ನಾವೆಲ್ಲ ಮುಟ್ಟಬಾರದಂತೆ, ನಾವೆಲ್ಲ ಎಂದರೆ ಸ್ತ್ರೀ, ಶೂದ್ರ, ಪತಿತ, ಷಂಡ, (ನಾವೆಲ್ಲಾ ಯಾವಾಗಲೂ ಒಂದು ಗುಂಪು) ವಿಷ್ಣುಶಂಕರರನ್ನು ಮುಟ್ಟಿ ಪೂಜಿಸಬಾರದು. ‘ಶಾಲಗ್ರಾಮ’ ಶಿಲಾರ್ಚನೆಗೂ ನಾವು ಅನರ್ಹರು! ಬೃಹನ್ನಾರದೀಯ, ಪದ್ಮಪುರಾಣ ಮುಂತಾದವನ್ನು ಅಧಾರಕ್ಕೆ ತೆಗೆದುಕೊಂಡು ಹೀಗನ್ನುತ್ತಾರೆ.
ಆದರೆ ನಾನು ಸಾಲಿಗ್ರಾಮ ಶಿಲೆಯನ್ನು ಆರಿಸಿಕೊಂಡೆ.
ಎಲ್ಲ ಬಿಟ್ಟು ದೇವರ ಕೋಣೆ ಬಾಗಿಲು ಹಾಕಿಕೊಳ್ಳಲೂ ಈ ಮುಂಚೆ ಎಷ್ಟು ಹೆದರುತ್ತಿದ್ದೆ. ಹೆಣ್ಣುಮಕ್ಕಳು ಹಾಗೆಲ್ಲ ಸುಮ್ಮಸುಮ್ಮನೆ ಬಾಗಿಲು ಹಾಕಿಕೊಳ್ಳುವಂತಿಲ್ಲವಲ್ಲ. ಆದರೆ ಈಗ ಈ ಹಿಂಜರಿಕೆ ನನಗಿಲ್ಲ. ನರನರಗಳಲ್ಲಿ ಗಾಳಿಗೂ ಹೆದರುವ ಭೀತಿ ಇಲ್ಲ. ಆಶ್ಚರ್ಯ – ಯಾರಾದರೂ ಬಾಗಿಲು ತಟ್ಟಿದರೆ ಹಿಂದಿನಂತೆ ದಿಗಿಲು ಹಾರುವುದೂ ಇಲ್ಲ. ಅದಕ್ಕೇ ಇರಬಹುದೇ, ಈಗ ಆ ಸದ್ದೇ ಕೇಳುವುದಿಲ್ಲ.
ಬದುಕು ಎಷ್ಟು ವಿಚಿತ್ರವಾಗಿರುತ್ತದೆ. ನಮ್ಮ ಉಸಿರಿನಿಂದ ನಮ್ಮನ್ನೇ ಬೆಚ್ಚುವಂತೆ ಮಾಡುತ್ತದೆ. ನಿರಂತರ ಓಟದ ನಡುವೆ ಒಂದು ದೀರ್ಘ ಉಸಿರು ತೆಗೆದುಕೊಳ್ಳಲು ನಾವೇ ಎಡೆ ಕೊಟ್ಟುಕೊಳ್ಳದೆ ನಡೆನಡೆ ಹೇಯ್ ಹೇಯ್ ಎಂದು ಛಡಿ ಚಪ್ಪರಿಸಿಕೊಂಡು ನಮ್ಮನ್ನು ನಾವೇ ಓಡಿಸಿಕೊಳ್ಳುವಂತೆ ಮಾಡುತ್ತದೆ. ಹೀಗೆ ಆಗುವುದು ನನಗೆ ಮಾತ್ರವಲ್ಲ ಎಂಬ ಧೈರ್ಯದಿಂದ ಬರೆಯುತ್ತಿದ್ದೇನೆ. ಪ್ರಪಂಚವೆಲ್ಲ ಪೂರ್ಣ ಅರ್ಥವಾದ ಹಾಗೆ, ಇನ್ನು ಅರ್ಥ ಮಾಡಿಕೊಳ್ಳಲು ಏನೂ ಉಳಿದಿಲ್ಲ ಎಂಬ ಹಾಗೆ- ಎಂಬ ಹಾಗೆ- ಅರ್ಧ ಆಯುಷ್ಯದಲ್ಲೇ ಕಂಡುಬಿಟ್ಟರೆ ಉಚ್ವಾಸ ನಿಶ್ವಾಸವೂ ಎಶ್ತು ದೊಡ್ಡ ಹೋರಾಟವಾಗಿಬಿಡುತ್ತದೆಯೆಲ್ಲ. ಸಹಜತೆಯನ್ನು ಕಾಪಾಡಿಕೊಳ್ಳುವುದೇ ದೊಡ್ಡ ಧ್ಯಾನವಾಗಿ, ಹೋರಾಡುವ ಅವಶ್ಯಕಥೆ ಕಾಣದವರಿಗೆ ಸಹಜತೆಯೂ ಬೇಕಿರುವುದಿಲ್ಲ. ಬದಲು ಶಾಸ್ಥ್ರ ಗ್ರಂಥಗಳಿವೆ ಅವನ್ನು ಮುಚ್ಚಿಟ್ಟು ಪೂಗಿಸಿದರೂ ಸಾಕು ತಲೆತಲಾಂತರ ಕಾಪಡುತ್ತವೆ.
