ಬೆದಕಾಟ ಬದುಕೆಲ್ಲ

“ಚಳಿಯಾ?… ಇನ್ನೇನು ಬಂತು” – ಎಂದು ಇನ್ನೂ ಹತ್ತಿರಕ್ಕೆ ಎಳೆದುಕೊಂಡು “ಅಷ್ಟರವರೆಗೆ ಸಹಿಸು” – ಎಂದು ಇವರು ಪಿಸು ನುಡಿಯುವಾಗ ಕಾರು “ಲಾಡ್ಜ್ ಪ್ಯಾರಾಡೈಸ್” ಮುಂದೆ ಬಂದು ನಿಂತಿತ್ತು.

ದಕ್ಷಿಣ ಕನ್ನಡದ ಸೆಕೆಯನ್ನೇ ಒಗ್ಗಿಸಿಕೊಂಡವರಿಗೆ ಈ ಚಳಿ ವಿಪರೀತ ಇವರಿಗೋ “ಏನೂ ಅಲ್ಲ” ನಾನು ಚಳಿಗೆ ಮುದುರುವುದನ್ನು ಕಂಡು “ಇದಕ್ಕೇ ಚಳಿಯೆಂದರೆ ಇನ್ನು ಚಳಿಗಾಲದಲ್ಲಿ ಬಂದರೆ ಏನೆನ್ನುತ್ತಿಯಾ?” ಎಂದು ನಗು. ನಗುವಿಗುತ್ತರ ಕೊಡಲು ತುಟಿಯನ್ನು ಅರಳಿಸಲಾರದಷ್ಟು ಚಳಿ ನನಗೆ.

ಕೋಣೆಗೆ ಬಂದು ಅಯ್ಯಮ್ಮ ಎಂತ ಕುಳಿತೆವು. ಆಗಲೇ ರಾತ್ರಿ ಎಂಟಕ್ಕೆ ಬಂದಿತ್ತು. ಪ್ರಯಾಣದ ಆಯಾಸದಿಂದಲೋ ಚಳಿಯ ಮೊರೆತದಿಂದಲೋ ಹಾಸಿಗೆ ಸೇರಿ ಬೆಚ್ಚಗೆ ಕಿವಿಯವರೆಗೆ ಹೊದೆದು ಬಿಸಿಯಾಗಿ ಮಲಗಬೇಕೆಂಬ ಒಂದೇ ಆಸೆ ಆ ನಿಮಿಷದಲ್ಲಿ. ಹಿತಕರವಾದ ಊಟ ಮುಗಿಸಿ ಮಲಗಿದವಳಿಗೆ ಬೆಳಿಗ್ಗೆ ಆರಕ್ಕೇ ಎಚ್ಚರ.

ಎದ್ದು ನೋಡಿದೆ. ಇವರು ಮಗುವಿನಂತೆ ನಿದ್ರಿಸುತ್ತಿದ್ದರು. ಚಳಿ ತನಗಿಲ್ಲ ಎಂದವರು ಕಣ್ಣು ಮಾತ್ರ ಬಿಟ್ಟು ಪಟ್ಟಾಗಿ ಹೊದೆದು ಬಿಟ್ಟಿದ್ದರು. ಹೊದೆದ ರಗ್ಗನ್ನು ಮತ್ತಷ್ಟು ಸರಿಯಾಗಿ ಹೊದಿಸಿ ಹೊರಗಿಣಿಕಿದೆ.

ಸುಯ್ಯೆಂದು ಗಾಳಿ ಬೀಸುತ್ತಿತ್ತು. ಚಳಿಯ ಗರ್ಭದಿಂದಲೇ ಒಡೆದು ಬಂದಿದೆಯೇನೋ ಎಂಬಷ್ಟು ಶೀತಲವಾಗಿ, ಕೈಕಾಲು ಗಡಗಡವೆನ್ನುತ್ತಿದ್ದರೂ ಕಣ್ಣಿಗೆ ಹಸಿರು ನೋಡುವ ಆಸೆ. ಮಂಜಿನ ಮುಸುಕಿನಲ್ಲಿ, ಅಬ್ಬಿಯ ಮೊರೆತದ ತಂಪು ಹಿನ್ನೆಲೆಯಲ್ಲಿ, ಹಕ್ಕಿ ಉಲಿತದ ಗಂಧರ್ವ ತಾಣದಲ್ಲಿ ತಿರುಗುವಾಸೆ. ಇವರು ಏಳಲು ಇನ್ನು ಎಷ್ಟು ಹೊತ್ತಿದೆಯೋ! ಒಂದು ಸುತ್ತು ಹೊಡೆದು ಬರೋಣ ಎಂದೆನಿಸಿ ಹೊರಗೆ ಬಂದೆ. ಉದ್ದಕ್ಕೂ ನೋಡಿದೆ. ಹಿಮ ಹನಿಗಳ ತೆಳು ಪರದೆಯೊಳಗಿನಿಂದ ಸ್ವಲ್ಪವೇ ದೂರದಲ್ಲಿ ಸ್ತ್ರೀ ಆಕೃತಿಯೊಂದು ಜಗಲಿಯ ಕಂಬಕ್ಕೊರಗಿ ತದೇಕ ದೃಷ್ಟಿಯಿಂದ ಎತ್ತಲೋ ನೋಡುತ್ತಿರುವಂತೆ ಕಾಣಿಸಿತು. ಕುತೂಹಲದಿಂದ ಮುನ್ನಡೆದೆ. ನಾನು ಹತ್ತಿರ ಹೋದಾಗಲೂ ಆ ಆಕೃತಿ ಹಾಗೆಯೇ ನಿಂತಿತ್ತು. ಗಂಭೀರತೆಯೇ ಆ ಮೂರ್ತಿಯಲ್ಲಿರುವುದೇನೋ ಎಂಬಂತಿತ್ತು. ಮೊಗ ಮಾತ್ರ ಮಾತೆತ್ತಿದರೆ ಅಳು ಉಕ್ಕಿಸುವಂತೆ ಇತ್ತು. ಅತೀ ತೆಳ್ಳಗೂ ಅಲ್ಲದ, ದಪ್ಪವೂ ಅಲ್ಲದ ಆಕೆ ನೋಡಲು ಲಕ್ಷಣವಾಗಿದ್ದಳು. ಆದರೆ ಖಾಲಿ ಹಣೆ ಮ್ಲಾನತೆಯ ಕಥೆ ಹೇಳುವಂತಿತ್ತು.

