ಕೆಂಡದ ಮಳೆ ಕರೆವಲ್ಲಿ ಉದಕವಾಗಿದ್ದವರ ಕಥೆ

ಪೀರಣ್ಣ ಇಳಿದ ಕೂಡಲೆ ಮಹಾದೇವಿ ಧೂಳೆಬ್ಬಿಸುತ್ತ ಓಡಿತು.  ಧೂಳು ಕರಗುವ ಮಟ ಮೂಗಿಗೆ ಅಡ್ಡಲಾಗಿ ಕರ್ಚೀಪು ಇಡುವುದನ್ನು ಮರೆಯಲಿಲ್ಲ ಆತ.  ಕರಗುತ್ತಿದ್ದ ಧೂಳಿನಾಚೆ ಕಣ್ಣುಚೆಲ್ಲಿದ.  ದುಮ್ಮ ಹಂತ ಹಂತವಾಗಿ ಕರಗುತ್ತಲೆ ಪ್ರಕೃತಿ ವಿರಾಜಮಾನವಾಯಿತು.  ಬರೆದ ಚಿತ್ರದಂತಿರುವ ಆ ಪ್ರಕೃತಿ ಆತನಿಗೆ ಚಿರಪರಿಚಿತ.  ಕಡಿಮೆ ಎಳೆಗಳ ಅವೇ ಮರಗಿಡಗಳು!  ಅದೇ ಹಳ್ಳಿ!  ಅದೇ ಹಾದಿ!  ಅದೇ ಶುಭ್ರ ಆಕಾಶ.
ಜೀಬಿನಲ್ಲಿದ್ದ ಇಂಗ್ಲಾಂಡುಲೆಟರ್‍ ಮುಟ್ಟಿ ನೋಡಿಕೊಂಡು ನಿಟ್ಟುಸಿರಿಟ್ಟು ಹಾದಿಗುಂಟ ಹೆಜ್ಜೆ ಹಾಕಿದ.  ಅರ್ಜೆಂಟು ಬಾ ಅಂತ ಗೌಡ ಯಾಕೆ ಪತ್ರ ಬರೆದು ಹಾಕಿರಬಹುದೆಂದು ಯೋಚಿಸಿದ.  ದಿನಗೂಲಿ ಪಡೆದು ಬದುಕುತ್ತಿರುವ ತನ್ನನ್ನು ಊರಿಗೆ ಕರೆಸುತ್ತಿರುವ ಕಾರಣ ಏನಿರಬಹುದು?  ಕೆಲಸ ಮಾಡಿದರೆ ಕೂಲಿ, ಕೂಲಿ ಕೈಗೆ ಬಿದ್ದರೆ ಗೇಣುದ್ದ ಹೊಟ್ಟೆಗೆ ಕೂಳು.  ಕೆಂಪುಕಲ್ಲುಗಳ ನಡುವೆ ಸುರಿವ ಬಿಸಿಲ ಕೆಳಗೆ ಕಪ್ಪಿಟ್ಟಿರುವ ಮುಖದವನು ತಾನು ಎಂಬ ಅರಿವು ಪೀರಣ್ಣನಿಗಿರುವುದು.  ಮೇಸ್ತ್ರಿ ಕೆಲಸದಿಂದ ಗುಮಾಸ್ತರ ಕೆಲಸಕ್ಕೆ ಪ್ರಮೋಷನ್ನು ಸಿಕ್ಕುವ ಮೊದಲೇ ತೀರಿ ಹೋದ ತೆಂದೆಯನ್ನು ಮಣ್ಣಲ್ಲಿಟ್ಟು ಬಂದು ವಾರ ಸುದಾ ಕಳೆದಿಲ್ಲ.  ಆಗಲೆ ಗೌಡನಿಂದ ಬುಲಾವ್.
ಕಡಲೇರ ಮೋಟು ಗಿಡಗಳ ತೋಪನ್ನು ದಾಟುತ್ತಲೆ ‘ಲೇ ಪೀರ’ ಎಂದು ಕೂಗುತ್ತ ಗುರುವ ಎದುರಾದ.  “ಏನಪಾ ಗುರುವ ಚೆನ್ನಾಗಿದ್ದೀಯಾ” ಎಂದು ಬಾಲ್ಯ ಸಖನನ್ನು ಮಾತಾಡಿಸದೆ ಮುಂದುವರಿಯಲು ಪೀರಗೆ ಸಾಧ್ಯವಾಗಲಿಲ್ಲ.  ಗುರುವನ ಬಲಗೈಯನ್ನು ಸೇಕೆಂಡು ಕೊಟ್ಟು ಕುಲುಕಿದ.  ತನ್ನ ಸುಖ ಒಂದೇ ಸಮನೆ ಕೊಕ್ ಕೊಕ್ ಕೊಕ್ಕಂತೆ ಗೊರತೊಡಗಿದ್ದು ಕಂಡು ಖೇದವೆನಿಸಿತು.  “ಯಾಕೆ ಹೆಲ್ತ್ ಚೆನ್ನಾಗಿಲ್ವಾ” ಎಂದೂ ಇಚಾರಿಸಿದನು.  ಗುರುವ ತನಗೆ ಚಿಕ್ಕ ವಯಸ್ಸಿನಲ್ಲಿ ಗೋಪಲಾಪುರದ ಅಕ್ಕನ ಮಗಳು ಸಿದ್ದಿಯನ್ನು ಗುದಿಗೆ ಕಟ್ಟಿದ್ದನ್ನು ಸೊಗಸಾಗಿ ವರ್ಣಿಸಿದ.  ಕೇವಲ ಮೂರೇ ವರ್ಷದಲ್ಲಿ ತಾನು ಎರಡೂವರೆ ಮಕ್ಕಳಿಗೆ ತಂದೆಯಾಗಿರುವೆನೆಂದು ಹೆಮ್ಮಯಿಂದ ಹೇಳಿಕೊಂಡ.  ಮೀಸೆ ಮೂಡುವ ಮೊದಲೆ ತಾನು ಊರ ಗಡಿ ಪ್ರದೇಶದಲ್ಲಿ ಎಲ್ಲಿ ಬೇಕೆಂದರಲ್ಲಿ ನಡೆಸಿದ ರಾಸಲೀಲೆಗಳನ್ನು ಸೊಗಸಾಗಿ ವರ್ಣಿಸಿದ. ಇದಕ್ಕೆ ಸಾಕ್ಷಿಯಾಗಿ ಕುರುಬರ ಸೋಮಣ್ಣನ ಬಳಿ ಸೂಜಿ ಮಾಡಿಸಿಕೊಂಡಿರುವುದಾಗಿ ಹೇಳಿದ.  ಗುರುವನ ಮಾತುಗಳು ಬ್ಯಾಚುಲರ್‍ ಪೀರಣ್ಣಗೆ ಸರಿಕಾಣಲಿಲ್ಲ.  ಅಷ್ಟರಲ್ಲಿ ‘ನಿಮ್ಮಪ್ಪ ಸತ್ನಂತೆ’ ಅಂತ ಕೇಳಿದ.  ಇದಕ್ಕೆ ಪೀರಣ್ಣ ‘ಹೌದು’ ಎನ್ನುವ ಮೊದಲೆ ಗುರುವ “ಹೊಟ್ಟೆಗೇನು ತಿಂತೀರಲೇ…. ತುರುಕ್ರೋನ ಹೆಣಾನ ಈರಸೈವರ ರುದ್ರಭೂಮ್ಯಾಗ ಉಗಿಯುವುದಾ….ನೀನು ಎಸ್ಸೆಲ್ಸಿ ಪ್ಯಾಸಾಗಿರಬಹ್ದು….ರವ್ವೊಸ್ಟ್ ಇಂಗ್ಲೀಸೂ ಬರ್‍ತಿರಬಹ್ದು….ಅಂದ ಮಾತ್ರಕ್ಕೆ ತುರುಕ್ರು ಲಿಂಗಾತ್ರು ಒಂದಾಯ್ತಾರಾ?  ಊರಲ್ಲಿ ಹೋಗು ಗೊತ್ತಾಯ್ತದೆ….ದೇವರ್‍ನ ಎದುರಾಕ್ಕೊಂಡು ಬದುಕಬಹ್ದು….ಆದ್ರೆ ಊರ ಜನ್ರನ್ನ ಎದ್ರಾಕ್ಕೊಂಡು ಬದುಕ್ತೀಯಾ….ನಾನು ನಿನ್ನ ಕಿಲಾಸ್‌ಮೆಟ್ಟೂ ಅಂತ ಹೇಳ್ತೀವ್ನಿ…. ಹುಷಾರು…. ಹುಷಾರು….” ಎಂದು ಆವೇಷದಿಂದ ಮಾತಾಡಿ ಮತ್ತೆ ಕೊಕ್ ಕೊಕ್ ಕೆಮ್ಮುತ್ತ ತೋಪಿನೊಳಗೆ ಮರೆಯಾಗಿ ಹೋದ.
ಅವನ ಮಾತುಗಳು ಪೀರಣ್ಣನ ಹೊಟ್ಟೆಯಲ್ಲಿ ಸೆಗಣಿ ಕಲೆಸಿದವು.  ಬವಳಿಗೆ ಬಂದಂತಾಯಿತು.  ಮರುಕ್ಷಣದಲ್ಲಿ ಚೇತರಿಸಿಕೊಂಡ.  ಗುರುವನಾಡಿದ ಪ್ರತಿ ಮಾತುಗಳನ್ನು ತಿಕ್ಕಿ ತಿಕ್ಕಿ ನೋಡಿದ.  ಹೌದು; ಅಪ್ಪನ ಹೆಣವನ್ನು ಅಲ್ಲಿ ಹೂಳಬಾರದಿತ್ತು!  ಊರಿಗೆ ಇರೋದೇ ಒಂದು ಸುಡುಗಾಡು.  ಹೆಣವನ್ನು ಎಲ್ಲಿ ಉಗಿಯಬೇಕಿತ್ತು!  ಕೆಲವು ಹಿರಿಯರು ಸಮ್ಮತಿಸಿದ್ದರಿಂದಲೇ ತಾವು ಹೆಣವನ್ನು ಅಲ್ಲಿ ಮಣ್ಣು ಮಾಡಿದ್ದು.  ಈಗ ಏನು ಮಾಡಲಿಕ್ಕೆ ಬಂದೀತು;  ಗುದ್ದಿನ ಮೇಲೆ ಸಿಮೆಂಟಿನ ಸಮಾಧಿ ಕಟ್ಟಿಸೆಂದು ಅವತ್ತು ಅಮ್ಮ ಹಠ ಹಿಡಿದದ್ದು ಬೇರೆ ನೆನಪಾಯಿತು.  ತಮ್ಮ ಮನೆಗೆ ಮೆತ್ತಿಕೊಳ್ಳಲು ಕೆಸರಿಗೂ ಗತಿ ಇಲ್ಲ;  ಇಂಥಾದ್ದರಲ್ಲಿ ಸಿಮೆಂಟಿನ ಸಮಾಧಿ ಕಟ್ಟಿಸುವುದೆಂದರೆ ಹೇಗೆ;  ಇಂಥ ಸಾವಿರಾರು ಮಾತುಗಳು ರೆಕ್ಕೆ ಪುಕ್ಕ ಮುದುಡಿಕೊಂಡು ಪೀರಣ್ಣನ ತಲೆಯಲ್ಲಿ ನರ್ತಿಸತೊಡಗಿದವು.  ಹಾಗೇ ಸಾವರಿಸಿಕೊಂಡು ನಡೆಯತೊಡಗಿದ.
ಸ್ವಲ್ಪ ದೂರ ನೆಡೆದು ಎಡಕ್ಕೆ ತಿರುಗಿ ನೋಡಿದ.  ಆ ಮರಡಿ ದಿಬ್ಬದ ಆಚೆ ಬಂಗಾರ ಬಣ್ಣದ ಹಿಡಿಗಾತ್ರದ ಕಲ್ಲುಗಳಿಂದ ತುಂಬಿರುವ ತಮ್ಮ ಒಂದೂಕಾಲೆಕರೆ ಹೊಲ ಇರುವುದು ನೆನಪಾಯಿತು.  ಹೊಲದ ಪಕ್ಕ ಹಳ್ಳವೊಂದು ಸದಾ ತುಂಬಿ ಹರಿಯುತ್ತಿತ್ತಂತೆ;  ಹೊಲದಲ್ಲಿ ತಾನು ಮಲಗಿಕೊಂಡಾಗ ಬರ್‍ತೀನಿ, ಬರ್‍ತೀನಿ ಅಂತ ಅಂತಿತ್ತೆಂದು ಅಪ್ಪ ಹೇಳುತ್ತಿದ್ದುದು ನೆನಪಾಯಿತು.  ತಾನು ಕೊಟ್ಟೂರಲ್ಲಿ ಓದುತ್ತಿದ್ದಾಗ ಅಪ್ಪ ಬಾಷಾ ಇಬ್ರೂ ಸೇರಿಕೊಂಡು ಅದೇ ಹೊಲದಲ್ಲಿ ಒಂದು ಎರಡಾಳಿನಷ್ಟು ಬಾವಿ ತೋಡಿರುವರು;  ಅವರಿಬ್ಬರ ಮೈಯ ಬೆವರಷ್ಟೆ ಅದರಲ್ಲಿ ಬಿದ್ದದ್ದು, ಸೆರೆಮುಕ್ಕ ನೀರು ಸಿಕ್ಕಿರಲಿಲ್ಲ.  ತಾನು ಹೊಲ ಕೊಂಡದ್ದು ಹುಡುಗಾಟದ ಮಾತಲ್ಲವೆಂದು ಅಪ್ಪ ಪದೇ ಪದೇ ಹೇಳುತ್ತಿದ್ದುದು ನೆನಪಾಯಿತು.  “ಲೇ ತುರುಕ ನೀನು ಅದೆಂಗ ಹೊಲ ಕೊಳ್ತೀಯೋ ನೋಡೇಬುಡ್ತೀನಿ” ಎಂದು ಗೌಡ ರೇವಣ್ಣ ಸಡ್ಡೊಡೆದಿದ್ದರೂ ಪೀರಣ್ಣನ ತೀರ್ಥರೂಪ ಶೇಕಣ್ಣ ಛಲಬಿಡದ ತ್ರಿವಿಕ್ರಮನಂತೆ ಒಂದೂಕಾಲೆಕರೆ ಹೊಲವನ್ನು ಚಪ್ಪದಳ್ಳಿ ಸರ್ವಕ್ಕನಿಂದ ಕೊಂಡೇ ಬಿಟ್ಟಿದ್ದ.  ಸದಾಕಾಲ ಕೂಳು ಜೋಡಿಸಲು ಒದ್ದಾಡುತ್ತಿದ್ದ ಶೇಕಣ್ಣನಿಗೆ ಇನ್ನೂರಾ ಅರವತ್ತು ರೂಪಾಯಿ ಬಂದದ್ದಾದರೂ ಹೇಗೆಂದು ಅವರಿವರು ಅನುಮಾನಿಸಿದ್ದೂ ಉಂಟು.  ಹತ್ತಿರದ ಕೊಟ್ಟೂರಿನ ಮಸೀದಿಯಲ್ಲಿ ದಿನಕ್ಕೆರಡು ಸಾರಿ ನಮಾಜು ಕೂಗಿ ತಿಂಗಳಿಗೆ ಇಪ್ಪತ್ತು ರೂಪಾಯಿಯಂತೆ ದುಡಿದು ಕೂಡಿಟ್ಟಿದ್ದನೆಂದು ಮತ್ತೊಬ್ಬರು ಹೇಳಿದ್ದರು.  ಇಷ್ಟು ಕಷ್ಟಪಟ್ಟು ಹೊಲ ತೆಗೆದುಕೊಂಡಿದ್ದ ಶೇಕಣ್ಣಗೆ ಒಂದಿಷ್ಟೂ ಗರ್ವ ಇರಲಿಲ್ಲವಂತೆ.  ಯಾರಾದರೂ ಕೇಳಿದರೆ ‘ಎಲ್ಲಾ ಅಲ್ಲಾನ ದಯೆ’ ಎನ್ನುತ್ತಿದ್ದನಂತೆ.  ಇಂಥ ಹೊಲದಲ್ಲಿ ಸರಿಯಾಗಿ ಮಳೆ ಬಿದ್ದಿದ್ದರೆ ಎರಡು ಚೀಲ ಬೆಳೆಯಬಹುದಿತ್ತೆಂದು ಪೀರಣ್ಣ ಒಳಗೊಳಗೆ ತಂದೆಯ ವಿಶಾಲ ಹೃದಯ ನೆನೆಯುತ್ತ ಸುಮಾರು ದೂರ ಕ್ರಮಿಸಿ ಊರು ಸಮೀಪಿಸಿದ್ದ.  ಕೆಲಸ ಹೋದ್ರೂ ಶಾಟಾ ಹೋಯ್ತು-ದುಡ್ಕೊಂಡು ತಿನ್ಲಿಕ್ಕೆ ಬಂಗಾರದಂಥ ಹೊಲವಿದೆ ಎಂದೆ ತನ್ನ ಜಿಗ್ರಿ ದೋಸ್ತು ಪಕೂರನ ಬಳಿ ನಿನ್ನೆಯಷ್ಟೆ ನುಡಿದಿದ್ದ.  ಕಣ್ತುಂಬ ಹೊಲ ತುಂಬಿಕೊಂಡಿದ್ದ ಪೀರಣ್ಣ ಡವಡವಗುಟ್ಟುತ್ತಿದ್ದ ಎದೆಯೊಡನೆ ನಡೆಯುತ್ತಿದ್ದ.  ಹೊಲವನ್ನು ಅರಗಿ ಹಸನು ಮಾಡುತ್ತಲೆ ನೆತ್ತಿಗೆ ಎಣ್ಣೆಕಾಣದೆ ಬಿಸಿಲಿಗೆ ಮಿರಮಿರನೆ ಮಿಂಚುತ್ತಿದ್ದ ಕರಗಲ್ಲು ದಾಟಿದ.  ಹಸನಾದ ಹೊಲದ ತುಂಬ ನೀರು ಹರಿದಾಡುತ್ತಿದ್ದಾಗಲೇ ಚಾದಂಗಡಿ ಅಂಗಳ ದಾಟುವಾಗ ಅಳುಕಿನಿಂದ ಹೆದರಿದ.  ರಾಗಿಕಾಳು ಬಿತ್ತುವುದಾಗುತ್ತಲೆ ಕಳ್ಳರ ಬಾವಿ ಇಣುಕಿನೋಡಿ ಚಿಂಗು ವಾಸನೆಯನ್ನು ಆಸ್ವಾದಿಸಿದ.  ಹೊಟ್ಟೆನೋವು ತಾಳಲಾರದೆ ತನ್ನ ತಂದೆ ಶೇಕಣ್ಣ ಅದೇ ಬಾವಿಯಲ್ಲಿ ಬಿದ್ದು ಸಾಯುವುದಾಗಿ ಕೆಲವೊಮ್ಮೆ ಚೀರಾಡುತ್ತಿದ್ದುದು ನೆನಪಾಯಿತು.  ಬಾವಿ ಆಳಕ್ಕಿಣುಕಿದ್ದ ಕತ್ತನ್ನು ಮೇಲೆತ್ತುವಷ್ಟರಲ್ಲಿ ಕಾಗೆಯೊಂದು ಬಡಿಯಲೆಂದು ಸರ್‍ರನೆ ನುಗ್ಗಿ ಬಂತು.  ಪುಣ್ಯಕ್ಕೆ ತಪ್ಪಿಸಿಕೊಂಡು ಅಲ್ಲಿಂದ ಜಾಗ ಖಾಲಿಮಾಡಿದ.
ಸರಸರ ನಡೆಯುವಾಗ ಹಲವರನ್ನು ಮಾತಾಡಿಸಲು ಪ್ರಯತ್ನಿಸಿದ.  ಆದರೆ ಅವರೆಲ ತಂತಮ್ಮ ಮುಖಗಳ ಬಿಕ್ಕಟ್ಟನ್ನು ಪ್ರದರ್ಶಿಸಿದರು.  ನಿಜವಾದ ಅರ್ಥದಲ್ಲಿ ಪೀರಣ್ಣನ ಜೊತೆ ಸಂಪರ್ಕವಿರಿಸಬಯಸಿದ್ದವೆಂದರೆ ಕಾಗೆಗಳು ಮಾತ್ರ.  ಅವು ಅವನ ತಲೆಗೆ ಸ್ವಲ್ಪ ದೂರದಲ್ಲಿ ಕಾಕಾಗುಟ್ಟುತ್ತ ಗಸ್ತು ಹೊಡೆಯುತ್ತಿದ್ದವು.  ಅವುಗಳಿಂದ ತಪ್ಪಿಸಿಕೊಳ್ಳುವುದೇ ಅವನಿಗೆ ದುಸ್ತರವೆನಿಸಿತು.  ಪುಳ್ಳಿ ಕಡ್ಡಿಯಿಂದ ತನ್ನ ತಲೆಯನ್ನು ಕಾಗೆಗಳಂಥ ಪಕ್ಷಿಗಳಿಂದ ರಕ್ಷಿಸಿಕೊಳ್ಳುತ್ತ ಖಾಲಿ ಮಾಡಿರುವ ತಮ್ಮ ಮಾಳಿಗೆ ಮನೆ ಮುಂದೆ ಬಂದುನಿಂತ.  ತನ್ನ ತಂದೆ ಶೇಕಣ್ಣಾ ಒಳ್ಳೆ ನಕ್ಷತ್ರದಲ್ಲಿ ಸತ್ತಿಲ್ಲವೆಂದೂ, ಆದಕಾರಣ ಮನೆಯನ್ನು ಆರು ತಿಂಗಳು ಬಿಡಬೇಕೆಂದೂ ಬೆಣ್ಣೆಹಳ್ಳಿ ಸಂಡ್ರಯ್ಯ ಶಾಲಮ್ಮ ಇಟ್ಟಿದ್ದ ಐದು ಪಾವಲಿಯನ್ನು ಕೆಂಪು ಜೀಬಿಗಿಳಿಸುತ್ತ ನುಡಿದಿದ್ದ.  ಆದ್ದರಿಂದ ಮನೆಗೆ ಗಾಡ್ರೇಜ್ ಬೀಗ ಜಡಿದು ಬಸವನ ತಗ್ಗಿನ ಕಡೆ ಗುಡಿಸಲೊಂದನ್ನು ಹಾಕಿಕೊಂಡು ಶಾಲಮ್ಮ ತನ್ನ ಇತರೇ ಮಕ್ಕಳಾದ ಬಾಷಾ, ಬೇಗಮ್ಮರೊಂದಿಗೆ ವಾಸಿಸುತ್ತಿರುವುದು.  ಪೀರಣ್ಣಗೆ ಗೊತ್ತಿರುವಂತೆ ಮಾಳಿಗೆ ಮನೆಯಲ್ಲಿ ಕೆರೆನಾಗರ ಹಾವೊಂದು ಒಂದು ವರ್ಷದಿಂದ ವಾಸಿಸುತ್ತಿರುವುದು, ಹಾವಿನೊಂದಿಗೆ ವಾಸಿಸಿ ಗೊತ್ತಿರುವ ತನ್ನ ತಾಯಿ ಶಾಲಮ್ಮಗೆ ಹೊಸಮನೆ ಹಿಡಿಸಿದೆಯೋ ಇಲ್ಲವೋ ಅಂತ ಪೀರಣ್ಣ ಅಂದುಕೊಂಡನು.  ತಲಬಾಗಿಲ ಮುಂದೆ ಗರುಕೆ ಹುಲ್ಲು ಕುಡಿಚಾಚಿರುವುದನ್ನು ನೋಡಿದ.  ತಾನು ಹುಟ್ಟಿ ಬೆಳೆದ ಮನೆಬಿಟ್ಟು ವಾಸಿಸಬೇಕಾಗಿ ಬಂದಿರುವುದಲ್ಲಾ ಅಂತ ಅಂಗಳದಲ್ಲಿ ನಿಟ್ಟುಸಿರು ಬಿಟ್ಟು ಬಸವನ ತಗ್ಗಿನ ಕಡೆ ನಡೆದ.
