ಕನಸಿನಾ ನಿದ್ದೆಯಲಿ ಒದ್ದೆಯಾಗಿವೆ ಕಣ್ಣು
ಮುದ್ದೆಯಾಗಿದೆ ಜೀವ ನೋವನುಂಡು;
ಏಳುವನೂ ಬೀಳುವೆನೊ, ತಾಳುವನೊ ಬಾಳುವೆನೊ
ಬೇಳುವೆನೊ-ಏನೊಂದನರಿಯೆ ನಾನು.
ಬಾಂದಳದ ಪೆಂಪಿನಲಿ ಕಂಡ ನೀನು;
‘ಉದಯವಾಯಿತು’ ಎಂದುಕೊಂಡೆ ನಾನು.
ನಿಶೆಯ ಮುಸುಕನು ತೆರೆದು, ಉಷೆಯ ಕನ್ನಡಿ ಹಿಡಿದು
ಉಣ್ಣೆ ಮುಗಿಲಿಗೆ ಹೊನ್ನ ಬಣ್ಣವೆರಚಿ,
ಅಳಿದ ಆಶಾಂಕುರಕೆ ಒಲವಿನಂಜಲಿಯೆರೆದು
ದಯಮಾಡು, ಓ ಬೆಳಕೆ ! ದಿಕ್ಕು-ಸೂಚಿ;
ಬಂದುಬಿಡು, ಎದೆಯ ಕದ ತೆರೆದಿರುವೆನು
ಮೈಯೆಲ್ಲ ನವಿರೆದ್ದು ನಿಂತಿರುವೆನು.
ನಸುಕಿನಲಿ ಮೂಡಣದ ನೆಲಬಾನಿನಂಚು – ತುಟಿ
ಚುಂಬಿಸಿಹ ಬಿಂಬಿಸಿಹ ಚೆಲ್ವ ಬೆಳಕೆ,
ಅಚ್ಚ ನೀಲಿಯ ಬಾನ ಕೆನ್ನೆಯಲ್ಲಿ ರಾಜಿಸಿಹ
ಚೆಂಬೆಳಕೆ ಬಾ ಬಾರ ಬೆಂಬಲಕ್ಕೆ-
ಕಣ್ಣ ಕೋರಯಿಸಿರುವ ದಿವ್ಯ ಬೆಳಕೆ
ಹಾರಯಿಸಿ ಹಾರಯಿಸಿ ಕಂಡ ಬೆಳಕ.
ಮಗುವಿನೆಳನಗೆಯಲ್ಲಿ, ಮುಗುದೆಯರ ಕಣ್ಣಿನಲಿ
ಮಾಮಹಿಮರೆಂಬುವರ ಮುಖಬಿಂಬದಿ,
ಒಲಿದ ಎದೆಯೊಲವಿನಲಿ, ಚಿಕ್ಕೆಗಳ ಮಿನುಗಿನಲಿ
ಹುಣ್ಣಿಮೆಯ ಚಂದಿರನ ಮಧುಹಾಸದಿ-
ನಿನ್ನ ಆನಂದವನೆ ತೇಲಿಸಿರುವೆ,
ನಿನ್ನಮಿತ ಕಾಂತಿಯನೆ ಕೀಲಿಸಿರುವೆ.
ಬಾಳಜಾಜಿಯ ಬಳ್ಳಿ ಕುಡಿಚಾಚಿ ಹಂದರವ
ಬಳಸಿ ಮೇಲೇರುತಿದೆ ಸೊಗವ ಬಯಸಿ;
ಮೊಗ್ಗೆ ಕೈಮುಗಿದಿಹವು, ಹೂವರಳಿ ನಗುತಿಹವು
ಮೆಲ್ಲೆಲರ ಮೈಗೆ ನರುಗಂಪ ಪೂಸಿ.
ಏನಿದೇನಿದು ಹೂವು ಜಗುಳಿತೇಕೆ?
ಹೂವ ಹುಳು ಕೊರೆಯುತಿರೆ ಬಾಳಲೇಕೆ?
ಇಂತಿಂತು ಮಂಪರದಿ ತಲ್ಲಣಿಸುತಿರೆ ಮನವು
ತಾನೆ ತನ್ನಳವಿನಲಿ ಮುದುಡಿ ಕೂತು,
ಚಂಚಲದ ಮಂಚದಲಿ ಕುಳಿತಿರುವ ಚಿತ್ತವಿದು
ಗಾಳಿಯಲಿ ಹರಿಬಿಟ್ಟ ಊರ್ಣ ತಂತು-
ಚಿತ್ತದಲಿ ಮೊಳೆಸು ನೀ ಸ್ವ-ತ್ವ ಬೀಜ,
ಮತ್ತೆ ಹೊರಹೊಮ್ಮುವುದು ಸುಪ್ತ ತೇಜ.
ಎಣ್ಣೆ ತೀರಿದ ಮೇಲೆ ಆರಿ ಹೋಗುವ ದೀಪ
ಕಣ್ಣ ಮಿಟುಕಿಸುವಾಟ ಹೊಲ್ಲ ಸಾಕು;
ಯುಗಯುಗಾಂತ್ಯದ ವರೆಗೆ ಜಗವ ಬೆಳಗಿಸಬಲ್ಲ
ಎಲೆ ಚಿರಂತನ ಬೆಳಕೆ! ನೀನೆ ಬೇಕು.
ತಿಮಿರ ದೋಷಗಳೆಲ್ಲ ಹಿಂದಾಗಲಿ
ನಿನ್ನ ಭವ್ಯತೆಯರಿವು ಇಂದಾಗಲಿ.
ಹೃದಯದಲಿ ಝಗಝಗಿಸಿ, ಕಿಲ್ಮಷವ ಸುಟ್ಟುರಿಸಿ
ಬದುಕ ಸಿಂಗರಿಸ ಬಾ ನಿಜದ ಬೆಳಕೆ,
ಮನ್ಮನೋಮಂದಿರಕೆ ಓ ಪರಾತ್ಪರ ಬೆಳಕೆ
ತುಂಬಿ ಬಾ ಸಚ್ಚಿದಾನಂದ ಬೆಳಕೆ-
ಕಣ್ಣಿದ್ದು ಕಾಣದಿಹ ಜೀವ ಪಥಕೆ
ಅವತರಿಸು ಸರ್ವ ಮಂಗಳದ ಬೆಳಕೆ.
*****