ಹೇಗಿರುವಾಗ ನಾನು ಸಾಲಿಗ್ರಾಮ ಶಿಲೆಯನ್ನು ಆರಿಸಿಕೊಂಡೆ, ಮುಟ್ಟಿದೆ- ಯಾಕೆ !
ಒಂದು ಬಾಗಿಲ ಸದ್ದೇ ಇದಕ್ಕೇ ಕಾರಣವಿರಬಹುದೇ?
ಪ್ರಶ್ನೆ ಹಿದಿದು ಒಳಗೆ ಒಳಗೆ ಇಳಿದ ಹಾಗೂ ಏನೂ ತಿಳಿಯುವುದೇ ಇಲ್ಲ ಕಾಣುವುದು ಮತ್ತೂ ಶಿಲೆಯೇ. ಕಣ್ಣಿಲ್ಲದ ಕಿವಿಯಿಲ್ಲದ ಬಾಯಿಲ್ಲದ ಶಿಲೆ ಇದು ಬರೀ ಕಲ್ಲೆನಲು ಮನಸ್ಸೊಪ್ಪದ ಶಿಲೆ. ಅಷ್ಟರವರೆಗೆ ಮೂಕಿಯಂತ್ತಿದ್ದೆ. ಈಗ ಮಾತೆಂದರೆ ಏನು ಕಲಿತೆ. ನನ್ನ ಮಾತುಗಳು ಅದರ ಪ್ರಪಂಚಕ್ಕೆ ಸಂಬಂಧಪಟ್ಟವೇ ಅಲ್ಲವಾದರೂ ಅದರೊಡನೆ ಮಾತಾಡತೊಡಗಿದೆ. ಇಶ್ಟದಿಂದ, ಕಷ್ಟದಿಂದ.
ಪೂಜೆಯ ಬಗ್ಗೆ ನನ್ನ ಕಲ್ಪನೆಯಲ್ಲಿ ತಪ್ಪು ಬೆರೆತು ಹೋಗಿತ್ತು. ಆತಂಕ ಹರಡಿ ಬಿಟ್ಟಿತು. ಅದೆಲ್ಲ ಹೊರಟುಹೋಯಿತು. ಪೂಜೆಯಲ್ಲಿ ಯಾರು ಸಣ್ಣ ಯಾರು ದೊಡ್ಡ ಇಲ್ಲ. ಸತಿ-ಪತಿ ಇಲ್ಲ. ಹೆಣ್ಣು-ಗಂಡು, ಶೂದ್ರ-ಬ್ರಾಹ್ಮಣ ಮುಂತಾದ್ದಿಲ್ಲ. ಮುಗಿಯದ ಧೂಪ ದೀಪ ನೈವೇದ್ಯ ಆರತಿ ಗಂಟೆ ಜಾಗಂಟೆ ಶಂಖ ಇಷ್ಟೇ ಮತ್ತು ಇದೇ ಅಲ್ಲ.
