ಇಡೀ ಚಲನಚಿತ್ರರಂಗ ಸುತ್ತಾಡಿತು ಕತ್ತೆ

ಎಲ್ಲೇ ಹೋಗಲಿ-ಯಾರೇನೇ ತಪ್ಪು ಮಾಡಿದರೂ ‘ಕತ್ತೆ’ ಎಂಬ ಬೈಗುಳದ ಸುರಿಮಳೆ ಕೇಳಿ ಕೇಳಿ ‘ನಿಜವಾದ ಕತ್ತೆ’ ದೆಂಡಮಂಡಲವಾಗಿತ್ತು.

“ಕನ್ನಡ ಚಿತ್ರರಂಗ ಈಗ ಕೊಳಕು ಭಾಷೆಗೆ, ಕೆಟ್ಟ ಬೈಗುಳಗಳಿಗೆ ಹೆಸರಾಗಿದೆ. ಆಕ್ಷನ್ ಫಿಲಂಸ್ ಆರಂಭವಾದ ಮೇಲಂತೂ ಅಕ್ಕನ್, ಅಮ್ಮನ್ ಪದಗಳು ಎಲ್ಲರ ಬಾಯಲ್ಲಿ ನಕ್ಷತ್ರದಂತೆ ರಾರಾಜಿಸುತ್ತಿದೆ. ಆದರೂ ಬೈಗುಳಕ್ಕೆ ನನ್ನನ್ನೇಕೆ ಎಳೆದು ತರುತ್ತಾರೆ’ ಎಂದು ಪರಿತಪಿಸಿ -ಮಣ್ಣಿನಲ್ಲಿ ವಿಲಿವಿಲಿ ವದ್ದಾಡಿ ಹೊರಳಾಡುತ್ತಿತ್ತು ಕತ್ತೆ.

– ಎಂಕಣ್ಣ ದೂರ ನಿಂತೆ ಈ ಕತ್ತೆಯ ಸ್ವಗತ ಕೇಳಿದ.

“ಆಹಾ! ಎಂಥಾ ನಿತ್ಯ ಸತ್ತಯ ಹೇಳುತ್ತಿದೆ ಕತ್ತೆ” ಎಂದುಕೊಂಡ ಎಂಕ ಈ ದಿನಗಳಲ್ಲಿ “ಕತ್ತೆಯ ಮಾತೇ ವೇದವಾಕ್ಯವಾಗುತ್ತಿದೆ” ಎಂದು ತನ್ನಲ್ಲಿ ತಾನೆ ಗೊಣಗಿ ಅದನ್ನು ಹಿಂಬಾಲಿಸಿದ.

-ಕತ್ತೆಗೆ ಮಹಾ ಹಸಿವು ಆರಂಭವಾಗಿತ್ತು. ತನ್ನ ಊಟಕ್ಕಾಗಿ ಇಡೀ ಗಾಂಧಿನಗರ ಸುತ್ತಾಡಿತು. ಭಾರೀ ತಾರಾಗಣದ ಚಿತ್ರ ಮಾಡಿದ ಅನೇಕರು ಸಿ/ಓ ಪುಟ್‌ಪಾತ್ ಆಗಿದ್ದರು. ರೀಮೇಕ್ ಚಿತ್ರ ವಿತರಣೆಗೆ ತೆಗೆದುಕೊಂಡ ವ್ಯಕ್ತಿಯೊಬ್ಬ ಆತ್ಮಹತ್ಯೆ ಸಲುವಾಗಿ ವಿಷ ಸೇವಿಸಿ ಆಸ್ಪತ್ರೆ ಸೇರಿದ್ದ. ಮತ್ತೊಬ್ಬ ಕೋಟಿ ಕೋಟಿ ಕಳೆದುಕೊಂಡು ಲಂಗೋಟಿ ಹಾಕಿ ಅಲೆಯುತ್ತಿದ್ದ. ಮುಂದೆಲ್ಲಿ ಹೋಗುವುದು ಎಂದು ಕತ್ತೆ ಮೋಟುಗೋಡೆಯೊಂದನ್ನು ಒರಗಿ ನಿಮತು ಜಲಧಾರೆಯಿಂದ ನೆಲವನ್ನು ತೇವ ಮಾಡಿತು.

