ಬರುವುದೆಲ್ಲ ಬರಲಿ ಬಿಡು

ಬರುವುದೆಲ್ಲ ಬರಲಿ ಬಿಡು
ಏಕೆ ಅದರ ಚಿಂತೆ?
ದುಃಖ ಸುಖವು ನಗೆಯು ಹೊಗೆಯು
ಎಲ್ಲ ಅಂತೆ ಅಂತೆ.

ನಾವು ಗೈದ ಒಳಿತು ಕೆಡಕು
ಜೀವ ಪಡೆವ ಭೋಗ;
ನಮ್ಮ ನುಡಿಯ ನಡೆಯ ಒಡಲ
ಕಡೆದ ಬೆಣ್ಣೆ ಯೋಗ!

ಕಣ್ಣು ಕಟ್ಟಿ ಬೆನ್ನು ತಟ್ಟಿ
ಓಡಿಸುವನು ಕಾಲ,
ಇವರ ಬಿಟ್ಟು ಇವರು ಯಾರು?-
ಎಂಥ ಮೋಹ ಜಾಲ!

ಮಿಡುಕನುಳಿದು ಹುಡುಕಬೇಕು
ಅದುವೆ ಬಾಳ ಮೂಲ,
ಪಡೆಯದಿರಲು ಕಣ್ಣ ನೀರ
ಕರೆವುದಲ್ಲ ಶೀಲ.

ಬಟ್ಟಬಯಲ ತುತ್ತತುದಿಗೆ
ತಿರುಗುತಿಹವು ಗೋಲ-
ಕೊಟ್ಟು, ತೀರಲಿಲ್ಲ ಜನುಮ
ದೇವನಿತ್ತ ಸಾಲ.

ಏಸೊ ಕಡಲ ಈಸಿ ಬಂದು
ಬೀಸುತಿಹುದು ಗಾಳಿ;
ಗಾಸಿಗೊಂಡ ಭೂಮಿತಾಯಿ
ನರಳುತಿಹಳೆ ಹೇಳಿ.

ಮುಗಿಲಜೇನನರಸುತ್ತಿರುವ
ತುಂಬಿ ಭಾವದುಂಬಿ,-
ಹುಟ್ಟುಹರಿಯೆ ಮುಂದುಗೆಟ್ಟ
ಓಟ ಎತ್ತೊ ಎಂಬಿ.

ಶಿಖರಕೊಂದು ಹೆಜ್ಜೆಯಿಟ್ಟು
ಗಾಳಿದೇರನೇರಿ,
ಬಾಳಕನಸು ಕರೆಯುತಿಹುದು
ಯಕ್ಷ ಲೋಕ ಸೇರಿ.

ಏನು ಮಾಟ! ಏನು ಮೋಡಿ!
ಚಣದ ನೋಟ ಬೇಟ;
ಹೀಗೆ ಸಾಗುತಿಹುದು ನಮ್ಮ
ನೆಳಲು ಬೆಳಕಿನಾಟ!
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.