ಪೂಜೆಯೆಂದರೆ-
ಹೇಗೆ ಹೇಳುವುದು, ಅದು ಹೇಳುವಂಥದ್ದೇ ಅಲ್ಲದಿರುವಾಗ? ಶಾಸ್ತ್ರಗಳು ಶಾಸ್ತ್ರಿಗಳೆಲ್ಲ ಹೇಳಲು ಹೊರಟು ಸೋತು ಹೋಗಿರುವುದರ ಅರಿವಿನಲ್ಲಿ ನಾನಿರುವಾಗ?
ತಟಸ್ಠ ಸಂಪುಟದೊಳಗೆ ಹೇಗೆ ಜೀವಸ್ಯ ಜೀವದಂತೆ ಕುಳಿತುಕೊಡಿದ ನೋಡಿ, ಗಂಡಕೀ ನದಿಯ ಶಯ್ಯೆಯಿಂದ ಎದು ಪಯಣಿಸಿ ಬಂದ ಈ ಶಿಲೆ! ಇದರ ಇತಿಹಸವೆಲ್ಲ ಸಂಪುಟದಿಂದಲೇ ಅರಂಭವಾಗಿ ಅಲ್ಲಿಯೇ ಖೈದಾಗುತ್ತದೆ ಎಂದು ನಂಬಿಸಿದರು; ಸ್ತ್ರೀಣಾಂ ನೈವಾಧಿಕಾರೋ ವಿಜ್ಞಯೇಃ ಶಾಲಗ್ರಾಮ ಶಿಲಾರ್ಚನೇ….. ಎಂದದ್ದು ಸಾಲದಂದು ಮುತ್ತಿನವರು, ಮದುವೆಯಾದವರು ಮುಟ್ಟು ನಿಲ್ಲದವರು `ಶಾಲಗ್ರಾಮ’ವನ್ನು ಮುಟ್ಟಬಾರದು ಎಂದು ವಿವರಿಸಿದವರು.
ಆಚಾರ್ಯರೆಲ್ಲಿ ಎಲ್ಲಿ? – ಬರಲಿ.
ನಾ ಮುಟ್ಟಿದೆ ನಾ ಎಂಜಲು ಮಾಡಿದೆ ಸಾಲಿಗ್ರಾಮವನ್ನು. ಉಚ್ವಾಸ ನಿಶ್ವಾಸವೇ ಕಷ್ಟವಾದ ಒಂದು ಸಂಜೆ.
ಕೇಳಿ.
*
*
*
ಪುಟ್ಟ ಗೋಲಿಯಂತಹ ಶಿಲೆ – ಸಾಲಿಗ್ರಮ ಶಿಲೆ. ಅದರ ಹುಟ್ಟು, ಹೆಸರಿನ ಮೂಲ ಮುಂತಾದ್ದರ ಮೂಲಕವಲ್ಲ, ಇತಿಹಾಸದಿಂದಲ್ಲ ಅದರ ವಿಘ್ನಹರಣ ಸರ್ವವ್ಯಾಧಿ ನಿವಾರಣ ಮುಂತಾದ ಲೌಕಿಕ ಲಾಭ ಗುಣವಿಶೇಷಗಳಿಂದಲ್ಲ, ಅದರರಲ್ಲಿನ ಸುವರ್ಣರೇಖೆಯ ಸೆಳತದಿಂದಲ್ಲ – ಚಂದ್ರಹಾಸ ಅದನ್ನು ಬಾಯೊಳಗೇ ಇಟ್ಟುಕೊಂಡು ತಿರುಗುತ್ತಿದ್ದುದು, ಅದರಿಂದಲೇ ಗೋಲಿಯಾಡುತ್ತಿದ್ದುದು ಇತ್ಯಾದಿ ಕತೆಗಳ ಮೂಲಕ ನನ್ನನ್ನು ಅದು ಸೆಳೆದುಕೊಂಡಿತು. ಕತೆ ಕೇಳಿದಾಗ ನನಗೂ ಅದನ್ನು ಬಾಯೊಳಗೆ ಇಟ್ಟುಕೊಳ್ಳಬೇಕೆನಿಸುತಿತ್ತು. ಇಟ್ಟುಕೊಂಡ ಹಾಗೆಯೇ ಹೊಟ್ಟೆಯೊಳಗೆ ಹೋಗಿಬಿಟ್ಟರೆ ಎಂತಲೂ ಹೆದರಿಕೆಯಾಗುತ್ತಿತ್ತು. ಫಳಫಳ ಗೋಲಿಗಳನ್ನು, ಯಾಕೆ, ಉರುಟುಗಲ್ಲುಗಳನ್ನೂ ಕಂಡಾಗೆಲ್ಲ ಇದು ಸಾಲಿಗ್ರಮ ಶಿಲೆ ಇರಬಹುದೇ ಎಂದು ದೂರ ಯೋಚಿಸುತ್ತ ನಿಂತದ್ದೂ ಇತ್ತಲ್ಲ. ಎಣಿಸುವುದು, ಹೆದರುವುದು, ಮರೆಯುವುದು – ಆ ಕಾಲವದು.