ಅಂತೂ ಇಂತೂ ಪೀರಣ್ಣ ತಮ್ಮ ಗುಡಿಸಲ ಅಂಗಳಕ್ಕೆ ಬಂದ.  ಸ್ವಲ್ಪ ದೂರದಲ್ಲಿದ್ದ ಬಸರಿಗಿಡದ ನೆರಳಿನಲ್ಲಿ ಮಲಗಿದ್ದ ಟೈಗರ್‍ ವಾಲಾಡುತ್ತ ಬಂದು ಆತನ ಕಂಡು ಬಣ್ಣದ ಪೇಂಟು ಮೂಸಿ ಬಾಲ ಅಲ್ಲಾಡಿಸಿತು.  ಅಲ್ಲಿಯೇ ಕಸದ ಕುಪ್ಪಿ ಕೆದರುತ್ತಿದ್ದ ತಮ್ಮ ಸಾಕು ಹುಂಜ ನೋಡಿದ.  ಪಲ್ಯೆಮಾಡವ್ವಾ ನಾಲ್ಗೆ ಕೆಟೈತಿ ಎಂದು ಹಿಂದಿನ ತಿಂಗಳು ಗೋಗರೆದಿದ್ದಾಗ “ಇಲ್ಲ ಪೀರಣ್ಣ-ಷೇಕ್ಷಾವಲಿ ತಾತಗೆ ಬಿಟ್ಟೀನಿ” ಎಂದು ಹೇಳಿದ್ದಳು.  ಬಹುಶಃ ಆಕೆ ತಂಗಿಯ ಮದುವೆಗಾಗಿ ಬೇಡಿಕೊಂಡಿರಬಹುದೆಂದುಕೊಂಡ.  ಅದರ ಕೆಂಪು ಜುಟ್ಟು ಥೇಟ್ ಕಾರ್ಮಿಕ ಸಂಘದ ಕೆಂಪು ಝೆಂಡಾದಂತೆಯೇ ಇದೆ ಎಂದುಕೊಂಡ.  ಅದೇ ಹೊತ್ತಿಗೆ, ದೂರದ ಹಳ್ಳದಿಂದ ನೀರಿನ ಕೊಡ ಹೊತ್ತು ತಂದ ಬೇಗಮ್ಮಗೆ ಅಂಗಳದಲ್ಲಿ ತನ್ನಣ್ಣ ನಿಂತಿರುವುದು ಕಂಡು ಆಶ್ಚರ್ಯವಾಯಿತು.  ಸಂತೋಷವಾಯಿತು.  ಕೊಡದೊಂದಿಗೆ ಆಕೆ ಒಳ ಓಡಿ ಹೊಗೆ ಕಕ್ಕುತ್ತಿದ್ದ ಒಲೆಯಲ್ಲಿ ಮುಖವಿರಿಸಿ ಉಫ್ ಉಫ್ ಅಂತ ಊದುತ್ತಿದ್ದ ತಾಯಿಗೆ ಸಂಭ್ರಮದಿಂದ ಸುದ್ದಿ ಮುಟ್ಟಿಸಿದಳು.  ‘ಹೌದಾ’ ಅಂತ ನೀರು ತಂದಳು ಹೊರಗೆ.  ಸೌಭಾಗ್ಯ ಸರಕೆಲ್ಲ ಇಳಿದು ಖಾಳಿರಾಚುವ ತಾಯಿಯ ಮುಖವನ್ನು ನೋಡುವ ಧೈರ್ಯಸಾಲದೆ ನೀರು ಇಸಿದುಕೊಂಡು ಎಲುಬೆದ್ದಿದ್ದ ಮುಖ ತೊಳೆದುಕೊಂಡನು.  ಸೆಗಣಿಯ ಸಾರಣೆ ಕಂಡಿದ್ದ ನೆಲದ ಮೇಲೆ ಎಡಗಾಲಿರಿಸಿ ಹಟ್ಟಿಯೊಳಕ್ಕೆ ಪ್ರವೇಶಿಸಿದನು.
ಒಲೆಯು ಕಕ್ಕುತ್ತಿದ್ದ ಕಪ್ಪು ಹೊಗೆಯಲ್ಲಿ ಮುಖ ಹುದುಗಿಸಿ ಉಫ್ ಉಫ್ ಅಂತ ಒಂದೇ ಸಮನೆ ಊದುತ್ತಿದ್ದಳು ಶಾಲಮ್ಮ.  ದೂರದ ಹಳ್ಳದ ಒರತೆಯಿಂದ ನೀರು ತರಲಾಗದ ತನ್ನ ಸಂಕಟವನ್ನು ತನ್ನಣ್ಣಗೆ ವಿವರಿಸುತ್ತಿದ್ದಳು ಬೇಗಮ್ಮ.  ಕಣ್ಣಿನಲ್ಲಿ ತಂದೆಯ ಹೆಣವನ್ನೇ ತುಂಬಿಕೊಂಡಿದ್ದ ಪೀರಣ್ಣನ ಮನಸ್ಸು ಗೌಡನ ಸುತ್ತ ಪ್ರೇತಾತ್ಮವಾಗಿ ಗಿರಕಿ ಹಾಕುತ್ತಿದ್ದಿತು.  ಹುಂಜ ಎರಡನೆಯ ಬಾರಿ ಹಟ್ಟಿಯೊಳಗೆ ನುಸುಳಿ ಕಾಳು ಹೆಕ್ಕುತ್ತಿರುವಾಗಲೇ ಚೂರು ಬೆಲ್ಲದಿಂದ ಕಪ್ಪು ಕಾಪಿ ಕಾಸಿಕೊಟ್ಟಳು.  ಕಾಪಿ ಕುಡಿದಾದ ಮೇಲೆ ಗೌಡ ತನಗೆ ಇಂಗ್ಲಾಂಡುಲೇಟರು ಬರೆದಿರುವುದಾಗಿ ಹೇಳಿದ ಸ್ವಲ್ಪ ಹೊತ್ತಿಗೆ ಬಾಷಾ ಬಂದವನೆ ತನ್ನ ಹೆಗಲ ಮೇಲಿದ್ದ ಕೊಡಲಿಯನ್ನು ಬಾಕಲ ಮಗ್ಗುಲು ಇರಿಸಿ ಉಸ್ಸಂದ, ತನ್ನಣ್ಣನನ್ನು ಕಂಡೊಡನೆ ‘ಯಾವಾಗ್ಬಂದೆಣ?’ ಎಂಬ ಪ್ರಶ್ನೆ ಹಾಕಿ ಈಗ ಜಸ್ಟ್ ಬಂದೆ ಎಂಬ ಉತ್ತರ ಪಡೆದ.  ಶಾಲಮ್ಮ ತನ್ನೆರಡನೆಯ ಮಗನಿಗೂ ಕಾಫಿ ತಂದುಕೊಟ್ಟಳು.  ಅವರೆಲ್ಲರೂ ಕ್ರಮೇಣ ದಮ್ಮಾರಿಸಿಕೊಂಡರು.  ಉದ್ವೇಗವನ್ನೂ ಕಡಿಮೆ ಮಾಡಿಕೊಂಡವರೆ ವಾಸ್ತವಕ್ಕೆ ಮರಳಿದರು.  ತಮ್ಮ ಬದುಕಿಗೆ ಕವಿದುಕೊಂಡು ಏಳನೆ ಸಣಿಯಂತೆ ಕಾಡುತ್ತಿರುವ ಗೌಡನ ಬಗ್ಗೆ ತಲಾ ಒಂದೊಂದು ಖಾರದ ಮಾತಾಡತೊಡಗಿದರು.
ಸಾಕ್ಷಿಯಾಗಿ ಗೌಡನಿಮದ ತನಗೆ ಬಂದಿರುವ ಇಂಗ್ಲಾಂಡು ಪತ್ರವನ್ನು ಪ್ಯಾಂಟಿನ ಜೇಬಿನಿಂದ ಹೊರತೆಗೆದ.  ಅದನ್ನು ಬಿಚ್ಚವಾಗ ಹಲ್ಲು ಕಟಕರಿಸಿದಾಗ ಉಂಟಾಗುತ್ತದಲ್ಲ ಅಂಥ ಸವಂಡು ಬಂತು.  ಆ ಮುವ್ವರು ಆ ಕಾಗದಕ್ಕಿದ್ದ ತಿಳಿ ನೀಲಿ ಬಣ್ಣ ಅದರ ಮೇಲಿದ್ದ ಮೂರು ಮುಖದ ಸಿಂಹದ ಮೊಹರನ್ನು ಕುತೂಹಲದಿಂದ ನೋಡಿದರು.  ಅದು ಮಾಡಿದ ಶಬ್ದವನ್ನು ಎಚ್ಚರದಿಂದ ಆಲಿಸಿದರು.  ಅದನ್ನು ಓದುವ ಮೊದಲು ಪೀರಣ್ಣ ಕೆಮ್ಮಿ ಗಂಟಲು ಸರಿಪಡಿಸಿಕೊಳ್ಳುವುದನ್ನು ಮರೆಯಲಿಲ್ಲ.  ನಂತರ ಗಟ್ಟಿಯಾಗಿ ತಾತ್ಪರ್ಯ ಸಹಿತ ವಿವರಿಸಿ ಹೇಳಿದ.  ಪ್ರತಿಯೊಂದು ಶಬ್ದಕ್ಕೂ ಸಾಣೆ ಹಿಡಿದಮೇಲೆಯೇ ಲೆಟರ್‍ ಎಲ್ಲರಿಗೂ ಅರ್ಥವಾದದ್ದು.  ತಲಾ ಇಷ್ಟಿಷ್ಟು ಮಾತುಗಳನ್ನಾಡತೊಡಗಿದರು.  ಎಲ್ಲರ ಮಾತುಗಳೂ ಸುಡುತ್ತಿದ್ದವು.  ‘ಗೌಡನ ಕೈಗೆ ಕರಿನಾಗ್ರಾವು ಕಡೀಲಿ’ ಎಂದು ಶಾಲಮ್ಮ ಅಂದರೆ ಬೇಗಮ್ಮ ‘ಅಪ್ಪಾನೆ ದೆವ್ವ ಆಗಿ ಗೌಡನನ್ನೇ ಯಾಕೆ ಹಿಡೀಬಾರ್ದ’ ಅಂತಂದಳು.
ಬಾಷಾ: ನಾವೇನು ಕಳ್ರಲ್ಲ ಸುಳ್ರಲ್ಲ ರೆಟ್ಟಿಮುರ್‍ದು ಬದುಕ್ತೀವಿ ಯಾರಿಗ್ಯಾಕೆ ಹೆದರ್‍ಬೇಕು?
ಪೀರಣ್ಣ: ನಾವು ಕಳ್ರಲ್ಲ ಸುಳ್ರಲ್ಲ ನಿಜ.  ನಮ್ದು ಬ್ಯಾಡ್ಲಕ್ಕು, ಯಾಕಂದ್ರೆ ನಾವು ಬಡವರು.
ಶಾಲಮ್ಮ:  ನೀನು ಓದ್ಕೊಂಡೋನು, ಗೌಡಗೆ ರವ್ವೋಟು ಬುದ್ಧಿ ಹೇಳೂ.  ಸತ್ತೋರು ಸತ್ರು.  ಆದ್ರೆ ಬದುಕಿದೋರಿಗೆ ಯಾಕೆ ಕಾಟಾಕೊಡೋದು?
ಪೀರಣ್ಣ:  ನೀನೊಂದು ಸುಮ್ಕಿರವ್ವ, ಇದೆಲ್ಲ ಇಲೇಜು ಪಾಲಿಟಿಕ್ಸ್ ನಿನ್ಗೆ ಅರ್ಥಾಗಾಕಿಲ್ಲ.
ಇದಕ್ಕೆ ಪ್ರತಿಯಾಗಿ ಬಾಷಾ ಏನೋ ಹೇಳಬೇಕೆಂದು ಬಾಯ್ತೆರೆದ.  ಅಷ್ಟರಲ್ಲಿ ಬಾಗಿಲ ಮುಂದೆ ತನ್ನ ಜಿರುಕೆ ಚಪ್ಪಲಿ ಬಿಟ್ಟು ಒಳಬಂದ ತಳವಾರ ಅಟುಬಿ ‘ಗೌಡ್ರು ಕರೀತಾರೆ ಬರ್ಬೇಕಂತೆ’ ಎಂದು ಒತ್ತಾಯಮಾಡಿದ.  ತ್ರೀ ಓ ಕ್ಲಾಕಿಗೆ ಬರ್ತೀನಂತ ಪೀರಣ್ಣ ಅಂದರೂ ಅಟುಬಿ ಕೇರೇಮಾಡಲಿಲ್ಲ.  ಒಂದು ತಂಬಿಗೆ ನೀರು ಕುಡಿದು ಹಂಗೆ ತಳವಾರನನ್ನು ಪಾಲೋಮಾಡಿದನು.
ಅರವತ್ತು ಕಂಬದ ಮನೆಯ ಅಟವಾಳಿಗೆಯಲ್ಲಿ ಗೌಡ ಲೋಡಿಗಾತು ಕೂತಿರುವುದು ಕಾಣಿಸಿತು.  ಕಂಬಕ್ಕೊಬ್ಬೊಬ್ಬರಂತೆ ಇತರೇ ಮಂದಿ ಸಹ ಕೂತಿದ್ದರು.  ಮತ್ತು ಅವರು ಊರ ದೈವಸ್ಥರೂ ಆಗಿದ್ದರು.  ನಮಸ್ಕಾರ ಹೊಡೆದ ಪೀರಣ್ಣ;  ಆ ಒಂದು ನಮಸ್ಕಾರವನ್ನ ಎಲ್ಲರೂ ತಲಾ ಇಷ್ಟಿಷ್ಟು ಹಂಚಿಕೊಂಡರು.  ಕೂಡ್ರಲಾಗದೆ;  ನಿಂದ್ರ ಲಾಗದೆ ಚಡಪಡಿಸಿದನು ಪೀರಣ್ಣ.  ಒಂದುಕ್ಷಣ ಮತ್ತೆ ಧೈರ್ಯತಂದುಕೊಂಡು ಗೋದಲೆಯ ಕಟ್ಟಿಗೆ ಅಂಡು ಊರಿದನು.  ತನ್ನ ಮೇಲೆ ಎಲ್ಲರ ದೃಷ್ಟಿಗಳ ಕಾಗೆ ಕೂತಾಗ ತಲೆ ಎತ್ತಲಾಗಲಿಲ್ಲ ಅವನಿಗೆ.  ಸಂಭಾಷಣೆ ಈಪ್ರಕಾರವಾಗಿ ನಂತರ ಶುರುವಾಯಿತು.
ಗೌಡ:  ಅಲ್ಲಲೇ ಪೀರ, ಅಟೊತ್ತಿಗೆ ಬಂದ್ಯಂತೆ, ಇಲ್ಲಿಗೆ ಕೂಡ್ಲೆಬರಬಾರ್ದಾ ನೀನೇನು ಅಪ್ಪಾಜೆಪ್ಪನ ಮಗ್ನೇನು?  ಕರೆಯಾಕ ತಳವಾರ್‍ನ ಕಳಿಸಬೇಕೇನು!
ಪೀರಣ್ಣ:  ಗೌಡ್ರೆ ಬಡವ್ರು ಅಂತ ಬಾಯಿಗೆ ಬಂದಂಗ ಮಾತಾಡಬ್ಯಾಡ್ರಿ.  ಗಿವ್ ರೆಸ್ಪೆಕ್ಟ್ ಅಂಡ್ ಟೇಕ್ ರೆಸ್ಟೆಕ್ಟ್, ನಾನು ಒನ್ನವರ್‍ ಹಿಂದೆ ಬಂದೆ.
ಗೌಡ:  ನೀನೊಬ್ನೇ ಅಲ್ಲಲೇ ಇಂಗ್ಲೀಸು ಕಲ್ತಿರೋಡು (ಸಿಟ್ಟಿನಿಂದ ಮುಖ ಕೆಂಪು ಮಾಡಿಕೊಂಡ ಕಾರಣ ಕೆಮ್ಮು ಬಂತು, ಕೆಮ್ಮಿದನು.)
ವ್ಯಕ್ತಿ ೧: ರೇವಣ್ಣ ತಡಕಾ……ತಡಕಾ……ತಾಳಿದವನು ಬಾಳಿಯಾನು.
ವ್ಯಕ್ತಿ ೨:  ಪೀರಣ್ಣ, ಗೌಡ್ರು ಈ ಊರ್‍ಗೆ ದೇವರು, ಅವರು ಒಂದು ಮಾತಂದ್ರೆ ಕಿರಿಯೋನಾದ ನೀನು ಸುದಾರಿಸ್ಕೋಬೇಕಪ್ಪಾ
ಗೌಡ:  ಗುರುಹಿರಿಯರೂ ಅಂತ ಹೇಳಿದ್ರೆ ಆ ತುರುಕ್ರೋನ್ಗೆ ಹೆಂಗ್ರಿ ಗೊತ್ತಾಯ್ತದೆ.  ಅದೆಲ್ಲ ಹೇಳೋದ್ಯಾಕೆ, ಕೇಳೋದ್ಯಾಕೆ.  ನಿಸೂರು ಹೇಳಿಬಿಡ್ರಿ (ಶಕ್ತಿ ಪಡೆಯಲು ಬೀಡಿ ಹಚ್ಚಿಕೊಂಡನು)
ವ್ಯಕ್ತಿ ೨:  ಓದ್ಕೊಂಡೀನಂತ, ಸಂಬ್ಳತಗನಂಗಾದೀ ಅಂತ ನೀತೀ ನೇಮ, ಜಾತಿಗೀತಿ ಮರ್‍ತು ನಿಮಪ್ನ ಹೆಣಾನ ಎಂದು ಈರಸೈವರ ರುದ್ರಭೂಮ್ಯಾಗ ಉಗುದ್ಯೋ ಅವತ್ನಿಂದ ನಮ್ಮೂರು ಹಾಳಾಗೋಯ್ತು!
ಗೌಡ:  ಮಳೆಗಾಲ ಮುಕ್ಕಾಲುವಾಸಿ ಮುಗ್ದು ಹೋಯ್ತು.
ವ್ಯಕ್ತಿ ೧:  ಜನ ಕೂಳಿಲ್ದೆ ಸಾಯ್ತಿದಾರೆ.
ವ್ಯಕ್ತಿ ೨:  ದನಕರುಗಳು ನೀರಿಲ್ದೆ ಸಾಯ್ತಿದಾವೆ.
ವ್ಯಕ್ತಿ ೩:  ಜನ್ರೀಗೆ ತಿನ್ನಾಕೆ ಕೂಳಿಲ್ಲ, ದನಗಳಿಗೆ ಮೇವಿಲ್ಲ.
ಗೌಡ:  ಇದ್ಕೆಲ್ಲ ಏನ್ಕಾರಣ ಅಂತ ನಿಂಗೆ ಈಗ್ಲಾದ್ರೂ ಗೊತ್ತಾಯ್ತಾ!
ಪೀರಣ್ಣ:  ನೀವು ಹೇಳೋದ್ನೆ ಕೇಳಿದ್ರೆ ನೀವು ಎಷ್ಟು ಹಿಂದುಳಿದಿದ್ದೀರಂತ ಗೊತ್ತಾಗ್ತದೆ.  ಉಗ್ದುಮ್ಯಾಕೆ ಏನು ಮಾಡ್ಲಾಕೆ ಬರ್‍ತದೆ!
ವ್ಯಕ್ತಿ:  ಆಗೋದು ಆಗಿ ಓಗೈತಂತ ನಾವೂ ಸುಮ್ಕದೀವಿ……ನಾಳೆ ಬಸಂದೇವ್ರ ಗುಡಿತಾಗ ಪಂಚಾತಿ ಐತೆ.  ದೈವಸ್ಥರು ಹೆಂಗ್ ಹೇಳ್ತಾರೋ.  ಹಂಗ್ ಕೇಳಿಬಿಡ್ರಿ……ಇದ್ರಿಂದ ನಿಮ್ಗೂ ಒಳ್ಳೇದು…..ಊರ್‍ಗೂ ಒಳ್ಳೇದು…..
ಊರಿನ ಗಣ್ಯ ವ್ಯಕ್ತಿಗಳಿಗೆ ಎದುರಾಡಲಾಗದ ಹೇಡಿತನ ಇನ್ನೂ ತನ್ನಲ್ಲಿದೆಯಲ್ಲಾ ಅಂತ ಮಮ್ಮಲನೆ ಮರುಗುತ್ತ ಅಲ್ಲಿಂದ ಮನೆಕಡೆ ನಡೆದ ಪೀರಣ್ಣ.
                                   – ೨ –
ಸ್ವಲ್ಪ ಹೊತ್ತು ಮಾದಿಗರ ಮಾಯಿಗ ಪೀರಣ್ಣನ ಹಟ್ಟಿ ಅಂಗಳದಲ್ಲಿ ನಿಂತ ಡಡ್ಡೆಣಕ್ಕು ಡಡ್ಡೆಣಕ್ಕು ಅಂತ ಹುರುಪಿನಿಂದ ಹಲಗೆ ಬಡಿದ.  ಎಲ್ರೂ ಏನ್ಲೆ ಏನ್ಲೇ ಅಂತ ಹೊರಗೆ ಬಂದರು.
ಹಲಗೆ ಮಾಡುತ್ತಿದ್ದ ಸದ್ದು ಹಟ್ಟಿಯೊಳಗಿದ್ದ ಎಲ್ಲರಿಗೂ ಕೇಳಿಸಿತು.  ಎಲ್ಲರಿಗೂ ಸಾಕಷ್ಟು ಅರ್ಥವೂ ಆಯಿತು.  ಪೀರಣ್ಣ ಮತ್ತಿತರ ಎಲ್ಲರೂ ಹಟ್ಟಿಯ ನೆರಕೆಗೆ ಕಿವಿಯಾನಿಸಿದರು.
