ದಾಳಿ

ಆ ಕಂಡೆಕ್ಟರ್ ಒಮ್ಮೆ ಅಬ್ಬರಿಸಿದ. ಮತ್ತೆ ಯಾಕಲ್ಲ. ಟಿಕೆಟು ಹರಿಯುವಾಗ ಆಕೆ ಸೀಟು ಕೇಳಿದ್ದಳು. ಸೀಟೇ ಇರಲಿಲ್ಲ ನಿಜ. ಆದರೆ ಟಿಕೆಟು ಪೆಟ್ಟಿಗೆ ಹೊತ್ತು ಎತ್ತರ ಕಾಣುವ ಸೀಟೊಂದು ಹಾಗೆಯೇ ಇತ್ತು. ಕಂಡಕ್ಟರ್ ಸೀಟದು. ಆತನಿಗೆ ಕುಳಿತುಕೊಳ್ಳುವಷ್ಟು ಪುರುಸೊತ್ತಿರಲಿಲ್ಲ. ಆಕೆ ಸಧ್ಯಕ್ಕೆ ತಾನು ಅದರ ಮೇಲೆ ಕುಳಿತುಕೊಳ್ಳಲೆ ಅಂತ ಕೇಳುದನಿಯಲ್ಲಿ ಕೇಳಿದ್ದಳು-ಅಷ್ಟೆ. ಅಷ್ಟಕ್ಕೇ ಆರ್ಭಟ!

ಬಸ್ಸು ಹತ್ತುವ ಮೊದಲು ನಾವೇ ಕೇಳಿದ್ದೆವು. ಅವರ ಸಂಭಾಷಣೆ. ಭರ್ತಿಯಾಗಿಯೇ ಬಂದಿದ್ದ ಬಸ್ಸಿನಲ್ಲಿ ಜನ ಒತ್ತೊತ್ತಿ ಹತ್ತುತ್ತಿದ್ದರೂ ಆತ ಹತ್ರೀ ಹತ್ರೀ…. ಅಂತ ಕೂಗುತ್ತಿದ್ದ. ಹತ್ತದೆ ಒಂದು ಬದಿಯಲ್ಲಿ ನಿಂತಿದ್ದ ಅವಳೊಡನೆ ಅವಸರವಸರವಾಗಿ “ಎಲ್ಲಿಗೆ?….ಎಲ್ಲಿಗೇ?”ಆಕೆ ಹೇಳುತ್ತಲೂ
“ಮತ್ತೆ! ಹತ್ತಿ ಮತ್ತೆ!”
“ಸೀಟಿಲ್ಲವಲ್ಲ”
“ಇನ್ನೊಂದು ಬಸ್ಸೂ ಹೀಗೇ…ಬನ್ನೀ ಹತ್ತಿ, ಹತ್ತಿ ಬೇಗ”
“ಇಲ್ಲ…ನಿಲ್ಲೋಕೆ ಆಗಲ್ಲಪ್ಪ ನನಗೆ.”
“ಒಂದು ಸೀಟಿಲ್ಲವ. ಕೊಡುವ ಬನ್ನೀ….” ಕಿರಿಚಿದ- ಯಾವತ್ತು ಹತ್ತುವವರಲ್ಲ. ಹತ್ತದವರೇ ಲೆಕ್ಕವಷ್ಟೆ ಅವರಿಗೆ? ಆತ ಸೀಟು ಕೊಡುವ ಎಂದ ಮೇಲೆಯೇ ಆಕೆ ಸಾಲು ಸೇರಿದಳು. ನಮ್ಮ ಹಿಂದೆಯೇ ಬಸ್ಸಿನೊಳಗೆ ಬಂದಳು. ಮೇಲೆ ಬಂದ ಮೇಲೆ ಸೀಟಿನ ಮಾತೇ ಎತ್ತದ ಆತನ ಬಳಿ ಟಿಕೆಟ್ ಹರುಯುವಾಗ ಹಾಗೆ ಕೇಳಿದರೆ ಆತನ ಅಬ್ಬರ “ಏನು. ನಾನು ನಿಂತಿರಬೇಕ? ಏನಂದಾಜು ನಿಮ್ಮದು? ಕಂಡಕ್ಟರ್ ನಿಂತು ಸಾಯಲಿ ಅಂತನ?”

ಬೆಳಗಿನ ಜಾವ ಎದ್ದು ಡ್ಯೂಟಿಗೆ ಹೊರಟವ. ಮನೆಯಲ್ಲಿ ತಿಂಡಿ ಕಾಫಿ ಸರಿಯಾಗಿ ಆಗಿದೆಯೋ ಇಲ್ಲವೋ. ಹೊಟ್ಟೆಯಲ್ಲಿ ಏನು ಸಿಟ್ಟೋ-ಹೊಮ್ಮಲು ಬಂದು ನೆಪ ಬೇಕಾಗಿರಬಹುದು….ನಿಂತವರು ನಾವು ಹೀಗೆಣಿಸುತ್ತ ನಿಂತೆವು.

ಪ್ರಯಣಿಕರೆಲ್ಲ ಮೌನ ಹೊದ್ದಂಥ ಹೊತ್ತದು ‘ತಂಪು. ಜೊಂಪು ಹೊತ್ತು’ ಕಲಕಲರಾಗಲು ಪೂರ್ವ ಕಣ್ಣುಜ್ಜಿ ಏಳಬೇಕು. ಇಂತಹ ಪ್ರಶಾಂತ ಚುಮುಚುಮುವನ್ನು ಪರಚಲು ಅವನಿಗೆ ಮನ ಬಂತೆಂದರೆ!

