ಬಿದಿರು

ತುಳುಕು ಚಿಮ್ಮುವ ಹೊಳಪು
ಸಿಗುರು ಚೀರುವ ಅರಚು
ಹಿರಿದುದ್ದ ಬಳುಕಾಡಿ ತೊನೆದು ತೂರಿದ
ಗುರಿ
ಗರಿಮುರೀ ಬಿದಿರು
ಚುಚ್ಚು ಮುಳ್ಳು.

ಸಾವಿರದ ಅಲಗುಗಳ ಜೀವನದ
ಕೆಚ್ಚು ಪರಂಪರೆಯ ಹುಚ್ಚು
ತಿದಿಯಾರಿ ಹೊಗೆಯೆದ್ದ
ಯಜ್ಞಕುಂಡ-ಪ್ರೇಮಿ ಅರೆಬರೆ
ದಿಟ್ಟ ಪ್ರೇಮಪತ್ರ-ಅರ್ಧಕ್ಕೇ
ತಡೆಹಿಡಿದ ಸ್ವಪ್ನಸ್ಖಲನ.

ಕೊರೆಯುವುದು ಬೇರು-ವರ್ತಮಾನ
ಕ್ಕಿಂತ ಆಳದೂರು-ನಿಲುಕದಾಳಕ್ಕಿಂತ
ಇಳಿದ ವ್ಯವಹಾರ ನೀರೆಲ್ಲಿ ನೀರೆಲ್ಲಿ
ಕಲ್ಲುಕೋಶಗಳೊಳಗೆ ದಿವ್ಯ ಅರಸು.

ಸಿಹಿತುಟಿಗೆ ಒತ್ತಿಟ್ಟ ಉಪ್ಪು
ಚುಂಬನದಂತೆ ಸರಸರನೆ ಮೊಳೆಮೊಳೆತು
ಪುಟಿ ಪುಟಿವ ವಾಂಛೆ
ಎಲೆಯೆಲ್ಲಿ ನರವೆಲ್ಲಿ ಕೊಂಬೆಗಳ ತಾವೆಲ್ಲಿ
ಗಿಣ್ಣುಗಳ ನೋವೆಲ್ಲಿ
ಭೇದಭಾವದ ಉಸಿರು
ಟೊಳ್ಳು ಬಸಿರು

ಇಡಿಯ ಜೀವನದಲ್ಲೆ ಒಮ್ಮೆ ಹೂವಿನ ಕಾಲ
ಮೂಲಭೂತಗಳಲ್ಲಿ ಹುತ್ತಗಟ್ಟುತ್ತದೆ
ಒರಲೆ ಇರುವೆ ಸುತ್ತುತ್ತವೆ ಆದರೂ
ನೇರ ನಿಗುರುವ ವೃದ್ಧಿ
ನೇರ ನೋಟದ ಸಿದ್ಧಿ
ಬಾನನ್ನೆ ಸೀಳಿಟ್ಟು ಊರ್ಧ್ವಮುಖ ಚಕ್ಕಂದ
ಫಳಫಳಿತ ಆಸೆಗಳ ಗಟ್ಟಿ ಉಕ್ಕಂದ

ಅರುವತ್ತು ವರುಷದವರೆಗು ಕಾದ ಕಾವು
ಪರಾಗಸ್ಪರ್ಶದ ಯಶದ ಕನಸು ಕಾಣುವ ನೋವು
ಹಾ-ಧಿಗ್ಗನೆ ದಿಗ್ಭ್ರಮೆ ನಲಿವು
ಚೆಂಗು ಚೆಂಗನೆ ನೆಗೆದ ಹೂವು ಹೂವು
ಗಟ್ಟಿ ಮೈ ಕನಸಿದ್ದ ಪಕಳೆ ಪಕಳೆ
ಜತೆಗೆ… ಕಾದ ಕನಸಿಗೆ ಅಂತ್ಯ
ನೆನೆದ ಕಚಗುಳಿ ನಾಶ
ಫಲಿತ ಹಿಂಡಿನ ಮೈ ಲಟಲಟಿಸಿ ಹಿಟ್ಟು
ಮುದಿಯಾಗುದುರುತ್ತಿರುವ
ಮೌನ ಮರಣ
ಶೇಷ ಗಳಗಳ ರಾಶಿ ಅತ್ತ ಇತ್ತ….

ಎಲ್ಲವೂ ವ್ಯರ್ಥ!
ಇಲ್ಲ, ಹೂದುಂಬಿ ರಸ ತುಳುಕಿ ಕೊನೆಗೂ ಕೃತಾರ್ಥ.
*****