ಎಲ್ಲಿರುತ್ತದೆ ಸಾಲಿಗ್ರಮ ಶಿಲೆ?
ಅದು ದೇವರ ಗೂಡಿನಲ್ಲಿರುತ್ತದೆ. ಓ ಅಲ್ಲಿ ಕಾಣುತ್ತದಲ್ಲಾ ಆ ಸಣ್ಣ ಪೆಟ್ಟಿಗೆ, ಅದರೊಳಗೆ. ದಿನಾ ಅದಕ್ಕೆ ಅಭಿಷೇಕವಾಗಬೇಕು, ನೈವೇದ್ಯವಾಗಬೇಕು ವಿಶೇಷ ಮಡಿಮಂತ್ರದಲ್ಲಿ. ಈ ಪೂಜೆ ಮುಡಿ ಅನ್ನಸಂತರ್ಪಣೆಗೆ ಸಮಾನ. ಅದರ ಅಭಿಷೇಕ ನಮಗೆ ಪವಿತ್ರ ತೀರ್ಥ. ಹಾಂ ಜೋಕೆ, ಅದನ್ನು ಮುಟ್ಟಿಬಿಡಬೇಡ ಮತ್ತೆ. ಮುಟ್ಟಿದರೆ ಇನ್ನಿಲ್ಲದ ಕೇಡಾಗುತ್ತದೆ. ಸುತ್ತ ಥಾನು ಥಾನು ನಂಬಿಕೆಯ ಸುರಳಿಗಳನ್ನು ಯಾರು ನೇಯುವವರೋ ಹೊತ್ತು ತಂದು ಹೆಣ್ಣು ಮಕ್ಕಳನ್ನು ಹುಡುಕಿಹುಡುಕಿ ಸುತ್ತುವವರೋ. ಯಾರೂ ಕಣ್ಣಿಗೆ ಬೀಳುವುದಿಲ್ಲ. ಸುರುಳಿ ಸುತ್ತಿನ ನಡುವೆ ಉಸಿರುಕಟ್ಟಲಿಲ್ಲವಲ್ಲ, ಪುಣ್ಯ. ಬದಲು, ಒಮ್ಮೆ ನೋಡಬೇಕು. ಸಂಪುಟ ತೆರೆದು ಶಿಲೆ ಹೇಗಿರುತ್ತದೆ ಮಾತಾಡಿಸಬೇಕು…… ಹಂಬಲ.
ಆಸೆಗಳನ್ನು ಮರೆಯುತ್ತ ಬೆಳೆಯುತ್ತ ಹೋಗುತ್ತೇವಲ್ಲವೆ? ಬೆಳೆಯಬೇಕೆಂದರೆ ಮರೆಯಲೇಬೇಕು. ಮತ್ತೊಮ್ಮೆ ಎಲ್ಲೋ ಕೆದರಿ ನೆನಪುಮಾಡಿಕೊಳ್ಳಲು.
