ಬೆಂದ ಮನೆಯಿಂದ ಗಳ ಹಿರಿಯುವವರು ಎಲ್ಲ ರಂಗದಲ್ಲೂ ಇದ್ದಾರೆ. ಸಿನಿಮಾ ರಂಗ ಕೂಡ ಅದಕ್ಕೆ ಹೊರತಲ್ಲ. ಎಲ್ಲ ಸುಸೂತ್ರವಾಗಿ ನಡೆಯುತ್ತಿದ್ದರೆ ಅದರಲ್ಲಿ ‘ಥ್ರಿಲ್’ ಇರುವುದಿಲ್ಲ ಎಂದು ಸಿನಿ ಪ್ರೇಕ್ಷಕರ ಗಮನ ಸೆಳೆಯಲು ಬಗೆಬಗೆಯ ‘ಗಿಮಿಕ್ಸ್’ ಮಾಡುವವರನ್ನು ಕಾಣುತ್ತಲೇ ಬಂದಿದ್ದೇವೆ. ಕಾಂಟ್ರವರ್ಸಿ ಕಾರಣದಿಂದ ಚಿತ್ರ ಮುಖಪುಟದ ಸುದ್ದಿಯಾಗಬೇಕು. ಹಗರಣಗಳು ಹಾದಿರಂಪ-ಬೀದಿರಂಪ ಆಗಬೇಕು, ಸಮಸ್ಯೆಗಳು ಜಟಿಲವಾಗಿ-ಸಿಕ್ಕಲು ದಾರದ ಉಂಡೆ ಆಗಬೇಕು, ಆಗ ಸಿಕ್ಕು ಬಿಡಿಸುವ ಅವಕಾಶವಾದಿ ವೀರಾಧಿವೀರನಂತೆ ಕಂಗೊಳಿಸುತ್ತಾನೆ ಎಂಬುದನ್ನು ಸಿನಿರಂಗದ ಇತಿಹಾಸದಲ್ಲಿ ಉದ್ದಕ್ಕೂ ಕಾಣಬಹುದು.
ಸ್ಕೂಪ್ ನೆವದಲ್ಲಿ ಗಾಸಿಪ್ ಕಾಲಂನಲ್ಲಿ ಇಂಥ ರೋಚಕ ಸುದ್ದಿಗಳು ಅಚ್ಚಾಗುತ್ತಲೇ ಇವೆ. ಒಂದೂವರೆ ರೂಪಾಯಿನ ಪತ್ರಿಕಾ ಸಮರ ನಡೆಯುತ್ತಿರುವಾಗ ಬಿಸಿಬಿಸಿ ಸುದ್ದಿಯನ್ನು ಹಸಿಹಸಿಯಾಗಿ ಪ್ರಕಟಿಸುತ್ತ ಬಂದಿರುವುದನ್ನು ತಾವೆಲ್ಲ ಓದೇ ಇದ್ದೀರಿ.
ಹೀಗಾಗಿಯೇ ಪ್ರೇಮ ಚರ್ಚ್‌ಗೆ ಹೋದಳೆಂಬುದು, ಆಕೆಯ ಮದುವೆಯಾಯಿತು ಎನ್ನವುದು, ಪರ್ವದ ಹೂಕುಂಡ ಪ್ರಕರಣಗಳ ಉಪ್ಪು-ಖಾರದ ವರದಿಗಳು ಚರ್ಚೆಗೆ ಗ್ರಾಸವಾಗಿ ಭಾರಿ ಭಾರಿ ಕಾಂಟ್ರವರ್ಸಿಗಳನ್ನು ಹುಟ್ಟುಹಾಕಿವೆ.
ನಂಬಿಸಿ ಕೈಕೊಟ್ಟರೆಂಬ ಕಾರಣಕ್ಕೆ ದಿನೇಶ್ ಬಾಬು ಚಿತ್ರರಂಗದಿಂದ ತಿಂಗಳಾನುಗಟ್ಟಲೆ ‘ಬ್ಯಾನ್’ ಆಗುತ್ತಾರೆ. ಅನಂತರ ಬ್ಯಾನ್ ಆಗಲು ಕಾರಣವಾದವರೆ ರಾಜಿ ಹೆಸರಿನಲ್ಲಿ ಅವರನ್ನು ಪ್ರೀತಿಯಿಂದ ಅಪ್ಪುತ್ತಾರೆ.