ಇಂಥ ಸಂದರ್ಭಗಳಲೆಲ್ಲ ಹೆಚ್ಚಾಗಿ ಪ್ರಯಾಣಿಕರು ಬೆಪ್ಪು ನಿಲ್ಲುತ್ತಾರೆ. ಅಲ್ಲವಾದರೆ ತಾವೂ ಎರಡು ಮಾತು ಕಾಸಿ ಬಿಸಾಕುತ್ತಾರೆ. ಒಮ್ಮೊಮ್ಮೆ ಮಾತಿಗೆ ಮಾತು ಸಿಕ್ಕಿ ಸಿಕ್ಕು ಸಿಕ್ಕಾಗಿ ಆಮೇಲೆ ಎಳೆದು ಗಂಟು ಬಿಡಿಸಲು ತುದಿಯೇ ಕಾಣದಾಗಿ….

ಆದರೆ ಈಕೆ ನೋಡಿದರೆ ಮೇಲು ನಗುತ್ತಿದ್ದಾಳೆ: ಅವಳೊಳಗೇ ಎಂಬಂತೆ. ನಿಲ್ಲಲಿಕ್ಕಾಗುವುದಿಲ್ಲ ತನ್ನಿಂದ ಅಂತ ಹೇಳಿಕೊಂಡೇ ಬಸ್ಸು ಹತ್ತಿದವಳು. ಆ ದೊಡ್ಡ ಸ್ವರದೆದುರು ಸಣ್ಣ ನಗೆ ಬಿಡಿಸಿಕೊಂಡು ನಿಂತಿದ್ದಾಳೆ. ಹದವಾದ ಎತ್ತರದ ನಡುವಯದ ಹಳ್ಳಿಯವಳೂ ಅಲ್ಲದ ಪೇಟೆಯವಳೂ ಅಲ್ಲದಂತಿರುವ ಅವಳ ಸಣ್ಣ ಕಣ್ಣುಗಳ ಚೂಪು ನೋಡಿದ್ದೂ ಆಗಲೇ ನಾವು. ಆತ ಹಾಗೆ ಅರಚದೇ ಇದ್ದಿದ್ದರೆ ಅತ್ತ ತಿರುಗುತ್ತಲೂ ಇರಲಿಲ್ಲ. ನಾವು ಬಹುಶಃ ಅವಳನ್ನು ಗಮನಿಸುತ್ತಲೂ ಇರಲಿಲ್ಲ.

ಕಂಡಕ್ಟರ್ ಅವಳ ನಗೆಯನ್ನೆ ಕುಕ್ಕುವಂತೆ ನೋಡುತ್ತ ಪಕ್ಕದ ಪ್ರಯಾಣಿಕನನ್ನು ಗದರಿ ಕೇಳಿದ “ಯೆಲ್ಲಿಗೆ?” ಆತ ಹೆದರಿ ಇಂಥಲ್ಲಿಗೆ ಎನ್ನಲು “ಯೆಷ್ಟು ಹೇಳಿ” -ಕಣ್ಣು ನಗು-ನಿಶ್ಚಿಂತೆಯಿಂದ ನಿಂತ ಅವಳ ಕಡೆ ಮತ್ತೆ ಉರಿದು ಭಗ್ಗಂದಂತೆ “ಸೀಟು ಬೇಕು ಸೀಟು! ಅಷ್ಟಿದ್ದವರು ಮೊದಲೇ ಬರಬೇಕಿತ್ತು. ಏನು. ನಿದ್ದೆ ಮಾಡುತ್ತಿದ್ದೀರ….? ನಿದ್ದೆಗೆ ನಿದ್ದೆಯೂ ಬೇಕು ನಿಮಗೆ. ಸೀಟಿಗೆ ಸೀಟೂ”-ಅತ್ತಿತ್ತ ಒಂದೆರಡು ನಗೆಗಳು ಖಳ್ಳೆಂದವು.

ಆಯಿತು ಹೋಯಿತೆನ್ನದೆ ಎಲ ಇವನ. ಎಷ್ಟುದ್ದ ಎಳೆಯುತ್ತಿದ್ದಾನೆ! ಇಷ್ಟಕ್ಕೂ ಆ ಬಸ್ಸು ಊರಿಗೆ ಬರುವ ಮುಂಚೆಯೇ ಭರ್ತಿಯಾಗೇ ಬಂದಿತ್ತಲ್ಲ. ರಾತ್ರಿ ಇಡೀ ನಿದ್ದೆ ಮಾಡದೆ ಬಸ್‌ಸ್ಟಾಪಿನಲ್ಲಿ ನಿಂತು ಕಾದಿದ್ದರೂ ಸೀಟು ಸಿಗುವ ಆಸೆಯಿರಲಿಲ್ಲ.

