ಪ್ರಣಯ ಪಂಚಮಿ

ತುಂಟಾಗಿ ನಾಚಿ
ಮೊಣಕಾಲು ಮಡಿಸಿ, ಗಲ್ಲ ಊರಿ
ಮುನಿದ೦ತೆ ನಟಿಸಿ
ಕಣ್ಣುಗಳನ್ನು ತುಂಬಿಕೊಂಡವನನ್ನು ತನ್ನ ಖಾಸಗಿ ಕತ್ತಲೆಗೆ ಒಯ್ಯುತ್ತ
ಒಡಲುಗೊಳ್ಳುವ ಅವಳ ನಿರೀಕ್ಷೆ:
ಅವನ ಧಾರಾಳ ಅವಕಾಶ
ಮತ್ತು ಆಗ್ರಹ

ಸುಮ್ಮಗೆ ಅರಳಲು ಕಾದಿರುವ
ಕಟುವಾಸನೆಯ ಕೆಂಡಸಂಪಿಗೆ
ಅವಳು
ಅವನ ಅವಸರದ ಬೆದೆಗೆ

ಅವಳ ಮುಖದ ಮಮತೆಯಲ್ಲಿ ತುಡು ಉಣ್ಣಿಸಿದ
ಮಾತೆಯ ಭಾವ;
ಅವನ ತುಡುಗು ಮೈಯಲ್ಲಿ ಜ್ವರ ಕಳೆದು ಲಘುವಾದ
ಬೆವರ ಹನಿ

ಅಗ್ನಿಯಲ್ಲಿ ತೊಳೆದ ಶುಭ್ರ ಪುತ್ಥಳಿಯಾಗಿ
ಕೇವಲ ಹೆಣ್ಣೂ ಆಗಿ
ಅನನ್ಯಳಾಗಿ, ಅನ್ಯಳೂ ಆಗಿ
ದೇವಿಯಾಗಿ ಸೂಳೆಯೂ ಆಗಿ
ಇನ್ನೆಷ್ಟು ಅರಳಿದರು ಇನ್ನೂ ಅರಳಬೇಕೆಂದು
ಕತ್ತಲಿನ ಚಂಚಲೆಯಾಗಿ,
ಏಕೈಕಳಾಗಿ ಅವನಿಗೆ ಸಲ್ಲಲೆಂದು
ಏಕಾಕಿ
ಅವಳು ಸತತ ಕಾಯುವುದು

ಮುದ್ದಾಮಾದ ಅವಳ ಬೇಟವೆ ತನ್ನದೇ ಪಾಡೂ ಆಗಿ
ಅಟ್ಟುವ ಅಡಗುವ ಅನ್ನೋನ್ಯದಲ್ಲಿ ಪರವಶವಾಗಿ
ಸೊಕ್ಕುವ ರಮಣನಾಗಿ
ಉಕ್ಕುವ ಬಿಕ್ಕುವ ಮಿಂಡನಾಗಿ
ಏಕೈಕನಾಗಿ
ಅವಳಿಗೆ ಒದಗಲೆಂದು
ಏಕಾಕಿ
ಅವನು ಸತತ ಕಾಯುವುದು.
*****