ಕಾವೇರಿ ನೀರಿನ ಹಗರಣದಷ್ಟೇ ಭಾರಿ ಕಾಂಟ್ರವರ್ಸಿ H₂Oದಾಗುತ್ತದೆ. ಉಪೇಂದ್ರ ರಾಂಗ್ ಆಗಿ ಕೋರ್ಟು, ಕಛೇರಿ ಎನ್ನುತ್ತಾರೆ. ನಿರ್ಮಾಪಕ ಪ್ರೆಸ್‌ಮೀಟ್‌ನಲ್ಲಿ ಬಿಕ್ಕಿಬಿಕ್ಕಿ ಅಳುತ್ತಾನೆ. ಹೀಗೆಲ್ಲ ಆದಾಗ ಅಂಥ ಚಿತ್ರದ ಬಿಡುಗಡೆಗೆ ಜನತೆ ಉತ್ಸುಕತೆಯಿಂದ ಕಾದಿರುತ್ತಾರೆ ಎಂಬುದು ಹಲವರ ಭ್ರಮೆ. ನೇರ ನಡೆದರೆ ಯಾರೂ ನೋಡುವುದಿಲ್ಲ, ತಲೆಕೆಳಕಾಗಿ ನಡೆದರೆ ಎಲ್ಲ ಗಮನಿಸುತ್ತಾರೆ ಎಂಬುದು ಹಲವರ ನಂಬಿಕೆ.
ಅದಕ್ಕೆ ಇಂಗ್ಲೀಷ್ ಹೆಸರಿಡುವುದು, ಶ್.. ಎನ್ನುವುದು, ಓಂ ಎನ್ನುವುದು, A ಅನ್ನುವುದು Z ಅನ್ನುವ ಗಿಮಿಕ್ಕುಗಳು. ಒಳ್ಳೆ ಕತೆ, ಒಳ್ಳೆ ಚಿತ್ರ ಬಯಸುವ ಮಂದಿ ಆ ಕಾರಣಕ್ಕೆ ಚಿತ್ರದ ಬಯಸುವ ಮಂದಿ ಆ ಕಾರಣಕ್ಕೆ ಚಿತ್ರದ ಮೊದಲ ಪ್ರದರ್ಶನ ನೋಡಿದ ಮರುಗಳಿಗೆ ತೀರ್ಮಾನ ನೀಡುತ್ತಾರೆಯೇ ಹೊರತು-ಕಾಂಟ್ರವರ್ಸಿಗಳ ಪ್ರಭಾವಕ್ಕೆ ಮಾರುಹೋಗಿ ಅಲ್ಲ.
ಅದೇಕೋ ಏನೋ ಇದೀಗ ಮೊದಲ ಬಾರಿ ‘ಧ್ರುವ’ ಚಿತ್ರದಿಂದ ನಿರ್ದೇಶನಕ್ಕಿಳಿದಿರುವ ಎಂ.ಎಸ್. ರಮೇಶ್ ಗೂ ‘ಕಾಂಟ್ರವರ್ಸಿ’ಯಿಂದ ಜನಪ್ರಿಯರಾಗುವ ಹುಚ್ಚು ಹತ್ತಿದೆ.
ಅವರು ‘ಹೊಯ್ಸಳ’ ನಿರ್ದೆಶಿಸಬೇಕಿತ್ತು. ಅದರ ಬದಲು ‘ರಾಮ ಜನ್ಮಭೂಮಿ’ ಆರಂಭಿಸಲಿರುವೆ ಎಂದಿದ್ದಾರೆ. ಈ ಹೆಸರೇ ಒಂದು ರೀತಿ ಭಯಾನಕ. ಗುಜರಾತ್‌ನಲ್ಲಿ ಮಾನವರ ಮಾರಣಹೋಮ ಆಗಿದೆ. ರಾಮಜನ್ಮಭೂಮಿ ರಕ್ತಸಿಕ್ತ ಭೂಮಿ ಆಗಿದೆ.
