ಹೃದಯಕ್ಕೆ ಸಾವಿರ ನಾಲಗೆ

ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ

ಅವನು ನಿದ್ರಿಸುತ್ತಿದ್ದ ಹಾಗೆ ಕಂಡ
ತೋಟದಿಂದ ನಾನು ಕೂಗಿದೆ- “ಬೇಗ ಬೇಗ ಬಾ. ಕದ್ದ ಹಣ್ಣು ನನ್ನಲ್ಲಿದೆ”
ಆ ಕಳ್ಳ ನಿದ್ರಿಸುತ್ತಿರಲಿಲ್ಲ
ಜೋರಾಗಿ ನಕ್ಕು ಹೇಳಿದ- “ತಗಲೂಫಿ ತೋಳವೆ? ಸಿಂಹದ ಕೈಯಿಂದ ಹೇಗೆ ಕದ್ದೆ?”

ಮೋಡಗಳಿಂದ ಯಾರು ಹಾಲು ಹಿಂಡುತ್ತಾರೆ?
ಯಾರು ಮೋಡಗಳ ನಾಡಿಗೆ ಹೋಗುತ್ತಾರೆ?
ಸ್ವತಃ ಆ ಮೋಡಗಳೇ ಪ್ರೀತಿ ಹರಿಸಿ ಕರೆಯದಿದ್ದರೆ.
ಅಸ್ತಿತ್ವದಲ್ಲೇ ಇಲ್ಲದ್ದು ಅಸ್ತಿತ್ವಕ್ಕೆ ಹೇಗೆ ಬರುತ್ತೆ?
ದಿವ್ಯ ಕೃಪೆಯಿಂದ ಮಾತ್ರ ಅಸ್ತಿತ್ವವೇ ಇಲ್ಲದ್ದು ಅಸ್ತಿತ್ವವಾಗುತ್ತೆ
ಇಲ್ಲವೇ ಇಲ್ಲ ಎನ್ನುವ ಹಾಗೆ ಸುಮ್ಮನೆ ಕೂರು

ಆಗ ದಿವ್ಯ ಪ್ರಾರ್‍ಥನೆಯಲ್ಲೆಂಬಂತೆ ದರ್‍ಶನವಾಗುತ್ತದೆ
ವಿನಯದ ಮೂಲಕ ಮಾತ್ರ ನೀರು ಬೆಂಕಿಯನ್ನು ಗೆಲ್ಲುತ್ತದೆ
ಬೆಂಕಿ ಎದ್ದೆದ್ದು ಬೊಬ್ಬೆ ಹೊಡೆದರೆ
ನೀರು ಸುಮ್ಮನೆ ಅಡ್ಡ ಬೀಳುತ್ತದೆ

ತುಟಿ ಹೊಲಿದು ಕೊಂಡಿದ್ದಾಗ
ಹೃದಯಕ್ಕೆ ಸಾವಿರ ನಾಲಗೆ ಚಿಮ್ಮುತ್ತವೆ
ಶ್, ಈಗ ಮೌನವಾಗಿರು
ಎಷ್ಟು ಹೊತ್ತು, ಎಷ್ಟು ಹೊತ್ತು ಅವನನ್ನು ಗೋಳು ಹೊಯ್ದುಕೊಳ್ಳುತ್ತಿ?
*****