ಮಾತು

ಮುಂಜಾವದಲಿ ಹಸಿರು ಹುಲ್ಲ ಮಕಮಲ್ಲಿನಲಿ
ಪಾರಿಜಾತವು ಹೂವ ಸುರಿಸಿದಂತೆ,
ಮುಟ್ಟಿದರೆ ಮಾಸುತಿಹ ಮಂಜುಹನಿ ಮುತ್ತಿನಲಿ
ಸೃಷ್ಟಿ ಸಂಪೂರ್‍ಣತೆಯ ಬಿಂಬಿಪಂತೆ,

ಮಲ್ಲೆದೆಯ ಸವಿಯೊಲುಮೆ ಕರಗಿ ಕಂಬನಿಯಾಗಿ
ಹೆಣ್ಣ ಕಣ್ಣಂಚಿನಲಿ ತುಳುಕುವಂತೆ,
ಸುಳಿಗಾಳಿಯೊಂದಿನಿತು ಸೂಸಿ ಬಂದರು ಸಾಕು
ಮರವನಪ್ಪಿದ ಬಳ್ಳಿ ಬಳುಕುವಂತೆ, –

ನಾವು ಆಡುವ ಮಾತು ಹೀಗಿರಲಿ ಗೆಳೆಯ
ಮೃದುವಚನ ಮೂಲೋಕ ಗೆಲ್ಲುವುದು ತಿಳಿಯ;
ಮೌನ ಮೊಗ್ಗೆಯನೊಡೆದು ಮಾತರಳಿ ಬರಲಿ
ಮೂರು ಗಳಿಗೆಯ ಬಾಳು ಮಗಮಗಿಸುತಿರಲಿ.
*****