ಈ ದಾರುಣ ಸನ್ನಿವೇಶ ಕಂಡ ಎಂಕಣ್ಣ ಕತ್ತೆಗೆ ಹೇಳಿದ “ಎಲೈ ನನ್ನ ಪ್ರೀತಿ ಪಾತ್ರ ಕತ್ತೆಯೇ, ಚಿತ್ರ ರಿಚ್ ಆಗಿ ತೆಗೆವ ಹಂಬಲದಲ್ಲಿ ನಿರ್ಮಾಪಕರು ನೀರಿನಂತೆ ಹಣ ಸುರಿದು ದಿವಾಳಿ ಎದ್ದು ಹೋಗಿದ್ದಾರೆ. ಈಗ ಹಣ ಮಾಡುತ್ತಿರುವವರೆಂದರೆ ಆಕ್ಟರ್‍ಸ್ ಮಾತ್ರ. ಅದರಲ್ಲಿ ಅಗ್ರಗಣ್ಯರೆಂದರೆ ಪರಭಾಷಾ ನಟಿಯರು. ಅಂಥ ಕಡೆ ಏಕೆ ಹೋಗಬಾರದು” ಎಂದ.

-ತನ್ನ ಪಾಲಿಗೆ ಕೈ ಮರವಾದ ‘ಎಂದ’ ನ ಬಗ್ಗೆ ಕತ್ತೆಗೆ ಪ್ರೀತಿ ಉಕ್ಕಿ ಹರಿಯಿತು.

ಕತ್ತೆ ಸ್ಟಾರ್‍ ಹೋಟೇಲ್‌ಗಳತ್ತ ಹೆಜ್ಜೆ ಹಾಕಿತು.

ನಮ್ಮ ನಟ-ನಟಿಯರು ಕೈ ತುಂಬ ಸಂಭಾವನೆ ನೀಡಲು ಹಿಂದೆ ಮುಂದೆ ನೋಡುವ ಗಾಂಧೀನಗರಿಗರು ಪರಭಾಷಾ ನಟಿಯರಿಗೆ ‘ಸ್ಟಾರ್‍ ಟ್ರೀಟ್‌ಮೆಂಟ್ ನೀಡಿ ಅವರ ಅಸಿಸ್ಟೆಂಟ್‌ಗಳನ್ನು ರಾಣಿ ಮಹಾರಾಣಿಯರಂತೆ ಉಪಚರಿಸುತ್ತಿದ್ದುದನ್ನು ಕಂಡು ಕತ್ತೆ ಬೆಚ್ಚಿತು.

ಆಗಲೇ ‘ಹಿತ್ತಲ ಗಿಡ ಮದ್ದಲ್ಲ’ ಎಂಬ ಗಾದೆ ಕತ್ತೆಗೆ ನಿಜ ಎನಿಸಿದ್ದು.

ಕತ್ತೆಗೆ ಫೈವ್‌ಸ್ಟಾರ್‍ ಹೊಟೆಲಲ್‌ಇ ಎಂಟ್ರಿಯೂ ಸಿಗಲಿಲ್ಲ.

‘ಬಾಗಿಲಲ್ಲೇ ಸಪ್ಪಗೆ ನಿಂತಿತು ಕತ್ತೆ. ‘ಏ ಕತ್ತೆ, ಇಲ್ಲಿ ನಿಂತರೆ ಏನು ಪ್ರಯೋಜನ. ಈಗ ಎಲ್ಲ ಪ್ಯಾಲೇಸ್ ಹತ್ತ ಷೂಟಿಂಗ್‌ಗೆ ಹೊರಟಿದಾರೆ. ಫುಲ್ ಪ್ರೆಸ್ ಅಲ್ಲಿರುತ್ತೆ. ಅಂದ್ಮೇಲೆ ಬೊಂಬಾಟ್ ಊಟ ಗ್ಯಾರಂಟಿ ನಿಂಗೆ ಅಲ್ಲಿ’ ಎಂದ.

ಕತ್ತೆ ಅರಮನೆಯತ್ತ ನಡೆಯಿತು. ಜನ ತುಂಬಿ ತುಳುಕಿದ್ದರು. ಪ್ರೆಸ್‌ನವರು ಪೆನ್ನು-ಪೇಪರ್‍ ಹಿಡಿದಿದ್ದರು. ಕ್ಯಾಮರಾಗಳಿಗಂತೂ ಲೆಕ್ಕವಿರಲಿಲ್ಲ. ಹೀರೋಯಿನ್ ಡಾಲಿ ಕೋಚು ಗಾಡಿಯಲ್ಲಿ ಬಂದಿಳಿದಳು.

