ಭಾಷೆ ಜನಸಂಪರ್ಕದ ಬಹು ಪ್ರಮುಖ ಸಾಧನ. ಮನುಷ್ಯರು ತಮ್ಮ ಎಲ್ಲ ಬಗೆಯ ಅನುಭವ, ಆಲೋಚನೆಗಳನ್ನು ಭಾಷೆಯ ಮೂಲಕ ವ್ಯಕ್ತಪಡಿಸುತ್ತಾರೆ, ಇಂತಹ ಒಂದು ಅಭಿವ್ಯಕ್ತಿಮಾಧ್ಯಮ ಮನುಷ್ಯನಿಗೆ ದೊರಕಿರುವುದರಿಂದಲೇ ಅವನಿಂದ ಒಂದು ಸಮಾಜವನ್ನೂ ತನ್ಮೂಲಕ ನಾಗರಿಕತೆಯನ್ನೂ ಕಟ್ಟಲು ಸಾಧ್ಯವಾಗಿರುವುದು. ಇದು ನಮಗೆ ಸ್ಪಷ್ಟವಾಗಬೇಕಾದರೆ ಮನುಷ್ಯನನ್ನು ಪ್ರಾಣಿಗಳ ಜೊತೆ ಹೋಲಿಸಬೇಕು. ಒಂದು ಪ್ರಾಣಿಗೆ ಯಾವ ಕೌಶಲ ಗೊತ್ತೋ ಅದೇ ಕೌಶಲ ಎಲ್ಲ ಪ್ರಾಣಿಗಳಲ್ಲೂ ಇರುತ್ತದೆ. ಎಲ್ಲ ಪ್ರಾಣಿಗಳೂ ಒಂದೇ ಬಗೆಯ ಕೆಲಸವನ್ನು ಒಂದೇ ರೀತಿಯಲ್ಲಿ ಮಾಡುತ್ತವೆ. ಒಂದು ಪ್ರಾಣಿ ತನ್ನ ಕೈಲಿ ಆಗದ ಕೆಲಸವನ್ನು ಇನ್ನೊಂದರಿಂದ ಮಾಡಿಸಲು ಸಾಧ್ಯವೇ ಆಗುವುದಿಲ್ಲ-ಪ್ರಾಣಿಗಳಿಗೆ ಭಾಷೆ ಗೊತ್ತಿಲ್ಲದ ಕಾರಣ. ಮನುಷ್ಯನಿಗೆ ಭಾಷೆ ಗೊತ್ತಿರುವುದರಿಂದ ಕೆಲಸದ ಹಂಚಿಕೆಯೂ ಸಾಧ್ಯವಾಗಿದೆ. ಉಳುಮೆ, ಮೀನುಗಾರಿಕೆ, ಚರ್ಮದ ಕೆಲಸ, ಮರಕೆಲಸ, ವ್ಯಾಪಾರ, ನೇಯ್ಗೆ, ಹೀಗೆ ಹತ್ತಾರು ಬಗೆಯ ಕೌಶಲಗಳನ್ನು ಬೇರೆ ಬೇರೆಯವರು ಕರಗತಗೊಳಿಸಿಕೊಳ್ಳುವುದರಿಂದ ಸಮಾಜರಚನೆ, ಆರ್ಥಿಕ ಬೆಳವಣಿಗೆ, ನಾಗರಿಕತೆಗಳು ಸಾಧ್ಯವಾಗಿವೆ. ತನ್ನ ಕೈಲಿ ಆಗದ ಒಂದು ಕೆಲಸವನ್ನು ಇನ್ನೊಬ್ಬನಿಂದ ಮಾಡಿಸಲು ಸಾಧ್ಯವಾಗುವುದು ಭಾಷೆಯಿಂದ. ಒಂದು ಸಮಾಜ ಸುಸ್ಥಿರವೂ ಸುವ್ಯವಸ್ಥಿತವೂ ಆಗಬೇಕಾದರೆ ಆ ಸಮಾಜದ ಭಾಷೆಯು ಅಲ್ಲಿನ ಎಲ್ಲರಿಗೂ ತಿಳಿಯಬೇಕು. ಮತ್ತು ವ್ಯವಹಾರವೆಲ್ಲ ಆ ಭಾಷೆಯಲ್ಲಿಯೇ ನಡೆಯಬೇಕು. ಯಾವುದೇ ಸಾಮಾಜಿಕ ಘಟನೆಯಲ್ಲಿ ಆ ಸಾಮಾಜಿಕರು ಪಾಲುಗಾರರಾಗಬೇಕು.
