ಕೋವಿ ಮನೆ

`ನಂದೀ ತೀರ್ಥದ ಗಣಪತಿಗೆ ಪಂಚಕಜ್ಜಾಯ ಹರಕೆ ಹೇಳಿ ಅಂದ್ರೆ ಕೇಳೋದಿಲ್ಲ . ರಾತ್ರಿಯೆಲ್ಲ ಕೆಂಪು ಕಣ್ಣಲ್ಲಿ ದೀಪ ಇಟ್ಕೊಂಡು ಡಿಡಿಟಿ ಬಳೀರಿ… ‘ ನಾಗಿ ಮಟಗುಟ್ಟುತ್ಲೇ ಅಂಗಾಲಲ್ಲಿ ಕಚ್ಕೊಂಡಿದ್ದ ಇರುವೆಗಳ ಆಯ್…ಎನ್ನುತ್ತಾ ಹೊಸಕಿ ಎರಡು ಬೆರಳಲ್ಲಿ ಬತ್ತಿ ಮಾಡಿ ಮಾಡಿ ಬಿಸಾಡುತ್ತಿದ್ದಳು.

`ನನ್ನ ಬಂಡಾರ ಪೂಜೆಗೆ ಕುಳಿತಾಗ ನಿಂಗೂ ನೆಂಪಾತ ? ಇಲ್ಲಲ್ಲ. ಈಗ ಸುಮ್ನೇ ಪಿರಿ ಪಿರಿ ಮಾಡ್ಬೇಡ. ಕಾಲಿಗೆ ಚೂರು ಚಿಮಿಣಿ ಎಣ್ಣೆ ಬಳ್ಕೊಂಡು ಮಲಕ್ಕೊ’ ಅಂತ ಗಂಡ ಲೋಕಯ್ಯ ಗದರಿದ.

ಚಿಮಿಣಿ ದೊಂದಿ ದೀಪಕ್ಕೆ ಮುಂಗೂದಲ ಚರ್ ಚರ್ ಹೊತ್ತಿಸಿಕೊಂಡು ಕಾಪಿ ಬರೆಯುತ್ತಿದ್ದ ಕಿಶೋರ ತಲೆ ಎತ್ತಿ ನೆತ್ತಿಯ ಕರಿಯನ್ನ ಚಡ್ಡಿಗೆ ಒರೆಸುತ್ತಾ , `ಚಿಮಿಣಿ ಎಣ್ಣೆ ಕಾಲಿಗೆ ಹಚ್ಚಿದ್ರೆ ವಾತ ಬರುತ್ತಂತೆ… ಹಚ್ಕೋಬೇಡ…’ ಅಂತ ಕೀರಲೆಳೆದ.

`ಈಗಲೇ ನಿನ್ನ ಕಲ್ಪಾಟಿಕೆ ಸುರು ಆಯ್ತಾ ? .. ಬರ್ಕ ಬರ್ಕ ‘ ಅಂತ ಇನ್ನೊಂದು ಗುಟುರು ಹಾಕಿದ ಲೋಕಯ್ಯ ಎರಡೂ ಚಾಪೆಯ ಸುತ್ತ ಡಿಡಿಟಿ ಲಕ್ಷ್ಮಣ ಗೀಟು ಹಾಕುವುದರಲ್ಲಿ ಮಗ್ನನಾದ.

`ಪುನಃ ಅವ್ರೇನು ಮಾಟ ಮಾಡಿದಾರೋ ಏನೋ ಯಾರಿಗ್ಗೊತ್ತು… ಇಲ್ಲಾಂದ್ರೆ ಈ ನಮೂನೆ ಇರ್ವೆ ಬರುವುದು ಲೋಕದಲ್ಲುಂಟಾ ?’ ಎನ್ನುತ್ತ ನಾಗಿ ಜೂಲಿ ಹಿಡಿದುಕೊಂಡು ನೆಲದ ಮೇಲಿನ ಇರುವೆ ತೂತಿಗೆಲ್ಲಾ ಚಿಮಿಣಿ ಎಣ್ಣೆ ತರ್ಪಣ ಬಿಡುತ್ತಾ ಬಂದಳು.

ಕೊನೆಯದಾಗಿ ಎಡ ಅಂಗೈ ಗುಂಡಿ ಮಾಡಿ ಸ್ವಲ್ಪ ಎಣ್ಣೆ ಸುರಿದುಕೊಂಡು ಎರಡೂ ಮೊಣಕಾಲಿಗೆ ಬಳಿದುಕೊಂಡಳು. ಕುಪ್ಪಿ ಬಾಯಿಗೆ ಜೂಲಿ ಇಟ್ಟು ಗೋಡೆ ಹಿಡಿದು ಡಿಡಿಟಿ ಲಕ್ಷ್ಮಣ ಗೀಟನ್ನು ಜಾಗ್ರತೆಯಿಂದ ದಾಟಿಕೊಂಡು ಬಂದು ತಲೆವರೆಗೆ ಬಾರದ ಹರಕು ಸೀರೆಯನ್ನು ಕಾಲ ತುಂಬ ಹೊದ್ದುಕೊಂಡು, ಸೆರಗು ಬಿಡಿಸಿ ತಲೆಮೇಲೆ ಮುಸುಕೆಳೆದುಕೊಂಡು ಮಲಗಿಬಿಟ್ಟಳು. ಹೊರಗಡೆ ರೊಯ್ಯರೊಯ್ಯನೆ ಹಾರುತ್ತಿದ್ದ ಬಾವಲಿಗಳು ಬಾಳೆಗಿಡದಿಂದ ಬಾಳೆಗಿಡಕ್ಕೆ ಎರಡು ಸಾರಿ ಹಾರಿದವೋ ಇಲ್ವೋ ನಾಗಿ ಗೊರಕೆ ಗಾನ ಸುರು ಮಾಡಿದಳು.

`ಮಾಟ ಮಾಡುವುದು … ಹೌದು. ಮಾಟದ ಮಾಯೆಗೇ ಇರುವೆ ಬಂದಿರಬೇಕು. ಕೋವಿ ಮನೆಯವರಿಗೂ ನಮಗೂ ಜನ್ಮದ ದ್ವೇಷ’ !

ಅದು ಅಜ್ಜನ ಕಾಲದಿಂದ ನಡೆದು ಬಂದ ದಾಯಾದಿ ಜಗಳ. ಗದ್ದೆಯ ನೀರಿನ ಕಡಿಗೆ, ಒಂದು ಹಾರೆ ಮಣ್ಣು ತೆಗೆದರೂ ಜಗಳ. ತೋಡು, ಮರದ ಗೆಲ್ಲು ಕೊನೆಗೆ ತರಗೆಲೆಗೂ ಹಿಡಿಸೂಡಿ ಹಿಡಿದುಕೊಂಡು ಜಗಳ ಬೆಳೀತಿತ್ತು. ಬೆಳಬೆಳಗ್ಗೆ ಲಡಾಯಿ ಮುಗಿದಿದ್ರೆ, ರಾತ್ರಿ ನಿದ್ದೆ ಹೋಗುವಂತಿಲ್ಲ. ನಿಂಬೆ ಹಣ್ಣು ಕುಂಬಳ ಕಾಯಿ ತಗಡು ಮಂತ್ರಿಸಿ, ಬಿಸಾಡುವುದು, ಹುಗಿಯುವುದು ನಡೀತಿತ್ತು.

ಮರುದಿನ ಬೆಳಗ್ಗೆ ನಾಗಿ ಅದನ್ನು ಕೋಲಿಗೆ ಸಿಕ್ಕಿಸಿಕೊಂಡು `ಕೃತ್ರಿಮ ಮಾಡಿ ಬಡವರ ಹೊಟ್ಟೆಗೆ ಬಡಿಯುತ್ತಾನೆ . ಇವನನ್ನು ಆ ಸತ್ಯದೇವತೆಯೇ ನೋಡಿಕೊಳ್ಳಲಿ…’ ಎಂದು ತುಳಸೀ ಕಟ್ಟೆಯ ಬಳಿ ನೆಲಕ್ಕೆ ಕೈ ಬಡಿದು ಕೊನೆಗೆ ನಾಲ್ಕು ಹನಿ ಕಣ್ಣೀರು ಹಾಕಿ ಸುಮ್ಮನಿರುತ್ತಿದ್ದಳು. ಬಡತನ ಅದಕ್ಕಿಂತ ಮಿಗಿಲಾದ ಸೇಡು ತೀರಿಸಿಕೊಳ್ಳಲು ಬಿಡುತ್ತಿರಲಿಲ್ಲ.