ಟಿಕೆಟು ಕೊಡುತ್ತ ನಮ್ಮ ಸಮೀಪ ಬಂದ. ಎಲ್ಲಿಗೆ? ಇಂಥಲ್ಲಿಗೆ. ಇಷ್ಟು…. ಟಿಕೆಟು ದುಡ್ಡು ಚಿಲ್ಲರೆ ಎಲ್ಲ ಯಂತ್ರವತ್ ನಡೆಯುತ್ತಿದ್ದಂತೆ ಪಟಕ್ಕನೆ ಅವಳತ್ತ ನೋಡಿದ. ಆಶ್ಚರ್ಯದಿಂದ ನಾವೂ ಅಲ್ಲಿ. ಇನ್ನು ಮಾಸದ ಹರಡಿಕೊಂಡೇ ಇರುವ ಅವಳ ನಗು! ಆತ ಒಮ್ಮೆ ಉರಿದುಬಿದ್ದಂತೆ ಟಿಕೆಟು ಕಟ್ಟನ್ನು ಕೈಗೆ ಕುಕ್ಕಿ ಬಡಿದುಕೊಂಡ. “ಇಷ್ಟು ಜನ ನಿಂತಿದ್ದಾರೆ ಇಷ್ಟು ಜನ! ಸೀಟು ಬೇಕಂತೆ. ಮೇಲೆ ಟಾಪ್ ಮೇಲಿದೆ ನೋಡಿ ಸೀಟು!”….ಮುಂದೆ ಹೋದ.
“ಛುಕ್” -ವ್ಯಥೆ ಮಿಡಿದಳು ಶೋಭನಾ.
“ಸೀಟು ಕೊಟ್ಟರಾದರೂ ಸಮ. ಕೊಡದೆಯೇ ರಾಪು ನೋಡು.”
“ಕೊಡಲಾರದ್ದಕ್ಕೆ ರಾಪು ಮತ್ತೆ”
“ಸುಮ್ಮನಿರು. ಮೆಲ್ಲ ಮಾತಾಡು.”

ಟಿಕೆಟು ಮುಗಿಸಿ ಆತ ನಮ್ಮನ್ನು ದಾಟಿ ಹಿಂದಕ್ಕೆ ಹೊರಟಂತೆ ಆ ಕಡೆಗೇ ತಿರುಗಿ ನಿಂತೆವು. ಅರೆ. ಆಕೆ ಕೇಳಿದ ಅದೇ ಸೀಟಿನ ಮೇಲೆ ವ್ಯಕ್ತಿಯೊಬ್ಬ ಆಗಲೇ ಕುಳಿತಾಗಿದೆ! ಹೇಳಿಲ್ಲ ಕೇಳಿಲ್ಲ. ಕಂದಕ್ಟರ್ ನೋದಿಲ್ಲವೆ? ಇಲ್ಲ. ಅವನಿಗಿನ್ನೂ ಬಿಡುವಾಗಿಲ್ಲ. ಆಕೆ ಕೈ ಸೋತು ಕೆಳಗಿಟ್ಟಿದ್ದ ಬುಟ್ಟಿ ಕಣ್ಣಿಗೆ ಬಿದ್ದಿದೆ. ಅದನ್ನು ಪಟಾರನೆ ತುಳಿದ. “ಕಾಲಡಿ ಕೈಯಡಿ ಇಡುತ್ತೀರಲ್ಲ. ನಿಮಗೇನು ಭಾಷೆ ಇಲ್ಲವ?”ಮತ್ತೆ ಅರಚಿದ. ತನ್ನ ಅರಚಲು ತನಗೇ ತಡೆಯಲಾರದೆ ಆ ದನಿ ಕೊಂಚ ಕಳಕಿತು. ಅಲ್ಲೇ ಕಿಟಕಿಗೆ ಮೊಣಕೈಯೂರಿ ಗಲ್ಲಕ್ಕೆ ಅಂಗೈಯಾನಿಸಿ ನೋಡುತ್ತಿದ್ದ ಒಬ್ಬ ವಯಸ್ಸಾದ ಹೆಂಗಸು “ಅವಳಿಗಾದರೂ ಏನದು- ತೆಗೆದುಕೊಂಡು ಹೋಗುವಂಥ ನಗೆ!” “ಹೂಂ. ಹೋಕಿಲ್ಲದ್ದು. ಕೆಲವು ಹೆಂಗಸರು ಹಾಗೇಪ್ಪ. ಥು” ಪಕ್ಕದವಳು. ಆತನಿಂದಲ್ಲ. ಅವಳ ನಗೆಯಿಂದಲೇ ಆ ಬುಟ್ಟಿ ಉರುಳಿತೋ ಏನು!

ಬುಟ್ಟಿಯ ಒಳಗಿನದು ಪೂರ್ತಿ ಹೊರ ಬೀಳುವ ಮೊದಲೇ ಬಗ್ಗಿ ಅದನ್ನಾಕೆ ಎತ್ತಿಟ್ಟುಕೊಂಡಳು. ಏನೂ ಆಗಿಲ್ಲದಂತೆ ಮತ್ತೆ ನಗೆ ಹಚ್ಚಿ ನಿಂತಳು. ಆಚೆ ಈಚೆಯಿಂದ ಒತ್ತುವ ಜನಗಳು.