ನಾನು ಅವಳತ್ತ ಸುಳಿದುಹೋದರೂ ಅವಳ ದೃಷ್ಟಿ ಮಿಚಲಿತವಾಗಿರಲಿಲ್ಲ. ಅವಳನ್ನು ದಾಟಿ ಸ್ವಲ್ಪ ದೂರ ಹೋಗುತ್ತಲೇ ಇವರು ನನ್ನನ್ನು ಕೂಗಿ ಕರೆದರು. ಹಿಂದಿರುಗಿ ಬಿಸಿ ಕಾಫಿ, ಇಡ್ಲಿ ತೆಗೆದುಕೊಂಡು ದೃಶ್ಯ ದರ್ಶನಕ್ಕೆಂದು ಹೊರಟಾಗ ನಾನು ಮತ್ತೆ ಆ ಕಂಬದತ್ತ ನೋಡಿದೆ. ಆಕೆ ಮಾಯವಾಗಿದ್ದಳು.

ಮಹಾಚಿತ್ರಚತುರ ಸುಂದರವಾಗಿ ಮೂಡಿಸಿರುವ ಬಯಲು ಗಿರಿ ಕಾನನಗಳ ಸಮ್ಮಿಳನದ ದಿವ್ಯದರ್ಶನವನ್ನು ನೀಡುವ “ಕೋಕರ್ಸ್‌ವಾಕ್”, ಕಿನ್ನರ ಮಂದಿರದಲ್ಲಿ ತಾವಾಗಿಯೇ ಮೈ ತಳೆದು ಸೆಟೆದು ನಿಂತಿರುವ “ಪಿಲ್ಲರ್‍ಸ್ ರಾಕ್”ಗಳನ್ನು ನೋಡಿ ಬೆರಗುಪಟ್ಟು, ಕಂಡು ತಣಿಯದಂತಹ ಸೌಂದರ್ಯವಿದು ಎಂದು ಉದ್ಗರಿಸುತ್ತ ಮುಂದಿನ ಸುಯಿಸೈಡ್ ಪಾಯಿಂಟ್ಗೆ ಬಂದೆವು. ಮಾರ್ಗದರ್ಶಿ ಅದರ ವಿವರಣೆ ನೀಡುತ್ತಲೇ ಇದ್ದ. ಅದರ ಚರಿತೆಯನ್ನು, ಅಲ್ಲಿ ಕಳೆದುಕೊಂಡಿರುವ ಪ್ರಾಣಗಳನ್ನು ಕುರಿತು ಅಭ್ಯಾಸಬಲದಿಂದಲೋ ಎಂಬಂತೆ ರಸವತ್ತಾಗಿ ಹೇಳುತ್ತಿದ್ದ. ಕೇಳುತ್ತ, ಕೇಳುತ್ತ ಅಡ್ಡಬೇಲಿಗೆ ಬಂದು ಬಗ್ಗಿ ನೋಡಿದ, ಕೆಳಗೆ ತಲೆ ಗಿರ್‍ರೆನ್ನಿಸುವಂತ ಪ್ರಪಾತ “ಅಬ್ಬ! ಬಿದ್ದರೆ ಎಲುಬು ಚೂರು ಸಿಗಲಿಕ್ಕಿಲ್ಲ” – ಎಂದು ತಿರುಗಿ ನೋಡಿದೆ. ಇವರು ಪಕ್ಕದಲ್ಲಿ ಒಬ್ಬ ವೃದ್ಧರೊಡನೆ ಮಾತಾಡುತ್ತಿದ್ದರು. ಬಳಿಯೇ ಆ ವ್ಯಕ್ತಿ ಕೂಡ ಇದ್ದಳು ಒಬ್ಬ ವೃದ್ಧೆ ಅವರಿಬ್ಬರ ಹಿಂದೆ ನಿಂತಿದ್ದಳು.

ಇವರು ನನ್ನನ್ನು ಕರೆದರು.

“ಇವರು ಗುಜರಾತಿನಿಂದ ಬಂದವರು. ವಸಂತಶರ್ಮ” ಎನ್ನುತ್ತ ಪರಿಚಯ ಮಾಡಿಕೊಟ್ಟರು.

“ಹೋಗಮ್ಮ-ನಮ್ಮ ಹೆಂಗಸರ ಪರಿಚಯ ಮಾಡಿಕೊ” ಎಂದು ವೃದ್ಧೆಯ ಮುಖ ನೋಡಿ ನಗು ಬೀರಿ “ಇವಳು ನನ್ನಾಕೆ-ಇವಳು ಮಗಳು. ನಾವು ಸ್ವಲ್ಪ ಸಂಗ ಪ್ರಿಯರು. ಸರಿಯಾದ ಮಾತುಗಾರರು ಸಿಕ್ಕಿದರೆಂದರೆ ನಮ್ಮ ಮಾತಿಗೆ ಲಗಾಮಿಲ್ಲ” ಎನ್ನುತ್ತ ಗುಜ್ಜು ಮೈಯನ್ನು ಕುಲುಕಿಸಿ ನಕ್ಕರು ಶರ್ಮ. ಇವರು ಮತ್ತು ಶರ್ಮ ಮಾತನಾಡುತ್ತಾ ಅತ್ತ ಹೋದಾಗ ನಾನು ಅವರ ಹೆಂಡತಿ ಮತ್ತು ಮಗಳೊಂದಿಗೆ ಕೂಡಿಕೊಂಡೆ.

ಚೆನ್ನಾಗಿ ಅಡ್ಡ ಬೆಳೆದಿದ್ದಳು ವೃದ್ಧೆ. ನಡೆದರೆ ನಲುಗುವಂತಿದ್ದಳು.

ನನ್ನನ್ನು ನೋಡಿ ಸೌಹಾರ್ದದಿಂದ ನನ್ನ ಕೈ ಹಿಡಿದು ಕುಳ್ಳಿರಿಸಿ ತಾನು ಹತ್ತಿರದಲ್ಲೇ ಕುಳಿತು ಹರಕು ಹಿಂದಿಯಲ್ಲಿ ಮಾತಿಗಾರಂಭಿಸಿದಳು.

“ನಾವು ಗುಜರಾತಿಗಳು. ಹಿಂದಿ ಸ್ವಲ್ಪ ಸ್ವಲ್ಪ ಬರುತ್ತದೆ. ನಿನಗೆ ಬರುತ್ತದೆಯೇ?” “ಹರಕು ಮುರುಕು ಮಾತನಾಡಬಲ್ಲೆ ಅಷ್ಟೇ.”

“ನೀವು ಎಲ್ಲಿಂದ ಬಂದವರು? ಎಷ್ಟು ದಿನಕ್ಕೆಂದು ಬಂದವರು…? ಏಕೆ ಬಂದವರೆಂದು ಕೇಳುವುದಿಲ್ಲ-ಹನಿಮೂನಿಗೆ ಅಲ್ಲವೆ?” ಎಂದು ಮುದುಕಿಯಾದರೂ ಕಣ್ಣು ಮಿಟುಕಿಸಿ ನಕ್ಕಳು. ನಾನೂ ಅವಳನ್ನು ನೋಡಿ ನಕ್ಕುಬಿಟ್ಟೆ.

