ನನಸಿನ ಕನಸು

ಹೋದೆ ಹೋದೆನು ದೂರ ನಡೆದೆನು
ಕನಸು ಕೈಹಿಡಿದಾಚೆಗೆ,
ಊರಿನಾಚೆಗೆ ಗಿರಿಯ ಶೃಂಗಕೆ
ಚೆಲುವು ಚಿಮ್ಮುವ ಕಾಡಿಗೆ;
ಕಾಡಗಿಡಗಳು ಮುಗಿಲ ಮುತ್ತಿಡೆ
ಈರ್ಷೆ ತೋರಿಸುವಲ್ಲಿಗೆ,
ಹಚ್ಚ ಹಸುರಿನ ಪಚ್ಚ ಪಯಿರಿನ
ನಿಚ್ಚಸುಂದರ ಬೀಡಿಗೆ

ಏರಿ ಗಿರಿಯನು, ಹತ್ತಿ ಶಿಖರದಿ
ನಿಂತು, ನೋಟವ ಚಾಚಿದೆ;
ಸುತ್ತುಮುತ್ತಿನ ಬೆಟ್ಟದೊತ್ತಿನ
ತೊರೆಯ ಕಲಕಲ ಕೇಳಿದೆ;
ಗುಬ್ಬಿ, ಗೊರವಂಕ, ಗಿಳಿಯು, ಟಿಂವಕ್ಕಿ
ಹಾರೆ ಸಾಲುಗೊಂಡು,
ಚಿಗರೆ ಮೊಲಗಳು, ಹುಲಿಯು ಸಿಂಹಗಳು
ಬರಲು ಹಿಂಡು ಹಿಂಡು.

“ಎಂಥ ರಾಜ್ಯ ಹಗೆತನವ ತ್ಯಾಜ್ಯ ಅಹ!”
ಎಂದು ಹರುಷಗೊಂಡೆ;
ಒಂದಕೊಂದು ಚಿನ್ನಾಟವಾಡೆ, ಹಿರಿ
ಸಾಮ್ಯತನವ ಕಂಡೆ.
ಹುಲ್ಲು ಮೇದು, ಹಾಲ್ಗಾಳು ತಿಂದು, ತಿಳಿ
ನೀರನೀಂಟಲೆಂದು
ತೊರೆಗೆ ಬಂದು ಮಳಲಾಟವಾಡಿದವು-
ಏನ ಹೇಳಲಿಂದು?

ಪಂಜೆಯುಟ್ಟ, ಬಿಳಿಯಂಗಿ ತೊಟ್ಟ
ನನ್ನೆಡೆಗೆ ಧಾವಿಸಿದವು;
ದಿಟ್ಟತನದಲವು ಒಂದಕೊಂದು
ಮುಂದಾಗಿ ಪ್ರಶ್ನಿಸಿದವು;
“ಏನು ನಿಮ್ಮ ನಾಡಿನಲಿ ಕೊಲೆ ಸುಲಿಗೆ-
ಯಾದವಂತೆ ನಿಜವೆ?
ಒಂದೆ ನೆಲದಲ್ಲಿ ನಿಂತ ನಾಡಿಗರು
ಇಂತುಗೈಯೆ ತರವೆ?

ಜ್ಞಾನವಿಹುದೆಂದು ಮೃಗಕು ಮಿಗಿಲೆಂದು
ಜಂಬ ಕೊಚ್ಚಲಿಲ್ಲೆ?
ದೇವ ಕರುಣಿಸಿದ ತಿಳಿವನಿಂತು ನೀವ್
ಹಾಳು ಮಾಡಲಿಲ್ಲೆ?
ಜಾತಿಕೋತಿಗಳ ಜಗಳ ಜಂಜಡವು
ಎಮ್ಮ ಬಳಿಗೆ ಬೇಡ;
ನರನ ಪಾಡಿದುವೆ? ಬಡಿಯದಿರಲಿ, ಚಿ
ನಿಮ್ಮ ಗಾಳಿ ಕೂಡ!”

ಹಕ್ಕಿವಿಂಡು ಒಕ್ಕೊರಲಿನಿಂದಲಿದ
ಕೇಳಿ ಹೋದುವಲಲ!
ಚಿಗರೆ ಮೊಲಗಳೂ ಜಿಗಿದು ನೆಗೆದವೊ
ಏನ ಹೇಳಲಳಲ!
ಗುಡುಗಿತ್ತು ಸಿಂಹ, ನಡುಗಿತ್ತು ಭೂಮಿ
ಉಡುಗಿತ್ತು ಎದೆಯು ಕೆರಳಿ,
ಕನಸು ಕರಗೆ, ನೀರಾಗೆ ಮೈಗೆ,
ಓ! ನವಿರು ಬಂತು ಮರಳಿ.
*****