ಮೂಲ: ರೂಮಿ – ಪರ್ಷಿಯನ್ ಸೂಫಿ ಕವಿ
ಸಂತರೊಡನೆ ರಾತ್ರಿಯನ್ನು ಹಗಲಾಗಿಸಿದ್ದೇನೆ
ನಾಸ್ತಿಕರೊಡನೆ ವಿಗ್ರಹಗಳ ಪದತಲದಲ್ಲಿ ಮಲಗಿದ್ದೇನೆ
ನಾನು ವಂಚಕರ ವಂಚಕ, ರೋಗಿಗಳ ನೋವು
ನಾನು ಮೋಡ ಮತ್ತು ಮಳೆ, ನಂದನಗಳ ಮೇಲಿನ ವರ್‍ಷಾಧಾರೆ
‘ಬಯಲಿನ’ ಧೂಳು ಎಂದೂ ಈ ಬಟ್ಟೆಯಲ್ಲಿ ಕೂರಲಿಲ್ಲ
ಭಿಕ್ಷಕ್ಕೆ ಬಂದ ಸಖ, ನೀನು ಕೇಳು
ಈ ನಂದನದಲ್ಲಿ ಹೂವು ಕಿತ್ತೆ ನಾನು
ನಾನು ಜಲಸೃಷ್ಟಿಯಲ್ಲ, ಬೆಂಕಿಯಿಂದ ಬಂದಿಲ್ಲ
ಮೊರೆವ ಬಿರುಗಾಳಿಯಲ್ಲ ನಾನು, ಬಣ್ಣ ಬಳಿದ ಧೂಳಲ್ಲ
ಈ ಎಲ್ಲ ಕಂಡು ನಕ್ಕಿದ್ದೇನೆ
ನಾನು ತಬ್ರೀಜಿನ್ ಶಂಸ್ ಅಲ್ಲ
ನಾನು ಶುದ್ಧ ಬೆಳಕು
ನನ್ನ ನೋಡಿ ಬಿಟ್ಟಿಯ ನೀನು, ಹುಷಾರ್
ಯಾರಿಗೂ ಹೇಳಬೇಡ, ಕಾಪಾಡು ಮೌನ ಶಂಸ್
*****