“ನಾವು ಕರ್ನಾಟಕದವರು. ಹದಿನೈದು ದಿನಗಳಿಗೆಂದು ಬಂದಿದ್ದೇವೆ” ಎಂದೆ. “ನಾವು ನಡಿಯಾದಿನಿಂದ ಬಂದು ಈಗಾಗಲೇ ಎರಡು ದಿನಗಳಾದವು. ಒಂದು ತಿಂಗಳು ಇಲ್ಲಿರಬೇಕು ಅಂತ ಇದೆ. ಶಾಂತಿ ಅರಸಿ ಬಂದಿದ್ದೇವೆ- ಅದು ಸಿಗುವುದೋ ಇಲ್ಲವೋ ತಿಳಿಯದು” ಎನ್ನುತ್ತ ಪಕ್ಕದಲ್ಲೇ ಕುಳಿತಿರುವ ಮಗಳನ್ನು ನೋಡಿ ನಿಟ್ಟುಸಿರುಬಿಟ್ಟಳು ಮುದುಕಿ. ನಾನು ಅವಳತ್ತ ತಿರುಗಿದೆ. ಆಕೆ ನಿರ್ವಿಕಾರವಾಗಿ ಕುಳಿತಿದ್ದಳು. ಕಣ್ಣು ನಿರ್ಲಿಪ್ತವಾಗಿ ಕಂಡುಬಂದರೂ ಯಾವುದೋ ಕರಾಳ ದೃಶ್ಯವೊಂದನ್ನು ಒಳಗೆ ಕಳುಹಿಸಿ ಬಾಗಿಲು ಮುಚ್ಚಿಟ್ಟಂತೆ ಇತ್ತು.

“ಇವಳು ನನ್ನ ಮಗಳು. ಬಿ.ಎ. ಓದಿದ್ದಾಳೆ. ಬಲು ಜಾಣೆ. ಆದರೇನು? ನಮಗೆ ಈ ಕಾಲಕ್ಕೆ, ಅವಳಿಗೆ ಅಕಾಲಕ್ಕೆ…” ಎನ್ನುವಾಗ ಅವಳನ್ನು ತಿವಿದು “ಅಮ್ಮ, ಸುಮ್ಮನಿರು. ಯಾಕೆ ಮತ್ತೆ ಅವೇ ಕಥೆ ಬಿಚ್ಚುತ್ತಿಯಾ?” ಎಂದು ದೈನ್ಯದ ದನಿಯಲ್ಲಂದು ಯುವತಿ ಮುಖವಡಗಿಸಿ ಬಿಕ್ಕಿದಳು. ಕ್ಷಣದ ಹಿಂದೆ ಅತ್ಯಂತ ಗಂಭೀರದ ಮೂರ್ತಿಯೇ ಆಗಿ ಕಂಡ ಆಕೆ ಸಂಯಮ ತಪ್ಪಿ ಬಿಕ್ಕುತ್ತಿದ್ದಳು.

“ನೋಡು ಹೇಗೆ ಮಾಡುತ್ತಿದ್ದಾಳೆ! ಇದೆಲ್ಲ ನಮ್ಮ ಹಣೆಯಲ್ಲಿ ಬರೆದಿದೆ. ಯಾರೇನು ಮಾಡಲು ಸಾಧ್ಯವಿದೆ? ಹೇ ಭಗವಂತ! ಇಷ್ಟು ಸಣ್ಣ ಹುಡುಗಿಗೆ ಎಂತಹ ಕಷ್ಟ ಕೊಟ್ಟೆ ತಂದೆ” ಭಾರವಾದ ನಿಟ್ಟುಸಿರಿನೊಂದಿಗೆ ನುಡಿದ ಶ್ರೀಮತಿ ಶರ್ಮ, ಮದುವೆಯಾಗಿ ಇನ್ನೂ ಆರು ತಿಂಗಳಾಯಿತಷ್ಟೇ, ದೇವರು ಅವಳ ತಿಲಕ ಅಳಿಸಿಬಿಟ್ಟ. ಮದು ಮಗಳ ಚೆಂದ ನೋಡಲು ಮದುವೆ ಮಾಡಿದಂತಾಯಿತು. ಆಗಿನಿಂದ ಇದೇ ರೀತಿ, ಸಮಾಧಾನ ತಂದುಕೊಲ್ಳುವುದು ಹೇಗೆ. ಇವಳಿಗೆ ಸಮಾಧಾನ ಹೇಗೆ ತರುವುದೆಂದೇ ತಿಳಿಯುವುದಿಲ್ಲ. ನಮಗೆ ಈ ಕಾಲದಲ್ಲಿ ದೇವರು ಇಂತಹ ದುಃಖ ಕೊಡಬಾರದಿತ್ತು” ಎನ್ನುವಾಗ ಅವಳ ಸುಕ್ಕುಗೆನ್ನೆಯ ಮೇಲೆ ಕಂಬನಿ ಹರಿಯುತ್ತಿತ್ತು. ವ್ಯಥೆಯಿಂದ ನನ್ನ ಹೃದಯವೂ ಭಾರವಾಯಿತು, ಅಬ್ಬ! ಖಂಡಿತ ನಾನಾದರೆ ಬದುಕಿರಲಾರೆ ಎಂದೆನ್ನಿಸಿ ಮೈನಡುಗಿತು. ದೂರದಲ್ಲಿ ಶರ್ಮರೊಡನೆ ಆರಾಮವಾಗಿ ಕುಳಿತು ಗಹಗಹಿಸಿ ನಗುತ್ತಿದ್ದ ಇವರನ್ನು ಕಂಡು “ಓದೇವರೇ, ಅವರ ಈ ನಗುವನ್ನು ಎಂದುಗೂ ಅಳಿಸಬೇಡ ನನ್ನಿಂದ ಅವರನ್ನೆಂದಿಗೂ ಕಸಿಯಬೇಡ” ಎಂದು ಮನದಲ್ಲೆ ಗೋಗರೆದೆ. ವೃದ್ಧೆಯನ್ನು ಕುರಿತು___

“ಅಳಬೇಡಿ, ನೀವೇ ಅತ್ತರೆ ಇನ್ನು ಇವರಿಗೆ ಸಮಾಧಾನ ಮಾಡುವವರು ಯಾರು? ನೀವು ತಿಳುವಳಿಕೆಯುಳ್ಳವರು. ಅವರೆದುರಿಗೆ ಹೀಗೆ ಅಳಲೂಬಾರದು. ಕಾಲವೇ ದುಃಖ ತಂದಿತು, ಕಾಲವೇ ದುಃಖ ಮರೆಸುತ್ತದೆ. ಇಲ್ಲವಾದರೆ ಜಗತ್ತು ನಡೆಯುತ್ತದೆಯೇ?” ಎಂಬ ನಾನೇ ಪ್ರಯೋಗಕ್ಕೆ ತರಲಾರದ, ಹಿರಿಯರು ಹೇಳಿದ್ದನ್ನು ಕೇಳಿ ತಿಳಿದ ಒಣ ವೇದಾಂತವನ್ನು ಉಸುರಿದೆ. ಹೊಸ ಜೀವನದಲ್ಲಿ ಇನ್ನೂ ಕಣ್ಣು ಬಿಡುತ್ತಿರುವ ನಾನು, ವಯೋವೃದ್ಧರೆದುರು ಊಹೆಯ ಬಲದಿಂದಲ್ಲದೆ, ಅನುಭವದ ಆಳದಿಂದ ಹೇಗೆ ಸಮಾಧಾನ ಹೇಳಬಲ್ಲೆ?