ಮಾಯಿಗ ಏರುದನಿಯಲ್ಲಿ ಈ ಪ್ರಕಾರವಾಗಿ ಕೂಗಿ ಹೇಳಿದ.
“ಕೇಳ್ರಪೋ ಕೇಳಿ…..ಸಂಜೆ ವತ್ನಾಗೆ ಬಸುದೇವ್ರ ಗುಡಿತಾಗೆ ತುರುಕ್ರ ಎಣದ ಬಗ್ಗೆ ಪಂಚಾತಿ ಐತಿ.  ಮಳೇ ಬೆಳೇ ಬಗ್ಗೆ ಪಂಚಾತಿ ಐತಿ.  ಉಂಡೋರು ಉಪಾಸ ಇದ್ದೋರು ಎಲ್ರೂ ಬರ್ಬೇಕು.  ಎಳಿಲ್ಲಾಂದೀರಿ, ಕೇಳಿಲ್ಲಾಂದೀರಿ”.
ಮತ್ತೆ ಡಡ್ಡೆಣಕ್ಕು ಡಡ್ಡಣಕ್ಕು ಅಂತ ಬಡಿಯುತ್ತ ಮತ್ತೊಂದು ಓಣಿ ಕಡೆ ನಡೆದ.  ಅವನ ಹಿಂದೆ ಪಡ್ಡೆಗಳ ಹಿಂಡೇ ಹೊಂಟಿತ್ತು.
ಡಂಗುರಸಾರಿದ ಪ್ರತಿಯೊಂದು ಶಬ್ದ ಶಾಲಮ್ಮನ ಎದೆಗೇ ಹೆಚ್ಚು ಇರಿದದ್ದು.  ಹಟ್ಟಿಯೊಳಗೆ ಆಕೆ ಎದೆ ಎದೆ ಬಡಿದುಕೊಂಡು ಅತ್ತಳು.  ಆಕೆಯನ್ನು ಸಮಾಧಾನ ಪಡಿಸುವಲ್ಲಿ ಆಕೆಯ ಮಕ್ಕಳಿಗೆ ಸಾಕುಸಾಕಾಗಿ ಹೋಯಿತು.
ಅವತ್ತು ಮಧ್ಯಾಹ್ನ ತಲಾ ಒಂದೊಂದು ರೊಟ್ಟಿ ಬರುವಂತೆ ಮುಗ್ಗು ಜೋಳದಿಂದ ಮಾಡಿದ್ದ ಅಡುಗೆಯನ್ನು ಯಾರೊಬ್ಬರೂ ಮುಟ್ಟಲಿಲ್ಲ.   ಮಾತು ಮಾತಿಗೆ ನೀರು ಕುಡಿದರು ಅಷ್ಟೆ.  ಹೊತ್ತು ಪಶ್ಚಿಮದ ಕಡೆ ವಾಲಿದಂತೆ ಎಲ್ಲರೂ ಮಾತು ಕಳೆದುಕೊಂಡವರಂತೆ ಗಲಿಬಿಲಿಗೊಂಡರು.
ಅಂದುಕೊಂಡಂತೆ ಸಂಜೆ ಬಂದೇಬಿಟ್ಟಿತು.  ಅಟುಬಿ ಪಂಚಾತಿ ಕಟ್ಟಿಗೆ ಕರೆಯಲುಬಂದ.  ಆಗಲೇ ದೈವಸ್ಥರು ಸೇರಿ ಬಹಳ ಹೊತ್ತಾಗಿರುವುದಾಗಿಯೂ ಹೇಳಿ ಹೊರಡಲು ಒತ್ತಾಯಿಸಿದ.  ಉದ್ದನೆ ಉಸಿರುಬಿಟ್ಟ ಪೀರಣ್ಣ ಪಂಚಾತಿ ಕಟ್ಟೆಕಡೆಗೆ ಹೊರಡುವ ಮೊದಲು ನೆರಕೆಗೆ ಸಿಗಿ ಹಾಕಿದ್ದ ಹರುಕುಬರುಕ ಪಾದರಸ ಲೇಪನದ ಕನ್ನುಡಿಶಿಳ್ಳಿನಲ್ಲಿ ಇಣುಕಿ ನೋಡಿಕೊಂಡ.  ನಾನೂ ಬರ್‍ತೀನಿ ಎಂದು ಬಾಷ ಹೊಂಟ.  ಜೀವದ ಪದಕದಂತಿರುವ ಇಬ್ಬರು ಗಂಡುಮಕ್ಕಳನ್ನು ಕಳಿಸಿ ಇರಲಾರದೆ ಶಾಲಮ್ಮ ಸಹ ಬ್ಯಾಡಂದರೂ ಹೊಂಟಳು.  ಆ ಮುವ್ವರು ತಂತಮ್ಮ ನಡುಗುವ ಹೆಜ್ಜೆಗಳೊಂದಿಗೆ ನಡೆದು ಕಟ್ಟೆ ಸೇರಿದರು.
ಕವ್ವ, ಶವ್ವ, ಗುಸು…..ಗುಸು…..ಮಾತುಗಳ ನಡುವೆ ಚಿತೆ ಏರುತ್ತಿರುವವರಂತೆ ನಡೆದು ದೈವಸ್ಥರ ಮುಂದೆ ನಿಂತರು.  ಆ ದೈವಸ್ಥರ ಕಣ್ಣಿಗೆ ಆ ಮುವ್ವರು ಹಬ್ಬದ ಕುರಿಗಳಂತೆಯೂ, ಆ ಮುವ್ವರಿಗೆ ದೈವಸ್ಥರು ಸೀಳುನಾಲಗೆಯ ಬೇಟೆನಾಯಿಗಳಂತೆಯೂ ಕಂಡಬಂದರು.  ಅಲ್ಲಿ ಪವಡಿಸಿದ್ದ ಸಾರಾಸಗಟ ಎಲ್ಲರ ಕಣ್ಣುಗಳಿಗೂ ನಾಲಗೆಗಳು ಚಕಚಕ ಚಿಗಿತುಕೊಂಡುಬಿಟ್ಟಿದ್ದವು.
ಗೌಡ ಕೆಮ್ಮಿ ಕ್ಯಾಕರಿಸಿ ಗಂಟಲ ಶ್ರುತಿ ಸರಿಪಡಿಸಿಕೊಂಡನು.  ಏರುದನಿಯಲ್ಲಿ ಉಭಯಕುಶಲೋಪರಿ ಆಡಿದನು.  ಮಳೆ ಬೆಳೆ ಕೈಕೊಟ್ಟಿರೋದರ ಬಗ್ಗೆ ವಿಷಾದ ವ್ಯಕ್ತಿಪಡಿಸಿ ಮತ್ತೆ ಕೆಮ್ಮಿದನು.  “ಈರಸೈವರ ರುದ್ರಭೂಮ್ಯಾಗ ತುರುಕ್ರೋನ ಹೆಣಾ ಇಟ್ಟಿರೋದ್ರಿಂದ್ಲೆ ಈ ವರ್ಷ ಮಳೆ ಒಂದ್ಹನಿ ಬಿದ್ದಿಲ್ಲ.  ಇದ್ಕೇನಂತೀರಿ….ದೈವಸ್‌ತ್ರು” ಎಂಬುದಾಗಿ ಗೌಡ ಕೆಟ್ಟ ನಿಶ್ಶಬ್ದದ ನಡುವೆ ನುಡಿದನು.  ತಲೆಗಳು ಅಲ್ಲಾಡಿದವು.  ಕೆಲವರು ಹೌದೌದು ಅಂದರು.  ಮತ್ತೆ ಕೆಲವರು ತಕ್ಕ ಪ್ರಾಯಶ್ಚಿತ್ತವಾಗಲೇ ಬೇಕೆಂದರೆ ಮತ್ತಷ್ಟು ಕೆಲವರು ಉಪ್ಪು ತಿಂದವರು ನೀರು ಕುಡಿಯಲೇಬೇಕು ಎಂಬುದಾಗಿ ಮಾತು ಸ್ಖಲಿಸಿದರು.
ಅಷ್ಟೊಂದು ಕೌರವರ ಮುಂದೆ ದ್ರವಪದಿಯಂತೆ ಆರ್ತಳಾಗಿ ನಿಂತಿದ್ದ ಶಾಲಮ್ಮನ ಕಣ್ಣುಗಳಿಂದ ಒಂದೇ ಸಮನೆ ಹನಿಯುತ್ತಿದ್ದ ನೀರು ನೆಲದ ಮೇಲೆ ಇಂಡಿಯಾ ದೇಶದ ನಕ್ಷೆ ಬರೆಯತೊಡಗಿತ್ತು.
ಸ್ವಲ್ಪ ಹೊತ್ತು ತಮ್ಮಷ್ಟಕ್ಕೆ ತಾವೇ ಮಾತಾಡಿಕೊಂಡ ದೈವಸ್ಥರು ಕೊನೆಗೊಂದು ತೀರ್ಮಾನಕ್ಕೆ ಬಂದಿರುವವರಂತೆ ತಂತಮ್ಮ ಗಂಟಲು ಸರಿಪಡಿಸಿಕೊಂಡು ನರಳಿದರು.  ಒಂದನೆ ನಂಬರ್‍ ದೈವಸ್ಥನಾದ ರೇವಣ್ಣಗೌಡನೇ ತೀರ್ಪು ಪ್ರಕಟಿಸಿದ.  “ಏನೋ ತೆಪ್ ಆಗೋದು ಆಗೋಗೈತಿ ಇದ್ಕೆ ಪರಿಹಾರವಾಗಿ ಬಸಂದೇವ್ರ ಗುಡೀಗೆ ಐನೂರಾ ಒಂದ್ರೂಪಾಯಿ ತಪ್ ದಂಡ ಕಟ್‌ಬೇಕು ಊರ ದೈವಸ್ಥರಿಗೆ ಸೀ ಊಟ ಹಾಕಿಸ್ಬೇಕು……ಏನಪಾ…..ಪೀರಣ್ಣ ಏನಂತೀ?……”
ಸಿಟ್ಟಿನಿಂದ ಚೆಲ್ಲಿ ಹೋಗಿದ್ದ ಬಾಷಾ ತನ್ನಣ್ಣಗೆ ಮಾತಾಡಲು ಬಿಡಲಿಲ್ಲ.  “ದೈವಸ್ಥರಂತೆ ದೈವಸ್ಥ್ರು….ಇಂಥ ಪಂಚಾತಿ ಪರಪಂಚದಾಗ ಎಲ್ಲೂ ನಡ್ದಿಲ್ಲ ನಡಿಯೋದಿಲ್ಲ ಬುಡ್ರಿ….ನಾವೇ ಇವತ್ತಿಗೆಂಗ ನಾಳೆಗೆಂಗ ಅಂತ ಚಿಂತಿ ಮಾಡ್ತಿದೀವಿ….. ಅಂತದರಾಗ ದಂಡ ಕಟ್ಬೇಕಂತೆ…..ಸೀ ಊಟ ಹಾಕಿಸ್ಬೇಕಂತೆ…..” ಮತ್ತೇನನ್ನೋ ನುಡಿಯಲಿದ್ದ ಮಗನ ಕೈ ಜಗ್ಗಿ ಕುಂಡ್ರಿಸಿ ತಾನೆದ್ದು ನಿಂತು ಶಾಲಮ್ಮ ಕುಂತಿದ್ದ ಸಬಕ್ಕ ; ನಿಂತಿದ್ದ ಸಬಕ್ಕ ಕೈ ಮುಗಿದಳು.  ಅವಳ ಕಣ್ಣು ಮುಖದ ಸುಕ್ಕುಗಳ ಗುಂಟ ಸಣ್ಣ ಹಳ್ಳ ಹರಿಬಿಟ್ಟಿತ್ತು.
“ಕೈ ಮುಗಿತೀನ್ರಿ…..ಕಾಲ್ಗೂ ಬೀಳ್ತೀನ್ರಿ…. ಏನೋ ಆಗೋದು ಆಗಿ ಹೋಗೇತಿ….ಮುಸಲ್ಮಾನರ ಮನೆ ನಮ್ಮದೊಂದೇ ಈ ಊರಾಗಿರೋದು;   ನಮಗಾರಿಗೂ ಮುಸಲ್ಮಾನಿ ಮಾತಾಡೋಕೆ ಬರೋದಿಲ್ಲ…. ನಾವು ಪೀರ್‍ಲ ಹಬ್ಬ ಮಾಡ್ತಿಲ್ಲ…. ರಂಜಾನೂ ಮಾಡ್ತಿಲ್ಲ ನಾವೂ ನಿಮ್ಮಂಗೆ ನಾಗ್ರಪಂಚಮಿ, ಮಾನಾಮಿ, ಉಗಾದಿ ಹಬ್ಬ ಮಾಡ್ತೀವಿ….ಬಸಂದೇವ್ರೇ ನಂ ಮನೀದೇವ್ರು…. ಇಂತದರಾಗ ನನ್ ಗಂಡನ ಹೆಣಾನ ನಿಮ್ ಸುಡುಗಾಡ್ನಾಗೆ ಉಗುದ್ರೆ ಅದ್ರಾಗೇನೈತಿ ತಪ್ಪು….. ಊರಿಗೆ ಇರೋದೇ ಒಂದು ಸುಡುಗಾಡು…. ನನ್ ಹೆಣಾನೂ, ನನ್ ಮಕ್ಳ ಹೆಣಾನೂ….ಅದ್ರಾಗ ಇಟ್ರೆ ತಪ್ಪೇನೈತಿ….ಆ….ಆ…..” ಆವೇಶದಿಂದ ಬಳಲಿ ಬಿಕ್ಕು ಹಿಡಿದ ತಾಯಿಯನ್ನು ಕೈ ಹಿಡಿದು ಕುಂಡ್ರಿಸಿ ಪೀರಣ್ಣ ತಾನೂ ಎದ್ದು ನಿಂತ.  ಆತನ ಧ್ವನಿಪಟ್ಟಿಗೆ ಕಿರುಕೂ ಕಿರುಕೂ ಅಂತಿತ್ತು.  ಆತನ ಕಣ್ಣಂಚಿನಲ್ಲಿ ನೀರು ಕೆರೆ ಕಟ್ಟಿತ್ತು.
“ನಾವು ವೆರ್‍ರಿ ಪೂರು….ನಮ್ಗೆ ಇಂಥ ಶಿಕ್ಷೆ ವಿಧಿಸಬೇಡ್ರಿ…..ನೀವೇ ನಮ್ಗೆ ಫಾದರ್‍ರೂ…. ಮದರ್‍ರೂ…..” ಎಂದು ಮತ್ತೇನನ್ನೋ ಹೇಳುತ್ತಿದ್ದ ಪೀರಣ್ಣನ ಮಾತು ಕೇಳಲು ಅಲ್ಲಿ ಯಾರೂ ತಯಾರಿರಲಿಲ್ಲ.  ಕೇಕೆ ಹೊಡೆದು, ಸೀಟಿ ಹಾಕಿ ಬಾಯಿ ಕಟ್ಟಿಬಿಟ್ಟರು.
ಒಬ್ಬ ಎದ್ದು ನಿಂತು “ಇವೆಲ್ಲ ನಾಟ್ಕ…. ಈ ಹುಲಿ ಆಟ ಆಡೋಕೆ ಇದು ಪೀರ್‍ಲಬ್ಬ ಅಲ್ಲಪೇ ಪೀರಾ” ಎಂದು ನುಡಿದ ಕೂಡಲೆ ಆ ಬರಗಾಲ ಪೀಡಿತ ಜನ ‘ಹೋ’ ಅಂತ ನಗೆಯಾಡಿತು.
ಪಂಚಾತಿ ತೀರ್ಪು ಆಡಿದರೆ ಮುಗಿಯಿತು.  ಇಟ್ಟರೇ ವರ ಕೊಟ್ಟರೇ ಶಾಪ.  ಬದಲಾಯಿಸುವ ಪ್ರಶ್ನೆಯೇ ಇರಲಿಲ್ಲ ಅವರಾರಲ್ಲೂ.  ಗೌಡ ಮತ್ತೆ ಎದ್ದು ನಿಂತು ಹೀಗೆ ಹೇಳಿದ:  “ದೈವಸ್ಥರ ಮಾತಿಗೆ ಎದುರಾಡೋದು ಅಪರಾಧ…..ತೀರ್ಪಿಗೆ ಗೋರವ ಕೊಡ್ದೇ ಹೋದ್ರೆ ಊರಿಂದ ಬಹಿಷ್ಕಾರ ಹಾಕ್ತೀವಿ.”
“ಹಾಕ್ಕಂಡ್ರೆ ಹಾಕ್ಯೋ ಹೋಗ್ರೋ ನಿಮ್ ಗೊಡ್ ಬೆದರಿಕೆಗೆ ಹೆದರೋಕೆ ನಾವೇನು ಮಿಂಡರಿಗುಟ್ಟಿದೋರಲ್ಲ” ಎಂದು ಬಾಷ ನುಡಿಯುತ್ತಲೆ ಜನ ಹೊಡೀ ಬಡೀ ಕಡೀ ಅಂತ ಹೇಷಾರವಗೈಯಿತು.
ಆಗ ಹಿರಿಯರೇ ಮಧ್ಯೆ ಪ್ರವೇಶಿಸಿ ಜನರನ್ನು ಶಾಂತಗೊಳಿಸಿದರು.
ಪೂಜಾರಿ ಬಸಣ್ಣನೆದುರು ನಂದಾದೀಪ ಹಚ್ಚುತ್ತಲೇ ದೈವಸ್ಥರ ಪೈಕಿ ಕೆಲವರು ಎದ್ದು ಜ್ಯೋತಿ ಬೆಳಗುತ್ತಿದೆ ವಿಮಲ ಪರಂಜ್ಯೋತಿ ಬೆಳಗುತಿದೆ….. ಎಂದು ಮಂಗಳಾರತಿ ಶುರು ಮಾಡಿದರು.
-೩-
ಹಂಗೇ ಚುಮುಚುಮು ಬೆಳಕು ಹರಿದಿತ್ತು.  ಅಷ್ಟೊತ್ತಿಗೇ ಬಾಷಾ ದುರುಗವ್ವನ ಬೇವಿನಮರದಿಂದ ಬೇವಿನಕಡ್ಡಿ ತಂದು ಪಳುಗಟ್ಟೆ ಮೇಲೆ ಕುಂತು ಹಲ್ಲುಜ್ಜತೊಡಗಿದ್ದ.  ಅವನು ಉಗುಳಬಹುದಾದ ಕಫ ನುಂಗಲೆಂದು ಅಷ್ಟು ದೂರದ ಗೂಟದ ಮೇಲೆ ಕಾಕರಾಜ ತದೇಕ ಚಿತ್ತದಿಂದ ಕುಂತು ನೋಡುತಲಿದ್ದಿತು.
ಒಲೆಯ ಮುಂದೆ ಅಡುಗೆ ಏರ್ಪಾಡು ನಡೆಸಿದ್ದ ತಾಯಿ ಮುಂದೆ ಕುಕ್ಕರು ಗಾಲಿಲೆ ಕುಂತು ಬೇಗಮ್ಮ ತಾನು ಕಂಡಿದ್ದ ಕನಸನ್ನು ವಿವರಿಸತೊಡಗಿದ್ದಳು  “ಅಪ್ಪ, ಪೀರಣ್ಣಾ;  ನಾನೂ, ನೀನೂ ಬಾಷಣ್ಣ ಎಲ್ರೂಲೂ ಕೊಟ್ರು ಜಾತರಿಗೋಗಿದ್ವಿ.  ಅಲ್ಲಿ ಬಣ್ಣ ಬಣ್ಣದ ಗಿರಗಿಟ್ಟೆಯೊಂದಿತ್ತು.  ಅದು ಚಂದಿತ್ತೂ ಅಂದ್ರೆ ಚಂದಿತ್ತು.  ನಾನಾ ನಮೂನೆ ಪ್ರಾಣಿಗಳೂ, ಪಕ್ಷಿಗಳೂ ಅದಕ್ಕಿದ್ದವು.  ಹದ್ದಿನ ಮ್ಯಾಲ ಅಪ್ಪ ಕುಂತಿದ್ದನು.  ಆತನ ಹಿಂದೆ ಕುದ್ರಿ ಮ್ಯಾಲ ನೀ ಕುಂತಿದ್ದಿ.  ನಿನ್ನ ಹಿಂದಿದ್ದ ಟಗರಿನ ಮ್ಯಾಲ ಬಾಷಣ್ಣ ಕುಂತಿದ್ದ.  ಆತನ ಹಿಂದಿನ ಹಂಸದ ಮ್ಯಾಲ ನಾನು ಕುಂತಿದ್ದೆ.  ನನ್ನ ಹಿಂದಿದ್ದ ಕಾಗೆ ಮ್ಯಾಲ ಪೀರಣ್ಣ ಕುಂತಿದ್ದ.  ಪೀರಣ್ಣನ ಹಿಂದಿದ್ದ ಹುಲಿ ಮ್ಯಾಲ ಕುಂತಿದ್ದ ಗೌಡ ಥೇಟ್ ಹುಲಿಯಂತಿದ್ದ ಕಣಮ್ಮಾ….ಗಿರಗಿಟ್ಟಿ ಎಷ್ಟು ಜೋರಾಗಿ ತಿರುಗಿತಂದ್ರೆ….ನಾವೆಲ್ಲ ಗಾಳ್ಯಾಗ ಎಲ್ಲಿ ಕರಗಿ ಹೋಗ್ತಿವೋ ಅನ್ನಿಸಿ ಭಯವಾಯ್ತು.”
ತನ್ನ ಮುದ್ದಿನ ಮಗಳಾಡುತ್ತಿದ್ದ ಮಾತುಗಳನ್ನು ಕೆಲಸದ ನಡುವೆ ಶ್ರದ್ಧೆಯಿಂದ ಆಲಿಸಿದಳು ಶಾಲಮ್ಮ.  “ಕೆಟ್ಟ ಕಣಸು ಕಂಡಿದ್ದೀ ನನಮಗ್ಳ….. ಆಮ್ಯಾಕೆ ತಲೀ ಮ್ಯಾಕ ನೀರಾಕ್ಕೊಂಡು ಅಣಮಪ್ಪನ ಗುಡಿಗೆ ಓಗಿ ಎಣ್ಣೆ ಆಕಿ ಬರ್‍ವಂತೇಳು” ಎಂದು ಉಸಿರು ಬಿಟ್ಟಳು.
ನೆರಿಕೆಯ ಮಗ್ಗುಲು ಕೌದಿಯೊಳಗೆ ಗುಡಿಸಿ ಮಲಗಿದ್ದ ಪೀರಣ್ಣ ಅರೆ ಎಚ್ಚರದಲ್ಲಿ ಅರ್ಥವಾಗದ ಸಾವಿರಾರು ಕನಸುಗಳೊಂದಿಗೆ ಕೊಚ್ಚಿಹೋಗುತ್ತಿದ್ದ.  ಅಷ್ಟರಲ್ಲಿ “ಅಪೋ ಪೀರಣ್ಣಾ….ಅಪೋ ಬಾಸಣ್ಣ…..ಅಮೋ ಸಾಲಮ್ಮಾ…..” ಎಂದು ಕೂಗುತ್ತಾ ಪ್ರವೇಶಿಸಿದನು ಅಮಾಸೆ ಮುಖದ ಚಂದ್ರನು.  ಅವನ ಸುತ್ತ ಆ ಹಟ್ಟಿಯಲ್ಲಿದ್ದ ಎಲ್ಲರೂ ಉದ್ವಿಗ್ನರಾಗಿ ಗಡಬಡಿಸಿ ಗುಂಪುಗೂಡಿದರು.  ಚಂದ್ರ ಏದುಸಿರು ಬಿಡುತ್ತ “ಅಮೋ ಶಾಲಮ್ಮಾ ನಿನಗಂಡನ ಎಣಾನಾ ಊರಗಸೆಬಾಕಲತಾಗ ಆಕ್ಯಾರ” ಎಂದು ಹೇಳುತ್ತಲೇ ಆಕೆ ಅಯ್ಯೋ ಎಸಿಮಾಯ ಮಂದಾರಗೌಳ ಸುರುವು ಮಾಡಿದಳು.  ಅದನ್ನು ಕೇಳಿದ ಅವರೆಲ್ಲ ಒಡೆದು ಚೂರಾಗಲಿದ್ದ ತಂತಮ್ಮೆದೆಗಳನ್ನು ಹಿಡಿದುಕೊಂಡು ಆ ಕ್ಷಣ ಹೆಣವಿದ್ದಲ್ಲಿಗೆ ಉಸಿರುಗಟ್ಟುವಂತೆ ಓಡಿದರು.
ಅಗಸೆಬಾಕಲಿಗೆ ಸ್ವಲ್ಪ ದೂರದಲ್ಲಿ ಖರೇವಂದರೂ ಹೆಣ ಅಂಗಾತ ಬಿದ್ದಿತ್ತು.  ಅಖಾಡಕ್ಕಿಳಿದ ಪಯಿಲವಾನನ ಭಂಗಿಯಲ್ಲಿ ಅದಿತ್ತು.  ಅದು ಇಡೀ ಊರಂಬೋ ಊರಿಗೆ ಸವಾಲು ಹಾಕುವ ರೀತಿಯಲ್ಲಿತ್ತು.  ಕಣ್ಣು ಬಾಯಿಗಳಿದ್ದ ಭಾಗದಲ್ಲಿ ತೂಗುಗಳಿದ್ದವು.  ತಲೆಯ ಮೇಲೆ ದವಡೆಯ ಭಾಗಗಳು ಪೂರ್ತಿ ಕೊಳೆತು ಹೋಗಿದ್ದ ಪರಿಣಾಮವಾಗಿ ಅಳ್ಳೆದೆಯವರು ನೋಡುವಂತಿರಲಿಲ್ಲ.  ಸೂರ್ಯನ ಬೆಳಗಿನ ಕಿರಣಗಳು, ಹೆಣದ ಮ್ಯಾಲೆ ಕೋಲು ಕುಣಿಸುತೊಡಗಿದ್ದವು.  ತನ್ನ ಬಳಿಗೆ ಯಾರೊಬ್ಬರೂ ತಟಾಯದ ರೀತಿಯಲ್ಲಿ ದುರ್ವಾಸನೆಯ ಒಂದು ಪರಿಧಿಯನ್ನ ಅದು ರಚಿಸಿಕೊಂಡು ನಿರುಮ್ಮಳವಾಗಿತ್ತು.
ಯಾವ ವಾಸನೆಯನ್ನು ಕೇರು ಮಾಡದೇ ಸಾಲಮ್ಮ ಹುಲಿಯಂಥ ಮಕ್ಕಳಿಂದ ಕೊಸರಿಕೊಂಡು ಪವಾಡದ ರೀತಿಯಲ್ಲಿ ಪರಿಧಿಯೊಳಕ್ಕೆ ಓಡಿ ತನ್ನ ಗಂಡನ ಕಳೇಬರವನ್ನು ತಬ್ಬಿಕೊಂಡು ಆನಂದಭೈರವಿ ರಾಗದಲ್ಲಿ ಅಳತೊಡಗಿದಳು.  ಭೀಮಾಲಿಂಗನಕ್ಕೆ ಸಿಲುಕಿ ಹೆಣದ ಮೈಯಿಂದ ತಿಳಿಗಪ್ಪು ಬಣ್ಣದ ರಸ ‘ಕೆಆರೆಸ್’ ಕಾರಂಜಿಗಳಂತೆ ಚಿಮ್ಮಿ ಆಕೆಯ (ಒಂದು ಕಾಲಕ್ಕೆ ಕೋಮಲವಿದ್ದ) ಸುಕ್ಕು ಮೈಗೆ, ಮುಖಕ್ಕೆ ರಾಚಿತು.  ಆಕೆಗೆ ಯಾವುದರ ಕಡೆಗೂ ಲಕ್ಷ್ಯವೇ ಇರಲಿಲ್ಲ.
“ಬದುಕಿದ್ದಾಗ್ಲೂ ಈ ಜನ ನಿನ್ನ ಕಾಡಿದ್ರು, ಸತ್ ಮ್ಯಾಲೂ ಕಾಡ್ತಾರಲ್ಲೊ ನಿನ ಬಾಯಾಗ ಮಣ್ ಆಕ.  ನಾವೇನು ಪಾಪ ಮಾಡಿದ್ವೋ….ಅಯ್ಯೋ….ತಕಾ….ನಾನೂ ನಿನ್ ಸಂಗಾಟ ಬರ್‍ತೀನಿ ಕರಕೊಂಡೋಗೋ….ಅಯ್ಯೋ….ಎನತಿರಲಿಕ್ಕೆ ಬಾಷಾ ಬಿಟ್ಟ ಬಾಣದಂತೆ ಓಡಿ ಆಕೆಯನ್ನು ಪರಿಧಿಯಿಂದಾಚೆಗೆ ಎಳೆದೊಯ್ದನು.  ಪೀರಣ್ಣ “ಡಿಫಿಕಲ್ಟೀಸ್ ಮನುಷ್ಯರಿಗೆ ಬರ್‍ದೇ ಮರಕ್ಕೆ ಬರ್‍ತಾವೇನಮ್ಮ….ಡೋಂಟ್ ವರೀ….ಸುಮ್ಕಿರು” ಎಂದು ಸಂತೈಸತೊಡಗಿದನು.
ಪಂಚಭೂತಗಳ ಶಿರದಮೇಲೆ ಶೀರ್ಷಾಸನ ಹಾಕಿರುವಂತಿದ್ದ ಹೆಣ ಬಾಷೆ ಬದುಕಿಗೆ ಅಂಟಿಕೊಂಡಿರುವವರನ್ನು ನೋಡಿ ಮುಗುಳ್ನಗುತ್ತಿರುವ ರೀತಿಯಲ್ಲಿ ಹಾಗೇ ಬಿದ್ದಿತ್ತು.  ಅದರ ವಾಸನೆಯ ಪರಿಧಿಯನ್ನು ಪ್ರವೇಶಿಸಿ ಬಂದ ಶಾಲಮ್ಮನನ್ನೂ, ಬಾಷನನ್ನೂ ನಾಯಿಯೊಂದು ಹಿಂಬದಿಯಿಂದ ಮೂಸಿ ಮುಖ ಸಿಂಡರಿಸಿಕೊಂಡು ವಾಪಸಾಯಿತು.  ಅಗಸೆ ಬಾಕಲಮ್ಯಾಲೆ ಕಾಕರಾಜಗಳು ಒಂದೇ ಸಮನೆ ಶ್ರುತಿ ಹಿಡಿಯತೊಡಗಿದ್ದವು.  ಅವು ಹಸಿದಿದ್ದವೇನೋ ನಿಜ!  ಆದರೆ ಯಾವೊಂದು ಸಣಿಮಾತ್ಮನ ವಾಹನವೂ ಹೆಣದ ಕೊಳೆತ ಕಪ್ಪು ಮಾಂಸವನ್ನು ತಿನ್ನಲು ಮುನ್ನುಗ್ಗಲಿಲ್ಲ.
ದುಃಖದ ಜಲಪಾತದಡಿ ಸಿಕ್ಕು ಮಾತು ಮಾತಿಗೆ ಮೂರ್ಛೆ ಹೋಗುತ್ತಿದ್ದ ತಾಯಿ ಶಾಲಮ್ಮನನ್ನು ಅವುಚಿಕೊಂಡು ‘ಎವ್ವಾ ನೀನೂ ಓಗಬ್ಯಾಡಬೇ’ ಎಂದು ಕೂಗುತ್ತಿದ್ದನು ಬಾಷಾ.  “ನಾನೂ ಸಾಯ್ತೀನಿ….ನನ್ನೂ ಅದೇ ಸುಡುಗಾಡ್ನಾಗೆ ಉಗೀರಿ, ಅದ್ಯಾವ ಗಣಮಗ ನನ್ ಎಣಾ ಮುಟ್ತಾನೋ ನಾನು ನೋಡಕ್ಕಂತೀನಿ” ಎಂದು ಅಬ್ಬರಿಸುತ್ತಿದ್ದಳು  ಶಾಲಮ್ಮ.  ಇದು ಹಿಂಗಾದರೆ ಬಗೆಹರಿವುದಿಲ್ಲೆಂದು ಬಾಷಾ, ಪೀರಣ್ಣ ಇಬ್ಬರೂ ಕೂಡಿ ತಮ್ಮ ಹೆತ್ತವಳನ್ನು ಹೊತ್ತುಕೊಂಡು ಹಟ್ಟಿಗೆ ಒಯ್ದು ಹಾಕಿದರು.
ತಂದೆ ಹೆಣ ನೋಡಿದ ಪರಿಣಾಮವಾಗಿಯೋ ಏನೋ, ಬೇಗಮ್ಮ ಜ್ವರ ಬಂದು ಮಲಗಿಬಿಟ್ಟಿತು.  ಅರೆನಿದ್ದೆಯಲ್ಲಿದ್ದ ಅದು ಆಗಾಗ್ಗೆ ಬೆಚ್ಚಿ ಬೀಳುತಲಿದ್ದಿತು.  ಅದುವರೆಗೆ ತಂಗಿಯನ್ನೇ ನೋಡುತ್ತ ಕೂತಿದ್ದ ಬಾಷಾ ದಡಾರನೆ ಎದ್ದು ಸೀದ ಮಲ್ಲಯ್ಯನ ಹಸ್ತಿಲೇ ಇಲ್ಲದ ದುಖಾನಿನೊಳಕ್ಕೆ ಕಾಲಿರಿಸಿದ.  ಎಂದೂ ಬಾರದ ಬಾಷಾ, ಇಂದ್ಯಾಕ ಬಂದೆಪ್ಪ ಅಂತ ಮಲ್ಲಯ್ಯ ತಕರಾರು ಮಾಡದೆ ಅವನು ಕೇಳಿದಷ್ಟು ಉದ್ದರಿ ಕೊಟ್ಟು, ಗಳಾಸಿನ ಮ್ಯಾಲೆ ಗಳಾಸು ಕುಡಿದು ಟೋಪಿ ತರಿಸಿಕೊಂಡು ಸೇದಿದ.  ಹಂತ ಹಂತವಾಗಿ ಕೆಂಪು ಕವಿದು ಕೆಂಪು ದಾಸವಾಳವಾದವು ಅವನ ಕಣ್ಣುಗಳು.  ಅವನ ತಲೆಯೊಳಗೆ ತಿಪ್ಪೆ ಕೆದರಿ ಮಾಣಿಕ್ಯದ ಹರಳುಗಳನ್ನು ಎಕ್ಕಿ ನುಂಗತೊಡಗಿತು ಸಾಕು ಹುಂಜ, ಹಟ್ಟಿಯ ಹುಂಜದ ನೇರಕ್ಕೆ ಹೆಜ್ಜೆ ಹಾಕಿದ.
“ಎಂದೂ ಕುಡಿಯದ ಬಾಷಾ ಇವತ್ಯಾಕ ಕುಡಿದೆಯೋ” ಎಂದು ರಾಗಕ್ಕೇ ಹೊಸ ತಿರುವು ನೀಡಿದಳು ಹೆತ್ತ ಕರುಳಿನ ಶಾಲಮ್ಮ.  ಬ್ಯಾಡ್ ಹ್ಯಾಬಿಟ್ಸ್ ಒಳ್ಳೇವಲ್ಲೋ ಎಂದನು ಪೀರಣ್ಣ.  ಅವರನ್ನೂ ಅವರ ಮಾತುಗಳನ್ನೂ ಕೇರು ಮಾಡದೆ ಬಾಷಾ ಗುಡಿಸಲೊಳಗೆ ಕಣ್ಣಾಡಿಸಿದ.  ಹುಂಜ ಕಂಡು ಬರಲಿಲ್ಲ.  ಜ್ವರದ ಅಮಲಿನಲ್ಲಿದ್ದ ಬೇಗಮ್ಮ “ಹುಂಜ ಮೇಯಾಕ ಹೋಗೇತಿ” ಎಂದಳು.
ಯಾರು ಎಷ್ಟು ಬ್ಯಾಡ ಅಂದರೂ ಕೇಳದೆ,
ದೇವರಿಗೆ ಬಿಟ್ಟಿದ್ದು ಅಂದರೂ ಕೇಳದೆ,
ನಿಮ್ಮಪ್ಪನ ಹೆಣ ಊರಲಿಟ್ಟುಕೊಂಡು ಎಂದರೂ ಕೇಳದೆ,
ನಿಂಗೆ ಬುದ್ಧಿ ಸರಿ ಐತೇನೋ ಎಂದರೂ ಕೇಳದೆ,
ನಮ್ಮಂಥ ಬಡವರ ಮನೆ ಗಡಿಯಾರ ತಿನ್ನುವುದೇನೋ ಎಂದರೂ ಕೇಳದೆ, ಕೊಕ್ ಕೊಕ್ ಕೊಕ್ಕೆಂದು ಅಪಾಯದ ಅರಿವಾಗಿ ತಪ್ಪಿಸಿಕೊಂಡು ತಿಪ್ಪೆಯಿಂದ ತಿಪ್ಪೆಗೆ, ಬೇಲಿಯಿಂದ ಬೇಲಿಗೆ ಕುಪ್ಪಳಿಸಿ ಓಡುತ್ತಿದ್ದ ಹುಂಜವನ್ನು ಹಿಡಿದು ತನ್ನ ಪರ್ಸನಲ್ಲು ಮಚ್ಚಿನಿಂದ ಕಚಕ್ಕನೆ ಕತ್ತರಿಸಿಬಿಟ್ಟ.  ಮಗನ ಒತ್ತಾಯಕ್ಕೆ ಮಣಿದು ಸಣ್ಣಗೆ ಹೆಚ್ಚಿ ಪಲ್ಯೆ ಮಾಡಿ ಉಂಬಾಕಿಟ್ಟಳು ಶಾಲಮ್ಮ.  ಭೀಕರ ಮೌನದಿಂದ ಇಡೀ ಕೋಳಿಯನ್ನು ಗಬಗಬನೆ ತಿಂದು ಸೀದ ಅಗಸೆಬಾಕಲ ಕಡೆ ನಡೆದ ಬಾಷಾ.
ಫಳಫಲ ಬಿಸಿಲಲ್ಲಿ ‘ಗಂಡಸರಾದರೆ ಮುಟ್ಟಿರೋ’ ಎಂದು ಅಂಗಾತ ಮಲಗಿದ್ದ ತನ್ನ ತಂದೆಯ ಕಳೇಬರದ ಬಳಿಗೆ ಬಂದವನೆ ಬಲವಾದ ಕೇಕೆ ಹಾಕಿದ.  ಆ ಸದ್ದಿಗೆ ಬಿಚ್ಚಿಬಿದ್ದ ಗುಬ್ಬಿಯೊಂದರ ಗರ್ಭಸ್ರಾವವಾಯಿತು.  ಒಂದು ಕ್ಷಣ ನೆಲ ಮುಗಿಲ ನಡುವೆ ಧ್ವನಿ ಸೇತುವೆ ಮೂಡಿ ಮರೆಯಾಯಿತು.  ತನ್ನ ಹಿಂದೆಯೇ ಬಂದಿದ್ದ ಪೀರಣ್ಣ ಶಾಲಮ್ಮ ಎಷ್ಟೋ ಬೇಡವೆಂದರೂ, ಹಣೆ ಹಣೆ ಬಡಿದುಕೊಂಡರೂ ಕೇರೇ ಮಾಡಲಿಲ್ಲ ಬಾಷಾ.  ಏಕೆಂದರೆ ಬಾಷಾ ಕೇವಲ ಬಾಷಾ ಆಗಿರಲಿಲ್ಲ.  ಅವನು ತಂದೆಯ ಹೆಣವನ್ನು ದೃತರಾಷ್ಟ್ರಾಲಿಂಗದಿಂದ ಬಿಗಿದು ಎತ್ತಿಕೊಂಡು ಸೀದ ಗೌಡನ ಅಟವಾಳಿಗೆ ಮನೆ ಕಡೆಗೆ ನಡೆದ.  ಅವನ ಹಿಂದೆ ಹುಡುಗರಪ್ಪಡಿಯ ಸಣ್ಣ ಹಳ್ಳವೇ ಹರಿಯಿತು.  ಹತ್ತು ಹೆಜ್ಜೆಗೊಮ್ಮೊಮ್ಮೆ ಕೇಕೆ ಹೊಡೆಯುತ್ತ ನಡೆದವನೆ ಅಟವಾಳಿಗೆಯಲ್ಲಿ ಕೂತಿದ್ದ ಯಾರನ್ನೂ ಲೆಕ್ಕಿಸದೆ ಸುಂಟರಗಾಳಿಯಂತೆ ಒಳನುಗ್ಗಿ ಹೆಣವನ್ನು ದೇವರ ಮನೆಯ ಮರುಳು ಸಿದ್ಧಪಟಗಳ ಮಗ್ಗಲು ಅಂದರೆ ಕಬ್ಬಿಣ ಪೆಟಾರಿ ಮೇಲಿಟ್ಟನು.  ಮತ್ತೊಮ್ಮೆ ಕೇಕೆ ಹಾಕಿ ಬಾಗಿಲ ಮಗ್ಗುಲಿದ್ದ ಹಾರೆ ತೆಗೆದುಕೊಂಡು ನೆಲಕ್ಕೆ ಹಾಸಲ್ಪಟ್ಟಿದ್ದ ಕಲ್ಲ ಬಂಡೆಯನ್ನು ಮೀಟತೊಡಗಿದ.  ಅಡುಗೆ ಮನೆಯಲ್ಲಿ ಪರಸ್ಪರ ಮುನಿಸಿ ಅಡುಗೆ ಮಾಡುತಲಿದ್ದ ಗೌಡನ ಹೆಂಡತಿಯೂ, ಇಬ್ಬರು ಸೊಸೆಯಿಂದಿರು ಹೌರಾರಿದ್ದೆ ತೊಟ್ಟಿಲಲ್ಲಿದ್ದ ಕೂಸನ್ನವುಚಿಕೊಂಡು ಹಾಯ್ ಎನೆ ಅಂಗಳಕ್ಕೆ ಓಡಿದರು.
ಗೌಡನ ಹುಲಿಯಂಥ ಗಂಡುಮಕ್ಕಳಿಬ್ಬರು ಅಷ್ಟೊತ್ತಿಗಾಗಲೆ ಕೈಗೂ ಬಾಯಿಗೂ ಹಚ್ಚಿದ್ದರು.  ಚಂಬು ತೆಗೆದುಕೊಂಡು ಹೋಗಿದ್ದ ಗೌಡ, ತೊಳೆದುಕೊಳ್ಳದೇ ಬಂದು ಅಯ್ಯೋ ಅಂದನು. ಅಗಸರ ಚಿಕ್ಕೀರ ಬರದಿದ್ದಲ್ಲಿ ತಂದೆಮಕ್ಕಳು ಸುರಕ್ಷಿತ ಜಾಗಕ್ಕೆ ಪಲಾಯನಗೈಯದೇ ಇರುತ್ತಿರಲಿಲ್ಲ.  ಚಿಕ್ಕೀರನ ನೇತೃತ್ವದಲ್ಲಿ ಅವರೆಲ್ಲ ಸುಸಂಘಟಿತರಾಗಿ ‘ಆಗಿದ್ದಾಗ್ಲಿ’ ಅಂತ ಒಳನುಗ್ಗಿದರು.  ಅಷ್ಟೊತ್ತಿಗಾಗಲೇ ಒಂದು ಅನುವಾದ ಬಂಡೆಯನ್ನು ಎಬ್ಬಿದ್ದ ಬೊಬ್ಬಿಲಿಪುಲಿ ಬಾಷಾನನ್ನು ತೆಕ್ಕೆ ಮುರಿಬಿದ್ದು ಹಿಡಿದು ಯಾಕೆಲೆ ಅಂತ ತಲಾ ಒಂದೊಂದೇಟು ಹಾಕಿದರು.  ಕುಡ್ದು ಗಾಂಚಾಲಿ ಮಾಡ್ತಿಯಾ ಅಂದವರೆ ಅವನನ್ನು ದರಗುಟ್ಟಿ ಅಟವಾಳಿಗೆಗೆ ಎಳೆತಂದು ಆರನೆ ನಂಬರ ಸಾಗುವಾನಿ ಚಿತ್ತಾರದ ಕಂಭಕ್ಕೆ ಕಟ್ಟಿ ನೀರೆತ್ತಿದರು.
ಬಾಷಾ ಗೌಡರ ಮನೆಯ ದೇವರ ಕೋಣೆಗೆ ಹೆಣದೊಂದಿಗೆ ನುಗ್ಗಿದ್ದು ಮತ್ತು ಅವನನ್ನು ಕಂಬಕ್ಕೆ ಕಟ್ಟಿರುವುದೂ ಎಲ್ಲ ಊರ್‍ತುಂಬ ಘಮ್ಮನೆ ಹಬ್ಬಿತು.  ಊರ ಹತ್ತು ಮೂಲೆಗಳಿಂದ ಜನ ಬಿಟ್ಟ ಬಾಣಗಳಂತೆ ಅಟವಾಳಿಗೆ ಮುಂದೆ ಕಲೆತರು.  ಪೀರಣ್ಣ ಮತ್ತು ಶಾಲಮ್ಮ ಸಹ.  ಪ್ರತಿಯೊಬ್ಬರೂ ನ್ಯಾಯಾಧೀಶರಂತೆ ತೀರ್ಪು ಕೊಡತೊಡಗಿದರು.