ಲೋಕಯ್ಯನ ಅಜ್ಜನ ಕಾಲದಲ್ಲಿ ಆಸ್ತಿಗಾಗಿ ಬಿಗಡಾಯಿಸಿದ ಸಂಬಂಧ, ಅಪ್ಪನ ತಲೆ ಚಾವಡಿ ಆಳಲು ಬಂದಾಗ ಸ್ವಲ್ಪ ಸರಿಹೋಗಿತ್ತು. ಅದು ಮತ್ತೆ ಬೇಕಾಬಿಟ್ಟಿ ಕೆಡಲು ಲೋಕಯ್ಯನೇ ಕಾರಣ.

ಕೋವಿ ಮನೆಯಲ್ಲಿ ಪ್ರತಿವರ್ಷ ಮಾರ್ನೆಮಿ(ಮಹಾನವಮಿ) ನಡೆಯುತ್ತದೆ. ಊರಿಗೇ ದೊಡ್ಡ ಮಾರ್ನೆಮಿ ಪೂಜೆ ಅದು. ಕೋವಿಮನೆಯವರಿಗೂ ಮೂಲಮನೆ ಲೋಕಯ್ಯಂದೇ . ಆದರೂ ಗೌಜಿ ಗಮ್ಮತ್ತಿನ ಮಾರ್ನೆಮಿ ನಡೆಯುವುದು ಕೋವಿ ಮನೆಯಲ್ಲಿ. ಈ ದೊಡ್ಡಪ್ಪನ ಮೇಲೆ ಹೆಚ್ಚಿನ ಮೋಕೆಯಿಂದ ಅಜ್ಜಯ್ಯ ಸಂಸ್ಕೃತ ಕಲಿಯಲು ಅಂತ ಕೇರಳ ಶಾಲೆಗೆ ಕಳುಹಿಸಿದರು. ಆತ ವೇದ ಮಂತ್ರಕ್ಕಿಂತ ಹೆಚ್ಚಾಗಿ ಅಥರ್ವಣವನ್ನೇ ತಬ್ಬಿಕೊಂಡ. ವಾಪಾಸು ಊರಿಗೆ ಬರುವಾಗ ಪ್ರಸಿದ್ಧಿ, ಕಟ್ಟುಕತೆಗಳು ಬೆನ್ನಲ್ಲೇ ಬಂದವು.

ಮಾಟ ಕಳೆಯಬಲ್ಲಷ್ಟು ವಿದ್ಯೆ ಕಲಿತಿದ್ದಾನಂತೆ. ಮಲಯಾಳೀ ಗುರುಗಳಲ್ಲವಾ ? ಕಳೆಯಬಲ್ಲವನಿಗೆ ಮಾಟ ಮಾಡಲಿಕ್ಕೂ ಬರುವುದಿಲ್ಲವಾ …? ಅಂತ ಜನ ತಮ್ಮ ಅಂದಾಜಿಗೆ ತಕ್ಕ ಹಾಗೆ ಮಾತಾಡಿಕೊಂಡರು.

ಕಾಸರಗೋಡಿನ ಕಡೆ ಒಮ್ಮೆ ಸತ್ಯನಾರಾಯಣ ಪೂಜೆ ಮಾಡುವಾಗ ಕಲಶಕ್ಕೆ ಈ ದೊಡ್ಡಪ್ಪನೇ ತೆಂಗಿನಕಾಯಿ ಇಟ್ಟಿದ್ದನಂತೆ. ದೊಡ್ಡಪ್ಪನ ಮಂತ್ರ ತಾರಕ ಸ್ವರಕ್ಕೆ ಮುಟ್ಟುತ್ತಲೇ ತೆಂಗಿನ ಕಾಯಿ ಗಿರ ಗಿರ ಗಿರಗಿರ ಅಂತ ತಿರುಗಲಾರಂಭಿಸಿ, ಭಕ್ತರು ರೋಮಾಂಚನಗೊಂಡಿದ್ದರಂತೆ. ಕಣ್ಣು ಮುಚ್ಚಿ ಮಂತ್ರೋಚ್ಛಾರ ಮಾಡುತ್ತಿದ್ದ ದೊಡ್ಡಪ್ಪನ ಮಂತ್ರ ತಾರಕದಿಂದ ಭೂಮಿಗಿಳಿಯುವ ಹೊತ್ತಿಗೆ ಮತ್ತೆ ತೆಂಗಿನ ಕಾಯಿ ಸ್ತಬ್ಧವಾಗಿತ್ತಂತೆ.

ಭಕ್ತರು ಅವಾಕ್ಕಾಗಿದ್ದರು. ಕೆಲವರ ಕಣ್ಣಲ್ಲಿ ನೀರೇ ಹನಿಯಿತು. ಎಂಥ ಸಿದ್ಧಿ ! ಏನು ಸಾಧನೆ !! ಧರ್ಮಾತ್ಮನಪ್ಪ.. ಎಂದು ಲೊಚಗುಟ್ಟಿದ್ದರು. ಕಲಶದ ಬಳಿ ಪಾವಲಿಗಳು ರಾಶಿ ಬಿದ್ದವು. ಕಾಸರಗೋಡಿನ ಈ ಸಾಧನೆ ದೊಡ್ಡಪ್ಪನಿಗೆ ಇನ್ನಷ್ಟು ಪ್ರಸಿದ್ಧಿ ತಂದುಕೊಟ್ಟಿತು.

ಅಲ್ಲೊಬ್ಬ ಇಲ್ಲೊಬ್ಬ ಸಾತ್ವಿಕರು ಮಾತ್ರ ಹೀಗೆ ಅಥರ್ವಣ ಮಾಡುವುದು ಒಳ್ಳೆಯದಲ್ಲಪ್ಪ ಅಂತ ಬುದ್ದಿ ಹೇಳಿದರು. ಆದರೆ ಈ ಮಾತು ದೊಡ್ಡಪ್ಪನ ಖ್ಯಾತಿಯ ಭರಾಟೆಯಲ್ಲಿ ಕೇಳಿಸಲಿಲ್ಲ. ಅಂತೂ ಇಂತೂ ದೊಡ್ಡಪ್ಪನ ಕೀರ್ತಿ ಊರ ಗಡಿ ದಾಟಿತು. ಕಾಸು ಕಾಲಬಳಿ ಕಾಲು ಮುರಿದು ಬಿತ್ತು.

ಬೇರೆ ಮನೆಯೆದ್ದಿತು. ದೈವಿಕ ಕಳೆಯೊಂದಿಗೆ ಮುಗುಳಿ ಹೊತ್ತ ಮನೆ. ಪಕ್ಕನೆ ನೋಡಿದರೆ ದೇವಸ್ಥಾನದ ಹಾಗೇ ಕಾಣುತ್ತಿತ್ತು. ಭಕ್ತರು, ಸಂಶಯಗಳು, ಭವಿಷ್ಯದ ದಾರಿ ಕಾಣದವರು , ರೇಖೆ ಚಿತ್ತಾದವರು ನಡೆದು ಬಂದರು. ಗಾಡಿಯಲ್ಲಿ ಬಂದರು. ಕಾರಿನಲ್ಲಿ ಬಂದಿಳಿದರು.