ಮಗಳು ಹುಲ್ಲು ಚಿವುಟುತ್ತ ಮೌನವಾಗಿ ಕಣ್ಣೀರು ಸುರಿಸುತ್ತಿದ್ದಳು.

ದೂರದಲ್ಲಿ ಶರ್ಮ ಮತ್ತು ಇವರು ಸಂತಸದಿಂದ ಸಂಭಾಷಿಸುತ್ತ ಬರುವುದು ಕಾಣಿಸಿತು. ಹೃದಯದಲ್ಲಿರುವ ದುಃಖದ ಒಂದೆಳೆಯೂ ಶರ್ಮರ ಮುಖದ ಮೇಲಿರಲಿಲ್ಲ.

ವೃದ್ಧೆ ಮಗಳ ಮುಖ ಕಣ್ಣು ಎಲ್ಲ ಒರೆಸಿ “ನೋಡು ಅಪ್ಪ ಬರುತ್ತಿದ್ದಾರೆ, ಇನ್ನು ನನ್ನನ್ನು ಗದರುತ್ತಾರೆ. ಅಳಬೇಡ, ಅಳಬೇಡ” ಎಂದಾಗ ಮಗಳು ಕಲ್ಲಿನಂತೆ ಕುಳಿತುಬಿಟ್ಟಳು.

ಅಷ್ಟರಲ್ಲೇ ಬಮದ ಶರ್ಮ “ನೋಡು ಒಳ್ಳೆಯ ಗೆಳೆಯರು ಸಿಕ್ಕಿಬಿಟ್ಟರು ನಮಗೆ ಇನ್ನು ತಿಂಗಳಲ್ಲ-ಎರಡು ತಿಂಗಳಾದರೂ ಇರಬಹುದು ಇಲ್ಲಿ…ಅರೆ! ಪುನಃ ಅಂಜುವನ್ನು ಅಳಿಸಿದೆಯಾ? ಶುದ್ಧ ಬುದ್ದೂ. ನಿನ್ನನ್ನು ಬಿಟ್ಟು ಬರಬೇಕಾಗಿತ್ತು ನಾನು ತಲೆ ಇಲ್ಲ. ಬಾ ಮಗಳೆ, ಹೋಗೋಣ ಇನ್ನು” ಎಂದು ಮಗಳ ಕೈ ಹಿಡಿದೆಬ್ಬಿಸಿ ಹೊರಟು ಬಿಟ್ಟರು.

ದಿನಗಳು ಕಳೆಯುತ್ತಿದ್ದವು-ನಮಗೆ ಅರಿವಿಲ್ಲದಂತೆ. ನಮ್ಮ ಹೊರಗೊಂದು ಜಗತ್ತಿದೆ. ಆ ಜಗತ್ತಿನಲ್ಲಿ ನಮಗೊಂದು ಮನೆಯಿದೆ. ನಮಗೆ ಬಂಧುಗಳಿದ್ದಾರೆ, ಬಳಗದವರಿದ್ದಾರೆ ಎಂಬ ಪರಿವೆಯೇ ಇಲ್ಲದೆ.

ಈ ಅವಧಿಯಲ್ಲಿ ಅಂಜು ಮತ್ತು ನಾನು ಸಮೀಪದ ಗೆಳೆಯರಾದೆವು. ಮೊದಮೊದಲು ತಮ್ಮ ಕಣ್ಣ ಮುಂದೆಯೇ ಇರಬೇಕೆಂದು ನಿರ್ಬಂಧ ಪಡಿಸುತ್ತಿದ್ದ ಶ್ರೀಮತಿ ಶರ್ಮ ಈಗ ಸರಾಗವಾಗಿ ನಮ್ಮೊಡನೆ ಓಡಿಯಾಡಲು ಮಗಳಿಗೆ ಅನುಮತಿ ನೀಡಿದ್ದರು. ಮಗಳೆಲ್ಲಾದರೂ ತಮಗೆ ಎಟುಕದೆ ಹೋದಾಳೋ ಎಂಬ ಚಿಂತೆ ಅವರಿಗೆ ತನ್ನನ್ನು ಕಾಯುತ್ತಿದ್ದ ಅವರನ್ನು ನೋಡಿ ಅಂಜುವಿಗೆ ಕನಿಕರವೆನಿಸುತ್ತಿತ್ತು.

“ಈ ಅಮ್ಮ ಅಪ್ಪನಿಗೆ ಭ್ರಮೆ. ಇಲ್ಲಿ ನನ್ನ ಮನಸ್ಸಿಗೆ ಶಾಂತಿ ತರುವರಂತೆ. ಅದು ಅವರಿಗೆ ಈ ಜನ್ಮದಲ್ಲಿ ಆಗುವ ಮಾತಲ್ಲ ಎಂದು ಏಕೆ ತಿಳಿಯುತ್ತಿಲ್ಲವೋ?” ಎಂದು ಒಮ್ಮೊಮ್ಮೆ ವಿಷಾದದಿಂದ ನಗುತ್ತಿದ್ದಳು.

ಕೆಲವು ಸಲ ನಾವಿಬ್ಬರೇ ಬಹಳ ದೂರ ನಡೆದು ಹೋಗುತ್ತಿದ್ದೆವು ಕೂಡ. ಆಗೆಲ್ಲ ಆಕೆ ತನ್ನ ಒಡಲನ್ನೆಲ್ಲ ನನ್ನಲ್ಲಿ ತೋಡಿಕೊಳ್ಳುತ್ತಿದ್ದಳು. ಒಮ್ಮೊಮ್ಮೆ ತೋಲನ ತಪ್ಪಿ ಅತ್ತರೆ ಕೆಲವೊಮ್ಮೆ ಅಷ್ಟೇ ನಿರ್ಲಿಪ್ತಳಾಗುತ್ತಿದ್ದಳು.

ಒಂದು ಮಧ್ಯಾಹ್ನ.

