ಯಾವುದೇ ನಿರ್ಮಾಪಕರ ಬಳಿ ವ್ಯಾಪಾರಿ ಚಿತ್ರಕ್ಕೆ ಕತೆ ಹೇಳಹೊರಟಾಗ ಅದಕ್ಕೆ ಅವರದೇ ಆದ ಒಂದು ಫಾರ್‍ಮುಲ ಇತ್ತು. ೪-೫ ಹಾಡು ೩-೪ ಫೈಟು ಒಂದೋ ಎರಡೋ ಕ್ಯಾಬರೆ, ಕೆಲವು ಸೆಂಟಿಮೆಂಟ್ ಸೀನ್ಸ್ ಇರಲೇಬೇಕು ಎನ್ನುತ್ತಿದ್ದರು.
ಹೀಗಾಗಿ ಅದೆಷ್ಟೇ ಗಂಭೀರವಾದ ಚಿತ್ರವಾದರೂ ಗೋಣಿಚೀಲದಲ್ಲಿ ಸಾಮಗ್ರಿ ತುರುಕುವಂತೆ ಕಥೆಯಲ್ಲಿ ಆ ಅಂಶಗಳೆಲ್ಲ ತುರುಕುತ್ತಿದ್ದರು.
ಆರಂಭ ದಿನಗಳಲ್ಲಿ ಕಾಮೆಡಿ ಟ್ರಾಕ್ ಒಂದು ಬೇರೆಯೇ ಓಡುತ್ತಿತ್ತು.
ಹೀಗಾಗಿ ನರಸಿಂಹರಾಜು, ಜಿ.ವಿ.ಅಯ್ಯರ್, ಬಾಲಣ್ಣ, ಎನ.ಎಸ್.ರಾವ್, ದಿನೇಶ್ ಅಂಥವರೆಲ್ಲ ಮುಖ್ಯರಾಗಿದ್ದರು ಅಂದು.
ಕ್ರಮೇಣ ಕಾಮೆಡಿ ಟ್ರಾಕ್ ಕಟ್ ಆಗಿ ನಾಯಕನೇ-ಕಾಮೆಡಿ ಸಿಚುಯೇಷನ್‌ಗಳಲ್ಲಿ ಅಭಿನಯಿಸುವ ನಟನಾದ. ಬರಬರುತ್ತಾ ಹೀರೋಯಿನ್ನೇ ನರ್ತಕಿಯರ ಜಾಗ ತುಂಬ ತೊಡಗಿದಳು. ಡಿಟೆಕ್ಟೀವ್ ಚಿತ್ರಗಳು ಮರ್ಡರ್ ಮಿಸ್ಟರಿಗಳು ಆರಂಭವಾದಾಗ ಹೀರೋಯಿನ್‌ಗಳೇ ಕ್ಯಾಬರೇ ನರ್ತಕಿಯರೂ ಆದರು.
ಲಾಕಪ್‌ಡೆತ್‌ನಂಥ ಸಿನಿಮಾ ಹಿಟ್ ಆದಾಗ ಆಕ್ಷನ್ ಫಿಲಂಗಳು ಚಿತ್ರಕ್ಕೆ ಕಥೆ ಬರೆದ ಶೈಲಿಯನ್ನೇ ಬದಲಿಸಿತು. ನಂತರ ಚಲನಚಿತ್ರರಂಗ ಕತ್ತಿ-ಚಾಕು-ಚೂರಿಯದೇ ರಾಜ್ಯವಾಯಿತು.
ಈ ಮಧ್ಯೆ ಕಾಮೆಡಿ ಹೆಸರಿನಲ್ಲಿ ಡಬ್ಬಲ್ ಮೀನಿಂಗ್-ಟ್ರಿಬ್ಬಲ್ ಮೀನಿಂಗ್ ದೃಶ್ಯಗಳು ಅತಿಯಾಗಿ ಅಶ್ಲೀಲ ಸಂಭಾಷಣೆಗಳು ಅಶ್ಲೀಲ ದೃಶ್ಯಗಳು ಅತಿಯಾಗಿ ವಿಜೃಂಭಿಸಿದವು.
ಅಂಥ ಗಳಿಗೆ ಬಂದಾಗ ಕಾಶೀನಾಥ್ ಹೀರೋ ಕೂಡ ಆದರು.
ಪೊಲೀಸ್ ಸ್ಟೋರಿ ಬಂದ ನಂತರ ಅಮ್ಮನ್ ಸಾಹಿತ್ಯ ಆಡುಭಾಷೆ ಹೆಸರಿನಲ್ಲಿ ರಾರಾಜಿಸಿತು.
