ.
‘ಸ್ವಾಮಿ’ ಅವಳು ಪರಭಾಷಾ ನಟಿಮಣಿ. ಶೂಟಿಂಗ್ ಇದೆ ಇವತ್ತು. ಡೈಲಾಗ್ ರಿಹರ್ಸಲ್ಸ್ ಮಾಡಿಸ್ತಿದ್ದೆ. ಬನ್ನಿ ಈಗ ಷೂಟಿಂಗ್‌ಗೆ. ಆ ಡೈಲಾಗ್ ಇರೋ ಸೀನೆ ಶೂಟ್ ಮಾಡ್ತೀದೀನಿ’
‘ಹೌದಾ! ನಾನು ರಿಯಲ್ ಲೈಫ್ ಡೈಲಾಗ್ ಅನ್ಕೊಂಡೆ sorry…’ ಅದು ಸಿನಿಮ ಡೈಲಾಗ್ಸ್ ಅಷ್ಟೆ ಅಂತ ಬರ್ಕೊಡಿ-ಈ ವಾರ ಹಾಕೋಣ ಅಂದ ಪತ್ರಕರ್ತ ನಿರಾಯಾಸವಾಗಿ.
`ಅದಕ್ಕೆ ಹೇಳೋದು ಸ್ವಾಮಿ, ರೀಲ್ ಯಾವುದು ರಿಯಲ್ ಯಾವುದು? ಯಾವುದೋ ಸಂದರ್ಭದಲ್ಲಿ ಕೇಳಿದ ಯಾವುದೋ ಮಾತನ್ನ ಎಲ್ಲೋ ಬರೆದಲ್ಲಿ ಡ್ಯಾಮೇಜ್ ಆಗೋದು ನಮಗೆ’ ಅಂದ ಚಿತ್ರ ನಿರ್ದೇಶಕ.
ಹೀಗೆ ಒಂದೊಂದ್ ಸರ್ತಿ ಏನೋ ಬರೆಯೋಕೆ ಹೋಗಿ ಏನೇನೊ ಆಗಿಬಿಡುತ್ತೆ.
ನಟನೊಬ್ಬನ ನೋವು: ಮಿಸ್ಟರ್ ‘ಎಕ್ಸ್’ ಎಂಬ ಚಿತ್ರನಟನ ಗೋಳು ಕೇಳಿ ಪಾಪ.
ಮಾರ್ಕೆಟ್ ಜೋರಾಗಿತ್ತು. ಆತನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಅನ್ನಿಸಿ ನಿರ್ಮಾಪಕರು ಬಸ್ ‘ಕ್ಯೂ’ ಥರಾ ನಿಂತಿದ್ರು, ಗ್ರಹಚಾರಕ್ಕೆ ಒಂದು ಫಿಲಂ ಫ್ಲಾಪ್ ಆಯಿತು. ಥರಾ ಥರಾ ಗುಸು ಗುಸು ಶುರುವಾಯಿತು ಗಾಂಧೀನಗರದಲ್ಲಿ.
ಕಾಲೆಳೆಯೋ ಲೇಖನಗಳು ಬೇಕಾದಷ್ಟು ಬರೋಕೆ ಶುರುವಾಯಿತು. ಅದರಿಂದ ತುಂಬಾ ನೊಂದ ಮಿಸ್ಟರ್ ಎಕ್ಸ್ ಸೀದಾ ಮಿಸ್ಟರ್ ‘ಜಿ’ ಮನೆಗೆ ಹೋಗಿ ಅಲವತ್ಕೊಂಡ. ಈ ಕಿರುಕುಳದಿಂದ ಮಾನಸಿಕ ಹಿಂಸೆ ಆಗ್ತಿದೆ. ಅದರಿಂದ ಕನ್ನಡ ಚಿತ್ರರಂಗವೇ ಬಿಟ್ಟು ಹೋಗೋಣ ಅನ್ನಿಸ್ತಿದೆ’ ಅಂತ ತನ್ನ ಮನದಳಲನ್ನು ಪರ್ಸನಲ್ ಆಗಿ ತೋಡಿಕೊಂಡ.
ಮಾರನೆ ದಿನ ‘ಮಿಸ್ಟರ್ ಎಕ್ಸ್’ ಅವರಿಂದ ಚಿತ್ರರಂಗಕ್ಕೆ ‘ಫೈನಲ್ ಟಾ-ಟಾ’ ಅಂತ ಫ್ರಂಟ್ ಪೇಜ್ ನ್ಯೂಸ್. ಇದನ್ನು ಓದಿದ ನಿರ್ಮಾಪಕರು ಈತನತ್ತ ತಿರುಗಿಯೂ ನೋಡದೆ ಬೇರೆ ಬೇರೆ ಹೊಸ ಹೀರೋಗಳನ್ನ ಹುಡುಕಿಕೊಂಡು ಹೊರಟರು. ‘ಛೇ! ಅಯ್ಯೋ ಪಾಪ ಅಂತಾರೆ ಅಂತ ನಾನು ನನ್ನ ಅನಿಸಿಕೆ ಹೇಳಿದ್ದೇ ತಪ್ಪಾಯಿತೆ’ ಎಂದು ತಲೆ ತಲೆ ಚಚ್ಚಿಕೊಂಡ ಮಿಸ್ಟರ್ ‘ಎಕ್ಸ್’
ಮನೆಯಲ್ಲಿ : ಗಾಳಿಸುದ್ದಿಗೆ ಚಿತ್ರರಂಗವೇ ಆಗಬೇಕಿಲ್ಲ. ಮನೆಮನೆಯಲ್ಲೂ ಇಲಿಯಂಥಾ ಸುದ್ದಿ-ಹುಲಿಯಂತೆ ಆಗಬಹುದು. ಮಗಳು ಕಾಲೇಜಿಗೆ ಚಕ್ಕರ್ ಹಾಕಿ ಸಿಟಿ ಸುತ್ತುತ್ತಿದ್ದಳು. ಬಾಯ್‌ಫ್ರೆಂಡ್ ಜತೆ ಪಾರ್ಕಲ್ಲಿ ಕುಳಿತಿದ್ದಳು ಎಂಬ ಸುದ್ದಿ ಆಳಿನಿಂದ ತಿಳಿದಾಗ ಅಪ್ಪ ಕಿಡಿಕಿಡಿಯಾದ.