ನಾವಿಬ್ಬರೇ ಹೊರಗೆ ಹೊರಟಿದ್ದೆವು. ಮರದ ತಂಪು ನೆರಳಲ್ಲಿ ಬಿಸಿಲೂ ತಂಪೆನಿಸುತ್ತಿತ್ತು. ಮಂಜಿನ ಹೊದಿಕೆಯನ್ನು ಕಿತ್ತೆಸೆದು ಸೂರ್ಯರಶ್ಮಿ ಬೆಳಿಗ್ಗೆ ಕಂಡ ಸೌಂದರ್ಯ ಗಿರಿಯ ಇನ್ನೊಂದು ರೂಪದ ದರ್ಶನ ಮಾಡಿಸುತ್ತಿತ್ತು.

ಮಾತಾಡಿ ಆಡಿ ಹೇಗೋ ಎಂತೋ ತಿರುಗಿ ಅವಳು ಅದೇ ವಿಷಯಕ್ಕೆ ಬಂದಳು.

“ಅವರನ್ನು ಮರೆಯುವುದು ಸಾಧ್ಯವೇ ಹೇಳು ವಿಜಯಾ, ಮರೆಯುವಂತಹ ವ್ಯಕ್ತಿಯಲ್ಲ ಅವರು. ಅಂತಹ ಮೇಧಾವಿಯೊಡನೆ ಜೀವಿಸುವ ಯೋಗ್ಯತೆ ನನಗಿಲ್ಲ” ಎಂದು ಬಿಸುಸುಯ್ದಳು.

ಅವನ ಚಿತ್ರ ತೋರಿಸಿ “ನೋಡು ವಿಜಯಾ, ಅವರ ಕಣ್ಣುಗಳಲ್ಲಿ ಎಷ್ಟು ಸ್ನೇಹಭಾವವಿದೆ! ಈಗಲೂ ನನ್ನನ್ನು ನೋಡುವಂತಿಲ್ಲವೆ? ಬಾ ಎಂದು ಕರೆಯುವಂತಿಲ್ಲವೆ?….ನಾನು ಪಾಪಿ, ಇನ್ನೂ ಇದ್ದೇನೆ, ಜೀವಂತವಾಗಿ” ಎನ್ನುತ್ತಿದ್ದಂತೆ ಅವಳ ಕಣ್ಣುಗಳಲ್ಲಿ ತನ್ನಿಂತಾನೇ ನೀರು ತುಂಬಿ ಕೊಂಡಿತು.

“ಆರು ತಿಂಗಳುಗಳನ್ನು ಹೇಗೆ ಕಳೆದೆನೆನ್ನುತ್ತಿ! ಅಷ್ಟು ಸುಂದರವಾಗಿ, ಅಷ್ಟು ಕಳಾಪೂರ್ಣವಾಗಿ. ಬಹುಶಃ ಈ ಜನ್ಮದಲ್ಲಿ ನನಗಂತಹ ದಿನಗಳು ಬರಲಾರವು. ಆ ಆರು ತಿಂಗಳ ದಿನದಲ್ಲಿ ನಾನು ಪಟ್ಟ ಸ್ವರ್ಗಸುಖವನ್ನೇ ಮೆಲ್ಲುತ್ತ ಅದರ ನೆನಪಿನಲ್ಲಿಯೇ ಉಳಿದ ಜೀವಮಾನವನ್ನೆಲ್ಲ ಕಳೆಯಬೇಕಿನ್ನು.

“ಅಂತವರ ಪತ್ನಿಯಾಗಿ ನೀನೇಕೆ ಹೀಗೆ ಅಳುತ್ತ ಅಳುಕುತ್ತ ಕುಳಿತು ಕೊಳ್ಳುತ್ತೀಯಾ? ಧೈರ್ಯದಿಂದ ವಿಪತ್ತನ್ನು ಎದುರಿಸಬೇಕಪ್ಪ.”

“ನನ್ನ ದುಃಖದ ಆಳ ನಿನಗೆ ಹೇಗೆ ತಿಳಿದೀತು ವಿಜಿ!”

“ಒಪ್ಪಿದೆ. ಆದರೆ ಯೋಚಿಸು. ಈ ದುಃಖ ಜಗತ್ತಿನಲ್ಲಿ ಎಷ್ಟು ಮಂದಿಗೆ ಬಂದಿಲ್ಲ! ಎಲ್ಲ ಸತ್ವಪರೀಕ್ಷೆಯ ಕಾಲ ಎಂದು ತಿಳಿದುಕೋ. ನಾನು ಹೆಚ್ಚು ಹೇಳಲಾರೆ.”

ಹೆಚ್ಚು ಹೇಳಲೂ ಕಷ್ಟವಾಗಿತ್ತು ನನಗೆ. ನಾನು ಹೇಳುತ್ತಿರುವ ಮಾತುಗಳು ನನಗೇ ಅರ್ಥವಾಗದಿರುವಾಗ ನನ್ನವರ ಅಗಲಿಕೆಯನ್ನು ಕೇವಲ ಊಹಿಸಲು ಅಸಮರ್ಥಳಾಗಿರುವಾಗ ಅವಳಿಗೆ ನಾನೆಂತಹ ಸಾಂತ್ವನ ನೀಡಬಲ್ಲೆ? ಉಂಡವನು ಹಸಿದವರ ಸಂಕಟವನ್ನೇನು ಬಲ್ಲ? ಆದರೂ ಏನಾದರೂ ಆಡಲೇಬೇಕಲ್ಲ? ಅವಳ ದುಃಖ ಮಹತ್ತರವಾದುದು ಎಂದು ತಿಳಿದಿದ್ದರೂ, ಅದು ಅಂತಹದ್ದೇನೂ ಅಲ್ಲ ಮಾತಿನಲ್ಲಾದರೂ ಸಾಧಿಸಬೇಕಲ್ಲ!

“ವಿಜೀ, ನನ್ನನ್ನು ಸುಡುತ್ತಿರುವುದು ಅವರ ಅಗಲಿಕೆಯೊಂದೇ ಅಲ್ಲ. ಅದೊಂದೇ ಆಗಿದ್ದರೆ ನೀನು ಹೇಳಿದಂತೆ ಕ್ರಮೆಣ ನನ್ನ ದುಃಖ ತಗ್ಗೀತು. ಆದರೆ ನಾನು ವಂಚಕಿ ವಿಜೀ. ಅವರ ಪ್ರೇಮಕ್ಕೆ ಸರಿಯಾದ ಬೆಲೆ ನಾನು ಕೊಡಲಿಲ್ಲ. ನಾನೆಂದ ಮಾತಿನಂತೆ ನಾನೇ ನಡೆಯಲಿಲ್ಲ. ಅವರು ನನ್ನನ್ನೆಷ್ಟು ನಂಬಿದ್ದರು! ಕೊನೆಗೂ ನಾನವರಿಗೆ ದ್ರೋಹ ಮಾಡಿಬಿಟ್ಟೆ.”