“ಇಂಥ ಹೆಸರಿಡಲು ಕಾರಣವೇನು” ಎಂದರೆ
“ಅದರಿಂದ ಕಾಂಟ್ರವರ್ಸಿ ಆಗುತ್ತದೆ ಎಂಬುದು ಗೊತ್ತು. ಕಾಂಟ್ರವರ್ಸಿಯಾಗಲೆಂದೇ ಆ ಹೆಸರಿಟ್ಟಿರುವೆ” ಎನ್ನುತ್ತಾರೆ ರಮೇಶ್. ದರ್ಶನ್ ಹಾಗೂ ಶಿರಿನ್ ಭಾಗವಹಿಸಿರುವ ‘ಧ್ರುವ’ ಮುಗಿದಿಲ್ಲ, ಚಿತ್ರ ಬಿಡುಗಡೆ ಆಗಿಲ್ಲ. ಆಗಲೇ ಎರಡನೇ ಚಿತ್ರ ಕಾಂಟ್ರವರ್ಸಿಯಾಗುವಂಥ ಹೆಸರಿಟ್ಟರೆ ತಮ್ಮ ಹೆಸರು ಮಿರಿಮಿರಿ ಮಿಂಚಬಹುದೆಂದು ರಮೇಶ್ ಕನಸುತ್ತಿದ್ದಾರೆ. ‘ಫಿಲಂ ಚೇಂಬರ್ಸ್’ ರಾಮ ಜನ್ಮಭೂಮಿಗೆ ಒಪ್ಪಿಗೆಯ ಠಸ್ಸೆ ಒತ್ತಿದೆ ಎಂಬುದೂ ಅವರಿಗೆ ಹಿಗ್ಗು.
ಇಂಥ ವೇಳೆ ಸಮಾಜದ ಸ್ವಾಸ್ಥ್ಯ ಕೆಡದಿರುವಂತೆ ನೋಡಿಕೊಳ್ಳಬೇಕಾದದ್ದು ಫಿಲಂ ಛೇಂಬರ್ಸ್ ಹೊಣೆ.
‘ರಾಮಜನ್ಮ ಭೂಮಿ’ಯ ನಾಯಕ ಶಿವರಾಜ್ ಕುಮಾರ್ ಮೊನ್ನೆ ಜಯಂತಿ ಅವರ ಮಗನ ಮದುವೆಯಲ್ಲಿ ಸಿಕ್ಕಿ ಲೋಕಾಭಿರಾಮವಾಗಿ ಮಾತನಾಡುತ್ತ “ಪತ್ರಿಕೆಯೊಂದರಲ್ಲಿ ಅವರ ಮನೆಯ ಕತೆ ಅಚ್ಚಾದುದನ್ನು ಕಂಡು ಅಭಿಮಾನಿಯೊಬ್ಬ ವಿಷ ಸೇವಿಸಿ, ಆಸ್ಪತ್ರೆ ಸೇರಿದ ಪ್ರಸಂಗ ಉಲ್ಲೇಖಿಸಿ-ಹೀಗಾದರೆ ಹೇಗೆ?” ಎಂದರು. ‘ರಾಮ ಜನ್ಮಭೂಮಿ’ ಎಂಬ ಹೆಸರೂ ಹೀಗೆ ಅನೇಕ ಅಲ್ಲೋಲ ಕಲ್ಲೋಲಗಳಿಗೆ ಅನಾಹುತಗಳಿಗೆ ಕಾರಣವಾಗಬಹುದು ಎಂಬುದನ್ನೂ ಶಿವರಾಜ್ ಕುಮಾರ್ ಯೋಚಿಸಬೇಕಲ್ಲವೇ? ನಾಡಿನೆಲ್ಲೆಡೆ’ ‘ರಾಮ ಜನ್ಮಭೂಮಿ’ ಹೆಸರಿನಲ್ಲಿ ರಕ್ತದೋಕುಳಿಯ ಮಾರಣ ಹೋಮ ಆಗುತ್ತಿರುವಾಗ ಯಾರ ಮೊಗದಲ್ಲಿ ‘smile’ ನಿರೀಕ್ಷಿಸಬಹುದು. ‘ರಾಮ ಜನ್ಮಭೂಮಿ’ ಚಿತ್ರದಲ್ಲಿ ವೋಟಿನ ರಾಜಕಾರಣದ ಚಿತ್ರವಿದ್ದೀತೆ? ಅಯೋಧ್ಯೆಯಲ್ಲಿ ದೇವಾಲಯ ಕಟ್ಟಿಸುವುದರಿಂದ ಏನು ಸಾಧಿಸಿದಂತಾಯಿತು? ರೈಲಿನ ಬೋಗಿಗೆ ಬೆಂಕಿ ಇಟ್ಟವರಾರು? ಮುಗ್ಧರ ಅಮಾನುಷ ಕೊಲೆಯಿಂದ ಶ್ರೀರಾಮಚಂದ್ರ ಸಂತೃಪ್ತನಾಗುತ್ತನೆಯೆ? ಯಾವ ರಾಮನಿಗಾಗಿ ಈ ನರಮೇಧ? ಗಾಂಧೀಜಿ ಕೊಲೆಯಾದಾಗ ‘ಹೇ ರಾಮ್’ ಎಂದ ರಾಮನೇ ಇವನು? ಕೋಮು, ಗಲಭೆಗಳಿಂದಾಗುವ ಅಪಾಯಗಳೇನು? ಹಿಂದೂವಾದರೇನು, ಮುಸ್ಲಿಮನಾದರೇನು ಯಾರು ತಪ್ಪು ಮಾಡಿದರೂ ತಪ್ಪು ತಪ್ಪೇ? ಎಂಬಂಥ ಅಂಶಗಳನ್ನು ಚಿತ್ರದಲ್ಲಿ ದಿಟ್ಟತನದಿಂದ ಬಿಚ್ಚಿಡುವುದು ಸಾಧ್ಯವೇ ಎಂದರೆ “ಇಲ್ಲ, ರಾಮ ಜನ್ಮಭೂಮಿ ರಾಮರಾಜ್ಯವಾಗಲೇಬೇಕು ಎಂದು ಮಾತ್ರ ಹೇಳುತ್ತದೆ ಎನ್ನುವುದಾದರೆ” ರಾಮ ಜನ್ಮಭೂಮಿ” ಎಂಬ ಹೆಸರೇಕೆ ಬೇಕು ಎಂಬುದನ್ನು ಚಿಂತಿಸುವುದು ಅವಶ್ಯಕ. ಇಲ್ಲವಾದಲ್ಲಿ ಎಲ್ಲೆಲ್ಲೂ ರಕ್ತದ ಪ್ರವಾಹ ಹರಿದು “ಕೆಂಪಾದವೊ ಎಲ್ಲಾ ಕೆಂಪಾದವೊ” ಎಂದು ಹಾಡಬೇಕಾದೀತು.
ಕೊನೆಯ ಕಿಡಿ
ನಟಿ ಪ್ರೇಮಳ ಮದುವೆ ಪ್ರಸಂಗ, ತುಂಟಾಟದ ರೇಖಾಳ ಸ್ವಿಮಿಂಗ್ ಕಾಸ್‌ಟ್ಯೂಮ್ ಮುಂತಾದ ಗಾಸಿಪ್ ಹಗರಣಗಳಿಂದ ರೋಸಿಹೋದ ಕನೈಯರ ಕಥೆ. ರೂಪಲೇಖಾ ರಾಮನ್ ಇದ್ದು ಕೇಳಿದ್ದಿದ್ದರೆ ತಾವು ಅಣಿ ಮಾಡಿದ್ದ ‘ಕೆರಳಿದ ಕನ್ಯೆಯರು’ ಚಿತ್ರಕ್ಕೊಂದು ಹೊಸ ರೂಪ ನೀಡಿ ಅನೇಕ, ಸಿನಿಪತ್ರಕರ್ತರ ಮುಖವಾಡ ಕಳಚುತ್ತಿದ್ದರೇನೊ!
*****
(೦೮-೦೩-೨೦೦೨)