ಲೋಕಯ್ಯನಿಗೆ ದೊಡ್ಡಪ್ಪನ ಈ ಅಬ್ಬರಾಟದಿಂದ ಬೇಜಾರಾಗುತ್ತದೆ. ಹತ್ತಿರವೇ ಇರುವ ಬಂಧುಗಳ ಮನೆಯಿಂದ ಬೆಂಕಿಕಡ್ಡಿಯ ಸಹಾಯವೂ ಇಲ್ಲ. ಬದಲಿಗೆ ಮಾಟ ಮಂತ್ರದ ಕಾಟ. ನಿಂಬೆ ಹಣ್ಣು, ತಾಮ್ರದ ತಗಡು, ಕುಂಕುಮ ಚೆಲ್ಲಿದ್ದನ್ನು ಕಂಡಾವತ್ತೆಲ್ಲಾ ನಾಗಿ, ಈ ಸೂಳಾ ಮಗನ ಸಂತಾನ ಮುತ್ತಿ ಹೋಗಲಿ ಎಂದು ನೆಲಕೈ ಶಾಪ ಹಾಕುತ್ತಿದ್ದಳು. ಅವಳ ಲಾಜಿಕ್ಕನ ಪ್ರಕಾರ ನಂಬಿದ ಉಳ್ಳಾಲ್ತಿ ಈ ಮಾಟದಿಂದ ಅವರನ್ನು ಕಾಪಾಡುತ್ತದೆ. ಸತ್ಯ ಧರ್ಮ ನ್ಯಾಯದಲ್ಲೇ ನಾಗಿ ನಡೆಯುವುದರಿಂದ ಮಾಟಕ್ಕಿಂತ ಅವಳ ನೆಲಕೈ ಶಾಪವೇ ಬಲವಾದದ್ದು. ಆದರೂ ಆಗೊಮ್ಮೆ ಈಗೊಮ್ಮೆ ಊರಿನ ಭಟ್ಟರಿಂದ ಮಂತ್ರಿಸಿದ ನೂಲು ತಂದು ಮನೆಯಲ್ಲಿ ಎಲ್ಲರ ತೋಳಿಗೆ ಸೊಂಟಕ್ಕೆ ಕಟ್ಟಿ ನೆಮ್ಮದಿಯಾಗುತ್ತಾಳೆ.

ನಾಗಿ ನೆಲಕೈ ಶಾಪ ಹಾಕುವಾಗ ಲೋಕಯ್ಯನಿಗೆ ಎದೆ ಹಿಂಡಿದ ಹಾಗಾಗುತ್ತದೆ. ಎಷ್ಟೆಂದರೂ ರಕ್ತ ಸಂಬಂಧ. ದೊಡ್ಡಪ್ಪನ ದುರ್ಮನಸ್ಸಿನಿಂದ ನಾಳೆ ಇಬ್ಬರ ಮಕ್ಕಳಿಗೂ ತೊಂದರೆಯಾಗಬಾರದು ಅಲ್ವ ?

ಇಷ್ಟಕ್ಕೂ ದೊಡ್ಡಪ್ಪನಿಗೆ ಲೋಕಯ್ಯನ ಮೇಲೆ ಇನ್ನಿಲ್ಲದ ಸಿಟ್ಟು ಬರಲಿಕ್ಕೆ ಕಾರಣವಿತ್ತು. ಅದು ಲೋಕಯ್ಯನ ಬಳಿ ಹುಡುಗಾಟಿಕೆಯಿದ್ದ ಕಾಲ. ನ್ಯಾಯ ಆದರ್ಶಕ್ಕಾಗಿ ಕುದಿಯುತ್ತಿದ್ದ ವಯಸ್ಸು. ಸಂಬಂಧ ಚೆನ್ನಾಗಿತ್ತು. ವಾರ್ಷಿಕ ಮಾರ್ನೆಮಿಗೆ ದೊಡ್ಡಪ್ಪನ ಮನೆಯಲ್ಲಿ ಪುಟ್ಟ ಜಾತ್ರೆಯೇ ನಡೆಯುತ್ತದೆ.

ಲೋಕಯ್ಯ ದೇವರ ಮಂಟಪದ ಬಳಿಯೇ ಪರಿಕರ್ಮಿಯಾಗಿ ದೊಡ್ಡಪ್ಪನಿಗೆ ಪೂಜಾದಿಗಳಲ್ಲಿ ಅಣಿ ಮಾಡಿಕೊಡುತ್ತಿದ್ದ. ಮಹಾಪೂಜೆಗೆ ದೇವರ ಕೋಣೆ, ಚಾವಡಿ, ಅಂಗಳದಲ್ಲಿ ಮೊದಲು, ಅಂತಸ್ತು ನಂತರ ಜಾತಿಗನುಸಾರವಾಗಿ ಊರ ಭಕ್ತರು ನಿಂತಿದ್ದರು.

ಅದು ಮಹಾನವಮಿಯ ಮಹಾ ಪೂಜೆ. ಅದಕ್ಕಿಂತಲೂ ವಿಶೇಷವೆಂದರೆ ಆ ಪೂಜೆಯಲ್ಲಿ ಧರ್ಮಾತ್ಮರಿಗೆ, ಶ್ರದ್ಧೆಯಿರುವವರಿಗೆ ದೇವರ ಮಂಟಪದಲ್ಲಿ ಆಗುವ ಸಂಚಲನೆ ಕಾಣಿಸುತ್ತದೆ. ಅಕ್ಕ ಪಕ್ಕದವರನ್ನೂ ಮರೆತು ಎಲ್ಲರೂ ದೇವರ ಮಂಟಪವನ್ನು ನೋಡುತ್ತಿದ್ದರು. ಪೂಜೆ ಶುರುವಾಯಿತು. ಮಂಟಪದಲ್ಲಿ ಚಲನೆಯಿಲ್ಲ.

ಏಕಾರತಿ, ಕರ್ಪೂರದಾರತಿ… ಊಹ್ಞೂ.. ಹಲಗೆಯಾರತಿ, ನಾಗನ ಹೆಡೆಯಾರತಿ, ಕೂರ್ಮಾರತಿ ಆಯಿತು. ಕೂರ್ಮಾರತಿ ಎತ್ತಿಕೊಂಡು ದೊಡ್ಡಪ್ಪ ಉದ್ಧರಣೆಯಲ್ಲಿ ನೀರು ಬಿಟ್ಟರು. ಬಲಕ್ಕೆ ಬಗ್ಗಿ ಹರಿವಾಣದಲ್ಲಿದ್ದ ಬಿಡಿ ಹೂಗಳನ್ನೆತ್ತಿಕೊಂಡರು. ಮಂಟಪದಲ್ಲಿ ಸಣ್ಣಗೆ ದರ್ಶನ, ಮತ್ತೊಂದು ಅಗಲದ ಕೂರ್ಮಾರತಿ … ಮಂಟಪಕ್ಕೆ ಹಾಕಿದ ಕೌಳಿಗೆ, ಗೊರಟೆ, ಮಲ್ಲಿಗೆ, ತುಳಸೀ ಹಾರಗಳು ತೊಟ್ಟಿಲ ಹಗ್ಗ ತೂಗಿದ ಹಾಗೆ ಸಣ್ಣಗೆ ಕಂಪಿಸಲಾರಂಭಿಸಿದವು.

ಕೊನೆಯದಾಗಿ ದೊಡ್ಡಪ್ಪ ನೀಲಾಂಜನವೆತ್ತಿಕೊಂಡರು. ೧೬ ಸೊಡರುಗಳ ನೀಲಾಂಜನ. ನಡು ನಡುವೆ ಜೋಡಿಸಿದ ಗುಲಾಬಿ ಬಣ್ಣದ ಗೋದಾಸವಾಳಗಳು. ಅತ್ತ ದೊಂದಿಯಂತಲ್ಲದ, ಇತ್ತ ಮಿಣಮಿಣನೆ ಮಿಸಕದೆ ಹಿತವಾಗಿ ಉರಿಯುತ್ತಿರುವ ತುಪ್ಪ ದೀಪಗಳು. ಇದು ಮಹಾಪೂಜೆಯ ಕೊನೆಯಾರತಿ. ಮಂಟಪದ ಮುಂದೆ ದೇವಿಮಹಾತ್ಮೆ ಪಾರಾಯಣ ಮಾಡುತ್ತಿದ್ದವರು, ಉಟ್ಟ ಪಟ್ಟೆಯನ್ನು ಗಟ್ಟಿ ಮಾಡಿಕೊಳ್ಳುತ್ತಾ ಎದ್ದು ನಿಂತರು. ಜಾಗಟೆ ಸದ್ದಿಗೆ ಅಳುವ ಮಗುವನ್ನೆತ್ತಿಕೊಂಡು ಮುಖಮಂಟಪಕ್ಕೆ ಹೋದವರು ಮಹಾಮಂಗಳಾರತಿ ನೋಡಲು ದಡಬಡಾಯಿಸಿ ಬಂದರು.