“ಎಲ್ಲರ ಕಣ್ಣ ಅವಳತ್ತ ನೆಟ್ಟಿತ್ತು. ಸೌಂದರ್ಯ ಸ್ಪರ್ಧೆಯ ಅಭ್ಯರ್ಥಿಯಂತಿದ್ದ ಅವಳ ಮೈ ಮಾಟಕ್ಕೆ ಎಲ್ಲಾ ಸುಸ್ತು. ಕ್ಯಾಮರಾಗಳು ‘ಕ್ಲಿಕ್-ಕ್ಲಿಕ್’ ಎಂದು ಕಣ್ಣಾಮುಚ್ಚಾಲೆಯಾಡಿದವು. ಪ್ರೆಸ್‌ನವರತ್ತ ಕಣ್ಣು ಹಾಯಿಸಿ ‘ಹಾಯ್ ಹಾಯ್’ ಎಂದಳು ಸುಂದರಿ.

“ಷಾಟ್ ರೆಡಿ” ಎಂದ ಕ್ಯಾಮರಾಮನ್. “ಈ ಷಾಟ್ ಆದ್ಮೇಲೆ ಊಟದ ಬ್ರೇಕ್” ಎಂದ ನಿರ್ದೇಶಕ ಪ್ರೆಸ್‌ನವರ ಬಳಿ ಬಂದು.

‘ಊಟದ ಬ್ರೇಕ್’ ಎಂದಾಗ ಕತ್ತೆಗೂ ಖುಶಿಯಾಯಿತು.

-ಹೈ ಹೀಲ್ಡ್ ಧರಿಸಿದ್ದ ಡಾಲಿ ನಾಯಕನೊಮದಿಗೆ ಕುಣಿಯಬೇಕಾದ ಪ್ರಸಂಗ.

-ನಾಲ್ಕು ಹೆಜ್ಜೆ ಹಾಕಲಿಕ್ಕಿಲ್ಲ ಡಾಲಿ ಎಡವಿಬಿದ್ದಳು. ಕಾಲು ಉಳುಕಿತು. ನಿರ್ಮಾಪಕ-ನಿರ್ದೇಶಕ ಎಲ್ಲ ಆಕಾಶವೇ ತಲೆಮೇಲೆ ಬಿದ್ದಂತೆ ಪರಿತಪಿಸಿದರು. ಪ್ರೆಸ್‌ನವರೂ ನುಗ್ಗಿದರು ಏನಾಯಿತೋ ಎಂದು ತಿಳಿಯಲು. ಪತ್ರಕರ್ತ ಶಿವನೂ ನಡೆದ ಅಲ್ಲಿಗೆ. ಈ ಶಿವ ‘ಡಾಲಿ’ಯ ಸುದೀರ್ಘ ಇಂಟರ್‌ವ್ಯೂ ಮಾಡಿದ್ದು ನೆನಪಿಟ್ಟುಕೊಂಡಿದ್ದ ಡಾಲಿ-ನೋವಿನಲ್ಲೂ ನಗೆ ತೇಲಿಸಿ ‘ಹಾಯ್’ ಎಂದಳು. ಶಿವ ಕರಗಿ ಹೋದ.

ನಿರ್ದೇಶಕರು ಮರು ಮಾತಾಡದೆ ‘ಪ್ಯಾಕಪ್’ ಎಂದರು.

ಪತ್ರಕರ್ತರು ಬಂದ ದಾರಿಗೆ ಸುಂಕವಿಲ್ಲವೆಂದು ಹೊರಟಾಗ ಪತ್ರಕರ್ತ ಶಿವ ನಾಪತ್ತೆ.