‘ಯಾರೇ ಅವನು ನಿನ್ನ ಬಾಯ್ ಫ್ರೆಂಡ್. ಪಾರ್ಕ್‌ನಲ್ಲಿ ಏನೇ ಕೆಲಸ ನಿಂಗೆ ಅವನ ಜತೆ’
‘ನಿಂಗೆ ಇದು ಹೇಳಿದ್ದು ಯಾರು?’
‘ಬಾರೋ ಬ್ರಹ್ಮ-ಬೊಗಳು ಏನು ನೋಡಿದೆ’
‘ಇವನ್ಯಾರು’
‘ನಿನ್ನ ಮೇಲೆ ನಿಗಾ ಇಟ್ಟಿರೋಕೆ ಬಿಟ್ಟಿರೋ spy’
‘ಸರಿಯಯ್ಯ ಬ್ರಹ್ಮ-ನನ್ನ ಬಾಯ್ ಫ್ರೆಂಡ್‌ಗೆ ತಲೆತುಂಬಾ ಕೂದಲಿತ್ತಲ್ವ’
‘ಕೂದಲೆಲ್ಲಿತ್ತು ಆತ ಬಾಲ್ಡಿ’
‘ನೋಡಿದೆಯೇನಪ್ಪ ಅವರು ನೀನೆ ಗೊತ್ತು ಮಾಡಿದ್ದ ನಮ್ಮ ಮೇಸ್ಟರಪ್ಪ. ಇವತ್ತು ಯಾವುದೋ ಮದುವೆಗೆ ಹೋಗಬೇಕು ಆತ ಪಾರ್ಕಲ್ಲಿ ಕೂತೇ ಪಾಠ ಮಾಡ್ತಿದ್ರು’ ಎಂದಾಗ ಬ್ರಹ್ಮ ಸುಸ್ತಾದ-ಅಪ್ಪನಿಗೆಷ್ಟೋ ಸಮಾಧಾನವಾಯಿತು.
ವಿಷಯ ಸರಿಯಾಗಿ ತಿಳಿಯದೆ ಏನ್ನೋ ಹೇಳಿದರೆ-ಮತ್ತೇನೊ ಆಗುವುದು ಖಚಿತ. ಈ ಗಾಸಿಪ್ ಕುರಿತೇ ಚಿಂತಿಸುತ್ತಿದ್ದಾಗ ಕವಿ ಬಿ.ಆರ್. ಲಕ್ಷ್ಮಣರಾಯರ ಕವನ ತುಂಬಾ ಅರ್ಥಪೂರ್ಣವೆನಿಸಿತು-ಇಂಥ ಗಾಸಿಪ್ ಬರವಣಿಗೆ ಸಾಕಪ್ಪ ಸಾಕು ಎನಿಸಿತು.
ಆಗೆದದ್ದು-ಬಗೆದದ್ದು-ಬಾಳನ್ನು ಸಿಗಿದಿದ್ದು
ಶೂನ್ಯವನು ಜಗಿದದ್ದು ಸಾಕು.
ಬಿಚ್ಚಿದ್ದು ಬೆಚ್ಚಿದ್ದು ಹೊಸದೆಂದು ಕೊಚ್ಚಿದ್ದು
ಎಲ್ಲರನೂ ಚುಚ್ಚಿದ್ದು ಸಾಕು
ಪೆದ್ದು ಜಗತ್ತೆಂದು ಝಾಡಿಸಿ ಒದ್ದದ್ದು
ನಿರಾಸೆಯಲಿ ಎದ್ದದ್ದು ಸಾಕು
ಅನಿಸಿದ್ದು: ಹಣ ಸಂಪಾದನೆಯೊಂದೇ ಗುರಿಯಾಗಿ ಬೇಕು-ಬೇಕೆಂಬ ಬಯಕೆಯ ಬಟ್ಟಲು ತುಂಬುವ ಸಲುವಾಗಿ ಬರೆಯುವವರನ್ನ ಕಂಡಾಗ ನನಗಂತೂ ಇಂಥವರ ಸಹವಾಸ ಸಾಕೋ ಸಾಕೆನ್ನಿಸುತ್ತಿದೆ.
*****
(೦೨-೦೮-೨೦೦೨)