ವರ್ಷಗಳು ದಾಟಿದವು. ಅವಕ್ಕೆ ಅದೇ ಕೆಲಸವಾದರೂ ಅವು ಸುಮ್ಮನೇದಾಟುವುದಿಲ್ಲ. ಅನೇಕ ನೆನವರಿಕೆಗಳನ್ನು ಎಬ್ಬಿಸಿ
ಕೂಡಿಸುತ್ತವೇ. ಅನೇಕವನ್ನು ಅವು ಹುಟ್ಟಿಯೇ ಇಲ್ಲವಂಬಂತೆ ಅಡಗಿಸುತ್ತವೆ. ಬಾಹ್ಯಕ್ಕೆ ಮಿತಿಯೊಡ್ಡಿ ಒಳಾಂತರ ಬೆಳೆಸುತ್ತ ಅದಕ್ಕೂ ಕೊನೆಗೆ ತಡೆಯೊಡ್ಡಿ ನಗುತ್ತವೆ. ಎಲ್ಲ ಅಳಿಸಿ ಬೆಂಕಿ ಹಚ್ಚಿ ಏನೂ ಆಗಿಲ್ಲವೆಂಬಂತೆ ಮುಂದರಿಯುತ್ತವೆ.
ಹೀಗೆ ವರ್ಷಗಳುದ್ದ ಓಡಿ ಒಡಿ ಆಯಾಸದಿಂದ ಏದುಸಿರು ಬಿಡುತ್ತ ತಲುಪಿದ ಒಂದು ಮುಸ್ಸಂಜೆ. ದೇವರಿಗೆ ದೀಪ ಹಚ್ಚಿ ಕುಳಿತಿದ್ದೆ. ಅದೇನು ಮಹಾಭಕ್ತಿಯೆನ್ನುವ ಹಾಗಿಲ್ಲ. ಕೆಲ ಮನೆಗಳಲ್ಲಿ ಬೆಳೆದವರಿಗೆ ಊಟ ತಿಂಡಿ ಮತ್ತುಳಿದ ಇತರ ವಿಚಾರಗಳಂತೆ ಹೀಗೆ ಸಾಯಂಕಾಲ ಒಂದು ದೀಪ ಹಚ್ಚಿ ನಾಲ್ಕು ಭಜನೆ ಹಾಡುವುದೋ, ಕಣ್ಣು ಮುಚ್ಚಿ ಕುಳಿತುಕೊಳ್ಳುವುದೋ, ಸಂಧ್ಯಾವಂದನೆಯೋ- ರೂಢಿ. ಇಲ್ಲದಿದ್ದರೆ ಏನೋ ಬಿಟ್ಟುಹೋದ ಹಾಗೆ ಆಗುತ್ತಿರುತ್ತದೆ ಅಷ್ಟೆ. ಅಷ್ಟಕ್ಕೆ ಇದ್ದೆ ಕೂಡ.
ಮಾಮೂಲಿಯಂತೆ ದೀಪ ಹಚ್ಚಿದೆ. ದೇವರಿಗಡ್ಡ ಬಿದ್ದು ಕಣ್ಣುಮುಚ್ಚಿ ಕುಳಿತೆ. ಹೊತ್ತು ಎಷ್ಟು ಕಳೆಯಿತೋ. ನಿದ್ದೆಯಿಂದ ಎಚ್ಚರಾದಂತೆ ಕಣ್ಣು ಪಟಪಟ ಬಿಡಿಸಿ ತೆರೆದುಕೊಂಡಿತು. ಎದುರು ಕಂಡದ್ದು – ಆ ಸಂಪುಟ!
ದಿನಾ ಕಾಣುತ್ತಿದ್ದ ಗೂಡಿನೊಳಗೆ ನಾ ಶ್ರೇಷ್ಠ ನಾ ಶ್ರೇಷ್ಠ ಎಂದು ಎದೆ ಮೀರಿಸಿ ಮುಂದೆ ಮುಂದೆ ಕುಳಿತಂತಿದ್ದ ದೇವದೇವತೆಗಳ ಮೂರ್ತಿ ಫೋಟೋ ಸಂಕೇತಗಳ್ಯಾವುವೂ ಇಂದು ಕಾಣದೆ – `ಕಾಣುವುದು’ ಎಂದರೆ ಏನು ಎಂಬುದಕ್ಕೆ ವ್ಯಾಖ್ಯಾನರೂಪದಂತೆ ಅದೇ ಎಂದರೆ ಅದೊಂದೇ ಕಂಡದ್ದು – ಹೊಳಪು ಮಾಸಿದ ಆ ಬೆಳ್ಳಿ ಡಬ್ಬಿ. ಕಂಡಷ್ಟೂ, ಅದೇ – ಅದೊಂದೇ!