ಹೆಣವಿರುವ ಮನೆ ಒಳಕ್ಕೆ ಹೋಗುವ ಧೈರ್ಯವಿಲ್ಲದೆ ಅಂಗಳದಲ್ಲಿ ಗೂಟ ಬಡಿದಿರುವ ಗೌಡಿಕೆ ಕುಟುಂಬದ ಎಲ್ಲ ಸದಸ್ಯರನ್ನು ತಮಾಷೆ ದೃಷ್ಟಿಯಿಂದ ನೋಡತೊಡಗಿದರು.
ಹೆಣ ಮುಟ್ಟುವ ಧೈರ್ಯ ಬಾಷನನ್ನು ಮುಟ್ಟಿದಷ್ಟು ಸುಲಭವಾಗಿರಲಿಲ್ಲ.  ತಮ್ಮನ್ನು ಈ ಅವಸ್ಥೆಗೆ ತಂದ ಬಾಷನನ್ನು ಸಜೀವವಾಗಿ ಜಿಮಡಿ ಬಿಡುವುದೋ ಎಂದು ತರ್ಕಿಸಿದರು.  ಅವನಿಗೊಬ್ಬ ಇಂಗ್ಲೀಸು ಬಲ್ಲ ಅಣ್ಣನಿರುವುದರಿಂದ ಹಾಗೆ ಶಿಕ್ಷೆ ಕೊಡುವುದೂ ಸರಿಯಲ್ಲವೆಂದು ಯೋಚಿಸಿದರು.
ಕೊನೆಗೆ ಪೋಲೀಸರ ಸುಫರ್ದಿಗೆ ಒಪ್ಪಿಸುವುದೆಂದು ಅವರು ನಿರ್ಧರಿಸಿದಾಗ ಅಲ್ಲಿಯೇ ಮಾತೃದೇವತೆಯಂತಿದ್ದ ಶಾಲಮ್ಮ “ಅಯ್ಯೋ….ತಂದೀ ನೀವೆ ತಾಯಿ ನೀವೇ….ನೀವೇ ಶಿಕ್ಷೆ ಕೊಡ್ರಿ….ಆದ್ರೆ ಪೋಲೀಸ್ರಿಗೆ ಮಾತ್ರ ಕ್ವಡಬಾಡ್ರಿ” ಎಂದು ಗೌಡನ ಆನಿಗಾಲು ಮುಟ್ಟಿದ್ದು ಪ್ರಯೋಜನವಾಗಲಿಲ್ಲ.
“ನೀರ್‍ನಲ್ಲಿ ಮುಣುಗುದೋರ್‍ಗೆ ಚಳಿ ಏನು ಮಳೆ ಏನು” ಎಂದು ಪೀರಣ್ಣ ಶಾಲಮ್ಮಗೆ ಸಮಾಧಾನ ಹೇಳುತ್ತಿರುವಾಗಲೇ ಗೌಡನ ಹಿರಿಮಗ ಶಂಭುಲಿಂಗ ಎತ್ತಿನ ಬಂಡಿ ಕಟ್ಟಿಸಿಕೊಂಡು ಸೊಟ್ಟೂರ ಕಡೆ ಓಡಿಸಿದನು.
ದೂಪದಳ್ಳಿಯ ಸಮಸ್ತರ ಕಣ್ಣುಗಳು ಗಳಿಗೆಗೊಮ್ಮೆ ಸೆಟ್ಟೂರ ಕಡೆ ನಿಟ್ಟಿಸತೊಡಗಿದ್ದವು.  ಕೆಲವರು ಶಂಭುಲಿಂಗನನ್ನೇ ಪೋಲೀಸ್ರು ಹಿಡಿದು ಹಾಕಿರಬಹುದೆಂದು ವಾದಿಸುತ್ತಿದ್ದರೆ ಮತ್ತೆ ಕೆಲವರು ಹಂಗೆಲ್ಲ ಗೌಡ್ರ ಮಕ್ಳನ್ನ ಹಿಡ್ದು ಹಾಕ್ಲಿಕ್ಕೆ ಪೋಲೀಸ್ರು ದಡ್ರೇನಲ್ಲ….ಎಂಬುದಾಗಿ ಆಡಿಕೊಂಡರು, ಮತ್ತೊಬ್ಬ ಬಂಡಿ ಅಡಿಗೆ ಮುರಿದಿರಬಹ್ದು.  ಮಾದೇವಿಗೆ ಬಂದೇ ಬರ್‍ತಾರೆ ಎಂದು ನುಡಿದದ್ದು ಬಹಳಷ್ಟು ಮಂದಿಗೆ ಸಮಂಜಸವೆನಿಸಿತು.
ಅಂಗಳದ ತುಂಬ ನೆರೆದಿದ್ದ ಸಣ್ಣ ಜಾತರಿಯಲ್ಲಿ ಮಾತುಗಳಿಗೆ ಬರವಿರಲಿಲ್ಲ.  ಮಾತು ಮನಿ ಕೆಡಿಸ್ತು ತೂತು ಒಲೆ ಕೆಡಿಸ್ತು ಎಂಬ ಗಾದೆ ಮಾತಿನ ಪೂರ್ಣಪಾಠ ಗೊತ್ತಿದ್ದೂ ಗೌಡ್ತಿ ಅದೇ ಅಂಗಳದಲ್ಲಿ ತನ್ನ ಸೊಸೆಯಂದಿರಿಬ್ಬರ ಮೇಲೆ ಸಿಡಿಮಿಡಿ ಮಾಡುತ್ತಿದ್ದಳು.  ಬೇಡ ಅಂದರೂ ಅರು ಸಿವುಡು ಹಳೆ ಶ್ಯಾವಿಗೆ ಬಸಿದಿದ್ದೂ ಅಲ್ಲೆ;  ಪಂಚೇರ ತುಪ್ಪ ಕಾಯಿಸಿದ ಕಾರಣಕ್ಕಾಗಿ ಹಿರಿಸೊಸಿ ಮಲ್ಲವ್ವನೊಂದಿಗೆ ಜಗಳ ತೆಗೆದಿದ್ದರೆ;  ಪುಟ್ಟಿಗಟ್ಟಲೆ ಹಪ್ಪಳ ಸಂಡಿಗೆ ಕರಿದಿಟ್ಟ ಕಾರಣಕ್ಕಾಗಿ ಸಣ್ಣಸೊಸಿ ಸಿದ್ದವ್ವನ ಮೇಲೆ ಸಿಡಿಮಿಡಿ ಹಾಯ್ದಳು.  ಸಿದ್ದವ್ವಗೆ ದುಃಖ ಒತ್ತಿರಿಸಿ ಬಂದಿತು.  “ನಂಗಂಡ್ರು ಪ್ಯಾಟಿಗೆ ಓಗಿರೋ ಒತ್ತಿನಾಗ ಅಂಗಳದಲ್ಲಿ ಬಂಗುಪಡುಸ್ತೀಯಲ್ಲಾ ಅತ್ತೆವ್ವಾ” ಎಂದು ಆಕೆ ತನ್ನ ಕಣ್ಣಲ್ಲಿ ಹಳ್ಳ ತೋಡಿಕೊಂಡಳು.  “ಏನು ಮಾಡಾಕಾಂತ ಮಾಡೀರಿ ಸ್ವಲ್ಪ ಸುಮ್ಕಿರ್‍ರೆಲೇ” ಎಂದು ಗೌಡ ಸರ್ವರ ಸಮಕ್ಷಮ ಗದರಿಸುತ್ತಿರುವಾಗಲೇ ಆ ಓಣಿಯ ರಾಣಿ ಎಲ್ಲರೂ ನೋಡು ನೋಡುತ್ತಿರಲಿಕ್ಕೆ ಒಳ ಓಡಿ ಬುಟ್ತು.  ಅದರ ಲವ್ವರು, ಬ್ಯಾಡರ ಅನುಮಿಯ ಕಲ್ದಿಕೂಡ ಹತ್ತನನ ಹಿಂಬಾಲ ಅಂತ ಅದನ್ನೇ ಫಾಲೋ ಮಾಡಿತು.  ಹೆಣವಿರುವ ಮನೆ ಒಳ ಹೊಕ್ಕ ನಾಯಿಗಳನ್ನು ಅಟಕಾಯಿಸುವ ಎದೆಗಾರಿಕೆ ಅಲ್ಲಿದ್ದ ಯಾರಿಗೂ ಇರಲಿಲ್ಲ.  ಗೌಡ ಕುಟುಂಬದ ಸದಸ್ಯ ‘ಹೋ’ ಅಂತ ಅಸಹಾಯಕತೆ ಪ್ರಕಟಿಸುತ್ತಿರುವಾಗಲೇ ಅಲ್ಲಿದ್ದ ಕೆಲವು ಪ್ರೇಕ್ಷಕರು ಹ್ಹ ಹ್ಹ ಅಂತ ನಕ್ಕು ಗುಸು ಗುಸು ಮಾತು ಪ್ರಾರಂಭಿಸಿದರು.
ಹೆಣ ಗೌಡರ ದೇವರ ಮನೆಯಲ್ಲಿ ಕೂತ ಪರಿಣಾಮವೋ ಏನೋ ಈಶಾನ್ಯ ದಿಗಂತದಲ್ಲಿ ಒಂದಿಷ್ಟು ಕಪ್ಪು ಮೋಡ ಕಾಣಿಸಿಕೊಂಡಿತ್ತು.  ಅಲ್ಲಿಂದ ಕೇಳಿಬರುತ್ತಿದ್ದ ಸಬುದ ಗುಡುಗು ಇರಬಹುದೆಂದುಕೊಂಡರು ಅಲ್ಲಿ ಮಿಂಚು ಕೂಡಾ ಇಲ್ಲದಿಲ್ಲ ಅಂತ ಅಂದುಕೊಂಡರು.  ಅದನ್ನೆಲ್ಲ ನೋಡುತ್ತಿದ್ದ ಜನ, ಅದನ್ನೆಲ್ಲ ಆಲಿಸುತ್ತಿದ್ದ ಜನ, ಒಳಗೊಳಗೆ ಹೆಣ ಕೀಳಿಸಿ ಅಗಸೆಬಾಗಿಲ ಬಳಿ ಹಾಕಿಸಿದ ಗೌಡನಿಗೂ;  ಹೆಣ ಹೊತ್ತು ಕೊಂಡೊಯ್ದು ಗೌಡನ ದೇವರ ಮನೆಯಲ್ಲಿ ಹಾಕಿದ ಬಾಷನಿಗೂ ಒಳಗೊಳಗೇ ಕೃತಜ್ಞತೆ ಸೂಚಿಸಿದರು.  “ದೇವರೇ ಮಳೆ ಬರುವಮಟ ಹೆಣ ಗೌಡನ ದೇವರ ಮನೆಯಲ್ಲಿಯೇ ಇರಲಿ” ಎಂದು ಚಿಂತಗೇಡಿ ಚೀಗಪ್ಪ ಗಟ್ಟಿಯಾಗಿ ಪ್ರಾರ್ಥಿಸುತ್ತಲೇ ಸುತ್ತಮುತ್ತಲಿದ್ದವರು ನಗೆಯಾಡಿದರು.
‘ಗುಡು ಗುಡು’ ಸದ್ದು ಹತ್ತಿರವಾದಂತೆ ಜನರೆದೆಯಲ್ಲಿ ಅದುವರೆಗೆ ಬೆಳೆದು ಚಾಚಿ ನಳನಳಿಸುತ್ತಿದ್ದ ಆಶೆಯ ಕುಡಿಗಳನ್ನು ಚಿವುಟುವ ರೀತಿಯಲ್ಲಿ ಭ್ರಮನಿರಸನ ಹೇಗಾಯಿತೆಂದರೆ, ಅದು ಗುಡು ಗುಡು ಗುಡುಗಾಗಿರದೆ ಕಲ್ಲುಹಾದಿಗುಂಟ ಪೋಲೀಸರನ್ನು ಹೊತ್ತು ಬರುತ್ತಿದ್ದ ಎತ್ತಿನ ಬಂಡಿಯ ಸದ್ದು ಅದಾಗಿತ್ತು.
ಆ ಬಂಡಿ ಹತ್ತಿರವಾದಂತೆ ದೂಪದಹಳ್ಳಿಯ ಮಹಾಪ್ರಜೆಗಳ ನಸುಕು ಹರಿದು ಭಯ ಅಂಕುರಿಸಿತು.  ಅಟವಾಳಿಗೆ ಮನಯಂಗಳದಲ್ಲಿದ್ದ (ಅಂದರೆ ಅಶ್ವಥ್ ನಾರಾಯಣನಿಗೂ;  ಸುಂಕುಲಮ್ಮ ದೇವತೆಗೂ ‘ಟಗ್ ಆಫ್ ವಾರ್‍’ ನಡೆಯುತ್ತಿದ್ದ) ಮರದ ಬುಡಕ್ಕೆ ಬಂದು ನಿಂತ ಆ ಬಂಡಿಯಿಂದ ಮೊದಲು ಟಣಕ್ಕನೆ ಕುಪ್ಪಳಿಸಿದವನೆಂದರೆ ಶಂಭುಲಿಂಗ.  ಅವನು ಎಸ್ಸೆಸ್ಸೆಲ್ಸಿ ಓದುತ್ತಿದ್ದಾಗ ಲಾಂಗ್ ಜಂಪಿನಲ್ಲಿ ಒಂದು ನಕ್ಷತ್ರವನ್ನೂ ಹೈ ಜಂಪಿನಲ್ಲಿ ಎರಡು ನಕ್ಷತ್ರಗಳನ್ನು ಗಳಿಸಿದ್ದನು.  ಅವನು ಬಂಡಿಯಿಂದ ಸಬ್‌ಇನ್ಸ್‌ಪೆಟ್ರು ವನ್ನೂರಪ್ಪನನ್ನು ‘ಸೇಕೆಂಡು’ ಕೊಟ್ಟು ಇಳಿದು ಆಕಳಿಸಿ ಹೊಟ್ಟೆ ತುರಿಸಿಕೊಂಡರು.  ಅವರಿಬ್ಬರೂ ಭಯಂಕರವಾಗಿ ಹಸಿದಿದ್ದಾರೆಂದು ನೋಡಿದ ಎಂಥವರಿಗೂ ಗೊತ್ತಾಗಿಬಿಡುತ್ತಿತ್ತು.
ಇಂಥಪ್ಪ ಪೋಲೀಸರ ಪ್ರವೇಶದಿಂದ ಅಟವಾಳಿಗೆ ಮನೆಯಂಗಳ ಮೊಸಳೆ ಹೊಕ್ಕ ಹೊಂಡವಾಯಿತು.  ಏಳು ತಿಂಗಳಿಗೆ ಹುಟ್ಟಿದವರೂ, ಅಳ್ಳೆದೆಯವರೂ ಮುಕುಳಿ ಬಾಯಿ ಮುಚ್ಚಿಕೊಂಡು ಜಾಗ ಖಾಲಿ ಮಾಡಿದರು.  ಗಟ್ಟುಳ್ಳವರು ದೂರ ಸರಿದು ನಿಂತು ಕುತೂಹಲದಿಂದ ವೀಕ್ಷಿಸತೊಡಗಿದರು.  ಖಾಕಿಮಂದಿಯ ದರ್ಶನಮಾತ್ರದಿಂದ ರೇವಣ್ಣನಿಗೆ ತನ್ನ ತಳ ಸಡಲಿ ಒಂದುಕ್ಷಣ ಚುಂ ಅಂದಂಗಾಯಿತು.  ಆತನು ಇನ್ಸ್ಪೆಟ್ಟರನ್ನು ವಿನಮ್ರತಾ ಭಾವದಿಂದ ಎದಿರ್ಗೊಂಡು ಕರಿ ಕಂಬಳಿ ಗದ್ದುಗೆ ಮ್ಯಾಲೆ ಕುಂಡ್ರಿಸಿ “ಕುಲಗೆಟ್ಟು ಓದ್ವಿ ದೇವ್ರೂ” ಎಂದು ಸಾಂಪ್ರತ ಸುರುಮಾಡಿದನು.  ಬೀಡಿ, ಸಿಗರೇಟು, ಕಾಪಿ ಸಪ್ಲಯ್ ಮಾಡುವಾಗ ಉಪ್ಪುಖಾರ ಹಚ್ಚಿ, ವಗ್ಗರಣೆ ಕೊಟ್ಟು ಹೇಳಿದನು.  ಕಂಬಕ್ಕೆ ಬಿಗಿಯಲ್ಪಟ್ಟಿದ್ದ ಬಾಷನನ್ನು ಬೊಟ್ಟು ಮಾಡಿ ತೋರಿಸಿಯೇ ತೋರಿಸಿದನು.  ಎಷ್ಟು ಹೇಳಿದರೂ ದೇವರು ‘ಯಾಕ್ಷನ್’ ತೆಗೆದುಕೊಳ್ಳದೆ ಸುಮ್ಮನೆ ಮಿಕಿ ಮಿಕಿ ನೋಡುತ್ತಿದ್ದುದು ಗೌಡಗೆ ಅರ್ಥವಾಗಲಿಲ್ಲ.  ಅದನ್ನು ಗಮನಿಸಿದ ಸಂಬುಲಿಂಗ ಹೆತ್ತಾತನನ್ನು ಕರೆದು ಕಿವಿಯಲ್ಲಿ ಬಾಯಿಟ್ಟು ‘ಇಂಗಿಂಗೇ’ ಅಂತ ಹೇಳಿದನು.  ಆಗ ಆತಗೆ ಅರ್ಥವಾಯಿತು.  ಕೈಕೈ ಹಿಚುಕಿಕೊಳ್ಳುತ್ತ ವನ್ನೂರಪ್ಪನ ಕೂದಲು ಬೆಳೆದಿದ್ದ ಕಿವಿಯಲ್ಲಿ ೨೪ ಹಲ್ಲುಗಳಿರುವ ನಾತದ ಬಾಯಿ ಇಟ್ಟು “ರೊಕ್ಕ ಇರೋ ಪೆಟಾರಿ ದೇವ್ರ್‍ ಮನ್ಯಾಗೈತೆ ದೇವ್ರೂ;  ಅಲ್ಲೇ ಎಣಾ ಇರೋದ್ರಿಂದ ಮನಿ ಮಂದ್ಯೆಲ್ಲಾ ಮುಂಜಾನೆಯಿಂದ ಉಪವಾಸ ಕುಂತೀವಿ” ಅಂದನು.  “ಓಹ್, ಹಂಗೋ ವಿಷ್ಯಾ” ಅಂತ ವನ್ನೂರಪ್ಪ ಅವಾಗ್ನಿಂದ ಗೋಳು ಹೊಯ್ದುಕೊಳ್ಳುತ್ತಿದ್ದ ಶಾಲಮ್ಮ ಎಂಬ ಮುದುಕಿಯನ್ನೂ;  ಪೀರಣ್ಣ ಎಂಬ ‘ಅರ್‍ಲಿ’ ಮುದುಕನನ್ನೂ ಗದರಿಸಿ ಆಚೆ ಕಳಿಸಿದನು.  ಕಂಬಕ್ಕೆ ಅಂಟಿಕೊಂಡಂತೆ ಅರೆ ಎಚ್ಚರದಲ್ಲಿದ್ದ ಬಾಷನನ್ನು ಕೆಕ್ಕರುಗಣ್ಣಿಂದ ನೋಡಿದನು.  ಬಾಸುಂಡೆಗಳ ಗುಂಟ ರಕ್ತ ಒಸರಿ ಕಪ್ಪಗೆ ಒಣಗಿ ನಿಂತಿರುವುದನ್ನು ದೇವರು ಗಮನಿಸಿ ‘ಐಸೀ’ ಅಂದಿತು.  ಕೈಯಲ್ಲಿದ್ದ ಲಾಟಿಯನ್ನು ಸ್ಟಯ್‌ಲಾಗಿ ತಿರುವುತ್ತ ಬಾಷನ ಮುಖವನ್ನೆತ್ತುತ್ತಲೆ ಶಾಲಮ್ಮ ಅಯ್ಯೋ ನನಮಗನ್ನ ಸಾಯಿಸ್ತಾರೆ ಬರ್‍ರೆವೋ ಎಂದು ಒಮ್ಮೆಗೆ ಮುಗಿಲಿಗೆ ಮುಟ್ಟುವಂತೆ ಅರಚಗೊಡಗಿದಳು.  ಆಗ ಪಕ್ಕದಲ್ಲೇ ಇದ್ದ ಬಸ್ರಾಜ ‘ಉಶ್’ ಎಂದು ಎಚ್ಚರಿಕೆ ನೀಡದಿದ್ದಲ್ಲಿ ಆಕೆಯ ಸ್ವರ ನಿಸ್ಸಂದೇಹವಾಗಿ ತಾರಕ್ಕೇರುತ್ತಿತ್ತು.  ಎಸೈ ತನ್ನ ಕೆಂಗಣ್ಣುಗಳಿಂದ್ಲೇ ಮುದುಕಿಯ ಬಾಯಿಗೆ ಬೆಣೆ ಇಟ್ಟು ಬಾಷಾನಿಗೆ ಉಸಿರು ತಾಕುವ ಅಂತರದಲ್ಲಿ ನಿಂತು “ಸುವ್ವರ್‍ ಸ್ಟೇಷನ್ನಲ್ಲಿ ವಿಚಾರಿಸ್ಕೊಂತೀನಿ” ಎಂದು ಗುನುಗಿ ಸ್ವಸ್ಥಾನ ಸೇರಿತು.
ಮುಖ್ಯವಾಗಿ ದೇವರಿಗೆ ಮನುಷ್ಯರ ಮೇಲೆ ನಂಬಿಕೆ ಇರಲಿಲ್ಲ.  ಹೊಳೆ ದಾಟಿದ ಮೇಲೆ ಅಂಬಿಗನಿಗೆ ಮಿಂಡರಾಗೋ ಮಂದಿ ಎಲ್ಲಂದರಲ್ಲಿ ಅದರೆಂದೇ ದಕ್ಷಿಣೆ ಬಗ್ಗೆ ಖಚಿತ ನಿಲುವು ತಳೆಯಿತು.  ದಕ್ಷಿಣೆ ಮಡುಗದ ಹೊರತು ಇಚಾರಣೆಗೆ ಕಾವು ಬರುವುದಿಲ್ಲೆಂದು ಪುಟ್ಟ ಪಂಚಾಯ್ತಿ ಸುರುವಾಯ್ತು;  ಅದರಲ್ಲಿ ಗೌಡ ಕುಟುಂಬದ ಸದಸ್ಯರೂ ಕನಿಷ್ಟಬಿಲ್ಲೆಗಳೂ ಪಲ್ಗೊಂಡರು.  ಕೆಲವೇ ಮಾತುಗಳಲ್ಲಿ ಇಷ್ಟಕ್ಕೇ ಅಂತ ಕುದುರಿತು.
