ಗೆರೆಯಿಂದ ಕೊರೆದಿಡಲಾದೀತೇ ನೀರನ್ನ?
ಗೆರೆಯ ಬರುವುದರೊಳಗೆ, ನೀರು ಕರಗಿ
ಸ್ಪೇಸಾಗಿ ತೇಲಿ, ಮಳೆಯಾಗಿ ಸುರಿದು,
ನದಿಯಾಗಿ ಹರಿದು,
ಕಾಲನ ಇರಿದು ಅಲೆಅಲೆ ರಿಪೀಟಾಗಿ
ಹಾಳು ಹಾಳಿನ ಮೇಲೆ ಹಾಡಿನ ಬಳ್ಳಿ ಹಬ್ಬಿಸುತ್ತ
ಮತ್ತೆ ನೀರಾಗುವುದರೊಳಗೆ
ನೀವೆಲ್ಲಿರಿತ್ತೀರಿ?
ಇಷ್ಟಾಗಿ ನೀವೆಳೆದ ಎರಡು ರೇಖೆಗಳಲ್ಲಿ
ಕೂಡಬೇಕಾದ್ದಿಲ್ಲ. ಕೂಡಿದರೂ ಅಡ್ಡಿಯಿಲ್ಲ. ನೀರಿನಲ್ಲೊಮ್ಮೊಮ್ಮೆ ಸಮಾಂತರ ಗೆರೆ
ಮೂಡಿದ್ದಿದೆ, ಕೂಡಿದ್ದಿದೆ.
ಮುರಿದು ಅಗಲಿದ್ದೂ ಇದೆ.
ಗೆರೆ ನಂಬಿ ಜಗಳಾಡಿದ್ದಿದೆ, ಕೊಲೆಗಳಾಗಿದ್ದಾವೆ.
ಇಷ್ಟಾಗಿ ನೀವು ಬೆರಳೂರಿದ್ದೆ ಕೇಂದ್ರ
ಸುತ್ತಿದ್ದೆ ಪರಿಘ.
ಪರಿಘದ ಹಾಗೆ ಕೇಂದ್ರಗಳೂ ಅಪರಂಪಾರ
ಯಾಕೆಂದರೆ ನೋಡಿ ಇದು ನೀರಿನ ವ್ಯವಹಾರ|
*****