ಎಂಥಾ ನೀಲಾಂಜನ ! ಸಣ್ಣ ಗೆರಸೆಯಗಲದ ಹಿತ್ತಾಳೆ ಹರಿವಾಣದಲ್ಲಿ ಜೋಡಿಸಿದ ಕಂಚಿನ ದೀಪಗಳು. ಅದನ್ನೆತ್ತಲು ರೆಟ್ಟೆಯಲ್ಲಿ ಬಲ ಬೇಕು. ದೊಡ್ಡಪ್ಪ ಕುಳಿತುಕೊಂಡೇ ನೀಲಾಂಜನದಾರತಿ ಎತ್ತುತ್ತಿದ್ದರು. ಮಂಟಪ ನಡುಗುತ್ತಲೇ ಇತ್ತು.

`ನಿಲ್ಲಿಸಿ ದೊಡ್ಡಪ್ಪಾ… ‘ ಉತ್ತರ ಪೂಜೆಗೆ ತಯಾರು ಮಾಡುತ್ತಿದ್ದ ಲೋಕಯ್ಯ ಕಿರುಚಿದ. ತನ್ಮಯತೆಯಿಂದ ಜಾಗಟೆ ಬಡಿಯುತ್ತಿದ್ದ ಮಾಣಿಯೂ ಲೋಕಯ್ಯನ ಸದ್ದಿಗೆ ಬೆಚ್ಚಿ ಜಾಗಟೆ ಬಿಟ್ಟು ಬಿಟ್ಟ. ದೊಡ್ಡಪ್ಪ ಕುಳಿತ ಮಣೆಯಿಂದ ತುಸು ಜಾರಿ ನೀಲಾಂಜನವನ್ನು ಭದ್ರವಾಗಿ ಹಿಡಿದುಕೊಂಡೇ ತಲೆಯೆತ್ತಿದ್ದರು. ಅರ್ಧನಿಮಿಷ ಮೌನ.

`ಈ ಮನುಷ್ಯ ಚಟ್ಟಮುಟ್ಟಿಗೆ ಹಾಕಿಕೊಂಡೇ ನೀಲಾಂಜನ ಎತ್ತುತ್ತಾನೆ. ಬಲ ಮುಂಗಾಲನ್ನು ದೇವರ ಮಂಟಪಕ್ಕೆ ಕುಟ್ಟಿ ಮಂಟಪ ದರ್ಶನ ಮಾಡುತ್ತೀರಾ..? ದಗಾ.. ದಗಾ…’ ಎಂದು ಹೇಳುತ್ತಲೇ ಬತ್ತಿ ಹಾಕಿಟ್ಟಿದ್ದ ಏಕಾರತಿಯನ್ನು ರಪ್ಪನೆ ಬಿಸಾಡಿ ಹೊರಟು ಹೋದ.

ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದ ದೊಡ್ಡಪ್ಪ ದೇವರಿಗೆ ಪುನಃ ನೀಲಾಂಜನ ತೋರಿಸಿ, ಅದರಲ್ಲಿದ್ದ ಬಿಡಿ ಹೂಗಳ ದೇವರ ಮೇಲೆ ಹಾಕಿ ಆರತಿ ಕೆಳಗಿಟ್ಟರು. ಬಂದವರೆಲ್ಲ ಮೌನವಾಗಿಯೇ ಆರತಿ ತಗೊಂಡರು. ಬಂದವರ್ಯಾರಿಗೂ ವಿಷಯದ ತಲೆಬುಡ ಅರ್ಥವಾಗಲಿಲ್ಲ. ಏನೋ ಎಡವಟ್ಟಾಗಿದೆ ಎಂದು ಎಲ್ಲರಿಗೂ ಗೊತ್ತಾದ್ದರಿಂದ ಮಾತಿಲ್ಲದೆ ಹೊರಟು ಹೋದರು. ಸೂಕ್ಷ್ಮವಾಗಿ ಗಮನಿಸಿದವರಿಗೆ ಮಂಟಪದ ದರ್ಶನ ಏಕಾ ಏಕಿ ನಿಂತದ್ದು ತಿಳಿಯಿತು. ನಂತರದ ಸಪ್ಪೆ ವಾತಾವರಣದಲ್ಲಿ ಸಿಹಿಯೂಟವಾಯಿತು.

ದೊಡ್ಡಪ್ಪನ ಸಿಂಹಾಯದ ಮನೆಯಲ್ಲಿ ಗಲಾಟೆ ಮಾಡುವ ತಾಕತ್ತು ಆ ಊರಿನಲ್ಲಿ ಯಾರಿಗೂ ಇರಲಿಲ್ಲ. ಲೋಕಯ್ಯ ಮೈಮೇಲೆ ಬಂದವನಂತೆ ಮಾರ್ನೆಮಿ ಪೂಜೆಯಂದೇ ಎಗರಾಡಿದ್ದ. ಈ ಮಂಟಪದ ರಹಸ್ಯವನ್ನು ಆತ ಊರಿನಲ್ಲೆಲ್ಲಾ ಟಾಂಟಾಂ ಮಾಡೇ ಮಾಡುತ್ತಾನೆ ಅನ್ನುವುದು ದೊಡ್ಡಪ್ಪನ ಲೆಕ್ಕಾಚಾರವಾಗಿತ್ತು. ಆದರೆ ಲೋಕಯ್ಯ ಹಾಗೆ ಮಾಡಲಿಲ್ಲ. ನಾಗಿಗೂ ಏನೂ ಅರ್ಥವಾಗಿರಲಿಲ್ಲ. ಲೋಕಯ್ಯನನ್ನು ಕೇಳುವ ಧೈರ್ಯವೂ ಅವಳಿಗಾಗಲಿಲ್ಲ. ಆದರೆ ಮುಂದಿನ ವರ್ಷಗಳಲ್ಲಿ ಕೋವಿ ಮನೆಯಲ್ಲಿ ಮಾರ್ನೆಮಿ ಪೂಜೆಯಂದು ಮಂಟಪ ಧರಿಸುತ್ತಿರಲಿಲ್ಲ.

`ದೇವರ ಮುಂದೆಯೇ ಅಬದ್ಧವಾಗಿ ಕಿರುಚಿದರೆ ಧರ್ಮ ಉಳಿಯುತ್ತದಾ… ?’ ಎನ್ನುವ ಪ್ರಶ್ನೆಯನ್ನೇ ದೊಡ್ಡಪ್ಪ ಮಂಟಪ ಧರಿಸದೇ ಇರುವುದಕ್ಕೆ ಕಾರಣವನ್ನಾಗಿ ಎಲ್ಲರ ಮುಂದಿಡುತ್ತಿದ್ದರು.

ಮಾರ್ನೆಮಿ ಪೂಜೆಗೆ ಮಂಟಪ ನಡುಗುವುದು ನಿಂತದ್ದು ಬಿಟ್ಟರೆ ದೊಡ್ಡಪ್ಪನಿಗೇನೂ ತೊಂದರೆಯಾಗಲಿಲ್ಲ. ಕೋವಿ ಹಿಡಿದುಕೊಂಡ ಹುಚ್ಚು ಮನುಷ್ಯನಿಗೆ ಹೆದರುವಂತೆ ಊರಿಗೆ ಊರಿಗೇ ಕೋವಿ ಮನೆಗೆ ಹೆದರುತ್ತಿತ್ತು. ದೊಡ್ಡಪ್ಪ ಮನೆ ಕಟ್ಟಿಸಿದವರೇ, ಮನೆಗೊಂದು ಕೋವಿ ಕೊಂಡಿದ್ದರು. ಊರಿನ ಪುಂಡು ಕಳ್ಳರು ಹೆದರಲಿ ಅಂತಲೋ ಏನೋ.. .. ಹೊಸದರಲ್ಲಿ ಆ ಕೋವಿಯನ್ನು ಮನೆಗೆ ಬಂದವರಿಗೆಲ್ಲರಿಗೂ ತೋರಿಸುತ್ತಿದ್ದರು. ಶತಮಾನಗಳ ಹಿಂದಿನ ಮನೆಯಲ್ಲವಾದರೂ, ಕೋವಿ ಮನೆ ಎಂಬ ಹೆಸರು ಊರಿನಲ್ಲಿ ಪ್ರಚಲಿತವಾಯಿತು.

