೧
ಸಣ್ಣ ಮನೆಯನು ತುಂಬಿ
ನುಣ್ಣಗಿನ ದನಿಯಲ್ಲಿ
ಬಣ್ಣವೇರಿದ ಹೆಣ್ಣು ಹಾಡುತಿಹಳು.
ಕೈತುಂಬ ಹಸಿರು ಬಳೆ
ಹಣೆಗೆ ಕುಂಕುಮ ಚಂದ್ರ
ಜಡೆತುಂಬ ಮಲ್ಲಿಗೆಯ ಮುಡಿದಿರುವಳು.
೨
ಹೆಜ್ಜೆ ಹೆಜ್ಜೆಗಳಲ್ಲಿ
ನವಿಲನಾಡಿಸುತಿಹಳು
ಮಾತು ಮಾತಿಗೆ ಮುತ್ತು ಸುರಿಸುವವಳು.
ಚೆಂಗುಲಾಬಿಯ ಚೆಲುವೆ
ಚಂದುಟಿಯನರೆತೆರೆದು
ಉಸಿರುಸಿರಿಗೂ ಕಂಪ ಸೂಸುತಿಹಳು.
೩
ಹಾಲುಗಲ್ಲಿನ ಮೇಲೆ
ಬೆಳುದಿಂಗಳಿಳಿದಂತೆ
ನಗೆಯ ಹೊಂಗೇದಗೆಯ ಮುಗುದೆಯವಳು;
ಮುಂಜಾವು ಉಷೆಯಂತೆ
ಸಂಜೆ ಅಪ್ಸರೆಯಂತೆ
ಕಣ್ಣು ಕಣ್ಣಿಗೆ ದೀಪ ಮಿನುಗಿಸುವಳು!
೪
ನಲುಮೆದೋಳುಗಳಲ್ಲಿ
ಒಲವು ಮಾತುಗಳಾಡಿ
ಮುದ್ದಿಟ್ಟು ಮೂಲೋಕ ಮರೆಸಿದವಳು;
ನಿದ್ದೆ ಬಂದವರಂತೆ
ಎದೆಯಲ್ಲಿ ಹುದುಗಿರಲು
ಕದ್ದು ನೋಡುವ ಆಶೆ ಹಚ್ಚಿದವಳು.
೫
ಅಳಲ ಕಂಬನಿಯೊರಸಿ
ಸೊಗದ ಹೂಮಳೆ ಸುರಿಸಿ
ಮೌನವಾಗಿಯೆ ಮನವ ಮಿಡಿಯುವವಳು;
ನೆನೆಸಿದೊಡನೆಯೆ ಕನಸಿ
ನಲ್ಲಿ ಕೋರಯಿಸುವಳು
ಜೀವ ಜೀವಾಳದಲಿ ಕೂಡಿದವಳು.
*****