ಜನ ಎನ್ನುವ ಬದಲು ಪ್ರೇಕ್ಷಕರು ಎನ್ನುವ ಮತ್ತು ಅದು ಎರಡೇ ಪಾತ್ರಗಳಿರುವ ನಾಟಕ ಅಂದುಕೊಳ್ಳುವ. ಡಯಲಾಗು ಒಬ್ಬನಿಗೆ. ಮೌನ ನಗೆಯ ಮುಗುಳು ಇನ್ನೊಂದು ಪಾತ್ರಕ್ಕೆ. ಹೀಗೆ. ಇದು ನಾಟಕವೋ ಎಂಬಂತೆ ನೋಡುತ್ತಿರುವಾಗ ಆತ ಅಂತೂ ಬಸ್ಸಿನ ಹಿಂಭಾಗ ತಲುಪಿ ತನ್ನ ಸೀಟಿನ ಮೇಲೆ ಕುಳಿತಿದ್ದವನ ಕಡೆಗೆ ಬಂದು ಪರಿಚಯದ ನಗೆ ಬೀರಿ “ಓ ಸ್ವಾಮಿ. ಮೋಡೆ?” ಎಂದ. ನೀವು ಹತ್ತಿದ್ದು ನೋಡಲೇ ಇಲ್ಲವಲ್ಲ. ಯಾವ ಮಾಯಕದಲ್ಲಿ ಹತ್ತಿದಿರಿ ಎನ್ನುತೆನ್ನುತ್ತ ಟಿಕೆಟು ಹರಿದ. ಕೊನೆಯ ಮೆಟ್ಟಿಲ ಮೇಲೆ ನಿಂತು “ಹಡಬೆಟ್ಟಗಳೆಲ್ಲ ಹತ್ತಿ ಜೀವ ತಿಂತಾರೆ ಮಾರಾಯರೆ” ಮುಂತಾಗಿ, ಇಂಥದೇ ಮುಂತಾದ ಇನ್ನೂ ‘ಹಡಬೆಟ್ಟ’ ಮಾತುಗಳನ್ನು ಮುಂದುವರೆಸಿದ. ಆತ ಕೆಟ್ಟ ಬಾಯಿ ನಿಲ್ಲಿಸುತ್ತಿಲ್ಲ. ಅವಳು ಮೆಲುನಗೆ ನಿಲ್ಲಿಸುತ್ತಿಲ್ಲ. ಉಳಿದವರು ನೋಡುವುದನ್ನೂ ನಿಲ್ಲಿಸುತ್ತಿಲ್ಲ.
“ಅಥವಾ ಅವಳ ಮುಖವೇ ಹಾಗೋ. ಗ್ರಾಚಾರಕ್ಕೆ?”
“ಸುಮ್ಮನೆ ಆಕೆ ನಿಂತಿರೋದರಿಂದಲೇ ಆತ ಹಾಗೆ ಮಾತಾಡ್ತಿರುವುದು.”
“ಸರಿ. ಜಗಳಾಡು. ಅವಳ ಬದಲಿಗೆ ನೀನು.”
ಏನೂ ಮಾಡದೆ ನಾವು ಐದಾರು ಮಂದಿ ಪಿಸು ಚಕಮಕಿಯಲ್ಲಿ ನೋಡುತ್ತಲೇ ಇದ್ದೆವು.
“ನಾವು ರಾಜಮಹಲ್ ಬಸ್ಸಿಗೇ ಬರಬಹುದಿತ್ತು. ಅದರ ಕಂಡಕ್ಟರ್ ಎಷ್ಟು ಒಳ್ಳೆಯವ. ವಿನಯವಂತ ಮರ್ಯಾದಸ್ತ.”
“ಅಯ್ಯ. ಕಂಡಕ್ಟರನ್ನು ನೋಡಿ ಬಸ್ಸು ಹತ್ತೋಕಾಗುತ್ತನೆ?”
“ಇಷ್ಟಕ್ಕೂ ಇಲ್ಲಿ ಗಲಾಟೆ ಮಾಡ್ತಿರೋದು ಕಂಡಕ್ಟರ್ ಅಲ್ಲಮ್ಮಾ. ಒಬ್ಬ ಶುದ್ಧಾಂಗ ಪುರುಷ.”
“ಪುರುಷ ಅಲ್ಲ. ಗಂಡಸು. ‘ಪುರುಷ’ ಬಹಳ ಒಳ್ಲೆಯ ಶಬ್ದ ತಿಳಕೋ.”
“ಸರಿ. ಒಬ್ಬ ಶುದ್ಧಾಂಗ ಗಂಡಸು.”
“ಮತ್ತು ಆಕೆ?”
ನಾಟಕ ತನ್ನಷ್ಟಕ್ಕೆ ಹಿಗ್ಗುತ್ತ ಇತ್ತು.

ಈಗವಳು ಹೆಜ್ಜೆ ಬದಲಿಸಿ ಕಂಡಕ್ಟರನ ಕಡೆಗೆ ಅರೆಮುಖ ಮಾಡಿ ನಿಂತಳು. ನಗೆಯ ಎಳೆ ಕಾಣುವಂತೆ. ಮುಖ ಪೂರ್ತಿ ಕಾಣದಂತೆ. ದಿಢೀರನೆ ಹತ್ತಿಕೊಳ್ಳುವ . ನಂದಿ ಹೋಗಿ ಒಳಗೇ ಗೆಮೆಯುವ ಬೆಂಕಿಯಂತಹ ಆತನ ದೃಷ್ಟಿ ಅತ್ತ ಇತ್ತ ಚಲಿಸುತ್ತ ನಡುವೆಯೊಮ್ಮೆ ಅವಳನ್ನು ದಾಟಿ ಹೋಗದೆ ನಿರ್ವಾಹವಿಲ್ಲ. ಎಷ್ಟು ಕಷ್ಟವೋ, ಆತನಂತೂ ಕಿರಿಚಿದ “ಎಂಥೆಂಥಾ ಪ್ಯಾಸೆಂಜರುಗಳು ಅಂತೀರಿ. ಬಸ್ಸು ಹತ್ತಿದ ಕೂಡಲೇ ‘ಸೀಟು!’. ಸೀಟನ್ನು ಕುಂಡೆಗೆ ಕಟ್ಟಿಕೊಂಡೇ ಬರಬಹುದಲ್ಲ.” ಕಂಡಕ್ಟರ್ ಸೀಟಿನ ಮೇಲೆ ಕುಳಿತಿದ್ದವ ಕತ್ತು ತಿರುಗಿಸಿ ತಲೆದೂಗಿ ನಕ್ಕ. ಆತ ಆ ಶಬ್ದವನ್ನು ಉಚ್ಚರಿಸಿದ ರೀತಿಯೇ ಹಾಗಿತ್ತು. ಅಂತಹದಕ್ಕಾಗಿ ಕಾದು ನಗುವವರ ನಗೆ ದಿಢೀರ್ ಚಿಮ್ಮುವ ಹಾಗೆ ಯಾರೋ ಸುರುಮಾಡಿದರು.

