ಅಮರ ತೇಜಃಪುಂಜಿ

ಓ ತಂದೆ! ನಿನಗಿದೋ ಈ ನೆಲದ ಕಣಕಣವು

ಕಣ್ಣೀರ ಸುರಿಸುತಿದೆ, ಹಲುಬಿ ಹಂಬಲಿಸುತಿದೆ;
ಭಾರತದ ಬೀರಸಿರಿ ನಿನ್ನೊಡನೆ ಸಾಗುತಿದೆ.

ಸತ್ಯತೆಯ ಪಂಜಿಗಿದೆ ನಿನ್ನೆದೆಯ ಪೌರುಷವು,
ವಿಶ್ವದೆದೆಯಾಳವನೆ ಕಡೆದುಂಡ ಕರುಣಾಳು

ಪ್ರೇಮದಮಲಜ್ಯೋತಿ, ಜಗದ ಸುಂದರ ಮೂರ್ತಿ
ಜೀವನದ ಕಿಲ್ಮಿಷವನುರೆತೊಳೆದ ಸತ್ಕೀರ್‍ತಿ

ಸಚ್ಚರಿತ, ಮಹಿಮಾತ್ಮ, ಹಿರಿಜೀವ, ಹಿರಿಬಾಳು
ನಿನ್ನದಿದೆ ಬಾಪೂಜಿ ಅಮರ ತೇಜಃಪುಂಜಿ!

ಯಾವ ನುಡಿಗಡಣಕೂ ನಿಲುಕದಿಹೆ ಸಿಲುಕದಿಹೆ
ಸದ್ಧರ್ಮ ಬೋಧನೆಯ ಶಾಂತಿಯಲಿ ಕರುಣಿಸಿಹೆ

ತತ್ವನಿಕಷಕ್ಕಿಟ್ಟ ತಾಪಸಿಯೆ ಅಪರಂಜಿ;

ಸಂದೇಶಕಿನಿನಿತು ಕುಂದಿಲ್ಲ ಭಾಸುರಂ
ಮರೆವುದೆಂತೀ ಜಗವು? ನಿನ್ನುಸಿರು ಶಾಶ್ವತಂ.
*****