ನಂಬಿಕೆ

ಅನಂತವೆಂದರೂ ಆಕಾಶಕೊಂದು ಆಕೃತಿಯುಂಟು,
ನೀಲವೆಂದರೂ ನೂರು ಬಣ್ಣದ ಲೀಲಗವಕಾಶವುಂಟು.
ಭೂಮಿಯ ಮೇಲೆ ಕಾಲೂರಿ ನಡೆದಿದ್ದರೂ ಇದರ
ಸ್ತರಗಳ ನಡುವೆ ಸ್ಥಿರಗೊಂಡ ಒಡನಾಟ, ನಿರಂತರ ನಂಟು.
ಹಗಲೆಲ್ಲ ಹಸುರಾಗಿ, ತುಂಬು ಕೆಂಪಾಗಿ, ರೆಂಬೆ –
ಕೊಂಬೆಗಳೆಲ್ಲ ಸಂಜೆ ಬಾನಿನ ನಿರಾಳ ಮನದೊಳಚ್ಚೊತ್ತಿ
ಚಿತ್ತಾರವಾಗಿ ಕಪ್ಪು ಮುಸುಕಿನ ಒಳಗೆ ಹುದುಗುವವು
ಇದ್ದು ಇಲ್ಲದ ಹಾಗೆ. ಇರುಳಿನಲಿ ಒಮ್ಮೆಲೇ ಚಿಗುರೊಡೆದು
ಅಂತರಂಗವ ಬಿಚ್ಚಿ ಬಯಲಿಗಿಡುವದು ಬಾನು:
ಎಚ್ಚರಾಗದ ಹಾಗೆ ನೆಲದ ಮೈದಡವಿ ಮುದ್ದಿಸುವದು.
ಆಗ ಎಲ್ಲರಿಗು ನಿದ್ದೆ. ಬೆಳಗಿನ ಜಾವ ಯಾವುದೊ
ಕನಸು: ಬೆಳಗಾದ ಮೇಲೆ ಮರೆತು ನೆನೆಸುವದು –
ತಿರುಗಾಡಿ ಬರುವಾಗ ಗೆಳೆಯರಿಗು ಹೇಳಿ ನಕ್ಕು
ನಗಿಸುವದು; ಹೂ ಗಿಡಕೆ ನೀರು ಹಣೆಸುವದು.

* * * *

ಚಳಿಗಾಲದಲ್ಲಿ ಒಂದೊಂದೆ ಎಲೆಯುದುರಿ ನೆನಪು ಕಳಚು
ತ್ತಿರುವಾಗ ಯಾರಿಗೂ ಕಾಣದ ಹಾಗೆ ಬೇರಿಂದ ರಸ ಹೀರಿ
ಚಿಗುರಿ ನಿಂತವರಾರು? ಬಿರುಗಾಳಿ ಬೀಸಿ ಆಕಾಶದುದ್ದ
ಧೂಳಡರಿ ದಿಕ್ಕು ತಪ್ಪಿಸಿ, ಮನೆಮನೆಯ ಕಿಡಕಿ ಬಾಗಿಲು
ಬಡಿದು ಪಟಪಟ ಹನಿಯುದುರಿದಾಗ ಯಾರು ನೆಲಕಿಳಿದು
ಬಂದವರು? ಮರುದಿನ ಬೇಲಿಗುಂಟ ಹೂವರಳಿದಾಗ ಯಾರು
ಕಿಲಕಿಲ ನಕ್ಕು ಹೋದವರು? ನಿರ್ಮಲವಾಗಿ ನಿಂತ ಮೋಡ
ಹೊಯ್ದಾಡಿ ಎಲ್ಲೊ ಇಳಿಯುವುದು-ಭೂಮಿ ಗುಟುಕರಿಸುವದು.
ಆಗೀಗ ಮಿಂಚಿ ಅಂತರಿಕ್ಷದಲೇನೊ ಹೊಳೆಯುವದು.

* * * *

ಯಾವುದೋ ಗಳಿಗೆಯಲಿ ಹಟಾತ್ತನೆ ಒಳಗೆ ಅನಿಸುವ-
ದೊಂದು ; ಬೆಟ್ಟದ ಮುಡಿಯ ಕಲ್ಲು ಬಂಡೆಯಲಿ ಚೆಲ್ಲನೆ ಬುಗ್ಗೆ
ಚಿಮ್ಮಿ ಮುಂದೆ ಹರಿದದ್ದೆಲ್ಲೊ. ಹಗಲಿರುಳು ಜಾರುವವು
ದಿನದಿನವು ನನ್ನೊಳಗಿಂದ ಏನೊ ಹೀರುವವು ; ಮತ್ತೆಲ್ಲೊ
ತಿರುಗಿ, ಪತ್ತೆಯಿಲ್ಲದ ಹಾಗೆ ಜೇನಿಟ್ಟು ‘ಬಿಡಿಸಿಕೊ’ ಎಂದು
ದುಡಿಸುವವು. ಜೋಂಗೊಡುವ ಕಂಡು ಅಚ್ಚರಿಗೊಂಡರೂ
ಅವಸರ ಪಡುವ ಹಾಗಿಲ್ಲ ; ದಾಹ ತೀರಿಸಲು ನೀರಿಲ್ಲ.
ಮತ್ತು ಬರಿಸುವ ಮದ್ಯವಲ್ಲ. ಅಂಗೈಯಲ್ಲಿ ಹನಿಹನಿ
ಹಾಕಿ, ನೆಕ್ಕಿ ನಾಲಗೆ ತುಂಬ ಸವಿದು, ಕಣ್ಮುಚ್ಚಿ
ತೆರೆಯಬೇಕು.

* * * *

ನನ್ನ ನಂಬಿಕೆಯೊಂದು ಆಕಾಶ:
ನಿಜ, ಅದಕೆ ತಲೆಬುಡವಿಲ್ಲ, ನಾನೆಷ್ಟು ಬೆಳೆದರೂ
ನನಗೆ ನಿಲುಕುವುದಿಲ್ಲ, ದೂರದಿಂದಲ್ಲದೆ ನಾನದನು
ಮುಟ್ಟಿ ಅನುಭವಿಸಿಲ್ಲ. ಮೇಲೆ ನೋಡದೆ ಸೆಟೆದುಕೊಂಡೇ
ನಡೆದರೂ ಅದು ಸದಾ ನನ್ನ ತಲೆಯ ಮೇಲೆ.
ಹಗಲು ಹೊತ್ತಿನಲಿ ಅದರೆಡೆಗೆ ಲಕ್ಷ್ಯವಿಲ್ಲ. ನಮ್ಮ ಬದುಕಿನಲಿ
ನಾವು ಮಗ್ನರಾದರೆ ಸಾಕು, ಅದಕೆ ಚಿಂತೆಯಿಲ್ಲ.
ರಾತ್ರಿ ವಿದ್ಯುದ್ದೀಪ ಕೈಕೊಟ್ಟು, ಮಿಣಿ ಮಿಣಿ ಮೇಣ-
ಬತ್ತಿಯ ಹಚ್ಚಿ, ಅಂಜಿ ಆಕಳಿಸುತ್ತ ಕುಳಿತಾಗಲೂ
ಆಕಾಶದಲಿ ಹೊಳೆವ ನಕ್ಷತ್ರಕ್ಕೆ ಲೆಕ್ಕವಿಲ್ಲ.
*****
೧೯೬೯