ಮುಂದೇನು ಎಂದು ತಲೆಮೇಲೆ ಕೈಹೊತ್ತು ಕುಳಿತರೆ ಯಾವ ಕೆಲಸವೂ ಮುಂದೆ ಸಾಗುವುದಿಲ್ಲ.
“ತಿರುಪತಿ ತಿರುಮಲ ವೆಂಕಟೇಶ”
ಸ್ವಲ್ಪ ಕಿವಿಕೊಟ್ಟು ಕೇಳು ಇಲ್ಲಿ ಒಂದು ನಿಮಿಷ ಎಂದು ಇಡೀ ದಿನ ಭಜನೆ ಮಾಡಿದರೂ ತಿರುಪತಿ ತಿಮ್ಮಪ್ಪ ಹಾಜರಾಗಿ ನಮ್ಮ ಸಮಸ್ಯೆ ಬಗೆಹರಿಸುವುದಿಲ್ಲ.
‘ದೇವರು ವರವನು ಕೊಟ್ರೆ’ ಎಂದು ಕನಸುತ್ತ ಕೂತಿದ್ದಲ್ಲಿ ಕೂತಲ್ಲೇ ಕೂತಿರಬೇಕಷ್ಟೆ.
ಸಂತೋಷ, ದುಃಖ, ದುಗುಡ, ದುಮ್ಮಾನ ನಾಲ್ಕಾರು ಆತ್ಮೀಯ ಗೆಳೆಯರಲ್ಲಿ ಚರ್ಚಿಸಿ ಮುಂದೇನು ಮಾಡಬೇಕು ಎಂದು ತೀರ್ಮಾನಿಸುವುದು ಜಾಣರ ಲಕ್ಷಣ.
ಈ ಕಾಲದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ ಇರುತ್ತದೆ. ಚಲನಚಿತ್ರರಂಗದವರು ಏನೇ ಸಮಸ್ಯೆ ಬಂದರೂ ಫಿಲಂ ಚೇಂಬರ್ಸ್‌ಗೆ ಓಡುತ್ತಾರೆ.
ಚೇಂಬರ್‌ನವರು ಯಥಾಪ್ರಕಾರ ಅದಕ್ಕೊಂದು ಕಮಿಟಿ ಮಾಡಿ ಅಂತಿಮ ತೀರ್ಮಾನ ಹೇಳುತ್ತಾರೆ. ಮುಖ ನೋಡಿ ಮಣೆ ಹಾಕುವ ಬಲಾಬಲಗಳನ್ನು ವೀಕ್ಷಿಸಿ ಒಂದು ಫರ್ಮಾನು ಹೊರಡಿಸಿದರೂ ಅದು ಎಲ್ಲ ಸಂದರ್ಭದಲ್ಲೂ ಕರಾರುವಾಕ್ಕಾಗಿ ಕಾರ್ಯರೂಪಕ್ಕೆ ಬರುತ್ತದೆ ಎಂದು ಹೇಳುವಂತಿಲ್ಲ.
ಹಿಂದೆ ಕಲಾವಿದರನ್ನು ಬ್ಯಾನ್ ಮಾಡಿದ್ದರು. ನಿರ್ದೇಶಕರನ್ನು ಬ್ಯಾನ್ ಮಾಡಿದ್ದರು. ಕಾಲ್‌ಷೀಟ್‌ಗೆ ಕಿರಿಕ್ ಮಾಡಿದರು ಎಂದು ನಟರಿಗೆ ದಂಡಕಟ್ಟಲು ಹೇಳಿದರು. ಬಲಾಡ್ಯರು ಅಡಾವುಡಿ ಮಾಡಿ ಗೆದ್ದರು. ಮಿಕ್ಕವರು ಸೋತು ಶರಣಾದರು.
ಈಗ ಬಂದಿರುವ ಫಿಲಂ ಚೇಂಬರ್ ಅಧ್ಯಕ್ಷರು ಇಕ್ಕಟ್ಟಿನ ಸಿಕ್ಕಟ್ಟಿಗೆ ಸಿಲುಕಿರುವುದರಿಂದಾಗಿ ‘ಮುಂದೇನು’ ಎಂಬುದೇ ಅವರ ಚಿಂತೆ. ಈಗ ಇಂಥದೇ ಇಕ್ಕಟ್ಟಿಗೆ ಫೈಟ್ ಮಾಸ್ಟರೂ ಸಿಲುಕಿದ್ದಾರೆ. ಒಬ್ಬರು ಕೆ.ಡಿ.ವೆಂಕಟೇಶ್ ಮತ್ತೊಬ್ಬರು ಕೌರವ ವೆಂಕಟೇಶ್. ಸಾಹಸ ಕಲಾವಿದರ ಸಂಘಕ್ಕೆ ಹೊಸದಾಗಿ ಅಧ್ಯಕ್ಷರಾಗಿ ಬಂದ ಕೆ.ಡಿ. ವೆಂಕಟೇಶ್, ಕೌರವ ವೆಂಕಟೇಶ್ ಸಂಘಕ್ಕೆ ಕೊಡಬೇಕಿದ್ದ ಹಣ ಕೊಟ್ಟಿಲ್ಲ ಎಂದು ಸೆಸ್ಪೆಂಡ್ ಮಾಡಿಬಿಟ್ಟರು.
ಕೌರವ ಸಸ್ಪೆಂಡ್ ಆಗಿರುವ ಅದರಿಂದ ಯಾವುದೇ ಚಿತ್ರಕ್ಕೆ ತೆಗೆದುಕೊಳ್ಳಬೇಡಿ’ ಎಂದು ಸಾಹಸ ಕಲಾವಿದರ ಸಂಘದವರು ಬೊಬ್ಬೆ ಇಡುತ್ತಿದ್ದಾರೆ.