ಕ್ಷಣದಲ್ಲಿ ಆ “ವಂಚಕಿ” ಮತ್ತು “ದ್ರೋಹ” ಎಂಬ ಶಬ್ದಗಳು ಅನರ್ಥ ಅರ್ಥಗಳ ಮಹಾ ಮಹಾ ಕತೆಗಳನ್ನೇ ಕಲ್ಪಿಸತೊಡಗಿದ್ದವು. ನನ್ನ ದೃಷ್ಟಿಗೆ ಅವಳು ಪತಿತೆಯಾಗಿ ಇನ್ನೂ ಏನೇನೋ ಆಗಿ ಕಾಣಿಸಿಕೊಳ್ಳುವುದರಲ್ಲಿದ್ದಳು. ಆದರೆ ಎಲ್ಲಕ್ಕೂ ಪೂರ್ಣವಿರಾಮ ಕೊಡುವಂತೆ ಆಕೆ ಮುಂದುವರೆಸಿದಳು.

“ನಾವು ಹೆಂಗಸರಷ್ಟು ವಂಚಕರು ಬೇರೆ ಯಾರಿಲ್ಲ ಅನ್ನಿಸುತ್ತದೆ ನನಗೆ. ಆಶ್ಚರ್ಯವಾಯಿತೆ? ನಾನೇ ನೋಡೀಗ-ಅವರಿದ್ದಾಗ ಅವರ ಎದೆಯಲ್ಲಿ ಮುಖವಡಗಿಸಿ ಪ್ರೇಮದ ಹೊಳೆಯನ್ನೇ ಹರಿಸುತ್ತಾ ಭಾವಸಮಾಧಿಯಲ್ಲಿ ಎಷ್ಟು ಬಾರಿ “ನೀವಿಲ್ಲದೆ ನಾನಿಲ್ಲ…ನೀವಿರದೆ ಒಂದು ಕ್ಷಣವೂ ನಾನು ಈ ಜಗತ್ತಿನಲ್ಲಿರಲಾರೆ” ಅಂದಿದ್ದೆ ಗೊತ್ತೆ? ಆಗೆಲ್ಲ ಅವರು ನನ್ನ ಮುಂಗುರುಳನ್ನು ಮೃದುವಾಗಿ ತೀಡುತ್ತ “ಅಂಜು, ನಿನ್ನಂತಹವಳು ದೊರಕಿದ್ದು ನನ್ನ ಅದೃಷ್ಟ” ಎಂದಾಗ “ನಿಮ್ಮಂತಹವರು ದೊರೆತ ನಾನು ಪುಣ್ಯವಂತೆ” ಎಂದು ಅವರನ್ನು ಮರುಳುಗೊಳಿಸಿದ್ದೆ. ನಿಜಕ್ಕೂ ನಾನಾಗ ಹಾಗೆಯೇ ಅಂದುಕೊಂಡಿದ್ದೆ ಕೂಡಾ. ಹಲವು ಬಾರಿ ಅಂದಿದ್ದೆ. ಬರೆದಿದ್ದೆ “ನೀವಿಲ್ಲದ ಜಗತ್ತು ನನಗೆ ಬೇಕಿಲ್ಲ. ನೀವಿಲ್ಲದ ಒಂದು ಕ್ಷಣ ಅದು ನನಗೆ ಯುಗಕ್ಕಿಂತಲೂ ದೊಡ್ಡದು. ಡಿಯರ್‍, ನಮ್ಮನ್ನು ದೇವರು ಚೆನ್ನಾಗಿ ಇಟ್ಟಿರಲಿ”-ಎಂದು. ನನ್ನ ಪತ್ರ ಓದಿದಾಗಲೆಲ್ಲ ಅವರು ತನ್ನಷ್ಟು ಭಾಗ್ಯಶಾಲಿ ಬೇರೊಬ್ಬನಿಲ್ಲ ಎಂದುಕೊಳ್ಳುತ್ತಿದ್ದರಂತೆ. ಅವರ ಪ್ರಾಣಕ್ಕೆ ಹೊಂದಿಸಿ ನಿಂತ ನನ್ನ ಮೇಲೆ ಅವರು ಅಷ್ಟೇ ಒಲವಿನಿಂದಿದ್ದರು. ಆದರೆ ವಿಜೀ! ನಾನೇಕೆ ಸಾಯಲಿಲ್ಲ? ಒಂದು ಕ್ಷಣ ಬಿಟ್ಟಿರಲಾರೆ ಎಂದವಳು-ಕಳೆಯುತ್ತಿರುವೆನಲ್ಲ! ಒಂದಲ್ಲ, ಎಷ್ಟೋ ಕ್ಷಣಗಳನ್ನು – ನಾನು ವಂಚಕಿಯಲ್ಲವೇನು?

ಯೋಚಿಸುತ್ತಿದ್ದಂತೆಯೇ ಅವಳೊಡ್ಡಿದ ಸಮಸ್ಯೆ ಜಟಿಲವಾಗುತ್ತ ಹೋಗಿತ್ತು ನನಗೆ. ಇದು ಮುಗ್ಧತೆಯೇ? ಇದು ಪ್ರೇಮ ವಂಚನೆಯೇ?… ಅಸಹಾಯಕತೆಯೇ? ಪಾಪ-ಪುಣ್ಯದಲ್ಲಿ ಇರುವ ನಂಬಿಕೆಯೆ? ಅಥವಾ ಧರ್ಮ ಕರ್ಮದ ಪರಿಜ್ಞಾನವೆ? ಏನೇ ಇದ್ದರೂ ಅದು ಇಬ್ಬರಿಗೂ ಅನ್ವಯಿಸಬೇಕಲ್ಲವೆ?

ಅವಳು ಅಳುತ್ತಿದ್ದಳು. ಮುಖ ಕೆಂಪಾಗಿ, ಕಣ್ಣೆಲ್ಲ ದಪ್ಪವಾಗಿ ಊದಿಕೊಳ್ಳುವವರೆಗೂ ಅತ್ತಳು. ನಾನವಳನ್ನು ತಡೆಯಲಿಲ್ಲ.

“ನನಗೀಗ ಮರಣ ಒಂದರ ಹೊರತು ಬೇರಾವ ಆಸೆಯೂ ಇಲ್ಲ. ಯಾವ ನಂಬಿಕೆಯೂ ಇಲ್ಲ, ಸಾಯಲು ಯೋಚಿಸಿ ಪ್ರಯತ್ನಿಸಿ ವಿಫಲವಾಗಿಯಾಯಿತು. ನನ್ನ ಅಮ್ಮ-ಅಪ್ಪನ ಕಣ್ಣಿನಿಂದ ತಪ್ಪಿಸಿ ಓಡುವುದು ಬಲು ಕಷ್ಟ. ಪಾಪ ಅವರಿಗೆಲ್ಲ ನನ್ನಾಸೆ. ನನಗೆ ನನ್ನವರನ್ನು ಬಲು ಬೇಗ ಕೂಡುವಾಸೆ. ನನ್ನ ಜೀವನವಿಡೀ ಈ ಆಸೆಗಳ ವ್ಯರ್ಥ ಘರ್ಷಣೆ ಎಂದಾದರೆ ಯಾವುದರಲ್ಲಿ ನನಗೆ ಆಸಕ್ತಿ ಉಳಿದೀತು ಹೇಳು.”