‘ಓಂ’ ನಂತರವಂತೂ ಡಾನ್‌ಗಳನ್ನ ರೌಡಿಗಳನ್ನ ನೇರವಾಗಿ ಕರೆತಂದು ಅವರನ್ನೇ ಹೀರೋಗಳಾಗಿ ಮಾಡಿ ವಿಜೃಂಭಿಸುವ ಪರಂಪರೆ ರಾರಾಜಿಸತೊಡಗಿತು.
ಅನಂತರ ಮಾಫಿಯಾಗಳು, ಅಂಡರ್ ವರ್ಲ್ಡ್‌ಗಳು, ಸ್ಕೆಚ್‌ಗಳು, ಕೊಲೆಗಳ ಕಥೆ ಅತಿಯಾಯಿತು. ಒಟ್ಟಿನಲ್ಲಿ ಮನೆಮಂದಿ ಎಲ್ಲ ಒಟ್ಟಿಗೆ ಕುಳಿತು ಸಂತಸಪಡುವ ದಿನಗಳು ಇನ್ನು ಬಂದೀತೆ ಎಂದು ಶಂಕಿಸುವ ದಿನಗಳು ಬಂದವು.
ಹೀಗೆ ಟ್ರೆಂಡ್ ಚೇಂಜ್ ಆಗುತ್ತ ಹೋದಂತೆ ಕತೆ ಕಾದಂಬರಿಕಾರರು ಆ ಧಾಟಿಯಲ್ಲೇ ಸಿನಿಮಾಗೆಂದು ಕತೆ ಬರೆಯಲಾರಂಭಿಸಿದರು.
ಒಂದೆರಡು ರೀಮೇಕ್‌ಗಳು ಗೆದ್ದ ಮೇಲಂತೂ ಪುಸ್ತಕ ಸಂಸ್ಕೃತಿ ಕಣ್ಮರೆಯಾಗಿ ಕ್ಯಾಸೆಟ್ ಸಂಸ್ಕೃತಿ ಎಲ್ಲೆಲ್ಲೂ ತನ್ನ ಕಬಂಧ ಬಾಹುಗಳನ್ನು ಚಾಚುತ್ತ ಹೋಯಿತು.
ಹೀಗಾಗಿ ತಂಗಳನ್ನಕ್ಕೆ ಬಿಸಿಬಿಸಿ ಒಗ್ಗರಣೆ ಹಾಕಿ ತಿನ್ನುವುದೇ ತುಂಬ ರುಚಿಕರ ಎಂಬ ವಾದ ಎಲ್ಲೆಲ್ಲೂ ಪ್ರತಿಧ್ವನಿಸಿತು.
ಸೃಜನಶೀಲತೆ ಕಣ್ಮರೆಯಾಗಿ ಎಲ್ಲೆಲ್ಲೂ ರೀಮೇಕ್ ಭಜನೆ ಆರಂಭವಾಯಿತು.
ಸ್ವಮೇಕೇ ಆಗಬೇಕೆಂದು ಹೊರಟವರಿಗೆ ನಿರ್ಮಾಪಕರು ದಕ್ಕುವುದೇ ಕಷ್ಟವಾದ ದಿನಬಂತು.
ಆದರೂ ಹಲವರು ಪಟ್ಟು ಹಿಡಿದು ‘ಸ್ವಮೇಕ್’ ಚಿತ್ರದಲ್ಲೂ ಮಹತ್ತರವಾದುದನ್ನು ಮಾಡಬಹುದು ಎಂಬುದನ್ನು ಮಾಡಿ ತೋರಿದರು.
ಚಿತ್ರರಂಗದಲ್ಲಿ ಬಂದ ಬಹಳಷ್ಟು ಚಿತ್ರಗಳು ಅನೇಕ ವೇಳೆ ಮುಗ್ಗರಿಸಿ ಬಿದ್ದುದನ್ನು ಕಂಡು ವಿಭಿನ್ನವಾಗಿ ಚಿತ್ರ ತೆರೆಗರ್ಪಿಸಲು ಸರ್ವಸಾಹಸ ಮಾಡುತ್ತಲೇ ಇದ್ದರು.
ಒಬ್ಬ ನಾಯಕನಿದ್ದರೆ ಆತ ಚಿತ್ರಮಂದಿರಕ್ಕೆ ಜನವನ್ನು ಸೆಳೆಯಲಾರ ಎನಿಸಿದಾಗ ಹೆಸರಾದ ನಾಲ್ಕಾರು ನಟರನ್ನು ಕಲೆಹಾಕಿ ‘ಮಲ್ಟಿಸ್ಟಾರರ್’ ಎಂಬ ಅಧ್ಯಾಯ ಆರಂಭವಾಯಿತು.