ಇವರೊಂದು ಕಡೆಯಾದರೆ ನಿರ್ದೇಶಕರ ಸಂಘದ ರಾಜೇಂದ್ರಸಿಂಗ್ ಬಾಬು, ನಿರ್ಮಾಪಕರ ಸಂಘದ ಅಧ್ಯಕ್ಷ ಬಸಂತ್ ಕುಮಾರ್ ಪಾಟೀಲ್ ಹಾಗೂ ಸಾಹಸ ಕಲಾವಿದರ ಸಂಘದ ಹಾಸನ್ ರಘು ಕೌರವ ವೆಂಕಟೇಶ್‌ಗೆ ಸಪೋರ್ಟ್ ಮಾಡಿ ‘ನಾವಿದ್ದೇವೆ ಡೋಂಟ್‌ವರಿ’ ಎನ್ನುತ್ತಿದ್ದಾರೆ. ಹೀಗಾಗಲು ಕಾರಣ ಒಕ್ಕೂಟ ಇಬ್ಬಾಗವಾಗಿರುವುದು.
‘ಸಿನಿಪತ್ರಕರ್ತರಿಗೂ ಈ ಬಿಸಿಮಟ್ಟೆ ಮುಂದೇನು?’ ಎಂಬಂತಾಗಿದೆ.
ಚಲನಚಿತ್ರ ಪತ್ರಕರ್ತರಲ್ಲೂ ಒಗ್ಗಟ್ಟಿಲ್ಲದೆ ಅವರದೇ ಆದ ಒಂದು ಸಂಘ ಇಲ್ಲದಿರುವುದರಿಂದ ಒಕ್ಕೊರಲಿನ ಧ್ವನಿ-ಹೋರಾಟ ಪ್ರವೃತ್ತಿ ಮೂಲೆ ಗುಂಪಾಗಿ ಮುದುಡಿ ಮಲಗಿದೆ. ಬ್ರಿಟಿಷರು ಭಾರತ ಬಿಟ್ಟು ಹೋದರೂ ಅವರು ನೆಟ್ಟ ‘ಒಡೆದಾಳುವ ನೀತಿಯ ಸಸಿ’ ಎಲ್ಲೆಡೆ ಪುಷ್ಕಳವಾಗಿ ಬೆಳೆದು ಹೆಮ್ಮರವಾಗಿ ನಿಂತಿದೆ.
ಎಲ್ಲೇ ನೋಡಿ ಒಡಕು ಧ್ವನಿ.
ಅಭಿಮಾನಿ ಸಂಘಗಳಲ್ಲೂ ಬಿರುಕುಗಳು ಅಪಸ್ವರಗಳು
‘ನನ್ನಯ ಸಮಾನರಾರಿಹರಿಲ್ಲಿ’ ಎಂಬ ಅಹಮಿಕೆ.
‘ನನ್ನ ಬರವಣಿಗೆಯನ್ನಾರೂ ಪ್ರಶ್ನಿಸಬಾರದೆಂಬ ದುರಹಂಕಾರ’
‘ಇರುವೆಯನ್ನ ಆನೆಯಂತೆ ವಿಜೃಂಭಿಸಿ ಆನೆಯನ್ನು ಇರುವೆ ಎಂದು ಚಿತ್ರಿಸುವ ವಿಚಿತ್ರ ವಿಕೃತಿ ಇಂದು ಸಾಮಾನ್ಯವಾಗುತ್ತಿದೆ ಎಲ್ಲ ರಂಗದಲ್ಲಿ’.
ನಾಲಿಗೆಯ ಮೇಲೆ ನಿಗವಿಲ್ಲದೆ ಮಾತನ್ನು ಹೇಗೆಂದರೆ ಹಾಗೆ ಹರಿಯಬಿಟ್ಟಲ್ಲಿ ಮುಂದೆ ಭಾರಿ ಭಾರಿ ಅನಾಹುತಗಳಾದಾವು ಎಂಬುದರ ಸೂಚನೆ ಈಗ ಎಲ್ಲೆಡೆ ದೊರಕುತ್ತಿದೆ.
ಯಾವುದೇ ಸಂಸ್ಥೆ ಇರಲಿ ಅದರ ಲಗಾಮು ಹಿಡಿದ ವ್ಯಕ್ತಿ ತನ್ನ ಅಧೀನದಲ್ಲಿರುವವರನ್ನು ಸರಿಯಾಗಿ ಕಂಟ್ರೋಲ್ ಮಾಡಲಾಗದಿದ್ದಲ್ಲಿ ಎಲ್ಲ ಆಡಿದ್ದೆ ಆಟವಾಗುತ್ತದೆ.
‘ಆಡಿದ್ದೇ ನಾಟಕ’ ಎಂಬ ಒಂದು ಲಘು ಪ್ರಹಸನ ನಾನು ರಂಗಕ್ಕೆ, ತಂದಾಗ ಶಿಕ್ಷಣ ತಜ್ಞ ಹೆಚ್. ನರಸಿಂಹಯ್ಯನವರು ‘ಅಯ್ಯಾ ಮೂರ್ತಿ-ಮಾಡಿದ್ದೇ ಪಾಠ’ ಎಂದೂ ಒಂದೂ ನಾಟಕ ಬರಿ ಎಂದರು.
ಮುಂದೇನು? ಎಂದು ಯಾರೇ ಆಗಲಿ ಚಿಂತಿಸದಿದ್ದಲ್ಲಿ ಗುಮಾನಿ-ದ್ವೇಷ-ಸೇಡು- ಕಿರಿಕಿರಿ ಖಂಡಿತಾ ತಪ್ಪಿದ್ದಲ್ಲ.
*****
(೦೯-೦೮-೨೦೦೨)
