ಪಣತಿ


ನೂರು ಹೃದಯ ಮೇರು ಭಾವಗಳ
ನೂರಾರು ಸಾಲುದೀಪ
ಹೊತ್ತಿ ಉರಿದಿವೆ ಸುತ್ತು ಕತ್ತಲೆಯ ಕೂಪದಲಿ-
ಒಂದು ಚಣ, ಬೆಳಕು ನಗೆ ನಲಿವು ಸಲ್ಲಾಪ:
ಮರುಗಳಿಗೆ ‘ಆ’ ಎಂದು ಅಂಧಕಾಸುರ ಬಂದು
ಕೊಳ್ಳೆ ಹೊಡೆಯಲು ಕೇಳಿಬರುವದೊಂದೇ ಸೊಲ್ಲು
ಅಣಕಣದ ವಿಪ್ರಲಾಪ!
ಸುತ್ತು ಕಂದಕ ತೋಡಿ ಮುಳ್ಳು ತಂತಿಯ ಬಿಗಿದು
ಭದ್ರವಾಗಿಯೆ ಕಾವಲಿಟ್ಟರೂ ಬಿಟ್ಟರೂ
ನುಗ್ಗಿ ಬಂದೇ ಬಿಡುವನಲ್ಲ ಈ ಭೂಪ!
ಬಿಳಿಯ ಗೋಡೆಯ ಮೇಲೆ ನೆರಳುಬಂದಾಡುವವು
ಕುಣಿಸುವನು ಕಿಳ್ಳಿಕೇತ;
ನೆತ್ತಿಯಲಿ ಸುರುಳಿ ಸುತ್ತಿ ಮಲಗಿದ ಮೆದುಳು….ಬಡಪಾಯಿ
ಚಿತ್ತವೆತ್ತೋ …. ಆದರ ಧ್ಯಾನವೆತ್ತೋ …. !
ಕೆಸರು ಮೆತ್ತಿದ ಕಾಲನೆತ್ತೆತ್ತಿ ಇಡುತಿಹುದು ಗಾಣದೆತ್ತು
ಹಾಳುಗೋಡೆಯ ಬದಿಗೆ ಕಾಲು ಜೋಡಿಸಿ ನಿಂತು
ಇಹಪರದ ದೀರ್ಘ ಆಲೋಚನೆಗೆ ತೊಡಗಿಹುದು
ಯುಗಯುಗದ ದೈನ್ಯವಾಣಿ-
ಕಟ್ಟಿ ಕಾಲನು ಮೇಯಬಿಟ್ಟ ಪ್ರಾಣಿ.
ಕೆದರಿ ತಿಪ್ಪೆಯ ಕೋಳಿ ಹೆಕ್ಕುತಿಹುದೇನನೊ
ಬೆನ್ನ ಹಿಂದೆಯೆ ಕಟ್ಟಿಕೊಂಡು ತಿರುಗಿದೆ ತನ್ನ ಸರ್ವ ಬಳಗ !
ಬೆಳಗಾಗೊ ಮುನ್ನವೇ ಕೂಗುವದೆ-ಅದರಮನೆ ಹಾಳಾಗ ಇಷ್ಟು ಬೇಗ?
ಹಿಡಿದು ಒಂದೇ ಉಸಿರು ಒದರುತಿದೆ ಊರೆಲ್ಲ ಗಿರಣಿ ಭೋಂಗಾ.
ದಿನದ ಬೀಸುವಕಲ್ಲು ಗರಗರೆಂದಾಡಿಹುದು
ಬಳೆಯ ಮಂಜುಳರವದ ನಾದ ಹಿಡಿದು ;
ಇರುಳೆಲ್ಲ ಉರಿದುರಿದು ಸಣ್ಣದಾಗಿದೆ ಪಣತಿ
ಗುಡಿಸಲದ ಗೂಡಿನಲಿ ಜೀವ ಹಿಡಿದು !


ಅವತಾರಗಳ ಮೇಲೆ ಅವತಾರಗಳು ಬಂದು
ಮಂಡಿಸಿದ ಭಾವಚಿತ್ರ !
ಕಟ್ಟುಹಾಕಿಸಿ ಗೋಡೆಗಿಡಿದು ಮೊಳೆಯನು ಜಡಿದು
ತೂಗಬಿಟ್ಟ ಹರಾರೊ ಬಲು ವಿಚಿತ್ರ !
ಸುತ್ತು ಮುತ್ತಲು ಪೌಳಿ ನಡುವೆ ಗೋಪುರವೇರಿ
ಮೂಡಿತ್ತು ಮುದ್ದು ಕಳಸ ;
ಹರಗಿ ಹಸನಾದ ಹೊಲದಲ್ಲಿ ಬೆಳೆಯಿತು ರಾಶಿಧಾನ್ಯದವಸ,
ಪೂಜೆ ಸಂದಿತು ಮುಗ್ಧ ನೈವೇದ್ಯ ಸಂತೃಪ್ತಿ-
ಹಬ್ಬ ಹುಣ್ಣಿವೆಗೊಮ್ಮೆ ಹೊಮ್ಮಿದುತ್ಸಾಹದಲಿ
ಮೊಳಗಿದವು ಜೋಡು ಕಹಳೆ !
ಗಂಟೆ ಗಣಗಣನಾದ ರಿಂಗಣದಿ ನರನರವು ವಿದ್ಯುತ್ ರಂಗಮಾಲೆ !
ಬಯಕೆ ಊದಿನಕಡ್ಡಿ ಬರೆದುಹಾಕಿತು ದಿನವು ಬಿನ್ನಹದ ಓಲೆ
ಮುಟ್ಟಿತಿಲ್ಲವೊ, ಇನ್ನೂ ಉತ್ತರವೆ ಬರಲಿಲ್ಲ
ಏನೊ ವರ್ಗಾವರ್ಗಿ ಅಲ್ಲಿ ಮೇಲೆ !