“ಅಳಬೇಡ ಅಂಜು-ನಮಗೆ ಬೇಕಾದ ರೀತಿಯಲ್ಲಿ ಯಾವುದು ಸಿಗುತ್ತದೆ ಜಗತ್ತಿನಲ್ಲಿ? ಮದುವೆಯೆಂದರೆ ಒಂದು ಜೂಜಾಟದಂತೆ.”

“ಜೂಜಾಟವೂ ಅಲ್ಲ ಏನಲ್ಲ ಮರುಳು ನಿನಗೆ. ಅದೊಂದು ಮಾಯೆಯ ಪಂಜರ. ಹಾಯಾಗಿ ಹಾರಾಡಿಕೊಂಡಿರುವ ಹಕ್ಕಿಯನ್ನು ಅವುಚಿ ಹಿಡಿದು ಪಂಜರದೊಳಕ್ಕೆ ಹಾಕುತ್ತಾರಲ್ಲ?-ಹಾಗೆಯೇ ಇದು.”

ಅವಳೆನ್ನುವುದನ್ನು ಒಪ್ಪಲು ಸಿದ್ಧಳಿರಲಿಲ್ಲ ನಾನು. ಅವಳ ಕೈಹಿಡಿದು ಮೃದುವಾಗಿ ಅಮುಕುತ್ತ ಅಂದೆ.

“ಅಂಜು, ಹೆಚ್ಚು ಕೊರಗಬೇಡ, ಬದುಕಿನ ಅರ್ಥವೇನೆಂದು ತಿಳಿಯುವವರೆಗೂ ಈ ಚಡಪಡಿಕೆ ಇದ್ದದ್ದೇ. ಅದನ್ನು ತಿಳಿಯುವ ಪ್ರಯತ್ನ ಮಾಡು.”

ಅವಳೆಂದಳು.

“ಸೂರ್ಯ ದಿನಾ ಮುಳುಗುತ್ತಾನೆ. ಆತ ನಾಳೆ ಮರಳಿ ಬರುವನೆಂಬ ಭರವಸೆಯಿಂದ ಜಗತ್ತು ಜೀವ ಹಿಡಿದಿದೆ. ಆದರೆ ನನ್ನ ಬದುಕಿನ ಸೂರ್ಯ ಎಂದೋ ಮುಳುಗಿಬಿಟ್ಟ. ನನಗಿನ್ನು ಎಂದೆಂದಿಗೂ ಕತ್ತಲೆಯೇ. ಇಲ್ಲಿರುವವಳು ಬರೀ ಎಲುಬು ಮಾಂಸದಿಂದ ಕೂಡಿದ ಅಂಜು ಮಾತ್ರ.”

ಕಾಲು ನಮ್ಮನ್ನು ಅದೇ ಸೂಯಿಸೈಡ್ ಪಾಯಿಂಟ್ಗೆ ಎಳೆದುತಂದಿತ್ತು. ಅಲ್ಲಿಗೆ ಬಂದುದರ ಪರಿವೆ ನನಗಿರಲಿಲ್ಲ. ನಮ್ಮ ವೃತ್ತದಲ್ಲೇ ಸುತ್ತುತ್ತ ಗಾಢ ಆಲೋಚನೆಯಲ್ಲಿ ಮುಳುಗಿದ್ದೆವು ನಾವು.

“ಏನು ಮಾಡುತ್ತಿರುವಿರಿ ಇಲ್ಲಿ? ಈ ಸ್ಥಳವನ್ನು ಬಹಳ ಪ್ರೀತಿಸುವಂತಿದೆ ನೀವು” ಎಂದಿನ ಹರ್ಷದ ನಗೆಯೊಂದಿಗೆ ಕೇಳುತ್ತ ಬಂದ ಇವರಿಗೆ ಅಂಜುವೇ ಉತ್ತರವಿತ್ತಳು.

“ಹೂಂ, ನನಗಂತೂ ಬಹಳ ಇಷ್ಟ. ಈ ಪ್ರಪಾತ ನೋಡಿ. ಪತಿತರಿಗೆ, ನಿರಾಶ್ರಿತರಿಗೆ, ಬೆಂದ ಹೃದಯಿಗಳಿಗೆಲ್ಲ ಅಭಯ ನೀಡುವಂತಿಲ್ಲವೆ? ಎಲ್ಲಾದರೂ ಬಿದ್ದೆವೆಂದರೆ ಜೀವ ಉಳಿಯುವುದು ಕಷ್ಟ.”

“ಕಷ್ಟವೇನು?…ಉಳಿಯುವುದೇ ಅಸಾಧ್ಯ. ದೇಹವೇ ಸಿಗಲಿಕ್ಕಿಲ್ಲ” ಎಂದು ತಾನೂ ಬಗ್ಗಿ ನೋಡಿ ಕಣ್ಣಿಂದ ಅಳೆಯುತ್ತ ಇವರು ನನ್ನೆಡೆಗೆ ನಗು ಬೀರಿ ಅಂದರು.

“ಹಾರಲೇನೆ? ಕೇಳಗಡೆ ಇನ್ನೂ ಚೆನ್ನಾಗಿದೆ. ಎಂತೆಂತಹ ಮರಗಳು ಎಷ್ಟು ಪುಟ್ಟ ಪೊದೆಗಳಂತೆ ಕಾಣುತ್ತಿವೆ ನೋಡು! ಅಲ್ಲಿಯೇ ಹೋಗಿ ಅವುಗಳ ಎತ್ತರ ನೋಡಿ ಬರಲಾ?”

ಇನ್ನೇನು-ಈಗ ಹಾರುವ ರೀತಿಯಲ್ಲಿ ಬಗ್ಗಿ ನಿಂತ ಅವರನ್ನು ಕಂಡು ಚೀರಿ ಓಡಿಬಂದು ಅವರ ಕೈ ಹಿಡಿದು ಹಿಂದೆಳೆದೆ. ಕ್ಷಣದ ಹಿಂದೆ ಕೇಳಿದ ದಾರುಣ ಕತೆಯ ಹಸಿಯಾದ ನೋವು ಒಂದೆಡೆ, ಮುಂದಿನ ಚಿತ್ರದ ಭಯಾನಕ ಊಹೆ ಮತ್ತೊಂದೆಡೆ ಹೃದಯ ಒಂದೇ ಸಮನೆ ಹೊಡೆದುಕೊಳ್ಳುತ್ತಿತ್ತು. ಅಂಜು ಹೇಳಿದ ನೋವು, ನಿರಾಶೆಗಳ ಅರ್ಥವೆಲ್ಲ ಮಿಂಚಿನಂತೆ ಹೊಳೆದು ತಲ್ಲಣಗೊಳಿಸಿತ್ತು. ನಡುಗುವ ಕೈಗಳಿಂದ ಅವರನ್ನು ಗಟ್ಟಿಯಾಗಿ ಹಿಡಿದು “ನನ್ನನ್ನು ಬಿಟ್ಟು ಹೋಗಬೇಡಿ, ನಾನು ಬದುಕಿರಲಾರೆ ಎಂದೆ ಅಳುತ್ತಾ.