ಮುಟ್ಟಬಾರದು…. ಹೆಂಗಸರು…. ಅದರಲ್ಲಿಯೂ….
ಇಲ್ಲ ಇಲ್ಲ ಮುಟ್ಟುವುದಿಲ್ಲ. ಯಾಕೆ ಮುಟ್ಟಬೇಕು? ಇಲ್ಲ.
ಬೆವರುತ್ತಿದ್ದೆ. ಉಸಿರು ಅಡಿಮೇಲಾಗುತ್ತಿತ್ತು. ಎದುರು ಅತ್ತಿತ್ತ ಕದಲದೇ ಕುಳಿತ ಸಂಪುಟ, ನನ್ನನ್ನೇ ನಿಟ್ಟಿಸುವಂತೆ.
ಇಲ್ಲ…. ಮುಟ್ಟುವುದಿಲ್ಲ…. ಸುಮ್ಮನೆ ಒಮ್ಮೆ ತೆರೆದು ನೋಡುತ್ತೇನೆ ಅಷ್ಟೇ.
ಮಂತ್ರಾಧೀನವಾದಂತೆ ಕೈ ಚಲಿಸಿತು. ಯಾಕೆಂದು ತಿಳಿದೂ ತಿಳಿಯದ ಕಂಪನದೊಂದಿಗೆ ನಿಧಾನವಾಗಿ ಅದನ್ನೆತ್ತಿಕೊಂಡೆ. ಮುಚ್ಚಳ ತೆರೆದೆ…. ಆಹ್!
ಒಳಗೆ ಪುಟ್ಟ ಸೂಕ್ಷ್ಮಶಿಲೆ ಸಾಲಿಗ್ರಾಮ!!
….ನೀನಿಲ್ಲಿದ್ದೀಯ!
ಹೀಗಿದ್ದೀಯ!!
ಇಷ್ಟು ವರ್ಷ ಯಾವ ಮರೆವಿನಲ್ಲಿದ್ದೆ? ಚಿಕ್ಕಂದಿನಿಂದ ಹುಡುಕುತ್ತಿದ್ದೆನಲ್ಲ.
ಅದು ಶಿಲೆ. ನಮ್ಮಂತೆ ಮಾತಾಡುವುದಿಲ್ಲವೆಂಬುದೇ ನೆನಪಾಗುವುದಿಲ್ಲ. ಆಗಲೂ ಆಮೇಲಿನ ಪ್ರತಿಸಲವೂ. ಅದರ ಮಾತಿನ ರೀತಿ ಬೇರೆ ಎಂದು ಮನಗಂಡರೂ.
ಸಂಪುಟದೊಳಗೆ ಯಾರೋ ಮಾಡಿ ಹೋದ ಪೂಜೆಯ ಕುರುಹಾಗಿ ತುಲಸಿ ನಿತ್ಯಪುಷ್ಪ ಮಲ್ಲಿಗೆ ಪಾರಿಜಾತ ಕಿಸ್ಕಾರ. ತಲೆಯ ಮೇಲೆ ಶ್ರೀಗಂಧ ಲೇಪನದ ಶಿಲೆ! ನೋಡುತ್ತ ಕುಳಿತೆ. ನೋಡುತ್ತಿದ್ದಂತೆ, ನಖಶಿಖಾಂತ ಭಯ ಹರಡಿ ಹೆದರುತ್ತಿದ್ದಂತೆ, ನಿಮಿಟಿ ಹಾರುವ ಹಾಗೆ ಬಾಗಿಲ ಸದ್ದು. ನಿಮಿಟಿ ಹಾರಲು ಸದ್ದು ದೊಡ್ಡದಿರಬೇಕೆಂದೇನೂ ಇಲ್ಲವಷ್ಟೆ?