ಕೋವಿ ಭಯಕ್ಕೋ, ಮಾಟದ ಭಯಕ್ಕೋ, ಆ ಮನೆಯ ತೋಟದಲ್ಲಿ ಬಿದ್ದ ತೆಂಗಿನ ಕೊದುಂಬು, ಸೋಗೆ, ಕಸ ಕಡ್ಡಿಯನ್ನೂ ಯಾರೂ ಮುಟ್ಟುವುದಿಲ್ಲ. ದೇವರ ಪೂಜೆಗೆಂದು ಕೇಪಳ ಹೂವನ್ನೂ ಕೋವಿನ ಮನೆಯವರ ಜರಿಯಿಂದ ಯಾರೂ ಕೀಳುವುದಿಲ್ಲ.

ಆದರೆ ಲೋಕಯ್ಯನ ಬದುಕು ಕುಸಿಯಿತು. ಕಡು ಬಣ್ಣದ ಲುಂಗಿ, ತಿಳಿ ನೀಲಿ ದೊಗಲೆ ಶರಟು ಹಾಕಿಕೊಂಡು ಓಡಾಡುವ ಲೋಕಯ್ಯ ಊರಿನಲ್ಲಿ ಯಾರ ಕೈಲೂ ಕೆಟ್ಟವನು ಅಂತ ಅನಿಸಿಕೊಂಡವನಲ್ಲ. ಬಡವ ಪಾಪ ಅಂತ ಎಲ್ಲರೂ ಆತನೆಡೆಗೆ ಕರುಣೆ ತೋರುತ್ತಿದ್ದರು.

ಕೈಯ್ಯಲ್ಲಿದ್ದ ಕಂಪೆನಿ ಕೆಲಸ ಬಿಟ್ಟು ಭೂಮಿಯ ಗೀಳು ಹತ್ತಿಸಿಕೊಂಡು ದುಡಿಯಲು ನಿಂತ. ಮುಕ್ಕಾಲು ಪಾಲು ಆಸ್ತಿ ದೊಡ್ಡಪ್ಪನ ತೆಕ್ಕೆಯಲ್ಲಿತ್ತು. ಲೋಕಯ್ಯ, ತನ್ನ ಪಾಲಿನ ಭತ್ತದ ಗದ್ದೆಯಲ್ಲಿ ತೋಟ ಇಟ್ಟು ಚಿನ್ನ ತೆಗೆಯುತ್ತೇನೆಂದು ಕನಸು ಕಂಡ. ತೋಟಕ್ಕೆ ನೀರು ಸಾಲದೆಂದು ಬಾವಿ ತೋಡಿಸಿದ. ಆರು ಮುಂಡಿನಲ್ಲಿ ನೀರು ಸಿಗಬಹುದು ಅಂತ ನಿರೀಕ್ಷೆ ಇತ್ತು. ಆದರೆ ಎಂಟು ಮುಂಡು ಅಗೆದ ನಂತರ ಪಿಕ್ಕಾಸಿಗೆ `ಠಣ್’ ಅಂತ ಪಾದೆಕಲ್ಲು ತಾಗಿ ಬೆಂಕಿ ಕಿಡಿ ಚಿಗಿಯಿತು. ಲೋಕಯ್ಯನನ್ನು ಹೀಗೆ ಕಚ್ಚಿಕೊಂಡ ಸೋಲು ಬೆಂಬಿಡಲಿಲ್ಲ.

ಈ ಸೋಲಿಗೆಲ್ಲ ಕೋವಿ ಮನೆಯವರೇ ಕಾರಣ ಅಂತ ನಾಗಿಯ ಆಪಾದನೆ. ಹಾರೆ ಹಾಕಿದಲ್ಲಿ ಸಿಕ್ಕ ಗುಜರಿ ತಗಡುಗಳೂ ಮಾಟದ ವಸ್ತುಗಳಾಗಿ ಕಂಡವು. ಆದರೆ ಅದಕ್ಕೆ ಪ್ರತಿಮಾಟ ಮಾಡಲು ಕೈಲಿ ಕಾಸು ಕೂಡುತ್ತಿರಲಿಲ್ಲ. ಅನಾಥೋ ದೈವ ರಕ್ಷಕ ಅಂತ ಪಕ್ಕದ ಮನೆಯವರ ಬಳಿ, ಮಕ್ಕಳ ಬಳಿ ಆಗಾಗ ಅನ್ನುತ್ತಾ ನಾಗಿ ಸಮಾಧಾನಮಾಡಿಕೊಂಡಿದ್ದಳು. ಅದಕ್ಕೆಂದೇ ಕೋವಿ ಮನೆಯವರು ಮುಸ್ಸಂಜೆ ದೇವರಿಗೆ ದೀಪ ಹಚ್ಚಿ ಶಂಖ ಊದುವ ಮೊದಲೇ ನಾಗಿ ದೀಪಹಚ್ಚಿ ನಾಲ್ಕು ಶಂಖ ಊದಿ ಬಾವಿಗೆ ದೀಪ ತೋರಿಸಿ, ತುಳಸಿ ಮುಂದೆ ಇಟ್ಟು ಬಿಡುತ್ತಿದ್ದಳು. ಲೋಕಯ್ಯನೂ ಊರಿನ ಉಳ್ಳಾಲ್ತಿಯನ್ನೇ ನಂಬಿ ಪ್ರತಿವಾರ ದೇವರ ತೀರ್ಥ ತಂದು ಮನೆ ದೇವರ ಮುಂದಿಡುತ್ತಿದ್ದ.

ಕೋವಿ ಮನೆಯವರು ಪುನಃ ಮಾಟ ಮಾಡಿರಬೇಕು. ಈಗ ಇರುವೆ ಬಂದಿದೆ. ನಾಗಿ ದೈವಿಕ ಕಾರಣಗಳನ್ನು ಹುಡುಕಿ ಕೋವಿ ಮನೆಯವರನ್ನು ಬೈಯ್ಯುತ್ತಲೇ ನಿದ್ದೆ ಹೋಗಿದ್ದಾಳೆ. ಆದರೆ ಲೋಕಯ್ಯನಿಗೆ…?

ಕಪ್ಪು ಇರುವೆಗಳು ತಲೆದಿಂಬಿನ ಎಣ್ಣೆ ಪಸೆಗಾಗಿ ಮುತ್ತಿಗೆ ಹಾಕುತ್ತಿವೆ. ಮಣ್ಣಿನ ಗೋಡೆಯ ಬಿರುಕುಗಳಿಂದ ದೊಡ್ಡ, ಚಿಕ್ಕ ಕಪ್ಪು , ಕರ್ರಪ್ಪು ಸಾಲು ಇರುವೆಗಳು ಉದ್ಭವಿಸುತ್ತಿವೆ. ಹೊರಗೆ ಕಣ್ಣಿಗೆ ಸೂಜಿ ಚುಚ್ಚಿದರೂ ಕಾಣಿಸದ ಕರ್ಗುಂಡಿ ಕತ್ತಲೆ. ಛಾವಣಿಯ ಹೊಗೆ ಹಿಡಿದ ಗಾಜಿನ ಹೆಂಚಿನಲ್ಲಿ ಒಂದು ಮುಷ್ಟಿ ನಕ್ಷತ್ರಗಳು ಕಾಣಿಸುತ್ತಿವೆ.

ಬಾವಲಿಗಳು ಬಾಳೆ ಗಿಡಗಳ ನಡುವೆ ವ್ಯಸ್ತವಾಗಿ ಓಡಾಡುತ್ತಿವೆ. ಮನೆ ಮುಂದಿನ ಗಾಳಿಬಾಳೆ ಅಪರೂಪಕ್ಕೆ ಒಂದು ಕೈಲು ಹಾಕಿದೆ. ಅದನ್ನೂ ಈ ಬಾವಲಿಗಳು ಬಿಡುತ್ತಿಲ್ಲವೇನೋ. ಲೋಕಯ್ಯ ಅಲ್ಲೇ ಒರಗಿಕೊಂಡ. ಮೊಂಟೆಗಳ ಟಪಟಪ ಸದ್ದು. ಟಿರಿಟಿರಿ ಟಿರ್ರ್… ಎಂಬ ನಡು ರಾತ್ರಿಯ ಚೇರಂಟೆ ಶಬ್ದ. ಕತ್ತಲೋ ಕತ್ತಲು. ಹಾಗೆಂದು ಅಮಾಸೆ ಕತ್ತಲಲ್ಲ. ತಿಂಗಳು ಕಂತಿದೆ. ನಕ್ಷತ್ರಗಳು ದಿಕ್ಕು ತೋರಿಸುತ್ತಿದ್ದವು.