ಒಂದು ದೇಶದ ಆಡಳಿತದಲ್ಲೂ ಅಲ್ಲಿಯ ಭಾಷೆ ಹೇಗೆ ಪ್ರಮುಖ ಪಾತ್ರವನ್ನು ವಹಿಸುತ್ತದೆಯೆಂಬುದು ಸ್ಪಷ್ಟವಾಗುತ್ತದೆ. ಹತ್ತು ಬಗೆಯ ಕೆಲಸಗಳು ನಡೆಯುವ ಕಾರ್ಖಾನೆಯ ಕಾರ್ಮಿಕರಿಗೆ ಪರಸ್ಪರ ಅರ್ಥವಾಗುವ ಭಾಷೆಯೊಂದಿರದಿದ್ದರೆ, ಕಾರ್ಖಾನೆ ನಡೆಯುವುದಾದರೂ ಹೇಗೆ? ಯಂತ್ರಗಳ ಮುಖ್ಯಸ್ಥನಿಗೂ ಕಾರ್ಮಿಕರಿಗೂ ಸಮಾನಭಾಷೆಯೊಂದಿರದಿದ್ದರೆ ಆ ಯಂತ್ರಗಳಾದರೂ ಹೇಗೆ ಸರಿಯಾಗಿ ನಡೆದಾವು? ಸರ್ಕಾರವೂ ಒಂದು ಯಂತ್ರವಿದ್ದಂತೆ; ಇಲ್ಲಿ ಸಾಮಾನ್ಯ ಜನ ಉಂಟು. ಅಧಿಕಾರಿಗಳು ಉಂಟು. ಇವರಿಬ್ಬರ ಮಧ್ಯೆ ಭಾಷೆಯ ಕಂದಕವೊಂದು ನಿರ್ಮಾಣವಾದರೆ ಆಡಳಿತ ಕುಂಟುತ್ತದೆ. ನಷ್ಟಕ್ಕೆ ಒಳಗಾಗುವವರು ಸಾಮಾನ್ಯರು, ಜನತೆಯ ಭಾಷೆಯೇ ಆಡಳಿತ ಭಾಷೆಯಾಗಿರಬೇಕೆಂಬ ವಾದವು ಭಾವನಾತ್ಮಕವಾದುದಲ್ಲವೆಂದೂ ಅದಕ್ಕೆ ಸೈದ್ಧಾಂತಿಕ ಬೆನ್ನೆಲುಬು ಇದೆಯೆಂದೂ ಒತ್ತಿ ಹೇಳಬೇಕಾಗಿಲ್ಲ.
ಒಂದು ನಾಡನ್ನು ಗೆದ್ದವರು ಅದನ್ನು ತಮ್ಮ ವಸಾಹತುವನ್ನಾಗಿ ಉಳಿಸಿಕೊಳ್ಳಬೇಕಾದರೆ ಆ ನಾಡಿನ ಭಾಷೆಯನ್ನು, ಕೈಬಿಟ್ಟು ಆ ನಾಡ ಜನರಿಗೆ ತಿಳಿಯದ ಭಾಷೆಯೊಂದರಲ್ಲಿ ಆಡಳಿತವನ್ನು ನಡೆಸುವ ಯತ್ನ ಮಾಡುತ್ತಾರೆ. ಇದರಿಂದ ಸಾಮಾನ್ಯ ಜನತೆಗೆ ಮೇಲೆ ಆಡಳಿತ ಕ್ಷೇತ್ರದಲ್ಲಿ ಏನು ನಡೆಯುತ್ತಿದೆಯೆಂಬುದು ತಿಳಿಯದೆ ಮೂಗುದಾಣ ಹಾಕಿದ ಎತ್ತಿನಂತೆ ತಮ್ಮ ತಮ್ಮ ಉದ್ಯೋಗದ ಗಾಣದ ಸುತ್ತ ಸುತ್ತುತ್ತಿರುತ್ತಾರೆ. ಇದರಿಂದ ದೇಶ ಅಭಿವೃದ್ಧಿಯಾಗುವುದಿಲ್ಲ; ಮತ್ತು ಅದು ವಸಾಹತುಶಾಹಿಗಳಿಗೆ ಬೇಕಾಗಿಯೂ ಇಲ್ಲ; ಅವರಿಗೆ ತಾವು ಅಭಿವೃದ್ಧಿಗೊಂಡರೆ ಸಾಕು. ಆದರೆ ನಾಡಿನ ಸಮಗ್ರ ಕ್ಷೇಮಾಭಿವೃದ್ಧಿಯನ್ನು ಬಯಸುವವರು ನಾಡಪ್ರಜೆಗಳನ್ನು ಆಡಳಿತದ ಎಲ್ಲ ಹಂತಗಳಲ್ಲಿ ಪೂರ್ಣ ತೊಡಗಿಸಿಕೊಳ್ಳಬೇಕು. ಇದು ಆಗಬೇಕಾದರೆ, ಆಡಳಿತ ಭಾಷೆ ಜನತೆಯ ಭಾಷೆ ಆಗಿರಬೇಕು.