ನುಡಿಯಲೊಲ್ಲದು ದೇಹ ದೇಗುಲದ ಗಂಟೆಯುಲಿ
ಮಿಡಿಯಲೊಲ್ಲದು ಮುಖ್ಯ ಜೀವನಾಡಿ,
ಹಿಡಿದು ಸಿಕ್ಕಾಬಟ್ಟೆ ಜಗ್ಗುತಿವೆ ನೂರಾರು ಬೇಟೆನಾಯಿ !
ಮಡಿಯುಟ್ಟ ಪೂಜಾರಿ (ನೋಡಿರವನವತಾರ !)
ಕಾಣಿಕೆಯ ಕೊಂಡ ತತ್ ಕ್ಷಣವೇ ಕೃತಾರ್ಥ.
ಆಮೇಲೆ ಧರ್ಮಾರ್ಥ ಹಣಿಸುವನು ಒಂದೊಂದೆ ಸೌಟು ತೀರ್ಥ
(ಗಂಗೆ ತುಂಗೆಯು ಬ್ರಹ್ಮಪುತ್ರೆ ಕಾವೇರಿಯರು ನೆರೆ ಬಂದು ಹೊರಚೆಲ್ಲುತಿಹರು ವ್ಯರ್ಥ)
ಬಣ್ಣ ಬಣ್ಣದ ಬಲ್ಬು ಕಾಜಿನ ಗುಳಾಪುಗಳು ಕಾರ್ತಿಕವ ಹಚ್ಚಿದಿರುಳು
ಥಳಥಳಿಸುವೆರಡು ಬಂಗಾರ ಪಾದುಕೆಮೇಲೆ
ಆಡುತಿವೆ ಪೂಜಾರಿ ಕೈಯ ಬೆರಳು !
ಗರ್ಭಗುಡಿಯಲಿ ಪಣತಿ ಉರಿದಿವೆ ನಿರಾತಂಕ
ಬಂದು ಬಡಿದರು ನೂರು ದೀಪದಹುಳು !

(೩)
ಚೆಂಡು ಹೂ ತುಂಬೆ ಹೂ ಹೊನ್ನವರೆ ಹುಚ್ಚೆಳ್ಳು-
ಸಜ್ಜೆ ಜೋಳದ ತೆನೆಗೆ ಸುಂಕವಾಡಿ
ಮಣ್ಣ ಕುಡಿಕೆಯನೊಡೆದು ಪುಟಿಯುತಿದೆ ಕಾರಂಜಿ
ಬಣ್ಣ ಬಣ್ಣದ ಬದುಕನೆಲ್ಲ ತೂರಿ!

ಗುದ್ದುತಿದೆ ಗಾಳಿಯನ್ನು ಸುಮ್ಮಸುಮ್ಮನೆ ಮದ್ದು
ಒದ್ದಾಡುತಿವೆ ಒಳಗೆ ಚಟಪಟಾಕಿ ;
ಹೊತ್ತಿ ಸುರುಸುರುಬತ್ತಿ ನಕ್ಷತ್ರ ಸೂಸುತಿವೆ
ಗೊತ್ತಿಲ್ಲವೇ, ಇಂದು ದೀಪಾವಳಿ !

ಗುರಿಯಿರದ ಸುರುಬಾಣ ಹಾರಿದ ಧಡಲ್ ಬಾಜಿ
ಆಟದಾಟಂ ಬಾಂಬಿನಾಸ್ಫೋಟಿನ!
ಒಂದೊಂದಕೂ ಸ್ಪರ್ಧೆ ‘ನಾ ಮುಂದೆ ನೀ ಮುಂದೆ’
ಸಾಲಬಹುದೇ ಒಂದು ಜೀವಮಾನ?

ಮುಗಿಲು ಝಗಝಗ ಮಿಂಚಿ ಹೊಡೆದುಕೊಂಡಿತು ಸ್ನ್ಯಾಪು
(ಸಿಗಲಾರದಿನ್ನಿಂಥ ಜಗದ ಭಂಗಿ!)
ಬಿರುಗಾಳಿ ಬೀಸಿ ಮಳೆ ಹೊಯ್ದು ಗುಡುಗುಡಿಸಿತ್ತು
ಸಿಕ್ಕ ಬೇಟೆಯ ಸಿಡಿಲು ತಿಂದು ತೇಗಿ !
ಮರ ಮುರಿದು ಬಿದ್ದು ಕಬ್ಬಿಣಕಂಬ ನೆಲಕೊರಗಿ
ಹರಿದು ವಿದ್ಯುತಂತಿ ದೀಪವಾರಿ
ಕತ್ತಲೆಯೆ ತುಂಬಿ ಹೊರಚೆಲ್ಲುವ ಗಟಾರದಲಿ
ಕೊಚ್ಚಿ ಹೋಯಿತು ಪಾಪ, ಮುದ್ದು ಕುನ್ನಿ !
* * * *
ತಲೆತಲಾಂತರದಿಂದ ತೈಲವೆರೆಯುತ ಬಂದು
ಸೊಡರು ಕುಡಿಯಾಡಿಸಿದೆ ಮಣ್ಣ ಪಣತಿ ;-
ನೆಲಬಾನಿಗೊಂದೆ ದೀಪಾವಳಿಯ ಸೇತುವೆಯ
ನಿಲಿಸಿ ಉದ್ಘಾಟಿಸಲಿ ‘ಜ್ಯೋತಿಷಾಂ ಜ್ಯೋತಿಃ!’
*****