ಹಾಕಿದೆಯ ಬಾಗಿಲು? ಯಾರಂತೆ ಹಾಕಿದ್ದು ನಾನೆ? ಎಷ್ಟೊತ್ತಿಗೆ? ದೇವರ ಕೋಣೆಯಲ್ಲಿ, ಅದೂ ಹೆಂಗಸರು, ಬಾಗಿಲು ಹಾಕಿಕೊಳ್ಳುವ ರಿವಾಜೇ ಇಲ್ಲದಿರುವಾಗ! ಎಲ್ಲಾದರೂ ಅಪ್ಪಿತಪ್ಪಿ ಹಾಕಿಕೊಂಡರೂ ಗಾಳಿ ಕೂಡ ಕಾಲು ಅಪ್ಪಳಿಸಿ ಗದರಿಸುತ್ತದೆ ಎಂಬ ಭೀತಿ ನಾಡಿನಾಡಿಗಳಲ್ಲಿಯೂ ಪ್ರವಹಿಸುತ್ತಿರುವಾಗ! ಯಾಕೆ, ಹೇಗೆ ಹಾಕಿಕೊಂಡೆ ಯಾವಾಗ? ಚೋದ್ಯದ ಮಡುವಿನಲ್ಲಿ ಬಿದ್ದಿದ್ದೆ.
ಬಾಗಿಲು ತಟ್ಟುತ್ತಿದ್ದಾರೆ ಮೇಲೆ ಮೇಲೆ ಮತ್ತೆ ಮತ್ತೆ ಯಾರೋ. ನಡುಗುತ್ತಿತ್ತು ಮೈ. ನಾನೀ ಸಂಪುಟವನ್ನು ತೆರೆಯಬಾರದಿತ್ತು. ತಲತಲಾಂತರದಿಂದ ಬಂದ ಗೂಡಿನ ಮಡಿ ಹಾರಿಸಿದೆ. ಅಶುದ್ಧ ಮಾಡಿದೆ. ಈಗ ಬಾಗಿಲು ತೆರೆದೆನೆಂದರೆ ಹೊರಗಿರುವ ಎಲ್ಲ ಹೇಳುತ್ತಾರೆ, ಸಾಲಿಗ್ರಾಮ ಶಿಲೆಯನ್ನು ಈ `ಹೆಂಗಸು’ ಮುಟ್ಟಿಯೇಬಿಟ್ಟಿ`ದೆ’ ಅಂತ. ಶುದ್ಧ, ಪಂಚಗವ್ಯ….ಎಲ್ಲ ಇಷ್ಟಕ್ಕೇ ಮುಗಿಯುವುದಿಲ್ಲ.
ಸದ್ದು. ಬಾಗಿಲು ಹಾಕಿಕೊಂಡು ಏನು ಮಾಡುತ್ತೀ ಅಲ್ಲಿ, ತೆಗೆ ಬೇಗ ಎನ್ನುವಂತೆ.
ಯಾರದು ಹಾಗೆ ಹೇಳುತ್ತಿರುವುದು ಗಂಡಸರೋ ಹೆಂಗಸರೋ…. ಅಥವಾ…. ನಾನೇಯೋ?
ವಿಂಗಡಿಸಲೇ ಸಾಧ್ಯವಿಲ್ಲ. ಸಧ್ಯ ಸಂಪುಟ ಮುಚ್ಚಿ ಯಥಾಸ್ಥಾನದಲ್ಲಿಡಬೇಕು. ಎದ್ದು ಬಂದು ಬಾಗಿಲು ತೆರೆಯಬೇಕು. “ಇಲ್ಲ – ನಾನು ಮುಟ್ಟಿಯೇ ಇಲ್ಲ. ಸುಮ್ಮನೆ ನೋಡುವ ಅಂತ….”
ಏಳಲು ಹೋಗುತ್ತೇನೆ.
ಏಳಲೊಲ್ಲೆ.
