ಶ್ರಾವಣದ ಲಾವಣ್ಯ


ಬಾನ ಸಾಣಿಗೆ ಹಿಟ್ಟು ಸಣ್ಣಿಸಿ-
ದಂತೆ ಜಿನುಗಿದೆ ಸೋನೆಯು;
ಬಿಳಿಯ ತೆಳು ಜವನಿಕೆಯನೆಳೆದಿಹ
ಇಳೆಯು ಸುಂದರ ಮೇಣೆಯು!
ಹುಲ್ಲು ಹಾಸಿದೆ, ಹೂವು ಸೂಸಿದೆ
ಗಾಳಿ ಮೂಸಿದೆ ಕಂಪನು
ಶ್ರಾವಣದ ಲಾವಣ್ಯ ಕುಣಿದಿದೆ
ಮಳೆಯು ಹಣಿಸಿದೆ ತಂಪನು


ಹಸಿರು ಅಪರಂಪಾರ ಹಬ್ಬಿದೆ
ನಲವನೆಲ್ಲೆಡ ತಬ್ಬಿದೆ;
ಎತ್ತ ಹೊರಳಿದರತ್ತ ಮೆತ್ತಗೆ
ಚಿತ್ತದಲಿ ಅಚ್ಚೊತ್ತಿದೆ!
ತಿಳಿ ಹಸಿರು ಗಿಳಿ ಹಸಿರು ಗದ್ದೆಗ-
ಳಲ್ಲಿ ಓರಣವಾಗಿದೆ,
ಕಡು ಹಸಿರು ಕಾಡಿನಲಿ ತೋರಣ-
ವಾಗಿ ಹೊರೆ ಹೊರೆ ಬಾಗಿದೆ!


ಹೂವು ಹೂವಿಗೆ ಕೈಯ ಕುಲುಕಿಸಿ
ನೊಸಲು ನೊಸಲಿಗೆ ಸೋಕಿಸಿ
ನೂರು ಪಾತರಗಿತ್ತಿ ಕುಣಿದಿವೆ
ಮೈಗೆ ಮೈಯನು ಪುಲಕಿಸಿ!

ಹೂಬಿಸಿಲು ಸುಸಿಲಾಟವಾಡಿದೆ
ಕೆನ್ನೆ ಕೆನ್ನೆಗೆ ತಾಕಿಸಿ
ಮೋಡ ಬಂದಿವೆ, ನೋಡ ಬಂದಿವೆ
ಮುತ್ತು ಹನಿಗಳ ಚಿಮುಕಿಸಿ!


ಗಗನ ಪಕ್ಷಿಯು ಹಗಲಿನಕ್ಷಿಯ
ಮುಚ್ಚಿ ಕೂತಿದೆ ಬೆಚ್ಚಗೆ;
ಬೆಳಕು ಗಾಳಿಯು ಕನಸು ಮನಸೂ
ಎಲ್ಲವೂ ಹಸಿ ಹಚ್ಚಗೆ!
ಏನು ಹೇಳುವಿ ಹೇಳು ಕೆಳದೀ
ಇಂಥ ಹಸುರಿನ ಹುಚ್ಚಿಗೆ-
ನಂದನದ ವನವೆಂದೆಯಾ?- ಬಿಡು
ಗುಂಜಿ ತೂಕವು ಹೆಚ್ಚಿಗೆ!
*****