ಲೋಕಯ್ಯ ಮಂಪರಿಗೆ ಜಾರಿದ. ತುಸು ಹೊತ್ತಾಗುತ್ತಲೇ ಆತನ ಕಣ್ಣ ಮುಂದೆ ಮಂದ ಪ್ರಕಾಶ. ಕಣ್ಣು ಕುಕ್ಕುವ ಬೆಳಕಲ್ಲ. ಎಲ್ಲವೂ ನಿಚ್ಚಳ. ಲೋಕಯ್ಯನ ಜಗುಲಿ ಮನೆ. ಜಗಲಿಯ ಕಂಬಕ್ಕೊರಗಿ ಅವನ ಅಪ್ಪ ಕುಳಿತಿದ್ದಾರೆ. ಲೋಕಯ್ಯ ಹಟ್ಟಿಯಲ್ಲಿರುವ ದನ- ಎತ್ತುಗಳ ಸಾಮ್ರಾಜ್ಯಕ್ಕೆ ಹಸಿಹುಲ್ಲು ತರಲು ಹೊರಟಿದ್ದ. ಒಚ್ಚೆ ಮಣೆಗೆ ಬಿಳಿಕಲ್ಲು ಪುಡಿ ಹಾಕಿ ಸವರಿ ಸವರಿ ಹುಲ್ಲ ಕತ್ತಿ ಮಸೆಯುತ್ತಿದ್ದ. ಪಕ್ಕದಲ್ಲಿಯೇ ಹುಲ್ಲಿನ ಬುಟ್ಟಿ. ಹಗ್ಗ. ಅಪ್ಪ ಹೇಳುತ್ತಿದ್ದರು. `ನೋಡು ನಿನ್ನ ದೊಡ್ಡಪ್ಪ ಕಟ್ಟಿದ್ದು ಸಿಂಹಾಯದ ಮನೆ. ಆ ಚಾವಡಿಗೆದುರು ನಿಂತವನಿಗೆ ಒಳ್ಳೆಯದಾಗುವುದಿಲ್ಲ. ಅವನ ಕೃತ್ರಿಮಗಳಿಗೆ ನೀನು ಪ್ರತಿಯಾಗಿ ಮಾಟ ಗೀಟ ಅಂತ ಹೋಗ್ಬೇಡಪ್ಪಾ. ನಿನ್ನ ಉಳ್ಳಾಲ್ತಿಯೊಬ್ಬಳೇ ಕಾಯಬೇಕು.’

ಎಡಗೈಯ್ಯ ಹೆಬ್ಬೆಟ್ಟಿನಲ್ಲಿ ಕತ್ತಿಯ ಬೆಳ್ಳ ಬೆಳ್ಳಗಿನ ಬಿಸಿ ತುದಿಯನ್ನು ಒತ್ತಿ ಬಲಗೈಲಿ ಕತ್ತಿಯ ಮರದ ಹಿಡಿ ಹಿಡಿದುಕೊಂಡು ಲೋಕಯ್ಯ ಮಸೆಯುತ್ತಲೇ ಇದ್ದ. ಕತ್ತಿ ಗೀರಿ ಗೀರಿ ದೊರಗಾಗಿದ್ದ ಎಡಗೈ ಹೆಬ್ಬೆಟ್ಟಿನಲ್ಲಿ ಇನ್ನೊಂದು ದಪ್ಪ ಗೀರು ಬಿತ್ತು. ಕೆಂಪು ಮಿಶ್ರಿತ ಕಪ್ಪು ರಕ್ತ ತುಸುವೇ ಆಚೆಗೆ ಬಂತು. ಆಯ್.. ಎನ್ನುತ್ತಾ ಲೋಕಯ್ಯ ತಲೆ ಎತ್ತಿ ನೋಡಿದ…. ಹಾಳು ಕನಸು. ಚಿಮಿಣಿ ದೀಪ ಆರುತ್ತಿತ್ತು.

`ಬೆಳಬೆಳಗ್ಗೆ ಸತ್ತವರೆಲ್ಲ ಕನಸಲ್ಲಿ ಬರ್ತಾರೆ. ಏನು ಕಾದಿದೆಯೋ… ‘ ಎಂದು ವಟಗುಟ್ಟಿದ ಲೋಕಯ್ಯ.
*
*
*
ಲೋಕಯ್ಯನ ಮಗ ಈಗ ೮ನೇ ಕ್ಲಾಸು. ಮನೆಯಲ್ಲಿ ಮೂಲೆ ಮೂಲೆಗಳಲ್ಲಿ ಹಿಪ್ಪೆಯಾಗಿ ಬಿದ್ದಿರುವ ಕಷ್ಟಗಳು ಅವನಿಗೆ ಅರ್ಥವಾಗುತ್ತಿದೆ. ಲೋಕಯ್ಯನಿಗೆ ಅದೇ ಸಂತೋಷ. ಅದಕ್ಕೆಂದೇ ಇದ್ದ ಬದ್ದ ಹಣವನ್ನೆಲ್ಲಾ ಸೇರಿಸಿ ಮಗನ ಎಂಟನೆಗೆ ಸೇರಿಸಿದ್ದ. ಪ್ರತಿದಿನ ಕಿಶೋರ ಮುಕ್ಕಾಲು ಮೈಲಿ ನಡೆದುಕೊಂಡು ಹೋಗೇ ಶಾಲೆ ಕಲಿಯುತ್ತಾನೆ. ಎರಡನೆಯ ಮಗಳು ಐದನೇ ಕ್ಲಾಸಿಗೆ ಬ್ರೇಕ್ ಹಾಕಿ ನಾಗಿ ಸೆರಗಿನ ಹಿಂದೆ ಓಡಾಡುತ್ತಿದ್ದಾಳೆ.

ದೊಡ್ಡಪ್ಪನ ಮೂವರು ಮಕ್ಕಳೂ ಟ್ರಿಮ್ಮಾಗಿ ಕ್ಲಾಸಿಗೆ ಹೋಗುತ್ತಾರೆ. ಅವರನ್ನು ನೋಡುವಾಗಲೆಲ್ಲ ನಾಗಿಗೆ ಹೊಟ್ಟೆಯಲ್ಲಿ ಕಡಗೋಲು ಆಡಿಸಿದಷ್ಟು ಸಂಕಟವಾಗುತ್ತದೆ. ಅರಸು ಅಂಕೆಯಿಲ್ಲದೆ, ದೈವದ ಕಾಟವಿಲ್ಲದೆ ಮೆರೀತಾನೆ. ಮಾಡಿದ ಪಾಪ ಮೈಗಂಟದೇ ಇರುತ್ತದಾ ? ಆ ಉಳ್ಳಾಲ್ತಿ ಇವನ ಕಾಲು ಮುರಿಯದೇ ಇರುತ್ತದಾ ಎನ್ನುವ ನಾಗಿಯ ಶಾಪ ದೇವರಿಗೆ ಕೇಳಿಸಿತೋ ಏನೋ, ಇದ್ದಕ್ಕಿದ್ದಂತೆ ದೊಡ್ಡಪ್ಪನ ಒಬ್ಬನೇ ಒಬ್ಬ ಮಗ ಕಾಣೆಯಾದ. ಕೋವಿಮನೆಯಲ್ಲಿ ಸಾಸುವೆ ಕಾಳು ಬಿದ್ದರೂ ಸದ್ದು ಕೇಳಿಸುವಷ್ಟು ಮೌನ. ಟೀವಿ, ರೇಡಿಯೋ, ಪೇಪರಿನಲ್ಲಿ ದೊಡ್ಡಪ್ಪನ ಮಗನ ಪಟ ಬಂತು. ಮಗ ಬರಲಿಲ್ಲ.