ಆಡಳಿತ ಭಾಷೆಯಾಗಿ ಕನ್ನಡಕ್ಕೆ ಒಂದೂವರೆ ಸಾವಿರ ವರ್ಷಗಳ ಇತಿಹಾಸವಿದೆ. ಪರಕೀಯರಾದ ಮೌರ್‍ಯರ ಶಾತವಾಹನರ ಪಲ್ಲವರ ಅಧೀನದಲ್ಲಿದ್ದ ಕರ್ನಾಟಕವನ್ನು ನಾಲ್ಕನೆಯ ಶತಮಾನದಲ್ಲಿದ್ದ ಕನ್ನಡಿಗರಾದ ಕದಂಬರು ಆಳಲು ಆರಂಭಿಸಿದುದೇ ಕನ್ನಡ ಆಡಳಿತ ಭಾಷೆಯಾಗಿ ಮೆರೆಯಲು, ಕನ್ನಡ ಸಂಸ್ಕೃತಿ ರೂಪುಗೊಳ್ಳಲು ಕಾರಣವಾಯಿತು ಎಂಬುದು ಐತಿಹಾಸಿಕ ಸತ್ಯ. ಅಂದಿನಿಂದ ಹದಿನಾರು ಹದಿನೇಳನೇ ಶತಮಾನಗಳವರೆಗೆ ಕನ್ನಡಕ್ಕೆ ಯಾವುದೇ ಚ್ಯುತಿ ಬರಲಿಲ್ಲ. ವಿಜಯನಗರ ಸಾಮ್ರಾಜ್ಯ ಅಧಃಪತನವನ್ನು ಹೊಂದಿದ್ದೇ ಕನ್ನಡದ ಕನ್ನಡಿಗರ ಕರ್ನಾಟಕದ ದುರದೃಷ್ಟದ ದಿನಗಳಿಗೆ ನಾಂದಿಯಾಯ್ತು. ಮುಂದೆ ಕರ್ನಾಟಕದ ಹಲವೆಡೆ ಮುಸ್ಲಿಮ್ ದೊರೆಗಳ ಆಳಿಕೆಯಿಂದಾಗಿ ಪರ್ಷಿಯನ್ ಅರೇಬಿಕ್ ಪದಗಳ ಬಾಹುಲ್ಯವಿದ್ದ ಉರ್ದು ಆಡಳಿತಭಾಷೆಯಾಗಿ ಬಳಕೆಗೆ ಬಂದು ಕನ್ನಡವು ಅಲ್ಲಿಂದ ಸಾವಿರಾರು ಪದಗಳನ್ನು ಸ್ವೀಕರಿಸಿತು, ಉರ್ದು ಎಷ್ಟೇ ಆಗಲಿ ಕನ್ನಡಕ್ಕೆ ಪರಕೀಯವೇ. ಮುಂದೆ ಬ್ರಿಟಿಷರ ಆಳಿಕೆಯ ಕಾಲದಲ್ಲಿ ಇಂಗ್ಲಿಷ್ ಆಡಳಿತ ಭಾಷೆಯಾಗಿ ಭಾರತಕ್ಕೆ ಸ್ವಾತಂತ್ರ್ಯವು ಘೋಷಣೆಯಾಗುವವರೆಗೆ ಅದೇ ಬಳಕೆಯಲ್ಲಿದ್ದಿತು. ಭಾರತವು ಬ್ರಿಟಿಷರ ವಸಾಹತಾಗಿದ್ದರೂ, ಅವರು ತೀರ ಸಾಮಾನ್ಯರಿಗೂ ಅವಿದ್ಯಾವಂತರಿಗೂ ಅನುಕೂಲವಾಗಲಿ ಎಂದು ಕನ್ನಡದಲ್ಲಿ ಆಗಾಗ್ಗೆ ಪರಿಪತ್ರಗಳನ್ನು ಆಜ್ಞೆಗಳನ್ನೂ ಹೊರಡಿಸಿದ್ದುಂಟು. ಹಲವು ಆಂಗ್ಲ ಅಧಿಕಾರಿಗಳು ಅಧಿಕಾರದ ದೃಷ್ಟಿಯಿಂದ ಕನ್ನಡವನ್ನು ಕಲಿತರೆ ಪಾದ್ರಿಗಳು ಮತಪ್ರಸಾರದ ದೃಷ್ಟಿಯಿಂದ ಕನ್ನಡವನ್ನು ಕಲಿತರು. ಇದರಿಂದ ಕನ್ನಡ ಭಾಷೆ ಸಾಹಿತ್ಯಗಳಿಗೆ ಚರಿತ್ರೆಗೆ ಸಹಾಯವಾಯಿತೆಂಬುದೂ ಎಲ್ಲರಿಗೂ ತಿಳಿದ ವಿಷಯ.