ಸತೊಪ ರೆವಿಎಡ ೧೬
ಹೆಣದ ಮುಕಳಿ ಕೆಳಗಿರುವ ಕಬ್ಬಿಣ ಪೆಟಾರಿ ಬಾಯ್ತೆರೆದು ರೊಕ್ಕ ತರುವುದು ಹೇಗೆಂಬ ಪ್ರಶ್ನೆಯನ್ನು ಗೌಡ ಸಭೆ ಮುಂದಿಟ್ಟನು.  “ಈಗ ಸುದಾರಿಸ್ಕಂಡು ಉದ್ರಿ ಕೆಲ್ಸಮಾಡಿ ಓಗಿ;  ಎಲ್ಡು ಮೂರ್‍ದಿನ ಬಿಟ್ಟು ದಕ್ಷಿಣೆ ಕಳುಸ್ತೀನಿ” ಅಂತ ಅಂಜುತ್ತಲೆ ನುಡಿದು ನೋಡಿದ ಗೌಡ.  ಅದಕ್ಕೆ ವನ್ನೂರಪ್ಪ ’ಇದೇನು ಬಡ್ಡಿಯಾಪಾರ ಅಂದ್ಕೆಂಡಿದೀಯಾ” ಅಂತಂದ.  ಇದೇನು ಪಜೀತಿಗೆ ಬಂತು ಅಂತ ಗೌಡ ಮಕ್ಳಿಗೆ ತಗಂಬರ್‍ರೆಲೇ ಅಂದದಕ್ಕೆ ಅವ್ರು ಓಗಲ್ಲಾಂದ್ರೆ ಓಗಲ್ಲಾ ಅಂತ ಅಂದುಬುಟ್ಟವು.  ಅದರ ಬೇರೆ ನಿಂಗವ್ವ “ಅಯ್ಯೋ ಸಾರೂ ನಾನೂ ಮಾಡಿಟ್ಟ ಅಡ್ಗೆ ಏನಾಗೈತೋ ಏನೋ ನಾಯಿಗಳು ಬೇರೆ ವಕ್ಕಂಬಿಟ್ಟವೆ” ಎಂದು ನುಡಿಯುತ್ತಲೆ ಮಲ್ಲವ್ವ ತನ್ನ ಮಗ್ಗುಲಿದ್ದ ಸಿದ್ದವ್ವಗೆ “ಅತ್ತೆ ಅಲ್ಲ ಅದು ನಾಯಿಮುಂಡೇದು” ಅಂದಳು.  ಸ್ವಲ್ಪ ಹೊತ್ತು ಹಾಗೂ ಹೀಗೂ ಮಾತಾಡಿದ ಮೇಲೆ ರಾಷ್ಟ್ರಪ್ರಶಸ್ತಿಗೆ ಅರ್ಹರಾದಂತಹ ಪೀಸಿಗಳಿಬ್ಬರನ್ನು ಒಳಗೆ ಕಳಿಸುವುದೆಂದು ಎಸೈ ನಿರ್ಧರಿಸಿದ.  ಗೌಡಗೇಕೋ ದೇವರ ಮಾತು ಇಷ್ಟವಾದಂತೆ ಕಾಣಲಿಲ್ಲ.  “ಆದ್ರು ಪೋಲೀಸ್ನೋರೆಂದ ಮೇಲೆ ನಂಬಿಕೆ ಇಡ್ಬೇಕು” ಎಂದು ಸಂಬುಲಿಂಗ ಹಿತವಚನ ಜುಡಿದ ” ಪೋಲೀಸಪ್ನೋರು ಯಾವ ಜಾತ್ಯೋರು” ಎಂದು ನಿಂಗವ್ವ ಅನುಮಾನ ಪ್ರಕಟಿಸುತ್ತಲೆ ಗೌಡಗೆ ಸಿಟ್ಟು ಬಂತು.  “ಸುಮ್ಕಿರಬೇ, ನಾಯೀ, ಎಣಾ ಹೊಕ್ಕ ಮನಿಗೆ ಜಾತಿ ಬ್ಯಾರೆ ಕೇಡು?” ಎಂದು ಗದರಿಸುತ್ತ ಉಡುದಾರಕ್ಕೆ ನೇತಾಡುತ್ತಿದ್ದ ಬೀಗದ ಕೈ ಗೊಂಚಲು ತೆಗೆದು ಬಸ್ರಾಜನ ಕೈಕೊಡುವ ಮೊದಲು ಹೀಗೆ ಹೇಳಿದನು  “ಕುಡುಗೋಲು, ಕುಂಬ್ಳ ಕಾಯಿ ನಿಂ ಕೈಗೇ ಕೊಡ್ತೀವಿ ಅಡ್ಡಾರ ಅಚ್ರೀ… ಉದ್ದುಕಾರ ಅಚ್ರಿ” ಅದಕ್ಕೆ ಉತ್ತರವಾಗಿ ನರ್‍ಸಪ್ಪ ಎಂಬ ಪೀಸಿ “ತಾಯಿ ಮಲಿ ಆಲು ಕುಡ್ದೋವೆ ಉಳ್ಯಾಕಿಲ್ಲ.  ವಿಷ ಕುಡ್ದೋವು ಇನ್ನೆಂಗೆ ಬದುಕ್ತಾವೆ” ಎಂದು ಅಂದಿತು.
ಆಎರಡು ಕನಿಷ್ಟ ಬಿಲ್ಲೆಗಳು ತಮ್ಮ ಸವಬರ ಕಡೆಗೂ ಗೌಡರ ಕಡೆಗೂ ಒಮ್ಮೊಮ್ಮೆ ನೋಡಿ ಬೆಳ್ಳಿ ರೂಪೈ ಜಡಿದಿದ್ದ ಹೊಸ್ತಿಲು ದಾಟಿ ಭೀಕರ ಮೌನ ಕವಿದಿದ್ದ ಐವತ್ತು ಕಂಬದ ಮನೆ ಪ್ರವೇಶಿಸಿದವು.
ಮನೆಯ ವಾಸ್ತುಶಿಲ್ಪದ ಬಗ್ಗೆ ಹೆಮ್ಮೆ ಯಿಂದ ನೋಡುತ್ತ ಒಳನಡೆದವು.  ನುಗ್ಗಿ ನಡೆದು ನುಗ್ಗಿ ಹೋದಂತೆ ಅವುಗಳ ಮೂಗಿಗೆ ವಿಚಿತ್ರವೂ, ಸಹ್ಯವಾದ ವಾಸನೆ ಕುಟುಕತೊಡಗಿತು.  ಅದಕ್ಕೆ ಅವರು ಕೇರೇ ಮಾಡಲಿಲ್ಲ.
“ಎಷ್ಟು ವರ್ಷ ಸರ್‍ವೀಸು ಮಾಡಿದ್ರೂ ಇಂಥದೊಂದು ಮನಿಕಟ್ಟೇವು ಕಣಣ್ಣಾ” ಎಂದು ನರ್‍ಸಪ್ಪ ನಿಟ್ಟುಸಿರು ಬಿಟ್ಟನು.
“ಐದಾರು ತಿಂಗ್ಳಿಂದ ನನ್ನೇಣ್ತಿ ಸೀರೆ ಸೀರೆ ಅಂತ ಬಡಕಂತವ್ಳೆ.  ಕೊಡಿಸ್ಲಿಕ್ಕಾಗ್ತಾ ಇಲ್ಲ” ಎಂದು ಬಾಯಲ್ಲಿದ್ದ ಬೀಡಿಯನ್ನು ಪಡಸಾಲೆಯ ಚಿತ್ತಾರದ ಕಂಬಕ್ಕೆ ತಿಕ್ಕಿದನು.
ಅಷ್ಟೊತ್ತಿಗೆ ಅವರು ಪಡ್ಸಾಲೆ ದಾಡಿದ್ದರು.
ದುರ್ವಾಸನೆ ದಟ್ಟವಾಗಿ ಮೂಗಿಗೆ ರಾಚತೊಡಗಿತ್ತು.
ಅಡುಗೆಮನೆ ಬಾಕಲು ಮೇಲೆ ಒಣಮಾವಿನೆಲೆ ತೋರಣ ಗಾಳಿಗೆ ಕರುಕು ಕರುಕು ಸದ್ದು ಮಾಡುತ್ತಿತ್ತು.  ಹಂಗೆ ಒಳಗೆ ಕಾಲು ಮಡಗಿದರು.
ಆ ಕನಿಷ್ಟ ಬಿಲ್ಲೆಗಳಿಗೆ ಗೌಡರ ಅಡುಗೆ ಮನೆ ನಳಚಕ್ರವರ್ತಿಯ ಅರಮನೆಯಂತೆ ಕಂಗೊಳಿಸಿತು, ತಪಾಲೆಯಲ್ಲಿ ಬಂಗಾರಕಡ್ಡಿಯ ಅನ್ನ;  ಘಮಾಡಿಸುತ್ತಿರುವ ಸಾಂಬಾರು;  ಬಿದಿರು ಪುಟ್ಟಿಯಲ್ಲಿ ಹಪ್ಪಳ ಸಂಡಿಗೆ;  ಥಾಲಿಯಲ್ಲಿ ತುಪ್ಪ, ಉಪ್ಪಿನಕಾಯಿ ಇಂಥಪ್ಪ ಅನೇಕ ದಿನಿಸುಗಳು ಕನಿಷ್ಟ ಬಿಲ್ಲೆಗಳ ಚಿತ್ತವನ್ನು (ವಿಶ್ವಾಮಿತ್ರನ ಘನಘೋರ ತಪಸ್ಸನ್ನು ಇಂದ್ರನಗರಿಯ ತ್ರಿಪುರ ಸುಂದರಿ ಮೇನಕಾ ತನ್ನ ಒನಪು ವಯ್ಯಾರದಿಂದ ಹದಗೆಡಿಸಿದಂತೆ) ಚಂಚಲ ಮಾಡಿದವು.  ಮೊದಲೇ ಅವು ಬೆಳಗಿನಿಮದ ಹೊಟ್ಟೆಗೆ ಒಂದ್ಹನಿ ನೀರು ಸಹಾ ಹಾಕಿರಲಿಲ್ಲ.  ‘ಡ್ಯೂಟಿ ಈಸ್ ಗಾಡ್’ ಎಂಬ ತತ್ವನೇಮದ ಎಸೈ ವನ್ನೂರಪ್ಪ ಅವುಗಳನ್ನು ಹಂಗೇ ಹೊಂಡಿಸಿಕೊಂಡು ಬಂದಿದ್ದ.  ಆದ್ದರಿಂದಾಗಿ ಅವುಗಳ ಬಾಯಲ್ಲಿ ಜೊಲ್ಲು ಹುಲುಲಿ ಹಳ್ಳದೋಪಾದಿಯಲ್ಲಿ ಸಡನ್ನಾಗಿ ಹರಿಯತೊಡಗಿದ್ದು ಅಚ್ಚರಿಯ ಸಂಗತಿಯೇನಲ್ಲ.
“ಅಣ್ಣೋ ವಟ್ಟೆ ಅಸ್ತದೆ….ಮೊದ್ಲು ಉಂಡುಬಿಡಾಣು” ಎಂದು ನರಸಪ್ಪ ಪರಾವರ್ತಿತ ಪ್ರತಿಕ್ರಿಯೆಗೆ ಒಳಪಟ್ಟು ನುಡಿದುಬಿಟ್ಟನು.  ಸೀನಿಯರ್‍ ಮೋಸ್ಟ್ ಬಸ್ರಾಜಂದೂ ಅದೇ ಪರಿಸ್ಥಿತಿಯಾದ್ದರಿಂದ ಆ ಬೇಡಿಕೆಯನ್ನು ತಳ್ಳಿಹಾಕಲಿಲ್ಲ.  ತಡ ಮಾಡದೆ ಅವರಿಬ್ಬರು ಒಲೆ ಮುಂದೆ ಎಲ್ಡು ತಟ್ಟೆ ಹಾಕ್ಕೊಂಡು ಬೇಕು ಬೇಕಾದ್ದು ನೀಡಿಕೊಂಡು ಉಮಡುಬಿಟ್ಟರು.  ನಂತರ ಜೀರಿಗೆ ಡಬ್ಬಿ ಜಾಲಾಡಿ ಸಿಕ್ಕ ನೋಟುಗಳನ್ನು ಹಂಚಿಕೊಂಡರು.  ಆಗ ಪೂರ್ಣ ಚಂದ್ರಮನಂತೆ ಕಂಗೊಳಿಸತೊಡಗಿದ ತಂತಮ್ಮ ಮುಖಗಳೊಂದಿಗೆ ದೇವರಮನೆ ಪ್ರವೇಶಿಸಿದರು.
ಕಬ್ಬಿಣ ಪೆಟಾರಿ ಮೇಲೆ ಕಳೇಬರ ವಿರಾಜಮಾನವಾಗಿತ್ತು.  ಡೊಂಕು ದೇಹದ ಅದು ಕೊಳೆತ ರಸವನ್ನು ಶ್ರಮಿಸುತ್ತಿತ್ತು.  ಅವರ ಸರವೀಸಿನಲ್ಲಿ ಎಂಥೆಂಥ ಹೆಣಗಳನ್ನು ನೋಡಿರುವರು, ಕಾದಿರುವರು;  ಆದರೆ ಈ ಹೆಣದ ವಿಶಿಷ್ಟ ಪರ್ಸನಾಲಿಟಿ ಅವರಿಗೆ ಸೋಜಿಗವಾಗಿ ಕಂಡಿತು.  ನೋಡಿದ ಕೂಡಲೆ ಉಂಡದ್ದೆಲ್ಲ ಗಂಟಲಮಟ ಉಕ್ಕಿ ಮತ್ತೆ ವಾಪಸಾಯಿತು.  ಗೋಡೆಯ ತುಂಬ ಬಡಿಯಲ್ಪಟ್ಟಿದ್ದ ಮುವತ್ಮೂರ ಕೋಟಿ ದೇವತೆಗಳಿಗೊಮಗಮೆ ನಮಸ್ಕಾರ ಮಾಡಿ ದೈರ್ಯ ತಂದುಕೊಮಡು ಹೆಣಕ್ಕೆ ಕೈ ಹಚ್ಚಿ ಪೆಟಾರಿ ಮೇಲಿಂದ ಅದನ್ನು ಕೆಳಕ್ಕಿಳಿಸಿದರು.  ಬಸ್ರಾಜು ಗೊಂಚಲಲ್ಲಿದ್ದ ಕೀ ಎಸಳುಗಳಿಂದ ಕ್ಷಣಾರ್ಧದಲ್ಲಿ ಬೀಗ ತೆಗೆದು ಓಪನ್ನು ಮಾಡಿದ.  ಒಂದು ಸುಂದರವಾದ ಪ್ರಪಂಚವನ್ನು ಆ ಪೆಟಾರಿಯೊಳಗೆ ಗೌಡ ಬಚ್ಚಿಟ್ಟಿರುವಂತೆ ಅವರಿಗೆ ಕಂಡಿತು.  ಆಸೆಗಣ್ಣುಗಳಿಂದ ಬೆದರಿದರು.  ರಂಡೆಮುಂಡೆ ಮದುವೆಯಲ್ಲಿ ಉಂಡವನೆ ಜಾಣ ಅಂತ ಅವು ಅವಕಾಶವನ್ನು ಕಾಲಿಂದ ಒದೆಯಲಿಲ್ಲ.  ಕೆಲವು ನೂರರ ನೋಟುಗಳನ್ನು ಎಕ್ಕಿ ತಲಾ ಹಂಚಿಕೊಮಡು ಡ್ರಾಯರು ಜೇಬಿನಲ್ಲಿಟ್ಟುಕೊಂಡರು.  ಇನ್ನೂ ಕೆಳಗಿದ್ದ ಪುಟ್ಟ ಪೆಟ್ಟಿಗೆ ಅವರ ಇಚ್ಫಾಶಕ್ತಿಗೆ ಸವಾಲು ಹಾಕಿತು.  ಚಾಣಾಕ್ಷಮತಿಯೂ;  ಕರಕುಶಲಿಯೂ ಆದ ಬಸ್ರಾಜ ‘ಓಂ ನಮಃ ಶಿವಾಯ’ ಅನ್ನುವಷ್ಟರಲ್ಲಿ ಅದನ್ನು ತೆರೆದನು.  ಅದರಲ್ಲಿ ಕೆಲವು ಚಿನ್ನದ ಸರಗಳಿದ್ದವು.  ಒಂದುಕೈ ನೋಡಿಕೊಮಡೇ ಬಿಡೋಣ ಅಂತ ಅವರಿಗೆ ಅನ್ನಿಸಿತು.  ಸಾಎಬ್ರು ಜೊತೆ ಹಂಚಿಕೊಳ್ಳೋ ಜವಾಬ್ದಾರಿ ನಂಗಿರಲಿ ಎಂದು ನರ್‍ಸಪ್ಪ ಆಶ್ವಾಸನೆ ಕೊಟ್ಟ ನಂತರವೇ ಬಸ್ರಾಜ ಚಿನ್ನದ ಸರಗಳನ್ನು ಎತ್ತಿ ಟೋಪಿ ಕೆಳಗಡೆ ಅಡಗಿಸಿಟ್ಟನು.  ನಂತರ ಗೌಡ ಹೇಳಿದ್ದ ಇನ್ನೂರು ರೂಪಾಯಿಗಳನ್ನು ತೆಗೆದುಕೊಮಡು ಕಬ್ಬಿಣ ಪೆಟಾರಿ ಭದ್ರಪಡಿಸಿ ಹೊರ ಹೊರಡುವ ಮೊದಲು ಆ ಹೆಣಕ್ಕೆ ಕೈ ಮುಗಿಯುವುದನ್ನು ಮರೆಯಲಿಲ್ಲ.
ಹೊರಗೆ ಬರುತ್ತಲೆ ಬಸ್ರಾಜ ಕೈಗೊಂಚಲವನ್ನು ಗೌಡನ ಕೈಗೆ ಕೊಡುತ್ತ “ತಕ್ಕಳ್ರಿ ಗೌಡ್ರೆ…. ನಂಬಿಕೆ ಮುಕ್ಯ-ನಮ್ಮಿಬ್ರನ್ನ ಚೆಕ್‌ಮಾಡಿ ಬಿಡ್ರಿ” ಎಂದನು.  ಗೌಡ ಅದಕ್ಕೆ “ಅಯ್ಯೋ ಇರ್‍ಲಿಬಿಡ್ರಿ…. ಪೊಲೀಸ್ರ ಮೇಲೆ ಇಸ್ವಾಸ ಇರ್ಲಿಲ್ಲಾಂದ್ರೆ ಆ ದೇವ್ರು ಮೆಚ್ತಾನಾ” ಅಂದನು.
ಮರೆಯಿಂದ ಗೌಡರ ಕೈಯಿಂದ ಇನ್ನೂರು ರೂಪಾಯಿ ಇಸಿದುಕೊಂಡ ನಂತರ ಎಸೈ ವನ್ನೂರಪ್ಪ ತನಿಖೆ ಶುರುಮಾಡಿದ.  ಬಾಷನನ್ನು ಕಂಬದಿಂದ ಬಿಚ್ಚಿ ಅವನ ಮುಕುಳಿ ಮ್ಯಾಲೆ ಎರಡೇಟು ಮಡಗಿ ಕಳ್ಳರ್‍ಯಾಸ್ಕಲ್ ಅಂದು ನಿನ್ನ ಠೇಷಣ್ಣಿನಲ್ಲಿ ಇಚಾರಿಸ್ಕಂತೀನಿ ನಡೀ ಅಂದ.  ಶಾಲಮ್ಮ ಇನ್ಸಪೆಟ್ರ ಪಾದಗಳ ಮೇಲೆ ಆಕ್ರಮಣ ನಡೆಸಿ ತಳ್ಳಿಸಿಕೊಂಡಳು.  ಗೌಡರಿಗೆ ಧೈರ್ಯ ಹೇಳಿ ವನ್ನೂರಪ್ಪ ಬಾಷನನ್ನು ಬಂಡಿಗೆ ಹಾಕಿಸಿಕೊಂಡು ತಾನೂ ಏರಿದನು.
-೫-
ಅಂಬಳಿಯಿಂದ ಮನೆಮಾಡಿಗರು ಬಂದು ಗೌಡರ ಮನೆಯಲ್ಲಿದ್ದ ಹೆಣವನ್ನು ಊರ ಹೊರಗೆ ಕಟ್ರಮ್ಮನ ಹಳ್ಳದಲ್ಲಿ ಎಸೆದು ಕನ್ನೀರಪ್ಪನ ಬಾವಿಯಲ್ಲಿ ‘ಸಾನಾ’ ಮಾಡಿ ‘ಕೊಡ್ರಿ ನೂರ್‍ರುಪಾಯಿ’ ಎಂದು ಗೌಡಗೆ ಎರಡು ಮಾರು ದೂರದಲ್ಲಿ ನಿಂತರು.
“ನೀವು ನಮ್ಗೆ ಬಾಕಿ ಕೊಡ್ಬೇಕಲ್ಲ…. ಅದ್ರಾಗ ಮುರುಕಂತೀನ್ರಲೇ” ಎಂದ ಗೌಡ.
ಇದರಿಂದ ಮಾದಿಗರಿಗೆ ಎಲ್ಲಿಲ್ಲದ ಸಿಟ್ಟು ಬಂತು.  ‘ಅದ್ಯಾಕ ಹಂಗಂತೀರಿ…ಗೌಡ್ರೆ-ವ್ವಾದ ಸುಗ್ಯಾಗ ಬಡ್ಡೀ ಅಸ್ಲು ಚುಕ್ತಾ ಮಾಡೀವಿ’ ಎಂದು ಮಾಯ ಹೇಳಿದ.
ಆಗಲೆ ‘ಸಾನಾ’ ಮಾಡಿ ಪೂಜೆ ಮಾಡಿಕೊಂಡು ಮೈ ತುಂಬ ಇಬ್ಬತ್ತಿ ಹಚ್ಚಿಕೊಂಡಿದ್ದ ಗೌಡ ತನ್ನ ಬೋಡುತಲೆಯನ್ನು ತುರಿಸೇ ತುರಿಸಿದ.  “ನೀವು ನಂಮನೆ ದೇವ್ರಾಣ್ಯಾಗೂ ಕೊಟ್ಟಿಲ್ಲ….ನಾನು ಇಸ್ಕಂಡಿಲಲ” ಎಂದು ಗೌಡ ಅಸಾಧಾರಣವಾಗಿ ಗುಡುಗಿದ.
ಆಗ ಎಲ್ಲರಿಗೆ ಸಿಟ್ಟು ಬಂತು.  “ಗೌಡಾ ನಿಂಬಾಯಾಗಿರೋದು ನಾಲ್ಗೆ ಅಲ್ಲ…. ಅದು ಕೆರದ ಅಟ್ಟೆ…. ಅದೆಲ್ಲ ಕಟ್ಟಿಟ್ಟು ಮಾತಿನಪ್ರಕಾರ ನೂರ್‍ರುಪಾಯಿ ಕೊಟ್ರೆ ಸರಿ… ಇಲ್ಲಾಂದ್ರೆ” ಎಂದು ಯಃಕಶ್ಚಿತ್ ಮಾದಿಗನೊಬ್ಬ ನುಡಿದದ್ದು ಕೇಳಿ ಗೌಡ ಅಕ್ಕ ಪಕ್ಕ ನೋಡಿದ.