ದಿನಗಳು ನಿಲ್ಲುತ್ತವಾ. ಕಾಲ ಲೋಕಯ್ಯನ ಕಾಲು ಸುತ್ತಿಕೊಂಡಿದ್ದ ಬಡತನವನ್ನು ಬಿಡಿಸುತ್ತಿತ್ತು. ಕಿಶೋರ ಈಗ ಕೆಲಸಕ್ಕೆ ಹೋಗುತ್ತಾನೆ. ಕೋವಿ ಮನೆಯ ಮುಂದಿನ ತೆಂಗಿನ ಗಿಡ ಮನೆಯ ಮುಗುಳಿ ದಾಟಿ ಬೆಳೆದು ಮರವಾಗಿತ್ತು. ಹೆಣ್ಣು ಮಕ್ಕಳು ಬೆಳೆದು ನಿಂತಿದ್ದರು. ಮನೆಯ ಕಾರ್ನಿಕವನ್ನು ಹೆಚ್ಚಿಸುವ ದೊಡ್ಡಪ್ಪನ ಅಬ್ಬರ ತಾಳ ನಡೆಯುತ್ತಲೇ ಇತ್ತು.
*
*
*
ಅವತ್ತು ರಾತ್ರಿ ಲೋಕಯ್ಯ ದನಕ್ಕೆ ಬೈ ಹುಲ್ಲು ಹಾಕಲು ಹುಲ್ಲ ಮೂಟೆಯಿಂದ ಹುಲ್ಲೆಳೆಯುತ್ತಿದ್ದ. ದಬ್… ಅಂತ ಗಂಟೊಂದು ಕೆಳ ಬಿತ್ತು. ಜಿಪ್ಪನೆ ಬೆಚ್ಚಿದ ಲೋಕಯ್ಯ ಚಿಮಿಣಿ ದೀಪ ಹಿಡಿದುಕೊಂಡು ಹತ್ತಿರದಿಂದ ಗಂಟನ್ನು ನೋಡಿದ. ಬೆಳ್ಳನೆ ವಸ್ತ್ರದ ಗಂಟು. ಗಂಟಿನ ತುಂಬ ಉಂಡೆಗಳಿದ್ದಂತೆ ಕಂಡವು. ಲೋಕಯ್ಯನ ಗಡಿಬಿಡಿ ಕಂಡು ಬಂದ ನಾಗಿ, ಗಂಟನ್ನು ಕೈಯಿಂದ ಮುಟ್ಟಬೇಡಿ ಎಂದು ಲೋಕಯ್ಯನನ್ನು ದಬಾಯಿಸಿದಳು. ಹಿಡಿಸೂಡಿ, ಕುಂಕುಮ ಕಲೆಸಿದ ಕುರಿ ನೀರು ಹಿಡಿದುಕೊಂಡು ಬಂದಳು. ಗಂಟಿನ ಸುತ್ತ ಕುರಿ ನೀರು ಚೆಲ್ಲಿ ಹಿಡಿಸೂಡಿಯಿಂದ ಮೂರು ಬಾರಿ ಹೊಡೆದಳು. ಲೋಕಯ್ಯ ಗಂಟು ಬಿಚ್ಚಿದ. ಗಂಟಿನ ತುಂಬ ಹಳದಿ ನಿಂಬೆ ಹಣ್ಣುಗಳಿದ್ದವು. ಇಂದೆಂಥಾ ನಮೂನೆಯ ಮಾಟವಪ್ಪಾ ಅಂತ ಗಂಡ ಹೆಂಡತಿ ಪೆಚ್ಚಾದರು. `ನಾಳೆ ಅಬ್ಬು ಬ್ಯಾರಿ ಅಂಗಡಿಗೆ ಅಷ್ಟೂ ನಿಂಬೆ ಹಣ್ಣನ್ನು ಮಾರಿ ಬಿಡಿ’ ಅಂತ ಕಿಶೋರ ಸಲಹೆ ಮಾಡಿ ಮಲಗಿಬಿಟ್ಟ.

ಇಡ್ಲಿಗೆ ಉದ್ದು ಅರೆಯುತ್ತಲೇ ಸದ್ದು ಮಾಡುತ್ತಾ ನಾಗಿ ಸಿಟ್ಟು ಪ್ರದರ್ಶಿಸಿದಳು. ದನಕ್ಕೆ ಹುಲ್ಲು ಹಾಕಿ, ಅದರ ಗಂಗೆದೊಗಲು ತಿಕ್ಕದ ಲೋಕಯ್ಯ ಗಳಿಗೆಗೊಂದು ನಿಟ್ಟುಸಿರು ಬಿಡುತ್ತಾ ಮಲಗಿಕೊಂಡ. ಸ್ವಲ್ಪ ಹೊತ್ತಿಗೆಲ್ಲಾ ನಾಗಿಯೂ ಅಡ್ಡಾದಳು.
ಅಪರಾತ್ರಿ. ಲೋಕಯ್ಯನ ಮಂಪರಿನಲ್ಲಿ ನಿಂಬೆ ಹಣ್ಣಿನ ಹಳದಿ ಬಣ್ಣವೇ ತೇಲುತ್ತಿತ್ತು. ರಾತ್ರಿ, ಮತ್ತ ಹಗಲು, ಗದ್ದೆ, ಕೆಲಸ… ಮತ್ತಿನ್ನೇನು ಕಾದಿದೆಯೋ… ಸತ್ಯದೇವತೆ, ಉಳ್ಳಾಲ್ತಿಯೇ… ಎಲ್ಲ ಭಾರ ನಿನ್ನದೇ…

ಅಷ್ಟರಲ್ಲಿ ಹೊರಗಿನಿಂದ ಬೊಬ್ಬೆ ಕೇಳಿಸಿತು. `ಲೋಕೂ… ಸ್ವಲ್ಪ ಬಾರೋ… ದೊಡ್ಡಪ್ಪ ಬಾವೀಲಿ… ಸಂಕಣ್ಣಾ… ಲೋಕೂ…ಯಾರಾದ್ರೂ ಬನ್ನಿ…’ ಹೆಂಗಸಿನ ದನಿ. ದೊಡ್ಡಮ್ಮನ ಸ್ವರ ಅಲ್ವ ?

ಲೋಕಯ್ಯ ದಡಕ್ಕನೆ ಎದ್ದ. ನಾಲ್ಕು ದೌಡಿನಲ್ಲಿ ಕೋವಿ ಮನೆಯ ಬಾವಿ ಕಟ್ಟೆ ಮುಂದೆ ನಿಂತಿದ್ದ. ಮನೆಯವರೆಲ್ಲ ಬಾವಿಗೆ ಟಾರ್ಚ್ ಲೈಟ್ ಬೀರುತ್ತಾ ನಿಂತಿದ್ದರು. ಲೋಕಯ್ಯನೂ ಪಕ್ಕದಲ್ಲಿದ್ದವರ ಟಾರ್ಚ್ ಕಸಿದುಕೊಂಡು ಬೆಳಕು ಬೀರುವಷ್ಟರಲ್ಲಿ ಜೀವ ಮೂರು ಮುಳುಗು ಹಾಕಿ ನೀರಿನಡಿಗೆ ಹೋಗಿತ್ತು.

`ವೋ… ಏನಾಗಿತ್ತು ? ಜಗಳಾಡಿದ್ದರಾ … ಎಷ್ಟು ಹೊತ್ತಿಗೆ ನಿಮ್ಗೆ ಶಬ್ದ ಕೇಳಿದ್ದು..’ ಪ್ರಶ್ನೆಗಳ ಮೇಲೆ ಪ್ರಶ್ನೆ. ದೊಡ್ಡಮ್ಮ ಮಕ್ಕಳು ಮಾತಾಡಲು ತೋಚದೆ ಬಾಯಿ ಬಾಯಿ ಬಡಿದುಕೊಂಡು ಅಳುತ್ತಿದ್ದರು. ನೆಲ್ಲಿ ಮರದ ಹಲಗೆ ಹಾಕಿದ ವಿಶಾಲ ಬಾವಿ. ತೆಕ್ಕೆಯಷ್ಟಗಲದ ದಂಡೆ ಮರ. ದಂಡೆಗೆ ಕಾಲುಕೊಟ್ಟು ನಾಲ್ಕು ಬಾರಿ ಹಗ್ಗ ಜಗ್ಗಿದರೆ ಕೊಡಪಾನ ನೀರು ಕೈಗೆ ಬರುವಷ್ಟು ತುಂಬು ನೀರು.