“ಅರೆ-ಸ್ಟಾಪ್‌ಬ್ಲಾಕ್‌ನಲ್ಲಿ ಈಗ ಎಲ್ಲಿ ಮಾಯವಾದ” ಎಂಬುದೇ ಅಂದಿನ ಬಿಸಿ ಬಿಸಿ ಚರ್ಚೆಯಾಗಿತ್ತು. ಆನಂತರ ತಿಳಿಯಿತು ಪರಭಾಷಾ ನಟಿಯ ಕಾಲಿಗೆ ಪೆಟ್ಟಾದದ್ದು ಕಂಡು-ಬಹುವಾಗಿ ನೊಂದು ಟ್ರೀಟ್‌ಮೆಂಟಿಗಾಗಿ ಆಸ್ಪತ್ರೆಗೆ ಕರೆದೊಯ್ದವರಲ್ಲಿ ಇವನೂ ಒಬ್ಬ ಎಂದು. ಕತ್ತೆ ಅಂದುಕೊಮಡಿತು ‘ಬಾಂಬ್‌ಬ್ಲಾಸ್ಟ್ ಆದಾಗ ಅಬ್ಬಯ್ಯನಾಯಿಡು ಸ್ಟುಡಿಯೋದಲ್ಲಿ ಎಷ್ಟು ಜನ ಸತ್ತರು. ಆಗಲೂ ಈ ರೀತಿ ಯಾರು ಪರಿತಪಿಸಲಿಲ್ಲವಲ್ಲ” – ಕತ್ತೆ ಅಲ್ಲಿಂದ ಸಪ್ಪಗೆ ತೆರಳಿತು. ಎಲ್ಲ ಸ್ಟುಡಿಯೋಗಳನ್ನೂ ಸುತ್ತಿ ಸುತ್ತಿ ಹಸಿವಿನಿಂದ ಬಳಲಿತು. ಇಲ್ಲಿನ ಪ್ರತಿಭಾವಂತ ಕನ್ನಡ ನಟ ನಟಿಯರ ಸ್ಥಿತಿಯೇ ನನ್ನದು ಎನಿಸಿತು ಕತ್ತೆಗೆ “ನಟ-ನಟಿಯರು ಅವಕಾಶಕ್ಕೆ ಕನಸಿ ಕೈ ಚಾಚುತ್ತಾರೆ. ನಾನೀಗ ಹಸಿವಿನಿಂದ ಬಳಲಿ ಊಟಕ್ಕೆ ಪರಿತಪಿಸುತ್ತಿರುವೆ’ ಎಂದುಕೊಂಡು ಕಡೆಗೆ ಚಾಮುಂಡೇಶ್ವರಿ ಸ್ಟುಡಿಯೋ ಬಳಿ ಬಂತು.

ಪುಣ್ಯಕ್ಕೆ ಸ್ಟುಡಿಯೋ ಬಳಿ ಎರಡು ಸಿನಿಮಾ ಡಬ್ಬ ಬಿದ್ದಿತ್ತು. ಕತ್ತೆ ಬಕಬಕ ತಿನ್ನತೊಡಗಿತು ಫಿಲಂ. ಇದನ್ನು ಕಂಡ ಮತ್ತೊಂದು ಹಸಿದ ಕತ್ತೆ ಬಂತು.

‘ಏ, ನನಗೂ ಹಸಿವು, ಒಂದಷ್ಟು ಫಿಲಂ ಕೊಡುವೆಯಾ ತಿನ್ನಲು’ ಎಂದಾಗ

“ಅಯ್ಯೋ ಫಿಲಂನ ಕೊನೆ ‘ಫ್ರೇಂ’ ಸಹ ತಿಂದು ಮುಗಿಸಿದೆ. ಐ ಯಾಮ್ ಸಾರಿ’ ಎಂದಿತು.

“ಹೋಗಲಿ-ಫಿಲಂ ತಿಂದೆಯಲ್ಲ, ಅದು ಹ್ಯಾಗನ್ನಿಸಿತು ಅದಾದ್ರು ಹೇಳು”

“ಫಿಲಂ ತಿಂದೆ. ಹೊಟ್ಟೆ ತುಂಬ್ತು ನಿಜ. ಆದರೆ ಈ ಫಿಲಂಗಿಂತ ಆ ಕಾದಂಬರಿಯೇ ಎಷ್ಟೋ ರುಚಿಯಾಗಿತ್ತು” ಎಂದು ಹೇಳುವುದನ್ನು ಕೇಳಿದ ಎಂಕನಿಗೆ ಕತ್ತೆಯ ಅಭಿರುಚಿಯ ಬಗ್ಗೆ ತುಂಬ ಅಭಿಮಾನವೆನ್ನಿಸಿತು. ‘ಈ ಕತ್ತೆಗಿರುವ ಸದ್ವಿವೇಕ ರೀಮೇಕ್ ನಿರ್ಮಾಪಕರಿಗಿರಬಾರದಿತ್ತೆ’ ಎಂದುಕೊಂಡು ಎಂದ ಸೀದಾ ಮನೆಯತ್ತ ನಡೆದ.
*****
(೨೫-೨-೨೦೦೦)