ಈ ಘಟಪ್ರವಾಹ

ಬೆಟ್ಟದುದರದಿ ಹುಟ್ಟಿ ದರಿಕಂದರವ ಮೆಟ್ಟಿ
ಮುಳ್ಳುಕೊಂಪೆಗಳಲ್ಲಿ ಬಂಡೆಗಲ್ಲುಗಳಲ್ಲಿ
ಹರಿಹರಿದು ಸುರಿಸುರಿದು ಮೊರೆಮೊರೆದು ಕರೆಕರೆದು
ಬಂದುದೀ ತೊರೆಗೆ ತ್ವರಿತದಿಂದೊಡ್ಡನೊಡ್ಡಿ
ಜಲಸಂಗ್ರಹಿಪನೆಂಬಿಚ್ಛೆಯಿಂದದರ ಕೊರಲಿ-
ಗುರುಲು ಬಿಗಿದಿದ್ದರಾ ಬಯಕೆ ಬರುದೊರೆಯಾಗಿ
ಸ್ವಚ್ಛಂದವಹ ಸಲಿಲವಲ್ಲಿಯ ಕಲೆತು ಮಲೆತು
ನಿಲುಗಡೆಯ ತಿರುಗಣಿಯಲುರುಳಿ ಹೊರಳುತಿತ್ತು.

ನನ್ನೆದೆಯಂತರಾಳದಂತಃಕರಣವುಕ್ಕಿ
ಬಂಧನವ ಕಡಿದೊಗೆದು ಹೊರಚೆಲ್ಲಿ ಧುಮ್ಮಿಕ್ಕಿ
ಮುಂಬರಿದು, ಮುನ್ನೋಟ ಮುಂದೋಟಗಳ ಗುರಿಯ
ತೆಕ್ಕೆಯಲಿ ಮುನ್ನೀರಿನಾಗರವ ಸೇರಲಿಹ
ಸಹಜ ಜೀವನದಾದಿ ಮಧ್ಯದಂತರ್ದಾಹ
ತಣಿಸಿ ತೀರ್ಚಲಿಕಿದೋ: ಈ ಘಟಪ್ರವಾಹ.
*****