ಲೋಕಯ್ಯ ಲುಂಗಿಯನ್ನು ಕಚ್ಚೆ ಕಟ್ಟಿ, ರಾಟೆ ಹಗ್ಗವನ್ನು ದಂಡೆ ಮರಕ್ಕೆ ಬಿಗಿದ. ಎಲ್ಲರೂ ದೊಡ್ಡಪ್ಪನ ಪರಾಕ್ರಮಗಳನ್ನು ಗುಣಗಾನ ಮಾಡುತ್ತಿದ್ದರು. ಮಾಟಗಳೂ ಮಗುಚಿ ಮೆಟ್ಟುತ್ತವಂತೆ… ಕೆಲವರು ಪಿಸುಗುಟ್ಟಿದರು.

ಹೆಣ ಆಗಲೇ ಪಾತಾಳ ಸೇರಿತ್ತು. ಇದ್ದ ಬದ್ದ ದಮ್ಮು ಸೇರಿಸಿ ಒಂದು ಕೈಯ್ಯಲ್ಲಿ ಹಗ್ಗ ಹಿಡಿದು ಲೋಕಯ್ಯ ಬಾವಿಯೊಳಕ್ಕೆ ಹೋದ. ಅರೆ ಬರೆ ಟಾರ್ಚ್ ಬೆಳಕಿನಲ್ಲಿ ಆ ಅಗಲದ ಬಾವಿಯಲ್ಲಿ ಹೆಣ ಯಾವ ಮೂಲೆಯಲ್ಲಿದೆ ಎಂದು ಹುಡುಕುವುದು ಕಷ್ಟವಾಗಿತ್ತು. ತಡಕಾಡಿ ತಡಕಾಡಿ ಹೆಣಕ್ಕೆ ಕೈಲಿದ್ದ ಉರುಳು ಹಾಕಿ ಮೇಲೆ ಬಂದ. ಅಷ್ಟರಲ್ಲಿ ನಾಗಿ ಬಾವಿ ಕಟ್ಟೆ ಬಳಿ ಕುಸಿದು ಬಿದ್ದಿದ್ದಳು.

ಹೆಣವನ್ನು ಚಾವಡಿಯಲ್ಲಿ ಮಲಗಿಸಿದ ಲೋಕಯ್ಯ ರಪರಪನೆ ಮುಂದಿನ ವ್ಯವಸ್ಥೆ ಮಾಡಿದ. ದೊಡ್ಡಪ್ಪನ ದೊಡ್ಡ ಮಗಳು ಭವಾನಿ ಡಿಗ್ರಿ ಓದಿದ ಹುಡುಗಿ. ಪಕ್ಕಕ್ಕೆ ಕರೆದು ಹೇಳಿದ. `ನೋಡಮ್ಮ ಬಂಧು ಬಳಗಕ್ಕೆಲ್ಲಾ ಕಾಯುತ್ತಿದ್ದರೆ ಪೊಲೀಸರಿಗೆ ವಿಷಯ ತಲುಪುತ್ತದೆ. ಆತ್ಮಹತ್ಯೆ ಆದ್ದರಿಂದ ಪೋಸ್ಟ್ ಮಾರ್ಟಂ, ಅಲೆದಾಟ ಇರುತ್ತದೆ. ಅದು ಮನೆಗೆ ಭೂಷಣವಲ್ಲ. ಆದ್ರಿಂದ ಯಾವ ಮಾವಿನ ಮರ ಕಡಿಯೋದು ಅಂತ ಅಮ್ಮನ ಹತ್ರ ಕೇಳಿ ಹೇಳು’ .

ಮುಂದಿನ ಕೆಲಸಗಳೆಲ್ಲ ಚಕಚಕನೆ ನಡೆದವು. ಖುಷಿಯೋ ದುಃಖವೋ, ಚಪ್ಪರವೇರಿತು. ಪುರೋಹಿತರು ಮಂತ್ರ, ತಂತ್ರ… ಊಟ ಉಪಚಾರಗಳು … ಎಲ್ಲಿಯೂ ಲೋಕಯ್ಯನಿಗೆ ಬುಲಾವ್ ಇಲ್ಲ. ನಾಗಿ ಮಟಗುಟ್ಟುತ್ತಿದ್ದರೂ ಕರೆಯದೇ ಇದ್ದುದು ಒಂದು ರೀತಿಯಲ್ಲಿ ಒಳ್ಳೆಯದೇ ಆಯ್ತು ಅಂತ ಸಮಾಧಾನ ಮಾಡಿಕೊಂಡಿದ್ದಳು.
*
*
*
ವರ್ಷಗಳು ಅಟ್ಟಿಅಟ್ಟಿಯಾಗಿ ಉರುಳಿವೆ. ಕೋವಿ ಮನೆ ಧನು ತಿಂಗಳ ಅಪರಾತ್ರಿಯ ಚಳಿಯಷ್ಟೇ ತಣ್ಣಗಿದೆ. ಮನೆಯೊಳಗಿನ ಕತ್ತಲೂ ಅಷ್ಟೇ ಕರ್ರಗೆ. ಊರು ಬಿಟ್ಟಿದ್ದ ಚಿದಾನಂದ ಬಂದಿದ್ದಾನೆ. ದೊಡ್ಡಮ್ಮ ತೀರಿಕೊಂಡಿದ್ದಾರೆ. ಅಡವಿಯಂಥ ಮನೆಯ ಚಾವಡಿ ಹೊಸ್ತಿಲಿನಿಂದ ಕುರುಬಾಗಿಲಿನ ಹೊಸ್ತಿಲಿನವರೆಗೂ ಚಿದಾನಂದನೊಬ್ಬನೇ ಓಡಾಡುತ್ತಾನೆ. ಹೆಣ್ಣುಮಕ್ಕಳು ಅವರವರ ದಾರಿ ಕಂಡುಕೊಂಡಿದ್ದಾರೆ. ಕಿಶೋರನೂ ಚಿದಾನಂದನೂ ಒಟ್ಟಿಗೇ ಅಬ್ಬುಬ್ಯಾರಿ ಅಂಗಡಿಯಲ್ಲಿ ಆಮ್ಲೆಟ್ ತಿನ್ನುತ್ತಾರೆ. ಆದರೆ ಈ ಚಿದಾನಂದನ ಕಣ್ಣುಗಳಲ್ಲಿ ಯಾಕೆ ಜೀವ ಕಾಣುತ್ತಿಲ್ಲ ಎನ್ನುವುದು ಕಿಶೋರನಿಗೆ ಅರ್ಥವಾಗುವುದಿಲ್ಲ.

ಒಂದು ಸಂಜೆ ಅಮ್ಲೆಟ್ ತಿಂದ ಖಾಲಿ ಪ್ಲೇಟನ್ನು ತೋರು ಬೆರಳಲ್ಲಿ ತಿರುಗಿಸುತ್ತಾ ಚಿದಾನಂದ ಕೇಳಿದ ` ಕಿಶೋರಾ, ನಿಂಗೆ ಮಕ್ಕಳನ್ನು ಎಲ್ಲೆಲ್ಲಿ ದತ್ತು ತೆಗೆದುಕೊಳ್ಳುವುದು ಅಂತ ಗೊತ್ತುಂಟಾ ? ಈ ಕೋವಿ ಮನೆಯ ಸಂತಾನ ಮುತ್ತಬೇಕು. ಯಾವ ಮಗುವಾದರೂ ಸರಿ. ಹುಟ್ಟಿದ ಗಳಿಗೆ ಗೊತ್ತಿದ್ದರೆ ಒಳ್ಳೆದಿತ್ತು. ನಿಂಗ್ಯಾರಾದರೂ ಗೊತ್ತಾ..? ‘
*****
ಕೃಪೆ: http://www.thatskannada.com

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.