“ಸೀಟು ಅಂತೀರಿ ನೀವು. ಈಗ ಮೂವತ್ತಮೂರು ಪರ್ಸೆಂಟ್ ಸೀಟು ಬೇಕು ಸ್ವಾಮೀ ‘ನಮಗೆ’ ಹ್ಞಂ!”

ಅವಳನ್ನು ಸುತ್ತುವರಿದಂತೆ ಅಟ್ಟಹಾಸದ ಅಲೆ ಎದ್ದಿತು. ಅದು ನಮ್ಮನ್ನು ತಾಕಿದಂತಾಯಿತು. ಆಕೆ ನಿಂತಲ್ಲೇ ಕಾಲು ಬದಲಿಸಿದಳು ಹೊರತು. ಆಶ್ಚರ್ಯ. ಅವಳ ಮುಖದ ಮೇಲಿನ ಮಂದಹಾಸ ನಂದಲೇ ಇಲ್ಲ! ಬದಲು ಅದು ದೀಪದಂತೆ ಮಿಣುಗುಡುತ್ತ ಇನ್ನಷ್ಟು ಶಾಂತವಾಗಿ ಕಂಗೊಳಿಸತೊಡಗಿತು.

“ಅಯೊಯೊ, ಅದು ಹೇಗೆ ಹಾಗಿದಾಳೆ ಅವಳು. ನಾನಾಗಿದ್ದರೆ ಕೆಪ್ಪೆಗೆ ಬೀಸಿ ಕೊಡುತ್ತಿದ್ದೆ”
“ಯಾರಿಗೆ? ಯಾರಿಗೇಂತ?”
“ಇಷ್ಟರೊಳಗೆ ನಾವು ಒಬ್ಬೊಬ್ಬರೂ ನಾಲ್ಕಾರು ಸಲ ಕೆಪ್ಪೆಗೆ ಕೊಟ್ಟಾಯಿತಲ್ಲ!”
*
*
*
ಪರ್ಸೆಂಟೇಜು ವಿಚಾರ ಬಂತು ಅಂದರೆ. ಮದುವೆ ಚಪ್ಪರದಲ್ಲೇ ಆಗಲಿ ಅದು ಹುರುಪು-ವಿಚಿತ್ರ ಹುರುಪು-ಎರಚಿಕೊಂಡು ಯಾರ್ಯಾರು ಎಷ್ಟೆಷ್ಟು ಎಂತೆಂತು ಯಾವ ಯಾವ ಬಗೆಯಲ್ಲಿ ಎದ್ದೆದ್ದು ಹಾರುತ್ತಾರೆ ಎಂಬುದೆಲ್ಲ ಬಾಯಿಪಾಠವಾಗಿ ಹೋಗಿದೆಯಷ್ಟೆ? ಅಂತೆಯೇ ಈಗ (ಹೆಂಗಸರ ಹೊರತು) ಕೆಲವರು ಮಂಪರು ಪೂರ್ತಿ ತಿಳಿದೆದ್ದು ನೇರ ಮಾತೆರಚತೊಡಗಿದರು. ಎರಡೇ ಪಾತ್ರಗಳಿದ್ದ ನಾಟಕಕ್ಕೆ ನಿಧಾನವಾಗಿ ಹೇಳಕೇಳದೆ ಪಾತ್ರಗಳು ಬಂದು ಕೂಡಿಕೊಂಡವು. ಅಲ್ಲಿಯೇ ಎರಡು ಪಕ್ಷಗಳಾದವು. ಮಾತಾಡುವ ಪಕ್ಷವೊಂದು. ಉದ್ಗರಿಸುವ ಉತ್ತೇಜನಗೊಳ್ಳುವ-ಗೊಳಿಸುವ. ಹುಂ ಹ್ಞಾಂ ಪ್ರತಿಕ್ರಿಯಿಸುವ ಪಕ್ಷ ಇನ್ನೊಂದು. ಎದುರು ಅರಳು ನಗೆಯ ಏಕಾಕಿ ಪಾತ್ರ ಅಥವಾ ಒಬ್ಬಂಟಿ ಪಾತ್ರವೆನ್ನಲೆ? ಚಡಪಡಿಸಿದಳು ಶೋಭನಾ
“ಯಾಕೋ ತಡೆಯುತ್ತಿಲ್ಲ ಕಣೆ”.
“ತಡೆದುಕೋ. ಪ್ರೇಕ್ಷಕರು ಯಾವಾಗಲೂ ತಡಕೋಬೇಕು!”
“ಇದೇನು ಸೆಮಿನಾರಲ್ಲ. ಸುಮ್ಮನೆ ಕೇಳಿಸಿಕೊ”.
“ದೇಶದ” ಕ್ರಾಸ್ ಸೆಕ್ಷನ್ ಆಫ್ ದಿ ಸೊಸೈಟಿ” ಯ ಮನಸ್ಸಮ್ಮ ಇದೂ. ಇನ್ನೆಲ್ಲಿ ಸಿಗುತ್ತೆ ನಿನಗೆ ಇಷ್ಟು ಸಮೀಪವಾಗಿ! ಸುಮ್ಮನೆ ನೋಡು”.
“ಇದು ಅವಳೇ ಪರಿಹರಿಸಿಕೊಳ್ಳಬೇಕಾದ್ದು ಕಣೆ”.
“ಆಕೆ ಅಬಲೆಯಂತೂ ಅಲ್ಲ. ಹಾಗಿದ್ದರೆ ಇಷ್ಟರೊಳಗೆ ಆತ ಆಡಿದ ಮಾತುಗಳಿಗೆ. ಸುತ್ತಿನ ಹ್ಹ ಹ್ಹ ಹ್ಹಕ್ಕೆ ಹೆದರಿ ಅಲ್ಲೇ ಮೇಲಿನ ರಾಡಿಗೆ ನೇಣುಹಾಕಿಕೊಳ್ಳುತ್ತಿದ್ದಳು”. ಲಲಿತಾ ಯಾವಾಗಲೂ ಹಿಗೆಯೇ. ಗಂಭೀರಕ್ಕೆ ಲಘು ಸೋಕಿಸುವವಳು. ನೇಣಿಗೆ ಅಲ್ಲೇ ಕೈಗೆಟುಕುವ ರಾಡು ಸೋಕಿಸುವವಳು. ಅಥವಾ ಅಳುತ್ತಳುತ್ತ ಈ ಇದೇ ಮಂದಿಯ ಸಹಾನುಭೂತಿ ಗಳಿಸಿಬಿಡುತ್ತಿದ್ದಳು.

