ಬೋರು ಕಣೆ ಲೀನ

ಲೀನಾ-
ಯುಗಾದಿ ಬಂತು ಗೊತ್ತ
ಬೋರು ಕಣೆ
ಮಾಮೂಲು ಬದಲಾವಣೆ
ನಿನ್ನ ಕರಿ ತುರುಬು ಬಿಚ್ಚಿ ಹರಡಿದಂತೆ
ಒದ್ದೆಯಾಯಿತು ಸಂಜೆ.
ಹೌದೆ
ಕತ್ತಲಿಗು ಬತ್ತಲಿಗು ನಂಟೆ ?
ಓಹೋ
ನಮಗಾಗೂ ಉಂಟಲ್ಲ
ಬಯಲು ತಂಟೆ

ಬೋರು ಕಣೆ ಲೀನ
ಹಾಂ, ಕಾವ್ಯ ವೈಯಕ್ತಿಕತೆ ಕೊರೆಯೋಣ?
ಸುಳ್ಳು ಕತೆ ಕವಿತೆಗಳ ಬರೆಯೋಣ?
ನೀರುಳ್ಳಿ ಬಿಚ್ಚಿ ಹುಡುಹುಡುಕಿ ನೋಡೋಣ?
ಏನುಳಿಯುತ್ತೆ ಹೇಳು?
ಒಂದಿಂಚು ಗೆರೆ ಸೊನ್ನೆಯಲ್ಲೇ
ಹೆಚ್ಚು ಕಮ್ಮಿ,
ನಿನ್ನ ಮುಡಿ ಮಲ್ಲಿಗೆಯೊ ಕೆಂಪು ಕೆಂಡ
ಹೃದಯ ಕಮಲದ ಪಕಳೆ ಸುಟ್ಟು ದಂಡ
ಗದ್ಯವಾಗುತ್ತೆ ಕಣೆ ಲೀನ
ಮಾತು ಸಾಕಲ್ಲ-
ಅಂಕೆ ಕೂಡಿಸಿ ಕಳೆದು
ಸೊನ್ನೆ ಸೊಕ್ಕಿಸಿ ಬೆಳೆದು
ಯಾರೂ ಹುಡುಕಿ ತೆಗೆಯದಂತೆ
ಬಾರೆ ಕಳೆದು ಹೋಗೋಣ
ಯುಗಾದಿ ಬೋರು ಕಣೆ ಲೀನ.
******