ಪರಭಾಷಾ ನಿರ್ಮಾಪಕರು ಬಂದಾಗ ಅವರು ಡಬ್ಬಿಂಗ್‌ಗೆ ಅನುಕೂಲವಾದೀತೆಂದು ಅಲ್ಲಿ ಹೆಚ್ಚು ಮಾರುಕಟ್ಟೆಯಿಲ್ಲದ ದಂಡು ದಂಡು ಕಲಾವಿದರನ್ನು ಕರೆತಂದರು.
ಪರಭಾಷಾ ನಟಿಯರನ್ನು ಕರೆತರುವುದು ಕನ್ನಡ ಚಿತ್ರರಂಗದ ಹೆಗ್ಗಳಿಕೆಯೇ ಆಗಿ ಹೋಗಿದೆ. ಈಗಂತೂ ಭಾರೀ ಭಾರೀ ನಟ-ನಟಿಯರನ್ನು ಒಂದೇ ಚಿತ್ರದಲ್ಲಿ ಬಳಸಿದಾಗ ಎಲ್ಲರಿಗೂ ಸಮವಾಗಿ ಸ್ಕೋಪ್ ಕೊಡಲು ಒಂದೊಂದು ಹಾಡು ಒಂದೊಂದು ನೃತ್ಯ – ಒಂದೊಂದು ಸೆಂಟಿಮೆಂಟ್ ದೃಶ್ಯ ಹಂಚಿದಾಗಲೂ ಕತೆ ಬರೆವ ಧಾಟಿ ಬದಲಾಯಿತು.
‘ಫಾರಿನ್ ಲೋಕೇಷನ್ಸ್’ ಇದ್ದರೆ ಚಿತ್ರ ಕ್ಲಿಕ್ ಆಗುತ್ತದೆ ಎಂಬ ನಂಬಿಕೆ ಬಂದಾಗ ಕನಸಿನ ದೃಶ್ಯಗಳು ಕಾಣಿಸಿಕೊಂಡು ಮತ್ತೆ ಯಥಾಪ್ರಕಾರ ಕಥೆಯ ಟ್ರೆಂಡ್ ಬದಲಾಯಿತು.
ವಿದೇಶಕ್ಕೆ ಹೋಗುವುದೆಂದರೆ ಹಣ ಖರ್ಚು. ಕೆಲವು ನಟರಿದ್ದರೆ ಮಾತ್ರ ಆ ಹಣ ಬಂದೀತು ಎನಿಸಿದಾಗ ಹೆಸರಾಂತ ನಟ-ನಟಿಯರ ಹಿಂದೆ ಅಲೆದು ಯಾವ ಕಲಾವಿದ ದೊರೆಯುತ್ತಾರೆ ನೋಡಿ ಅವರಿಗಾಗಿ ಕತೆ ಹೊಸೆಯ ತೊಡಗಿದರು.
ತಂತ್ರಜ್ಞಾನ ಬೆಳೆದಂತೆ ಗ್ರಾಫಿಕ್ಸ್ ಬಳಸುವ ಹುಚ್ಚು ಅತಿಯಾಯಿತು. ಆಗ ದೇವಿ ಮಹಾತ್ಮೆ, ನಾಗದೇವತೆ, ಗ್ರಾಮದೇವತೆಗಳ ಪವಾಡಗಳ ಸುರಿಮಳೆಗೆ ಮುಂದಾಗಿ ಮೂಢನಂಬಿಕೆ ಬಿತ್ತಲು ಮುಂದಾದರು.
ನಿರ್ಮಾಪಕ-ನಿರ್ದೇಶಕರಿಗೆ ಹಣವೊಂದೇ ಮುಖ್ಯವಾದಾಗ ಸಾಮಾಜಿಕ ಜವಾಬ್ದಾರಿ ಸಂಪೂರ್ಣವಾಗಿ ಮರೆತದ್ದರಿಂದ ಜನವಿರೋಧಿ ಚಿತ್ರಗಳು ಬರತೊಡಗಿದವು.
ಸಿನಿಮಾ ಗ್ರಾಮರ್ ತಿಪ್ಪೆಗೆ ಬಿಸುಟು ಅದ್ಭುತ ವಿಷುಯಲ್‌ಗಳಿಂದ, ಜಾಣ್ಮೆಯ ಟೇಕಿಂಗ್ಸ್‌ನಿಂದ ಚಿತ್ರ ತೆರೆಗೀಯ ಹೊರಟ ಉಪೇಂದ್ರರ ಶ್, ಓಂ, ಉಪೇಂದ್ರ ಮುಂತಾದ ಚಿತ್ರದಿಂದ ನೇರವಾಗಿ ಕಥೆ ಹೇಳುವ ಕಲೆ ಕೈಬಿಟ್ಟು, ತುಣುಕು ತುಣುಕು ದೃಶ್ಯಗಳಿಂದ ಕಥೆ ಕಟ್ಟುವ, ಜನರನ್ನು ಬೆಚ್ಚಿಸುವ ಮೋಡಿ ಮಾಡಿ ಕನ್ನಡ ಸಾಹಿತ್ಯವನ್ನು ಕಳ್ಳಭಟ್ಟಿ ಸಾರಾಯಿ ಮಾಡಿ ಹಣ ದೋಚ ತೊಡಗಿದರು.
