ಗುಬ್ಬಿ

ಗೋಡೆಗೆ ತೂಗುಹಾಕಿದ ಫೋಟೋದ ಹಿಂದೆ
ಗುಬ್ಬಿ ಗೂಡು ಕಟ್ಟಿದೆ.
ಹುಲ್ಲು, ಹತ್ತಿಯಚೂರು, ದಾರ ಮೆತ್ತಗೆ ಒಟ್ಟಿದೆ.
ಈ ಪುಕ್ಕಲು ಪ್ರಾಣಿಯ ಧೈರ್ಯಕ್ಕೆ
ಬರೀ ಎರಡು ರೆಕ್ಕೆ
ಅಡಿಗೆಯ ಮನೆಗೂ ಬಂದು ಕುಟುಕುತ್ತದೆ
ಅನ್ನದ ಅಗಳು-
ಬರ್ರನೆ ಹೊರಗೆ ಹಾರಿ, ಆರಿಸಿ ಹುಲ್ಲಿನ ಹುಳು
(ಈ ಶಾಕಾಹಾರಿ)
ಸರ್ರನೆ ಬರುತ್ತದೆ ಮರಳಿ, ಮರ-ಮರಳಿ
ಕಿಟಕಿಯ ಸರಳಿಗೆ ಕುಳಿತು, ಚಕಮಕ ಹೊರಳಿ
ತೂರಿಬಂದು, ಚಿಂವ್ ಚಿಂವ್ ಮರಿಗೆ ಗುಟುಕಿಟ್ಟು
ಹಾರಿ ಹೋಗುತ್ತದೆ, ಹೀಗೆ ಎಷ್ಟೋ ಬಾರಿ.

ಗುಬ್ಬಿಯ ಪುಟ್ಟ ಆಕೃತಿ
ಮರೆಯಾಗಿ
ತಾಯಿಯ ವಿಶಾಲ ಹೃದಯದಲ್ಲಿ
ಕರಗಿ
ಹೋಗುತ್ತೇನೆ ನಾನು ಜೀವಂತವಾಗಿ.
*****
೧೯೭೪