ರಸ‌ಋಷಿ

ಆಹ! ಮಧುಮಾಸವೈತಂದಿಹುದು. ಬನಕೆಲ್ಲ
ಚಿಗುರು ಹೂಗಳ ಹುಚ್ಚು ಹಿಡಿದಿಹುದು. ಜೀವನದ
ರಸಿಕತೆಯ ಮೂರ್‍ತಿಮತ್ತಾಯಿತೆನೆ ಆ ಮರದ
ತಳಿರ ತಣ್ಣೆಳಲಲ್ಲಿ ಮುಪ್ಪಾದ- ಅಲ್ಲಲ್ಲ-
ಹರೆಯ ಒಪ್ಪಂಬೂಸಿ ಕಪ್ಪು ಕಾಣಿಕೆಯಿತ್ತ
ಉಮರ ಖಯ್ಯಾಮನದೊ ನಲ್ಗಬ್ಬಮಂ ಪಿಡಿದು
ಕುಳಿತಿರುವನಾನಂದಿ! ಬಟ್ಟಲದ ತುಂಬ ಮಧು.

ಚೆಂಗುಲಾಬಿಯ ಚೆಲುವೆ ಸಾಕಿ ರಾಗೋನ್ಮತ್ತ
ಚಿತ್ತ ಚಿತ್ರೀಭೂತೆ ಸಂಗೀತವೆರೆದಿಹಳು!
ಚೆಲ್ವ, ಬುಲ್‌ಬುಲ್‌ ಪಕ್ಷಿ ಜೊತೆಗೆ ಸರವೆತ್ತಿಹುದು;
ಕಾಡು ನಾಡುಗಳೆಂಬ ಪರಿಭೇದವಳಿದಿಹುದು.
ಏನಿದೇನಗ್ಗಳಮೊ! ಒಲವರದ ರಸಬಾಳು.
ಎಣ್ದೆಸೆಗು ತಂಗಾಳಿ ಸಂದೇಹ ಬೀರುತಿದೆ.
“ಪ್ರೇಮಜೀವಿಯು ಚಿರಂಜೀವಿ ಕೇಳ್ ಮುಗುದೆ.”

ಸಾಕು ಮಾಡೀಜನ್ಮವೆಂದು ನರಳುವುದೇಕೆ?
ಸಾವಿನಂಜಿಕೆಯೇಕೆ? ನಮ್ಮ ಪಾಲಿನ ಬದುಕು
ಮಧುವಾಟಿಕೆಯ ಸರಕು; ಚಿಂತೆ ನಾಳೆಗೆ ಹೋಕು,
ಇಂದಿಗಿದೆ ಸುಮುಹೂರ್‍ತ, ಬರಲಿ ಹರುಷದ ಕೇಕೆ
ಅವರಿವರಿಗಂಜಿ ಸುಖಪಡಲು ನಾಚುವರೊಳರೆ?

ನಮ್ಮ ಬಾಳಿಗೆ ನಾವು ಹೊರೆಯಲ್ಲ; ಹೂವಿನೊಲು
ಹಗುರು; ಸುಖನಿಮಿಷ ಸವಿದ್ರಾಕ್ಷಿ ಪಾನಕದಮಲು
ಬಾಳಗೋಳನು ಮರೆಸಿ ಹಿಗ್ಗಿನಲಿ ಸುಗ್ಗಿಬರೆ
ತಡಮಾಡದಿರು, ಏಳು ಏಳೆನ್ನ ಮನದನ್ನೆ

ಸಂಕಷ್ಟವೀಡಾಡಿ ಪ್ರೇಮಮಧು ನಿಧುವನದಿ
ಒಂದೆ ಸಲ ಅರೆವಿರಿದ ನಿನ್ನಧರ ಚುಂಬನದಿ
ಅಮರನಾಗುವನುಮರ; ಸತ್ಯವಿದು ಓ ಚೆನ್ನೆ
ನಿನ್ನ ಹೂಗೆನ್ನೆಯಲಿ ನನಗಿಂದ್ರ ಸಂಪದಂ
ಚೆಲುವಿನೊಲವಿನ ಭೋಗ ದೈವಪ್ರಸಾದಂ

ಉಮರನೊಸಗೆಯ ಕೇಳಿ ಹಿಗ್ಗಿ ಹಾಡಿತು ಜೀವ,
ಕೇಕೆ ಹಾಕಿತು ನವಿಲು, ಫಲಮಂಜರಿಯ ಕರ್‍ದುಕಿ
ರಸವನೀಂಟಿತು. ಗಿಳಿಯು, ತಳಿರಜೊಂಪನು ತುಡುಕಿ
ಬಗ್ಗಿಸಿತು ಕೋಗಿಲೆಯು. ಎಳಗರುಕೆಯನು ಮೇವ
ಹರಿಣಿ ನೆಗೆಯಿತು ಬಾನ್ಗೆ! ತುಂಬು ಚಂದಿರನೆದೆಯು
ತಂಬೆಳಕ ತುಳುಕಿಸಿತು. ತುಂಬಿ ಝೇಂಕಾರದಲಿ
ಬಳ್ಳಿ ಮಾಡದೊಳಲೆಯ ಪರಿಮಳದ ಗಾಳಿಯಲಿ
ಪನ್ನೀರ ಚಿಮುಕಿಸಿತು ಮೋಡ ಹಾಲಿನ ಕೆನೆಯು.

“ಜೀವನದ ಸೊದೆಯ ಸವಿಯಲ್ಕಿರುವುದೀ ನಿಮಿಷ
ಕರೆವುದಿನ್ನೊಂದು ನಿಮಿಷದಲ್ಲಿ ಸುಡುಗಾಡು”
ಹೊತ್ತು ಹೋದರೆ ಮತ್ತೆ ಕಾದು ಕುಳಿತಿದೆ ಕೇಡು.
ವೇದಾಂತ ಜಡವಾದಿ, ಓ ಸನಾತನಿ, ಕಲುಷ
ವಾದವನು ಹೂಡದಿರು; ರಸ‌ಋಷಿಯ ತತ್ವಮಿದು
ಅವನ ಬಾಳಿನ ಲಸತ್ಕಾವ್ಯಕುಂಜರಿ-ಮಧು.
*****