“ಏನ್ರಲೇ ಮಾಡಿಗ್‌ಸೂಳ್ಯಾಮಕ್ಳಾ.  ಬಾಯಿಗ್ ಬಂದಂಗ ಮಾತಾಡ್ತೀರಿ…. ಕೊಡ್ಲಿಲ್ಲಾ ಅಂದ್ರೆ ಏನ್ರಲೆ ಮಾಡ್ತೀರಿ” ಎಂದು ರೋಫ್ ಹಾಕಿದ.
“ನೀನು ಯಾರಿಗೆ ಉಟ್ಟಿದೀಯಂತ ನೆಪ್‌ಮಾಡಿಕ್ಯಾ… ಕೊಡ್ದಿದ್ರೆ ಆ ಎಣಾ ಒತ್ಗಂಡು ಬಂದು ನಿಂಅಡ್ಗೆ ಮನ್ಯಾಗ ಆಕಿ ಓಕ್ಕೀವಿ… ಇಂಗೇ ಆಟ ಆಡ್ತಿರ್‍ರಿ” ಅಂದ ಇನ್ನೊಬ್ಬ ಮಾಯಾ.
ಮಾಯಾನ ಮಾತಿಗೆ ಹೆದರಿದ ಗೌಡ ಕೊಟ್ಟು ಕಳಿಸಿದರಾಯಿತೆಂದು ನಿರ್ಧರಿಸಿ ಸೊಂಟದ ಕೀಗೊಂಚಲನ್ನು ಬಿಚ್ಚುತ್ತ ಒಳನಡೆದ.  ಮನೆ ಬಳಿದು ಸಾರಿಸುತ್ತಿದ್ದವರಿಗೆ ಸಲಹೆಗಳನ್ನು ನೀಡುತ್ತ ದೇವರ ಮನೆ ಪ್ರವೇಶಿಸಿ ‘ಸಿವಸಿವಾ’ ಅಂತ ಪೆಟಾರಿಯ ಬೀಗ ತೆರಿಯುತ್ತಲೆ ಎದೆ ಧಸಕ್ಕೆಂದಿತು.  ಚಿಲ್ಲರೆ ಪಲ್ಲರೆ ಬಿಟ್ಟರೆ ಗಟ್ಟಿ ನೋಟುಗಳೊಂದೂ ಅಲ್ಲಿಲ್ಲ.  ಸಣ್ಣ ಪೆಟ್ಟಿಗೆಯಲ್ಲಿ ಚಿನ್ನ ಆಭರಣಗಳೊಂದೂ ಇಲ್ಲ.
“ಅಯ್ಯೋ” ಅಂತ ಗೌಡನ ಕೌರವ ಧ್ವನಿ ಮನೆಯ ಪ್ರತಿ ತೊಲೆ ಜಂತಿಗಳಿಗೆ ತಾಕಿತು.  ಬಳಿಯುತ್ತಿದ್ದ ನಿಂಗವ್ವನೂ;  ಮತ್ತಿತರೇ ಸದಸ್ಯರೂ ರೊಯ್ಯನೆ ಬಂದು ದೇವರ ಕೋಣೆಯಲ್ಲಿ ಜಾತರಿ ಸೇರಿದರು.  ಧ್ವನಿ ಜೊತೆಗೆ ಧ್ವನಿ ಸೇರಿತು.  ಆ ಸಣ್ಣ ರೂಮು ಧ್ವನಿಯ ಕಾಶಿಯಾಯಿತು.  ಎಲ್ಲರ ಕಣ್ಣುಗಳಿಂದ ಗಂಗೆ ಪುತುಪುತನೆ ಉದುರಿದಳು.
ಗೌಡ ತನ್ನ ಹೆಂಡತಿಯನ್ನು ಸಾಪಳಿಸಿದನು.
ಹೆಂಡತಿ ನಿಂಗವ್ವ ಸೊಸಿಯರನ್ನು ಸಾಪಳಿಸಿದಳು.
ಸೊಸಿಯರಾದ ಮಲ್ಲವ್ವ;  ಸಿದ್ದವ್ವರು ತಂತಮ್ಮ ಗಂಡಂದಿರನ್ನು ತರಾಟೆ ತೆಗೆದುಕೊಂಡರು.  ಕೊನೆಗೆ ಎಲ್ಲರ ಧ್ವನಿಗಳು ಪೊಲೀಸರ ಕಡೆಗೇ ಮೇಳವಿಸಿದವು.
ಪೊಲೀಸರು ತಮ್ಮ ಮೆನಯ ಸರ್ವಸ್ವವನ್ನು ಕದ್ದೊಯ್ದಿದ್ದಾರೆ…. ಇದನ್ನು ಖಚಿತವಾಗಿ ಹೇಳುವ ಧೈರ್ಯ ಗೌಡಗೆ ಇರಲಿಲ್ಲ.  ಹೆಣ ಹರಲು ಬಂದಿದ ಅಂಬಳಿ ಮಾದಿಗರೇ ಯಾಕೆ ಈ ಕೆಲಸ ಮಾಡಿರಬಾರದೆಂದು ಸಂಬ್ಲಿಂಗ ಅನುಮಾನಿಸಿದ.  ಕೇಳಿಯೇ ಬಿಡುವುದೆಂದು ನಿರ್ಧರಿಸಿ ಗೌಡ ಹೊರಗಡೆ ಬಾಗಿಲಾಚೆ ಕುಕ್ಕುರುಗಾಲಿಲೆ ಕುಂತು ಗಣೇಶ ಸೇದುತ್ತಿದ್ದ ಮಾಡಿಗರೆದುರು ಗುಡುಗಿದ.
ಮೊದಮೊದಲು ಗೌಡ ಮಾಡಿದ ಆರೋಪದಿಂದ ಹೌಹಾರಿದರಾದರೂ ಮರು ಕ್ಷಣ ಚೇತರಿಸಿಕೊಂಡು ಕಚ್ಚ ಬಿಗಿದು ನಿಂತರು.  “ಇಂಥ ಮಾತಾಡೋಕೆ ಮನ್ಸಾದ್ರೂ ಎಂಗ್ ಬಂತ್ರೀ ನಿಮ್ಗೆ… ನಂಗೌಡ್ರೂ ಅಂತ ಸುಮ್ಕೆ ಬಿಟ್ಟೀವಿ… ಬ್ಯಾರೋರು ಆಡಿದ್ರೆ ಅವ್ರ ನಾಲ್ಗೆ… ಸೀಳ್ತಿದ್ವಿ” ಎಂದು ಕತಕತ ಕುದ್ದ ಎಲ್ಲ.
“ರೊಕ್ಕ ಕೊಡಾಕಾಕತಂತ ಈ ನಾಟ್ಕ ಆಡಾಕತ್ತೀರಿ…. ನಿಮ್ಮಾಟ ನಮ್ಮತ್ರ ನಡಿಯಾಕಿಲ್ಲ…. ಕೊಡೋದು ಕೊಟ್ಟು ಮಾತಾಡ್ರಿ” ಎಂಊದ ಮಾಯ ರೆಟ್ಟೆ ಏರಿಸಿದ.
ಕಂಪ್ಲಿಂಟು ಕೊಡ್ತೀವಂತ ಗೌಡ ಬೆದರಿಸಿದ್ದು ಪ್ರಯೋಜನಕ್ಕೆ ಬರಲಿಲ್ಲ.  ರೊಕ್ಕ ಕೊಡ್ರೆಂದು ಟಾಂಟಾಂ ಧ್ವನಿ ತೆಗೆದ.  ಆ ಧ್ವನಿಗೆ ಅಕ್ಕಪಕ್ಕದವರು ಗೌಡನ ಮನೆಯಂಗಳಕ್ಕೆ ಹರಿದರು.  ಏನೇನು ನಡೆದಿದೆ ಅಂತ ಸೂಕ್ಷ್ಮವಾಗಿ ಗಮನಿಸಿದರು.
ಗೌಡ ಬೀಗದ ಕೈ ಕೊಟ್ಟಿದ್ದ ಪೊಲೀಸ್ರ ಕೈಗೆ;  ಅವ್ರೇ ಏನೋ ಮಾಡಿರಬೇಕೆಂದು ಕೆಲವರು ವಾದಿಸಿದರು.  ಆ ವಾದ ಗೌಡನ ತಳವನ್ನು ಕಟುಕಿತು.  ಆದರೂ ಆತ ಒಪ್ಪಿಕೊಳ್ಳಲು ತಯಾರಿರಲಿಲ್ಲ.  ಹೇಗಾದರೂ ಮಾಡಿ ಮೊದಲು ನೂರ್‍ರುಪಾಯಿ ಉಳಿಸಿಕೊಳ್ಳಬೇಕೆಂದು ಬಗೆದ.  ಅವನ ಮಾತಿಗೆ ಮಾದಿಗರು ಜುಮ್ಮೆನ್ನಲಿಲ್ಲ.  ಹೆಣ ಹೊತ್ತುಕೊಂಡು ಅಟವಾಳಿಗೆ ಮನೆಯ ಅಡುಗೆ ಮನೆಯಲ್ಲಿ ಎಸೆವುದಾಗಿ ಘಂಟಾ ಘೋಷವಾಗಿ ಸಾರಿ ಅವರು ಕಟ್ರಮ್ಮನಳ್ಳದ ಕಡೆ ನಡೆದರು.
ಹೆಣವನ್ನು ಹೊತ್ತು ತರಲು ಅವರು ಹೇಸಲಾರರೆಂದು ಯೋಚಿಸಿ ನಿಂಗವ್ವ ಪರಿಪರಿಯಾಗಿ ಗಂಡಗೆ ಬುದ್ಧಿ ಹೇಳಿದಳು.  ಆಗ ಮಣಿದು ಗೌಡ ಮಾದಿಗರನ್ನು ಕರೆತರಲು ಸಂಬ್ಲಿಂಗನನ್ನು ಹಳ್ಳದ ಕಡೆ ಓಡಿಸಿದನು.
ಚಾವತ್ತಿನ ನಂತರ ಸಂಬ್ಲಿಂಗನ ಕೋರಿಕೆಗೆ ಓಗೊಟ್ಟು ಮಾದಿಗರು ಮರಳಿ ಬಂದರು.  ಅವರನ್ನು ಇಡೀ ಓಣಿಯ ಹಿರಿಯರು ಸಮಾಧಾನಪಡಿಸಬೇಕಾಯಿತು.    ಸಿಟ್ಟಿನಿಂದ ಕ್ರುದ್ಧರಾಗಿದ್ದ ಮಾದಿಗರು ‘ಗೌಡ ತಮ್ಮನ್ನು ಕಳ್ಳರೆಂದ ತಪ್ಪಿಗೆ ತಪ್ಪುದಂಡ ಕಟ್ಟಿಕೊಡಬೇಕೆಂದು’ ವಾದಿಸಿದರು.  ನೂರರ ಮೇಲೆ ಐದು ಜಾಸ್ತಿ ಕೊಡಬೇಕೆಂದು ಹಿರಿಯರು ತೀರ್ಮಾನ ನೀಡಿದರು.  ಆಗ ಬೇರೆ ದಾರಿ ಕಾಣದೆ ಗೌಡ ಮೂಲೆ ಮುರುಕಟ್ಟಿನಲ್ಲಿದ್ದ ಚಿಲ್ಲರೆ ಪಲ್ಲರೆ ಕೂಡಿಸಿದಾಗ ಒಂದುನೂರಾ ನಾಲ್ಕು ರೂಪಾಯಿ ಎಂಬತ್ತು ಪೈಸೆ ಆಯಿತು.  ಇಪ್ಪತ್ತು ಪೈ ಕಡಿಮೆ ತೆಗೆದುಕೊಳ್ಳಲು ಮಾದಿಗರು ನಿರಾಕರಿಸಿದ ಮೇಲೆ ಮೂಲಿಮನಿ ಈರಣ್ಣನ ಹತ್ತಿರ ಹತ್ತು ಪೈಸೆಯ ಎರಡು ಚೂರುಗಳನ್ನು ಇಸಿದಕೊಟ್ಟು ಅವರನ್ನು ಸಾಗುಹಾಕಿದರು.
ಇಡೀ ಅಡವಾಳಿಗೆ ಮನೆ ಎಂಬೋ ಮನೆ ಶೋಕಸಾಗರದಲ್ಲಿ ಕೊಚ್ಚಿ ಹೋಗತೊಡಗಿತು.  ತನ್ನ ಹಿರೇಮಗ ಹೊಲದಲ್ಲಿ ಹಾವು ಕಡಿದು ಸತ್ತಾಗ ಇಷ್ಟು ದುಃಖ ಮಾಡಿರಲಿಲ್ಲ ಗೌಡ.  ಹೊಟ್ಟೆ ಬಟ್ಟೆ ಕಟ್ಟಿ ಸಂಪಾದಿಸಿದ್ದು ಹೋಯ್ತೆಂದರೆ ಎಂಥವರಿಗೂ ದುಃಖವಾಗುವುದು ಸಹಜ.  ಇದು ಪೊಲೀಸರು ಮಾಡಿರುವ ಕೆಲಸವೆಂದು ಮೊಲೆ ತಿನ್ನುವ ಕಂದಮ್ಮ ಸಹ ಸುಲಭವಾಗಿ ಊಹಿಸಬಹುದಾದಂಥ ವಿಷಯ.
ತೇಲಲಿ ಮುಳುಗಲೀ ಪೊಲೀಸರನ್ನು ಕೇಳಿಯೇ ಬಿಡಬೇಕೆಂದು ನಿರ್ಧರಿಸಿ ಪಟೇಲ ಕುಂಟ ಪರಮೇಸಪ್ಪನ ಸಂಗಡ ಆಗಿಂದಾಗ್ಲೆ ಬಂಡಿಕಟ್ಟಿಕೊಂಡು ಸೊಟ್ಟೂರ ಕಡೆ ಬಿಡಿಸಿದನು.
ಸವಾರಿಬಂಡಿ ಕಲ್ಲುಹಾದಿಗುಂಟ ಓಡೀ ಓಡೀ ಸೊಟ್ಟೂರ ಸೇರಿದಾಗ ಬಿಸಿಲು ಮಧ್ಯಾಹ್ನ ದಾಟಿತ್ತು.  ಕುಂಟ ಪರಮೇಸಪ್ಪನ ಒತ್ತಾಯಕ್ಕೆ ಹಡದಲ್ಲೋರ ಹೋಟ್ಲಲ್ಲಿ ಮಸಾಲೆ ತಿಂದು ಠೇಷಣ್ಣು ಬಳಿಗೆ ಬಂದಾಗ ಗುಲ್‌ಮೊಹರ್‍ ಮರದಡಿಯಲ್ಲಿ ಶಾಲಮ್ಮ, ಪೀರಣ್ಣ ಕುಂತಿರುವುದು ಕಂಡಿತು.  ಬೇರೊಂದು ಹಾದಿಗುಂಟ ಠಾಣೆ ಪ್ರವೇಶಿಸಲು ಪ್ರಯತ್ನಿಸಿದಾಗ ಅವರ ಮುಂದೆ ಶಾಲಮ್ಮ ಕಾಳಿಯಂತೆ ದುತ್ತನೆ ನಿಂತುಬಿಟ್ಟಳು.
“ಏನ್ಲೋ ಬಾಡಕಾವ್…. ನಾವು ನಿಂಗೇನಂತಾ ದ್ರೋಹ ಮಾಡಿದ್ವಿ ಅಂತ ನನ್ ಮಗನ್ನ ಒಳಾಗ ಆಕಿಸ್ದೆಲೋ….” ಎಂದು ಕೂಗಾಡುತ್ತ ಕೈಗೆ ತನ್ನ ಕಾಲ ಬುಡಕಿದ್ದ ಪಾದುಕೆಗಳನ್ನು ತೆಗೆದುಕೊಂಡಳು.  ಅವರಿವರು ಬಿಡಿಸಿಕೊಳ್ಳುವಷ್ಟರಲ್ಲಿ ಜುಟ್ಟು ಹಿಡಿದು ಪಾದುಕೆಗಳಿಂದ ಗೌಡನ ಮುಖಕ್ಕೆ ನಾಕೈದೇಟು ಬಾರಿಸಿಯೇ ಬಿಟ್ಟಳು.  “ನಮ್ಮೆದ್ರೀಗೆ ಬಡೀತಿಯಾ ಕತ್ತಿರಂಡೀ” ಅಂತ ಪೇಡೆಯೊಬ್ಬ ಆಕೆಯನ್ನು ಆಚೆ ಎಳೆದೊಯ್ದ “ಛೇ…ಛೇ…. ಆಕೆ ನಮ್ಮೂರಾಕಿ…. ಆಕಿ ನ್ನ ಬಡೀಲಿಲ್ಲ” ಎಂದು ಗೌಡ ಒಣಗಾಂಭೀರ್ಯ ಪ್ರಕಟಿಸಿದ ಮೇಲೆ ಆಕೆಯನ್ನು ಆಕೆಯ ಪಾಡಿಗೆ ಬಿಟ್ಟರು.
ಗೌಡ ಕುಂಟ ಪರಮೇಶಪ್ಪನನ್ನ ಮುಂದೆ ಬಿಟ್ಟುಕೊಂಡು ತಾನು ಹಿಂದೆ ನಡೆದನು.  ಕುರ್ಚೀ ಮ್ಯಾಲೆ ದೇವರು ವಿರಾಜಮಾನವಾಗಿತ್ತು, ಆತನ ಎರಡೂ ಪಕ್ಕ ಜಯವಿಜಯರಂತೆ ಅದೇ ಆ ಕನಿಷ್ಟಬಿಲ್ಲೆಗಳನ್ನು ನಿಲ್ಲಲ್ಪಟ್ಟಿದ್ದರು.  ಗೌಡನ ಆಗಮನವನ್ನು ಮೊದಲೇ ನಿರೀಕ್ಷಿಸಿದ್ದವರಂತೆ ನಿರ್ಲಿಪ್ತ ಮುಖಭಾವದಿಂದ್ದರು ಅವರು.
ದೀರ್ಧಂಡ ಹಾಕಿದ ಗೌಡನನ್ನು ಏನಾಗಬೇಕಾಗಿತ್ತು ಅಂತ ಪ್ರಶ್ನಿಸಿತು ದೇವರು.  ತ್ರಿಕಾಲ ಜ್ಞಾನಿಯಾದ ದೇವರಿಗೆ ವಿವರಿಸಿ ಹೇಳುವುದಾದರೂ ಏನನ್ನು?  ಗೌಡ ಮುಖ ಮುಟುಗಿ ಮಾಡಿಕೊಂಡು ಕೈಕಟಟಿ ನಿಮತುಕೊಂಡ.  ಖಾಕಿ ಮಂದಿಯ ಎದೆಗೆ ಒದೆಯಬೇಕೆಂದೇನೋ ಅನ್ನಿಸಿತು.  ಆದರೆ ಸಾಧ್ಯವಾಗಲಿಲ್ಲ.  ಒಣಗತೊಡಗಿತು ಬಾಯಿ.  ಕೊನೆಗೆ ಪರಮೇಶಪ್ಪ ಮೊಣಕೈಯಿಂದ ತಿವಿದ ಮೇಲೆಯೇ, ಮತ್ತೊಮ್ಮೆ ಉಗುಳು ನುಂಗಿದ ಗೌಡ “ಸಾರೂ ನಂ ಪೆಟಾರಿಯಾಗಿದ್ದ ಬಂಗಾರ ರೊಕ್ಕ ಕಳ್ತನಾಗೈತಿ” ಅಂದ.  ದೇವರು ಮುಖ ಕೆಂಪಗೆ ಮಾಡಿಕೊಂಡು “ಕಳ್ತನಾಗೈತಾ, ಯಾರು ಮಾಡಿರ್‍ಬಹ್ದೂ ಅಂತ ನಿನ್ಲೆಕ್ಕ” ಎಂದು ಮರು ಪ್ರಶ್ನೆ ಹಾಕಿತು.  ಧುಮುಧುಮು ಗುಟ್ಟುತ್ತಿದ್ದ ಪೀಸಿಗಳಾದ ಬಸ್ರಾಜ, ನರ್‍ಸಪ್ಪನ್ ಮುಖ ನೋಡುತ್ತ “ಮ…ತ್ತೆ…. ಮತ್ತೆ… ಬೀಗದ ಕೈ ನಿಂಪೋಲೀಸ್ರ ಕೈಗೆ ಕೊಟ್ಟಿದ್ದೆ…..” ಎಂದು ಹೇಳುತ್ತಿದ್ದಾಗಲೇ, ದೇವರು ಲಾಠಿಯನ್ನು ಟೇಬಲ್ ಮೆಲೆ ಅಪ್ಪಳಿಸಿ ಖಬರ್‌ದಾರ್‍ ಅಂತ ಆರ್ಭಟಿಸಿತು.  “ಏನಂದೇ…. ನಂ ಪೋಲೀಸ್ರ ಮೇಲೆ ಈ ರೀತಿ ಹೇಳೋಕೆ ನಿಂಗೆ ಎಷ್ಟಯ್ಯಾ ಧೈರ್ಯ ಇನ್ನೊಂದ್ಸಾರಿ ಅಂದ್ರೆ ಒದ್ದು ಒಳಾಗೆ ಹಾಕಿಬಿಟ್ಟೇನು ಗೆಟ್ ಔಟ್” ಎಂದು ಸಿಡಿಲ ಮರಿಯಂತೆ ಗುಡುಗಿತು ದೇವರು.  ಆ ಏಟಿಗೆ ಗೌಡನ ದೋತರದೊಳಗೆ ಮೂತ್ರದ ಹನಿಗಳು ಜಿನುಗಿದವು.  ಕುಂಟ ಪರಮೇಸಪ್ಪ ‘ಸ್ಯಾರಿಸಾರ್‍’ ಎಂದು ನುಡಿದು ಗೌಡನೊಂದಿಗೆ ಹೊರಬಂದ.
-೬-
ಬೆಳಗಿನೊತ್ತು ಗೋಮೆಂಟ್ ಆಸುಪತ್ರಿಯಲ್ಲಿ ಮೂರುವರೆ ಕೊಟ್ಟು ಸೂಜಿ ಮಾಡಿಸಿಕೊಂಡು ಬಂದು ತುಸು ಗೆಲುವಾಗಿದ್ದ ಶಾಲಮ್ಮ ದೂಪದಳ್ಳಿಗೆ ಹೋದರೆ ಸಣ್ಣ ಮಗ ಬಾಷನೊಂದಿಗೇ ಹೋಗಬೇಕೆಂದು ಹಠ ಹಿಡಿದಿರುವಂತೆ ಮುಖ ಬಿಕ್ಕೊಂಡಿದ್ದಳು.  ಅವಳನ್ನು ರಮ್ಮಿಸಿ ರಮ್ಮಿಸಿ ಸಾಕು ಸಾಕಾಗಿ ಹೋಗಿತ್ತು.
