ಹೆಣ ಸುಟ್ಟು ಬಂದ ಸೂತಕವಿತ್ತೆ
ಅವರ ಮುಖಗಳಲ್ಲಿ
ಮಳೆ ನಿಂತ ಮೇಲೆ ಗಾಳಿಗೆ
ಅಲುಗದೆ ನಿಂತಿವೆ ಮರಗಳು
ಇಡೀ ವ್ಯೋಮ ಮಂಡಲವನೆ
ಆವರಿಸಿರುವ ಅಖಂಡ ನಿರ್‍ಲಿಪ್ತವೆ
ಮನೆ ಮಾಡಿನಿಂದಿಳಿದ
ಕೊನೆಯ ಮಳೆ ಹನಿಗಳಿಗೆ
ಅವರ ನೀರವ ಮುಖಗಳನೆ
ತೋಯಿಸಬೇಕೆಂದಿರಲಿಲ್ಲ
ತುಯ್ಯುವ ಮಳೆಗಾಳಿಯಲ್ಲಿ
ಬರಿ ಮೈಗಳಲ್ಲಿ ಅವರೆಲ್ಲ
ಬಂದಾಗ ಉಳಿದವರು
ಕರುಳಬಳ್ಳಿ ಕತ್ತರಿಸಿಟ್ಟಂತೆ
ಯಾಕೆ ಬಿಡದೆ ಹುಯಿಲಿಟ್ಟರು?
ಹೆಗಲಿಗೆತ್ತಿದಾಗ ಅತ್ತ ತಾಯಿ
ಸುಟ್ಟು ಮರಳಿ ಬಂದವರ ಮುಖಗಳ
ಸುಮ್ಮನೆ ದಿಟ್ಟಿಸಿದಳು.
ಬಂದವರೆಲ್ಲ ಮಿಂದು
ಆರಿಸಿಕೊಂಡರು ದಾವರಗಳ
ತಣಿಸಿಕೊಂಡರು ದಣಿವು
ಉಂಡು ಬಿಸಿಗಂಜಿ,
ಉಪ್ಪಿನಕಾಯಿ
ಸೂತಕವಿತ್ತೆ ಅವರ ಮುಖಗಳಲ್ಲಿ
ಕೂತ ಎಲ್ಲರ ಕಣ್ಣಿಗೂ ಆಚೆ
ರಸ್ತೆಯ ಕೊನೆಯ ಸಾಲು ಮರಗಳು
ನಿಂತಿವೆ ಶ್ರಾವಣದ ಮಳೆಗೆ ಮಿಂದು
*****
ಭಾವನಾ ಏಪ್ರಿಲ್ ೨೦೦೦
ಈ ಬರಹವು ಕ್ರಿಯೇಟಿವ್ ಕಾಮನ್ಸ್ ಹಕ್ಕುಪದ್ಧತಿಯ ೪.೦ ಅಂತಾರಾಷ್ಟ್ರೀಯ ಪರವಾನಗಿಯನ್ನು ಹೊಂದಿದ್ದು ವಾಣಿಜ್ಯೇತರ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗಿದೆ.