“ಅಯ್ಯೋ ಅಮ್ಮಾ! ನಾನಾಗಿದ್ದರೆ ಯಾವ ದಾಕ್ಷಿಣ್ಯವಿಲ್ಲದೆ ಇಷ್ಟರೊಳಗೆ ಓಡಿ ಬಸ್ಸಿನ ಬಾಗಿಲು ತೆರೆದು ಹೊರಗೆ ಹಾರಿಕೊಳ್ಳುತ್ತಿದ್ದೆ” ಎಂದಳು. ಮರ್ಯಾದೆಯ ಗೊಂಡೆ- ಸವಿತಾ. ಆ ಅವಳ ಮರ್ಯಾದೆಯ ಕಲ್ಪನೆ ಸರಿಯಿಲ್ಲವೆನ್ನುವ ಬದಲು.

“ಏನಂದರೂ- ಅವಳು ನಗುವುದು ತಪ್ಪು. ಅವನನ್ನು ಕೆರಳಿಸುವುದು ಯಾಕೆ ಅವಳು! ಪಿರ್ಕಿ ಎಲ್ಲೊ” ತನ್ನ ಇಸ್ತ್ರಿಗನ್ನಡದಲ್ಲಿ ತೀರ್ಪಿತ್ತಳು ಶಾಂತಾ.

ನೋಡುತ್ತ ನಿಲ್ಲಿ ನೀವು. ದೃಶ್ಯ ಉದ್ದವಾಗುತ್ತ ಹೊಗುತ್ತದೆ. ನಗೆ ಅಟ್ಟಹಾಸವಾಗುತ್ತೆ. ಮಾತು ಮಲಿನವಾಗುತ್ತ ಹೋಗುತ್ತದೆ. ಇಲ್ಲಿಯೂ ಹಾಗೆಯೇ. “ನೋಡುವವರೇ ಇಲ್ಲದಿದ್ದರೆ? ನಾಟಕ ಮುಗಿಯೋದು ಆಗಲೇ.”
“ಅಲ್ಲ. ನಿಜವಾಗಿ ಸುರುವಾಗೋದೇ ಆಗ…..”
“ಏನು. ಸುರುವಾಗೋದೇ ಆಗಲಾ? ಪ್ರೇಕ್ಷಕರೇ ಇಲ್ಲದಿದ್ದರೆ ಅದು ಮುಗಿಯೋದೂ ಇಲ್ಲ. ಸುರುವಾಗೋದೂ ಇಲ್ಲ….ಹೆ ಹೆ”.
“ಸುಮ್ಮನಿರಿ. ನೋಡಿ ಇಲ್ಲಿ ನೋಡಿರೋ”-ಶಾಂತಾ.

ಅತ್ತ ತಿರುಗಿದರೆ ಕಂಡಕ್ಟರ್ ಆ ಅವಳನ್ನೇ ನೆಟ್ಟ ದೃಷ್ಟಿಯುಂದ ದೃಷ್ಟಿಯುದ್ದ ಹೂಡಿದವನಂತೆ ನೋಡುತ್ತಿದ್ದ. ಸೈನ್ಯ ಹಿಗ್ಗಿಸಿಕೊಂಡು ಸೇನಾಪತಿಯಂತೀದೆ ಹಿಗ್ಗಿಸಿ ನಿಂತಿದ್ದ. ಎದುರು ಆಕೆಯೂ ಸಸ್ಸರಿ ಎದುರು, ನೇರವಾಗಿ ಅವನನ್ನೇ ನೋಡುತ್ತಿದ್ದಳು. ಯುದ್ಧಭೀತಿಯೇ ಅರಿಯದವಳಂತೆ. ನಾವು ರಾಡು ಬಿಟ್ಟು ಸೀಟಿನ ಹಿಂಬದಿ ಹಿಡಿದು ಅಡ್ಡಡ್ಡ ನಿಂತು ನೋಡತೊಡಗಿದೆವು. ಅದೆಂತಹ ನಗೆ ಆಕೆಯದು! ಸೋಲದ ನಗೆ” ಎಲ್ಲಿಯೂ ಕಂದದ ಸ್ಥಿರನಕ್ಷತ್ರದಂತೆ.