ಗಿಮಿಕ್‌ಗಳದೇ ರಾಜ್ಯಭಾರವಾದಾಗ ಎಂಥ ಚಿತ್ರ ಮಾಡುವುದು ಎಂಬುದೇ ಸಮಸ್ಯೆಯಾಯಿತು. ಕನ್ನಡ ಚಿತ್ರದಲ್ಲಿ ಹಿಂದಿ ಮಿಕ್ಸ್, ತೆಲುಗು ಮಿಕ್ಸ್, ತಮಿಳು ಮಿಕ್ಸ್ ಆರಂಭವಾಗಿ ಮಿಕ್ಸ್‌ಮಸಾಲ ಕನ್ನಡ ಚಿತ್ರಗಳ ಕಥಾ ರಚನಾ ಶೈಲಿ ಬದಲಿಸಿತು.
ಅಂಥ ವೇಳೆ ದಿಢೀರ್ ಬಂದ ‘ನನ್ನ ಪ್ರೀತಿಯ ಹುಡುಗಿ’ ಹೊಸ ಮುಖಗಳನ್ನು ಒಪ್ಪುವ ಪ್ರೀತಿ ತೋರಿತು. ಅದರಿಂದಾಗಿಯೇ ‘ಚಿತ್ರಂ’ ಚಿತ್ರ ಆಗಿ ರೇಖಾಳಿಂದ ಗೆದ್ದಿತು. ‘ಸ್ಪರ್ಶ’ದಿಂದ ಸುದೀಪ್ ‘ಹುಚ್ಚ’ನಾಗಿ ಅದರಿಂದ ಇನ್ನೂ ಹೆಸರಾಗುವ ಸೂಚನೆಗಳೀಗ ಕಂಡಿದೆ. ಹಳಬರೊಂದಿಗೆ ಹೊಸ ಮುಖಗಳನ್ನು ಹಾಕಿಕೊಂಡರೆ ವಾಸಿ ಎಂದು ಗಾಂಧೀನಗರ ಮಾತಾಡುತ್ತಿದೆ.
ನಾಳಿನ ಚಿತ್ರರಂಗ ಯುವ ಪೀಳಿಗೆಯ ಕೈಲೇ ಇದೆ. ದಿನೇಶ್ ಬಾಬು ಸಹಾ ಈಗ ಹೆಚ್ಚು ಹೊಸ ಮುಖಗಳನ್ನೇ ಹಾಕಿಕೊಳ್ಳುತ್ತಿದ್ದಾರೆ. ಇಂಥ ಕಾರಣದಿಂದಾಗಿಯೇ ಮೋಹನ್ ಸಹಾ ಹೀರೋ ಆಗಿರುವ.
ಬೇರೆ ಬೇರೆ ಸ್ವಭಾವದ ಹುಡುಗರು-ಹುಡುಗಿಯರು ಬರುತ್ತಿರುವ ಕಾರಣಕ್ಕೆ ಕಥಾ ಧಾಟಿಗಳು ಟ್ರೆಂಡ್‌ಗಳು ಬದಲಾಗುತ್ತಿದೆ.
ಡಾ. ರಾಜ್, ವಿಷ್ಣು, ಅಂಬರೀಶ್, ಅನಂತ್‌ನಾಗ್, ಶಶಿಕುಮಾರ್, ಶಿವು, ರಾಘು ಮುಂತಾದವರು ಚಡ್ಡಿ ಹಾಕಿಕೊಂಡು ಹುಡುಗನ ಪಾತ್ರ ಈಗ ಮಾಡುವುದಾದರೂ ಹೇಗೆ ಸಾಧ್ಯ? ಅದಕ್ಕೆ ಟ್ಯಾಲೆಂಟ್ ಇರುವ ಹೊಸ ಮುಖಗಳಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು ಎನ್ನುವ ದಿನ ಬಂದಿರುವುದು.
ಇಂಥ ಬದಲಾವಣೆಯಿಂದಾಗಿಯೇ ಚಿತ್ರದ ಕಥಾ ರಚನೆಯಲ್ಲೂ ಹೊಸತನ ಮಿಂಚುವ ಒಳ್ಳೆ ಸೂಚನೆಗಳಿವೆ.
*****
(೨೨-೬-೨೦೦೧)