ಹೂ ಗಿಡಗಳ ನಡುವೆ ಹೊಂಗೆ, ಮಾವು, ಬೇವಿನ ಮರಗಳ ತಣ್ಣೆಳಲಿನಲ್ಲಿ ಕೂತಿದ್ದ ಶಾಲಮ್ಮಗೆ ಯಾವುದರ ಕೊರತೆಯೂ ಇರಲಿಲ್ಲ.  ಠಾಣೆಯ ಆವರಣದಲ್ಲಿ ಗೌಡನ ಮುಖಕ್ಕೆ ಚಪ್ಪಲಿಯಿಂದ ಬಾರಿಸಿದ ವೀರ ವನಿತೆ ಎಂದು ಇಡೀ ಪೇದೆಗಳಿಗೆಲ್ಲ ಕೇವಲ ಒಂದೇ ದಿನದಲ್ಲಿ ಚಿರಪರಿಚಿತಳಾಗಿದ್ದಳು.  ಆದ್ದರಿಮದಾಗಿ ಎಲ್ಲ ಪೇದೆಗಳೆಲ್ಲ ಆಕೆ ಕಾಲಿನಿಂದ ತೋರಿಸಿದರೆ ತಲೀಲಿ ಹೊತ್ತು ಮಾಡಲು ತಯಾರಾಗಿರುವಂತಿದ್ದರು.  ವನ್ನೂರಪ್ಪನಾದರೂ ಅಷ್ಟೆ.
ನೋಡುವವರಿಗೆ ಎಂಥ ಗಂಭೀರ?
ಎಂಥಾ ಸುಂದರ?  ಅನ್ನೋ ರೀತಿಯಲ್ಲಿ ಗೋಚರಿಸುತ್ತಿದ್ದ,  ಆದರೆ ಆಗ ಶಾಲಮ್ಮ ಎಲ್ಲಿ ತನ್ನ ಮುಖಕ್ಕೆ ಎಕ್ಕಡದಿಂದ ಬಾರಿಸಿಬಿಡುವಳೋ ಅಂತ ಭಯ.
ಬೆಳ್ಳಿಗ್ಗೆ ಪೀರಣ್ಣನನ್ನು ಸಮಕ್ಷಮಕ್ಕೆ ಕರೆಕಳಿಸಿ “ಬಿ ಕೇರ್‌ಫುಲ್….ನಾನು ನನ್ನ ಸರ್ವೀಸಿನಲ್ಲಿ ಎಂತೆಂಥ ರೌಡಿಗಳನ್ನು ನೋಡಿದ್ದೀನಿ….ನಿನ್ತಾಯಿಗೆ ನಾನು ಹೆದ್ರೋನ್ಲ…. ಇದು ಸ್ಟೇಷನ್,  ಕೈಯೀ ಬಾಯೀ ಸುದ್ಧವಾಗಿಟ್ಕೊಳ್ಳಿಕ್ಕೆ ಆಕೆಗೆ ಹೇಳು”.  ಎಂದು ಒಣ ರೋಫ್‌ಹಾಕಿ ಉಗುರು ನುಂಗಿದ.  ಅದೂ ಅಲ್ಲದೆ ಶಾಲಮ್ಮ ಯಾವಾಗಬೇಕಾದ್ರು ಬಾಷನನ್ನು ಕಾಣಬಹುದಿತ್ತು.  ತಾಯಿ ಮುಖ ಕಂಡಾಗಲೆಲ್ಲ ಬಾಷಾ “ನಿನ್ನಂಥ ವೀರ ವನಿತೆಯ ಮಗನಾಗಿ ಹುಟ್ಟಿದ್ದಕ್ಕೂ ಸಾರ್ಥಕವಾಯಿತು ತಾಯೇ ಸೌಖ್ಯವಪ್ರದಾಯೆ” ಎಂದು ಡಯಲಾಗ್ ಹೊಡೆಯುವನು.
ಅಲ್ಲಿಗೆ ಬಂದು ಎರಡು ಮೂರು ದಿನಗಳಾಗಿದ್ದವು.  ಖಾಯಂ ಆಗಿರಲಿಕ್ಕೆ ಠೇಷಣ್ಣೇನು ಸ್ವಾದರ ಮಾವನ ಮನೆ ಅಲ್ಲವಲ್ಲ.  ಅವರಿವರನ್ನು ಹಿಡಿದುಕೊಂಡು ಬಂದು ಎಸೈ ವನ್ನೂರಪ್ಪನೊಮದಿಗೆ ಪೀರಣ್ಣ ಚವುಕಾಸಿ ನಡೆಸಿದ್ದ.  ಆತನ ಒಣ ಗೋಳು ಕೇಳಿದಾಗೆಲ್ಲ “ನನ್ನೇನು ತಿಳ್ಕಂಡಿದಿಯಾ,  ಫಿಪ್ಟಿ ಥೌಸಂಡ್ ನೆಟ್ ಕೊಟ್ಟು ಎಸೈ ಆಗಿದೀನಿ…. ಎಜುಕೇಟೆಡ್ ಥರ ಕಾಣಿಸ್ತಿದಿ… ನಿಂಗೆ ಸ್ವಲ್ಪಾದರೂ ಕಾಮನ್ ಸೆನ್ಸ್ ಇದೆ ಏನಯ್ಯಾ” ಎಂದು ಒಗಟುಗಳನ್ನೇ ನುಡಿದುಬಿಡುತ್ತಿದ್ದನು ಎಸೈ.
ಇಂಥ ಒಗಟುಗಳೆಲ್ಲ ಅರ್ಥವಾಗೋದು ಕೇವಲ ಹರಪಾದಯ್ಯಗೆ ಎಂದು ಪೀರಣ್ಣ ಪತ್ತೆ ಹಚ್ಚಿದ.  ಮಂಡಿಲಿ ಸ್ವಭಾವದ ಹರಪಾದಯ್ಯ ಒಂದೇ ಏಟಿಗೆ ಸಿಕ್ಕಿದ್ದು ಪೀರಣ್ಣನ ಪುಣ್ಯ.  “ಮೊದ್ಲೆ ನನ್ನತ್ರ ಬಂದಿದ್ರೆ ಸೆಟ್ಲ್ ಮಾಡಿ ಬಿಡ್ತಿದ್ನೆಲೋ” ಎಂದು ಅಂದ.  ಆ ರಾತ್ರಿಯೇ ಪೀರಣ್ಣನನ್ನು ಹಿಮದೆ ಕಟ್ಟಿಕೊಂಡು ಎಸೈ ಮನೆಗೆ ಹೊಂಟನು.
ಅದೇ ತಾನೇ ಚಿಕನ್ನು ಚಪಾತಿ ಹೊಡಿದು ಪಲ್ಲಂಗದ ಮೇಲೆ ಅಡ್ಡಾಗಿತ್ತು ದೇವರು.  ಏನು ಮಾಡ್ತೀರಿ ಸಾಹೇಬ್ರೆ ಎಂದು ಪಾದಯ್ಯ ಕುರ್ಚಿ ಎಳೆದು ಕೂತು ಸಿಗರೇಟು ಹಚ್ಚಿ “ಅದೇನು ಇವಂದು ಸೆಟ್ಲ್ ಮಾಡಿಬಿಡ್ರಿ” ಎಂದು ಪಲ್ಲವಿ ಹಾಡಿದ.  ದೇವರು ಸಿಗರೇಟು ಹಚ್ಚಕೊಂಡು “ಸೆಟ್ಲ್ ಮಾಡೋಕೆ ಇದೇನು ಚಿಕಕ್ಕ ಪುಟ್ಟ ಕೇಸಲ್ರಿ ಸ್ವಾಮ್ಯೇರೇ, ಎನಿಲ್ಲಾಂದ್ರೂ ಅವ್ನೀಗೆ ಆರ್‍ ತಿಂಗ್ಳು ಶಿಕ್ಷೆ ಗ್ಯಾರಂಟಿ” ಎಂದು ಹೊಗೆ ಬಿಡತೊಡಗಿತು.
ಹರಪಾದಯ್ಯ ಹ್ಹ ಹ್ಹ ಅಂತ ನಕ್ಕು ತನ್ನ ಸವರನ್ನು ವಾಸನೆಯ ಬಾಯನ್ನು ವನ್ನೂರಪ್ಪನ ಕಿವಿ ಒಳಗೆ ಒಯ್ದು ಕೆಲವು ಶಬ್ದಗಳನ್ನುಗುಳಿದನು.  ಆ ಶಬ್ದಗಳು ದೇವರ ತಲೆಯೊಳಗೆ ತೂರಿ ಚಿತ್ರವಿಚಿತ್ರವಾದ ಮಿಂಚಿನ ಗೊಂಚಲನ್ನೇ ಬಿಟ್ಟವು.  ದೇವರು ಧ್ಯಾನಮಗ್ನವಾಗಿ ಇಚಾರಮಂಥನ ನಡೆಸಿತು.  ಚಾವತ್ತಿನ ನಂತರ ತನ್ನ ಮಳ್ಳೇಗಣ್ಣುಗಳನ್ನು ಬಿಚ್ಚಿ ಉದ್ದನೆ ಉಸಿರು ಬಿಟ್ಟು ಹೀಗೆ ನುಡಿಯಿತು  “ಆಗ್ಲಿ…. ದೊಡ್ಡೋರು ಹೇಳ್ತೀರಂದ್ಮೇಲೆ ಇಲ್ಲ ಅನ್ಲಿಕ್ಕಾಗ್ತದೆಯೇ….” ಮಧ್ಯೆ ಒಮ್ಮೆ ಆಕಳಿಸಿ ಮತ್ತೆ ಮುಂದುವರೆದು ಹೀಗೆ ಹೇಳುತು “ಮೊದ್ಲು ಅರೇಂಜ್ ಮಾಡ್ಕೊಂಡು ಬನ್ನಿ ಆಮೆಲೆ ನೋಡ್ತೀನಿ”.
“ಅರೇಂಜ್” ಎಂಬ ಶಬ್ದದ ಅರ್ಥ ಮಾಡಿಕೊಳ್ಳುವಲ್ಲಿ ಎಡವಿದ ಪೀರಣ್ಣನನ್ನು ಹೊರಗೆ ಕರೆದೊಯ್ದು ಮಾರೆಮ್ಮ ಬೇವಿನ ಮರದ ಬುಡದಲ್ಲಿ ನಿಲ್ಲಿರಿಸಿ ಹ್ಯಾಗಾದ್ರೂ ಮಾಡಿ ಒಂದ್ರೂಪಾಯ್ ಕಡ್ಮೆ ಮಾಡದಂತೆ ಕರೆಕ್ಟ್ ಸಾವಿರ ರೂಪಾಯ್ ಕಡ್ಮೆ ಮಾಡದಂತೆ ಕರಕ್ಟ್ ಸಾವಿರ ರೂಪಾಯ್ ತಕ್ಕೊಂಡ್ಬಾ.  ಬಂದ್ರೆ ಮಾತ್ರ ನಿನ್ ಬ್ರದರ್‍ ಬಾಷಾನ ಬಿಡುಗಡೆಯಗ್ತದೆ ಎಂದು ಹೇಳಿದ.
ಸಕತ್ತು ಲಾಟರಿ ಹೊಡೆಯುತ್ತಿರುವ ಸಂದರ್ಭದಲ್ಲಿ ಥೌಸಂಡ್ ಹೇಗೆ ಜೋಡಿಸುವುದೆಂದು ಚಿಂತಾಕ್ರಂತನಾದನು ಪೀರಣ್ಣ.  ಅನ್ನ, ನೀರು ಬಿಟ್ಟು ಕೆಂಪು ದಾಸವಾಳದ ಹೂವು ನೋಡುತ್ತ ಕುಂತಿದ್ದ ತಾಯಿಗೆ ದಕ್ಷಿಣೆ ಬಗ್ಗೆ ಹೇಳಿದನು.  ಬಾಷಾ ಬೇಕಾದ್ರೆ ರೊಕ್ಕ ಜೋಡಿಸದೆ ‘ಇಧಿ’ ಇಲ್ಲವೆಂದು ಪರಿಪರಿಯಾಗಿ ಹೇಳಿದ ಮೇಲೆ ಶಾಲಮ್ಮ ಕೆಲವು ನೋವಿನ ಮಾತುಗಳನ್ನಾಡಿ ಒಪ್ಪಿದಳು.
ಸುಮಾರು ಗಂಟೆ ಹೊತ್ತು ಕಂಬಿ ಆಚೆ ಇದ್ದ ಬಾಷಾನೊಮದಿಗೆ ಚರ್ಚಿಸಿ ಪಿತ್ರಾರ್ಜಿತ ಆಸ್ತಿ ಮಾರುವುದೆಂದು ನಿರ್ಧರಿಸಿದರು.  ಕೇವಲ ‘ಸೈತಾನ’ರೇ ತುಂಬಿರುವ ದೂಪದಳ್ಳಿಯಲ್ಲಿರುವದಕ್ಕಿಂತ ಹೊಲ ಮನೆ ಮಾರಿಕೊಂಡು ಎಲ್ಲಾದರೂ ಬದುಕಬೇಕೆಂದು ಮಾತಾಡಿಕೊಂಡರು.
ತಾಯಿ ಮಗ ದೂಪದಳ್ಳಿಗೆ ಮರಳಿದರು.  ಅಗಸೆಬಾಕಲ ಬಳಿ ಕಂಡ ತಿಂಮಪ್ಪ “ಊರಿಗೆ ಮತ್ಯಾಕ ಬಂದ್ರಿ…. ಗೌಡ ಕಳ್ತನ ನಿಮ್ಯಾಗ ಹಾಕಪೈಕಿ” ಅಂದ.  ‘ಹಾಕಿದ್ರೆ ಹಾಕ್ಲಿ’ ಎಂದು ಪೀರಣ್ಣ ತಾಯಿಯೊಂದಿಗೆ ಮತ್ತದೇ ಮನೆಯಲ್ಲಿ ವಾಸ್ತವ್ಯ ಹೂಡಿ ಬಳಲಿ ಬೆಂಡಾಗಿದ್ದ ತಂಗಿಗೆ ದೈರ್ಯ ಹೇಳಿದನು.
ಚಪ್ಪಲಿ ಇಲ್ಲದ ಕಾಲಿನಿಂದ ಊರು ತುಂಬಾ ಅಡ್ಡಾಡಿ ತಾನು ಹೊಲ ಮನೆ ಮಾರುತ್ತಿರುವುದಾಗಿ ಕಂಡ ಕಂಡವರ ಎದುರು ಗಂಟೆ, ಜಾಗಟೆ ಬಾರಿಸಿದನು.  ಕೆಲವರು ಅಯ್ಯೋ ಅಂತ ಮರುಗಿದರು.  ಮತ್ತೆ ಕೆಲವರು “ನೀನೇನು ದೊಡ್ ಜಮೀನ್ದಾರಲೇ… ಎಲ್ಡು ಹೆಣಾ ಉಗಿವಷ್ಟು ಆಸ್ತಿ ಇಟ್ಕೊಂಡು ಆಸ್ತಿಯಂತೆ ಆಸ್ತಿ” ಎಂದು ನಗೆಯಾಡಿದರು.  ಮತ್ತೆ ಕೆಲವರು “ಅದ್ಯಾವನು ನಿನ್ನಾಸ್ತಿ ಕೊಣ್ಕೊತಾನೆ ನೋಡೇಬುಡ್ತೀವಿ” ಎಂದು ಸೆಡ್ಡೊಡೆದರು.
ಪೀರಣ್ಣ ತನ್ನ ಪಿತ್ರಾರ್ಜಿತ ಆಸ್ತಿ ಮಾರಲಿರುವುದರ ಬಗ್ಗೆ ಊರ್‍ತುಂಬ ಮೂರು ರಾತ್ರಿ ಎರಡು ಹಗಲು ಚರ್ಚೆ ನಡೆಯಿತು.  “ಅದ್ಹೆಂಗೆ ಮಾರ್‍ತಾನೆ ನೋಡೇ ಬುಡ್ತೀವಿ” ಎಂದವರೇ ಹೆಚ್ಚು.  ಇಂತವರ ಒಂದು ನಿಯೋಗ ಗೌಡನ ಬಳಿಗೆ ಹೋಯಿತು.  ಕಳ್ತನದ ಪ್ರಕರಣದಿಂದ ಚೇತರಿಸಿಕೊಂಡು ಅದೇ ತಾನೇ ಆಕಳ ತುಪ್ಪ, ನವಣಕ್ಕಿ ಬಾನ, ಮಿಡಿಮಾವಿನ ಉಪ್ಪಿನಕಾಯಿ ಅಷ್ಟೆ ಉಂಡು ಕೂತಿದ್ದ ಗೌಡ ಆ ನಿಯೋಗಕ್ಕೆ ಬೆನ್ನೆಲುಬಾದ.
ಮರುದಿನ ಶಾಲಮ್ಮನ ಹೃದಯದ ಸ್ಥಿತಿ ಪರೀಕ್ಷಿಸುವ ರೀತಿಯಲ್ಲಿ ತಳವಾರ, ಸತ್ತಿರೋ ಸೇಕಣ್ಣನ ಹೊಲವನ್ನಾಗಲೀ ಮನೆಯನ್ನಾಗಲೀ ಕೊಂಡುಕೊಳ್ಳಬಾರದೆಂದೂ, ಕೊಂಡವರನ್ನು ಊರಿನಿಂದ ಬಹಿಷ್ಕರಿಸುವುದಾಗಿಯೂ, ಇದು ಊರ ಪಂಚಮರ ತೀರ್ಮಾನವೆಂದೂ ಟಾಂ ಟಾಂ ಹಾಕಿದರು.
ಇದನ್ನು ಕೇಳಿದ ಶಾಲಮ್ಮಗೆ ಅಳುವ ಚೈತನ್ಯವೇ ಉಡುಗಿಹೋಯಿತು.  ಪೀರಣ್ಣ ಗೌಡನ ಮನೆಯ ಕಲ್ಲು ಗೋಡೆಗೆ ಢಿಕ್ಕಿ ಹೊಡೆಯಲೆಂದು ಹೋದವನು ಮರಳಿ ಬಂದ ಸ್ವಲ್ಪ ಹೊತ್ತಿಗೆ ಮತ್ತೊಂದು ಕೆಟ್ಟ ಸುದ್ದಿ ಕೇಳಿದನು.  ಅದೆಂದರೆ ಊರ ದೈವಸ್ಥರು ತಮ್ಮ ಒಂದೂಕಾಲೆಕರೆ ಹೊಲವನ್ನು ಬಸಂದೇವರ ಗುಡಿ ಪೂಜಾರಿ ಪಂಚಿಯ ಸುಪರ್ಧಿಗೆ ಒಪ್ಪಿಸುವ ಶಿಫಾರಸ್ಸು ಮಾಡಿದ್ದುದು.
ಇದನ್ನು ಕೇಳಿದ ಕೂಡಲೆ ತಾಯಿ ಶಾಲಮ್ಮ ಪೂರಿಯಾ ಧನಶ್ರೀ ಶುರುವು ಮಾಡಿದಳು.  ಆಗ ಅಪರೂಪಕ್ಕೆ ರೊಚ್ಚಿಗೆದ್ದ ಪೀರಣ್ಣ ಗೌಡನ ಕೊರಳಪಟ್ಟಿ ಹಿಡಿದು ಕೇಳೇಬಿಡ್ತೀನಿ ಎಂದು ದೈತ್ಯ ಹೆಜ್ಜೆ ಇಡುತ್ತ ಹೊರಟನು.
ಇನ್ನೇನು ಪೀರಣ್ಣ ಕೂಡ ಗೌಡನ ಪಂಚಕೋನಾಕೃತಿಯ ಮುಖಕ್ಕೆ ಬಾರಿಸಿ ಬಿಡುವನೆಂದೇ ಊರವರು ಭಾವಿಸಿದರು.  ಬಾರಿಸಬೇಕೆಂದೇ ಕಾಲಲ್ಲಿದ್ದುದನ್ನು ಕೈಗೆ ತೆಗೆದುಕೊಂಡ.  ಆದರೆ ಬಾಯಲ್ಲಿ ಕವಳ ತುಂಬಿಕೊಂಡ ದೈವಸ್ಥರ ನಡುವೆ ಇದ್ದ ಗೌಡ ಪಿಚಕ್ಕನೆ ಉಗುಳಿ “ಅದೇನು ಹರಕಂತಿ ಹರಕ ಹೋಗಲೇ… ಹೊಲಾ ಬೇಕಾದ್ರೆ ಕೋಲ್ಟಿಗೆ ಓಗು… ಓಗಲೇ ಗಂಡ್ಸೆ” ಎಂದು ಕೂಗಿ ಹೇಳಿದ.
ಕೋಲ್ಟು ಎಂಬ ಶಬ್ದ ಕಿವಿಯ ಮೂಲಕ ಪೀರಣ್ಣನ ದೇಹ ಪ್ರವೇಶಿಸಿ ಆತ್ಮ ಸ್ಥೈರ್ಯವನ್ನು ಗುಳುಂ ಅಂತ ನುಂಗಿ ಹಾಕಿಬಿಟ್ಟಿತು.  ಅವನ ಬಲಗೈಯಲ್ಲಿದ್ದ ಚಪ್ಪಲಿ ಭೂದೇವಿ ಮೈಮೇಲೆ ಬಿದ್ದಿತು.  ರಕ್ತ ಬೀಜಾಸುರರಂತಿರುವ ದೈವಸ್ಥರನ್ನೂ, ಸಾವರಿದಾ ಒಂದು ತಪ್ಪು ಮಾಡಿಯೂ ಶಿಸುಪಾಲನಂತೆ ಕೆಕ್ಕರಿಸುತ್ತಿರುವ ಗೌಡನನ್ನೂ ಶಿಕ್ಷಿಸುವ ಯೋಗ್ಯತೆ ತನ್ನ ರೆಟ್ಟೆಯಲ್ಲಿದೆಯೋ ಇಲ್ಲವೋ ಎಂದು ಪೀರಣ್ಣ ಯೋಚಿಸುತ್ತಿದ್ದ ಹೊತ್ತಿನಲ್ಲಿ ಒಬ್ಬ ಓಡಿಬಂದು “ಪೀರಣ್ಣೋ…. ಪೀರಣ್ಣೋ… ನಿನ್ತಂಗಿ ಬೇಗಮ್ಮಗೆ ನಿಮ್ಮಪ್ಪ ದೆವ್ವಾಗಿ ಬಡಕಂಡಾನೆ ಬಾರಪ್ಪೋ” ಎಂದು ಕೂಗಿ ಹೇಳಿದನು.
*****
ಕೀಲಿಕರಣ ತಪ್ಪು ತಿದ್ದುಪಡಿ: ರಾಮಚಂದ್ರ ಎಂ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