“ಯಾಕೆ…. ಯಾಕೆ ನಗುವುದು ನೀವು!” ಕಂಡಕ್ಟರ್ ಮತ್ತೊಂದು ಆರ್ಭಟ ಹಾಕಿದ. “ತಲೆಗಿಲೆ ಪೆಟ್ಟಾಗಿದೆಯಾ?”’

ಅವನ ದನಿಯ ಕರಕರಕ್ಕೆ ಸುತ್ತಣ ಪ್ರಯಾಣಿಕರ ಮಾತು ನಗೆಯಲ್ಲ ಖೈದಾಗಿ ಆ ಎತ್ತರ ಸೀಟಿನವನಾದಿಯಾಗಿ ಎಲ್ಲ ಅವರಿಬ್ಬರನ್ನೇ ನೋಡತೊಡಗಿದರು. ನಾಟಕ ಇದ್ದಕ್ಕಿದ್ದಂತೆ ಮತ್ತೆ ಎರಡೇ ಪಾತ್ರಕ್ಕೆ ತಲುಪಿತು. ಒಮ್ಮೆಲೆ ಮೌನ ಕವಿದದ್ದಕ್ಕೋ. ಅತನ ಕಂಗೆಟ್ಟ ಆರ್ಭಟದ ಸ್ಥಿತಿಗೋ. ಯಾತಕೋ. ಆಕೆ ಒಮ್ಮೆ ಸುತ್ತ ನೋಡಿದಳು. ನಗೆ ತುಸು ಓರೆಯಾಗಿ ಅರಲಿತು ಹೊರತು ಒಂದು ಶಬ್ದವೂ ಹೊಮ್ಮಲಿಲ್ಲ.

“ಹೇ!….ಸುಮ್ಮಸುಮ್ಮನೇ….ಛಕ್೦೦೦೦೦” ಕಿರುಚಿ ಕೈಯೆತ್ತಿ ಹಣೆ ಬಡಿದುಕೊಂಡ ಆಕೆ ಬ್ಯಾಗನ್ನು ಭುಜ ಬದಲಾಯಿಸಿಕೊಂಡಳು. ನಿಂತಲ್ಲೇ ಕೊಂಚ ಕದಲಿ ಕಾಲು ಡೊಂಕಿಸಿ ನಿಂತಳು. ಅವನ ತಾರಕ ಕಿರುಚಿಗೆ ನಿಂತವರೆಲ್ಲರೂ ತಿರುಗಿ ಅತ್ತಲೇ ನೋದತ್ತಿದ್ದದರಿಂದ ಈಗ ನಂಗವಳ ಮುಖ ಸರಿಯಾಗಿ ಕಾಣದೆಹೋಯಿತು. ಖಂಡಿತ ಆಕೆ ಇನ್ನೂ ತುಸು ಜಾಸ್ತಿಯೇ ನಕ್ಕಿರಬೇಕು.

“ಮುಚ್ಚಿ ಬಾಯಿ. ನಗಲಿಕ್ಕೆ ನಿಮಗೆ ಮಾತ್ರ ಬರೋದ? ಹ್ಹ?”(‘ಇದಾದರೆ ಜೋಕು!’) ಆತನ ದನಿ ಕಿರುಚನ್ನು ತಾನೇ ತಾಳಲಾರದೆ ಮುಂಚಿನಕ್ಕಿಂತ ಮತ್ತಷ್ಟೂ ಕಳಕಿತು.

ಅತ್ತ ಪೂರ್ವ ದಿಕ್ಕಿನಲ್ಲಿ ಕಂದುಕೆಂಪಿನ ಬಾಲಸೂರ್ಯ ಅಂಬೆಗಾಲಿಟ್ಟು ಬರುತ ಇದ್ದ. ಕಂಡಕ್ಟರ್ ದಣಿದು, ಸೊಪ್ಪಾದವರಂತೆ ಹಿಂದಿನ ಬಾಗಿಲ ಹತ್ತಿರ ಆ ಉದ್ದ ಸೀಟಿನ ಕಿಟಕಿ ಬಳಿ ಕುಳಿತವನನ್ನು ಸಿಟ್ಟಿನ ಭರದಲ್ಲಿ ಧಡ್ಡನೆ ಅತ್ತ ದೂಡಿ ಕುಳಿತುಕೊಂಡ.
ಎದ್ದ.
ಮತ್ತೆ ಫುಟ್ ಬೋರ್ಡಿನ ಮೇಲೆ ನಿಂತ.