“ಸಿಲ್ಲಿ ಗರ್ಲ್, ನಾನಿಲ್ಲದಿದ್ದರೆ ಇರುವುದಿಲ್ಲವಂತೆ. ಇರದೆ ಮತ್ತೇನು ಮಾಡುತ್ತೀಯ…ಎಲ್ಲ ಸುಳ್ಳು”-ಎಂದು ನಕ್ಕು ಮತ್ತೆ ಬಳಿ ಬಂದು ಸಾಂತ್ವನದ ದನಿಯಲ್ಲಿ “ನಾನು ನಿನ್ನನ್ನು ಬಿಟ್ಟು ಹೋಗುತ್ತೇನೆಯೇ? ನಿನ್ನನ್ನು ಬಿಟ್ಟು ನಾನು ಇರಬಲ್ಲೆನೆ? ಯಾಕಿಷ್ಟು ನಾನು ಹೋಗಿಯೇ ಬಿಟ್ಟಂತೆ ಅಳುತ್ತೀಯಾ? ಅದು ಹೇಗೆ ಎಣಿಸಿದೊಡನೆ ಅಳು ಬರುತ್ತದೆ ಹೇಳು?” ಎಂದು ನಕ್ಕರು.

ನಮ್ಮ ಮಾತನ್ನು ಕೇಳುತ್ತ ಬದುಕು ಸಾವಿನ ಮಧ್ಯೆ ಜೋಕಾಲಿಯಾಡುತ್ತಿದ್ದ ವ್ಯಕ್ತಿಯೊಂದು ನಿಂತಿದೆ ಎಂಬ ಗಮನವಿರಲಿಲ್ಲ ನಮಗೆ. ಆಲಿಸುತ್ತ ದೃಢಳಾಗಿ ಪ್ರಪಾತದಿಂದ ದೃಷ್ಟಿ ಅಗಲಿಸದೆ ಕೇಳಿದಳು ಅಂಜು.

“ಅವಳಿಲ್ಲದೆ ನಿಮಗೆ ಇರುವುದಕ್ಕಾಗುವುದಿಲ್ಲವೆ?…ಆಗದೇನು ಮಾಡುತ್ತೀರ? ಎಲ್ಲ ಸುಳ್ಳು. ನೀವು ಇರುವುದಿಲ್ಲವೆಂದರೂ ಉಸಿರು ನಿಮ್ಮನ್ನು ಇರಗೊಡಿಸುತ್ತುದೆ.”

ಇವರೆಂದರು “ಅದು ಹೇಗೆ ಸುಳ್ಳಾದೀತು ಅಂಜು? ನಾನಂದದ್ದು ಸುಳ್ಳಾದರೆ ನಾವೆನ್ನುವ ಜನ್ಮಜನ್ಮದ ಬಾಂಧವ್ಯವೇ ಸುಳ್ಳು…” ಎನ್ನುತ್ತು ನನ್ನೆಡೆಗೆ ತಿರುಗಿ “ವಿಜೂ, ತುಂಬ ಹೆದರೆಬಿಟ್ಟೆಯಾ?…” ಎಂದರು.

ಮತ್ತೆ ಅವರೇನೆಂದರೋ-ಕಾಲ ಅವರ ಬಾಯಿಂದ ಏನು ನುಡಿಸಿತೋ ಕಾಣೆ.

ಸುತ್ತಲಿನ ಗಿರಿ ಕಾನನಗಳೆಲ್ಲ ಪ್ರತಿಧ್ವನಿಸುವಂತೆ, ನನ್ನೆದೆಯೇ ಒಡೆದು ಹೋಗುವಂತೆ ಚೀತ್ಕರಿಸಿ ನಾನೊರಗಿದೆ. ಎಷ್ಟು ಸಮಯ ಹಾಗಿದ್ದೆನೋ ತಿಳಿಯದು.

ಎಚ್ಚರವಾದಾಗ, ಉದ್ವಿಗ್ನತೆಯಿಂದ ನನ್ನನ್ನೇ ನೋಡುತ್ತಾ ಹಾಸಿಗೆಯಂಚಿನಲ್ಲಿ ಕುಳಿತಿದ್ದ ಇವರನ್ನು ಕಂಡು ಕ್ಷೀಣದನಿಯಲ್ಲಿ ಕೇಳಿದೆ.

“ಶರ್ಮ ದಂಪತಿಗಳೆಲ್ಲಿ?”

“ರೂಮಿನಲ್ಲಿದ್ದಾರೆ-ಮಾತನಾಡಿಸುವಂತಹ ಸ್ಥಿತಿಯಲ್ಲಿಲ್ಲ ಅವರು.”

ಕಣ್ಣು ಮುಚ್ಚಿದೆ.

ಮುಚ್ಚಿದರೆ ಎದುರು ಅಂಜು ತೇಲಿ ಬರುತ್ತಿದ್ದಳು. ಅದೇ ಅಳುಮೊಗ ಚಡಪಡಿಕೆ. ಮನಸ್ಸು ಪದೇ ಪದೇ ಅವಳ ಸುತ್ತಲೇ ತಿರುಗುತ್ತಿತ್ತು. ವಿಲಿ ವಿಲಿ ಗುಟ್ಟುತ್ತಿತ್ತು.

“ಛೇ! ಯಾಕಿಷ್ಟು ಚಿಂತಿಸುತ್ತೀಯಾ” ಎಂಬ ಇವರ ಪ್ರಶ್ನೆಗೆ ನಾನೇನನ್ನಲಿ? “ಹೆಂಗಸರೆಲ್ಲ ವಂಚಕರು” ಎಂದ ಅಂಜುವಿನ ಮಾತಿಗುತ್ತರವಾಗಿ ಹೃದಯದಲ್ಲೆದ್ದ ಗಂಡಸರು? ಎಂಬ ಪ್ರಶ್ನೆಯನ್ನೇ? ಅವಳಂತೆಯೇ ಪ್ರಪಾತಕ್ಕೆ ಧುಮುಕಿ ಪ್ರೇಮಿಯ ಆತ್ಮ ಅರಸ ಹೊರಟರೆ ಅದು ಸಿಕ್ಕೀತೆ ಎಂಬ ಪ್ರಶ್ನೆಗೆ ಉತ್ತರವನ್ನೆ?
*****

ಕೀಲಿಕರಣ ದೋಷ ತಿದ್ದುಪಡಿ: ರಾಮಚಂದ್ರ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.