ಮತ್ತೊಮ್ಮೆ ಶಿಲೆಯನ್ನು ನೋಡಿದೆ. ಬಾಹ್ಯಕ್ಕೆ ಒಂದು ಗುಂಡುಕಲ್ಲು ಮಾತ್ರವಾಗಿ ವ್ಯಕ್ತವಾದಂತಿರುವ ಅದನ್ನು ನೋಡುತ್ತಾ ಇರುವಂತೆ ಅರೆ! ನನ್ನ ಉಸಿರಾಟ ಸರಾಗವಾಗತೊಡಗಿತು. ಉಸಿರಾಟ ಸರಾಗದ ಸುಖ ಅನುಭವಿಸಿದವರಿಗೇ ಗೊತ್ತು…. ನಾನು ಹಗುರಾಗಿದ್ದೆ. ಹಕ್ಕಿಯಂತಾಗಿದ್ದೆ. ಅರ್ಥವಾಗಿ ಮುಗಿಯಿತೆಂದುಕೊಂಡಿದ್ದ ಪ್ರಪಂಚ ಎಂದಿಗೂ ಅರ್ಥವಾಗದ್ದಕ್ಕೆ ಒಮ್ಮೆಗೇ ಚಿಮ್ಮಿಕೊಂಡಂತಾಗಿ ಗಲಿಬಿಲಿಗೊಂಡು ಶಿಲೆಯನ್ನೇ ವಿಸ್ಮಯಚಿತ್ತ ನೋಡುತ್ತಲೇ ಕುಳಿತೆ.
ಮತ್ತೆ ಸದ್ದು. ಅಯ್ಯೋ.
ಇಟ್ಟು ಬಿಡಬೇಕು ಈ ಪೆಟ್ಟಿಗೆಯನ್ನು ಎಲ್ಲಿತ್ತೋ ಅಲ್ಲಿ – ಥಟ್ಟನೆ. ವೃಥಾ ಹಗರಣ ತಪ್ಪುತ್ತದೆ. “ಒಬ್ಬಳೇ ಇರೋಣ ಅನಿಸಿತು. ಬಾಗಿಲು ಹಾಕಿಕೊಂಡೆ. ಏನೀಗ?”- ಸಾಧ್ಯವಾದರೆ ಹೀಗೆಂಬಂತೆ ಮುಖತಿರುವಿ ಹೊರಹೊರಟುಬಿಡಬೇಕು. ಇನ್ನು ತಡಮಾಡಬಾರದು. ಮನೆಮಂದಿಯೆಲ್ಲ ಅಲ್ಲಿ ಸೇರಿಯಾರು.
ಧಾವಂತದಿಂದ ಪೆಟ್ಟಿಗೆಯನ್ನು ಇಡಲು ಹೋದೆ –
ಹೋಗದೆ,
ಏನು ಏನು ಏನು, ಏನು ಮಾಡುತ್ತಿದ್ದೀ?
ಯೇ ಯೇ ಯೇ ಬೇಡ ಕೂಡದು. ಮುಟ್ಟಬಾರದ್ದು ಇದು ಎಂದು ಗದರಿಸಿ ಎಚ್ಚರಿಸಿಕೊಳ್ಳುತ್ತಿದ್ದಂತೆಯೇ, ಖಂಡಿತ ಮುಟ್ಟುವುದಿಲ್ಲ ಎಂದು ಜಪಿಸುತ್ತಿದ್ದಂತೆಯೇ-
ಮುಟ್ಟಿಬಿಟ್ಟೆ!
ಕೇಳಿ ಕೇಳಿ, ನಾ ಮುಟ್ಟಿಬಿಟ್ಟೆ!
ಸಾಲಿಗ್ರಾಮಶಿಲೆಯನ್ನ ನಾ ಮುಟ್ಟಿದೆ. ಮೆಲ್ಲ ಕೈಗೆತ್ತಿಕೊಂಡೆ. ಮೆಲ್ಲ ಮುತ್ತಿಟ್ಟೆ.
ಆಪಾದಮಸ್ತಕ ಥರಗುಡುತ್ತಿದ್ದೆ. ಚಿಕ್ಕಂದಿನಲ್ಲಿ ನೆಟ್ಟು ಹೋದ ವಾಕ್ಯಗಳನ್ನು ಮೀರುವುದೆಂದರೆ ಏನು, ಜೀವ ಹೋದ ಹಾಗೆ.
ಸದ್ದು!
ಮತ್ತೆ ಮತ್ತೆ ಸದ್ದು! ಕೇಳುತ್ತಿದ್ದಂತೆ
ಟಪಕ್ಕ್
*****