“ಯಾವೊಂಜಿ ಸೆಕೆ?”ಎನ್ನುತ್ತ ಬೆವರೊರೆಸಿಕೊಂಡ. ಕರವಸ್ತ್ರದಲ್ಲಿ ಗಾಳಿ ಬೀಸಿಕೊಂಡ. ತನ್ನ ಸೀಟಿನಲ್ಲಿ ಕುಳಿತವನೊಡನೆ ಏನೋ ಹೇಳಲು ಹೊರಟವ ಮತ್ತೆ (ಆಯಾಚಿತವಾಗಿ) ಅವಳನ್ನು ನೋಡಿದ. ಕಿಸೆಯಿಂದ ಪೊಟ್ಟಣವೊಂದನ್ನು ಒಡೆದು ಬಾಯಿಗೆ ಸುರಿದುಕೊಂಡು ಜಗಿಯತೊಡಗಿದ. ಜಗಿತದೊಂದಿಗೆ ಒನ್ನೇನೋ ಪ್ರಬಲವಾದ್ದನ್ನು ಜಗಿಯುತ್ತಿರುವಂತೆ ಅವನ ಮುಖದ ಸ್ನಾಯುಗಳು ಏರಿಳಿದವು. ತಲೆಯನ್ನೊಮ್ಮೆ ಕೊಡವಿ ಓಡುತ್ತಿದ್ದ ಬಸ್ಸಿನ ಬಾಗಿಲನ್ನೊಮ್ಮೆ ದಢಾರನೆ ತೆರೆದ. ಆತ ತೆರೆದದ್ದೋ ಅದೇ ತೆರೆದುಕೊಂಡಿತೋ….ಬಢಾರನೆ ಬಡಿದು ಹಾಕಿಕೊಂಡ.
“ಅಯಮ ಹಾರಿದ ಅಂದುಕೊಂಡೆ”
“ಹೂಂ ಹಾರುವುದೆ? ಯಾರನ್ನಾದರೂ ಹಾರಿಸಿಯಾನು”
ಹೇಳಿ ಬಾಯಿ ಮುಚ್ಚಿದೆಯೇ ಇಲ್ಲವೋ-ಮತ್ತೆ ದಢಾರನೆಬಾಗಿಲು ತೆರೆದು ಹೊಡಕೊಂಡ ಸದ್ದು.
ಹೋ….. ನಿಲ್ಲಿಸೀ….
ಮಂದಿಯ ಕೂಗು.
ಚೊರ್ರೋ೦೦೦೦೦-ಗೀಚಿದಂತೆ ಸದ್ದು ಎಳೆಯುತ್ತ ಬಸ್ಸು ನಿಂತಿತು.
ಏನಾಯ್ತು ಹಾರಿದನ. ಬಾಗಿಲು ತಾನಾಗಿ ತೆರೆಕೊಂಡು ಹೊರಬಿದ್ದವ, ಬಾಗಿಲು ಸರಿಯಿರಲಿಲ್ಲವ, ಏನಾಯ್ತು. ಹೋದನ?
ಜೋರು ಪೆಟ್ತ…..ಛೆ ಛೆ ಛೆ….
ಜನ ಧಡಧಡ ಬಾಗಿಲ ಕಡೆ ಧಾವಿಸತೊಡಗಿದರು.
ದಾರಿ ಬಿಡುತ್ತ ಅಕೆ ಎರಡು ಸೀಟಿನ ನಡುವಿನ ಜಾಗಕ್ಕೆ ಸರಿದು ಬ್ಯಾಗನ್ನು ಮತ್ತೆ ಭುಜ ಬದಲಿಸಿ ನಿಂತಲ್ಲೆ ಪದ ಕದಲಿಸಿ ಸಾವರಿಸಿಕೊಂಡು ನಿಂತುಕೊಂಡಳು.

ಸಧ್ಯಕ್ಕೆ ಖಾಲಿಯಾದ ಸೀಟಿನ ಮೇಲೆ ಕುಳಿತುಕೊಳ್ಳಬಹುದಾದರೂ ಕುಳಿತುಕೊಳ್ಳದೆ.
ಭೀತಿ ಕಾತರ ಕುತೂಹಲದಿಂದ ಉತ್ತರ ಸಿಗದ ಪ್ರಶ್ನೆ ಕೇಳುತ್ತ ಬಾಗಿಲ ಕಡೆಗೋಡುವ ಧಾವಂತವನ್ನೇ ನೋಡುತ್ತ ಗಂಭೀರವಾಗಿ.

“ಮೇಡಂ ನೀವು ಸುಮ್ಮನೆ ನಿಂತಿರಿ. ಸುಮ್ಮನಿರಬಾರದಿತ್ತು. ಸರೀ ಬೈದು ದಾಳಿ ಮಾಡಬೇಕಿತ್ತು- ದಾಳೀ!”-ಎಂದಳು ಕಡೆಗೂ ಸುಮ್ಮನಿರಲಾರದೆ ಶೋಭನಾ.

ಆಕೆ ಆಗ ನಮ್ಮಷ್ಟೂ ಮಂದಿಯನ್ನು ದೀರ್ಘವಾಗೊಮ್ಮೆ ನೋದಿದಳು. (ಕನಿಕರವೋ. ಪರೀಕ್ಷೆಯೋ. ವಿಚಾರವೋ. ತಿರಸ್ಕಾರವೋ ಏನೇ ಅದು?” ಲಲಿತಾ) ಸಣ್ಣಗೆ. ಕಂಠದಲ್ಲೇ ಸದ್ದು ಹೊರಳಿಸಿ ನಕ್ಕಳು.
ಮತ್ತೆ ಮುಂಚಿಗಿಂತಲೂ ಗಂಭೀರವಾಗಿ ಕಿಟಿಕಿಯಾಚೆಗೆ ನೋಡತೊಡಗಿದಳು.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.