ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಹಾಕಿ ಎಳೆದ ನನ್ನನ್ನು ಸುಖ, ಒಂಟೆಯ ಮೂಗುದಾರ
ಈ ಕುಡುಕ ಒಂಟೆಯ ದಾರಿಯಾದರೂ ಎತ್ತ?
ಆತ್ಮ ದೇಹಗಳಿಗಾಯಿತು ಘಾತ, ಪುಡಿಯಾದ ಮಧುಪಾತ್ರೆ
ಕೊರಳ ಮೇಲೆ ನೊಗವಿಟ್ಟ, ಎತ್ತ ಕಡೆಗೆ ಯಾತ್ರೆ?
ಅವನ ಬಲೆಯೊಳಗೆ ಬಿದ್ದ ಮೀನು ನಾನು, ದಡದ ಕಡೆಗೆ ಯಾನ
ಬೇಟೆಗಾರನ ಬೇಟಕ್ಕೆ ಹಾತೊರೆದಿದೆ ಹೃದಯದ ಗುಂಗಾನ
ಆಕಾಶದಲ್ಲಿ ಒಂಟೆ ಸಾಲಂತೆ ಮೋಡಗಳು
ಬಾಯಾರಿದ ಬಯಲಿಗೆ ಜಲಧಾರೆ
ಎಳೆದಾಡಿದ ನನ್ನನ್ನು ಬೆಟ್ಟಗಳಲ್ಲಿ
ಕಪ್ಪು ಕತ್ತಲಿನ ನೆಲದಾಳದ ಗವಿಗಳಿಗೆ
ಸುತ್ತ ಹಬ್ಬಿತು ಗುಡುಗಿನ ಮದ್ದಲೆ
ಅಣು ಬ್ರಹ್ಮಾಂಡಗಳಲ್ಲಿ ಹಬ್ಬಿತು ಜೀವದ ಅಲೆ
ಕೊಂಬೆ ಕೊಂಬೆಗೆ ಹಬ್ಬಿತು ವಸಂತ
ಗಂಧ ಗುಲಾಬಿಯ ನಾಳಕ್ಕೂ
ಬೀಜದೊಳಗೆ ಬಯಲ ವಿಸ್ತಾರದ ರೂಹು
ಸೃಷ್ಟಿಸಿದಾತನ ಕ್ರಿಯೆಯೆ ಈ ಹಣ್ಣು
ಮರದೊಳಗಣ ರಹಸ್ಯ ಬಚ್ಚಿಟ್ಟು ಬಯಲಿಗೆ
ಕೂಗಿ ಹೇಳಿದ್ದಾನೆ ಈಗ ತೂಗಾಡುವ ನೇಣಿಗೆ
ವಸಂತದ ಅಲೆಯ ವನದ ವಾಕರಿಕೆಗೆ ಪರಿಹಾರ
ಉಕ್ಕುತ್ತಿದೆ ವಾಂತಿ, ಚಳಿಯ ಗಡಗುಟ್ಟಿಸುವ ಕ್ರೌರ್ಯ
*****