ಭಾರತಕ್ಕೆ ಸ್ವಾತಂತ್ರ್ಯ ಬಂದಿತು; ಬ್ರಿಟಿಷರು ಇಂಗ್ಲೆಂಡಿಗೆ ಹಿಂದಿರುಗಿದರು; ಅವರ ಭಾಷೆ ಇಂಗ್ಲಿಷ್ ಹಿಂದಕ್ಕೆ ಉಳಿಯಿತು. ಬ್ರಿಟಿಷರ ವಸಾಹತು ಧೋರಣೆ, ಅವರ ಕಾಲದ ಅಧಿಕಾರಶಾಹೀ ಮನೋಭಾವ ಮುಂದುವರಿದುವು. ಇಂಗ್ಲಿಷ್ ಉನ್ನತ ವಿದ್ಯಾಸಂಸ್ಥೆಗಳ, ಸಂಶೋಧನೆಯ, ಗ್ರಂಥಾಲಯದ ಭಾಷೆಯಾಗಿದ್ದುಕೊಂಡು ದೇಶೀಯ ಭಾಷೆಗಳನ್ನು ಪೋಷಿಸುವ ಪಾತ್ರವನ್ನು ವಹಿಸಬೇಕಿತ್ತು. ಅದು ಆಗಲಿಲ್ಲ, ಮತ್ತು ಹಾಗಾಗಲು, ಕೆಲವರ ಪ್ರಕಾರ, ಅಡ್ಡಿಗಳಿದ್ದುವು. ಆದರೆ ಇಂಗ್ಲಿಷ್ ಬೇರೆ ಬೇರೆ ಪ್ರಾಂತೀಯ ಭಾಷೆಗಳಿಗೆ ಆಡಳಿತದಲ್ಲಿನ ತನ್ನ ಸ್ಥಾನವನ್ನು ಸಂಪೂರ್ಣವಾಗಿ ಬಿಟ್ಟುಕೊಡಬೇಕಿತ್ತು. ಇದು ಅತ್ಯಂತ ಸುಲಭ ಸಾಧ್ಯವೂ ಮೂಲಭೂತ ಕಾರ್‍ಯವೂ ಆಗಿದ್ದೂ ನಡೆಯದೇ ಹೋದುದು ಸ್ವಾತಂತ್ರ್ಯೋತ್ತರ ಭಾರತದ ದುರಂತಗಳಲ್ಲಿ ಒಂದು. ನಮ್ಮ ಜನಕ್ಕೆ ಇದ್ದ ಹಾಸ್ಯ ಮನೋಭಾವ, ಆಲಸ್ಯ, ಭಾಷಾಭಿಮಾನದ ಕೊರತೆ, ಕೀಳರಿಮೆ ಇವುಗಳಿಂದಾಗಿ ಮೂರೂವರೆ ದಶಕಗಳ ಮೇಲೂ ಆಡಳಿತ ಕ್ಷೇತ್ರದಲ್ಲಿ ಕನ್ನಡವನ್ನು ಕೂರಿಸಲು ಸಾಧ್ಯವಾಗಿಲ್ಲ. ಭಾರತದ ಉಳಿದ ಪ್ರಾಂತಗಳಲ್ಲಿ ಯಾವುದು ಸಮಸ್ಯೆಯೇ ಅಲ್ಲವೋ ಅದು ಕರ್ನಾಟಕದ ಮಟ್ಟಿಗೆ ಸಮಸ್ಯೆಯಾಗಿದೆ.
ಒಂದು ಭಾಷೆಯನ್ನು ಮಾಧ್ಯಮವಾಗಿಸಲು ನಿವಾರಿಸಲು ಅಸಾಧ್ಯವಲ್ಲದಿದ್ದರೂ ಕೆಲವು ಕಷ್ಟಗಳಿವೆಯೆಂಬುದನ್ನು ಒಪ್ಪಬೇಕು. ಪಠ್ಯಪುಸ್ತಕಗಳು, ಪಾರಿಭಾಷಿಕ ಪದಗಳು, ಕೊನೆಗೆ ನ್ಯಾಯಾಲಯ ಇವು ಒಂದೊಂದು ಹಂತದಲ್ಲೂ ಅಡ್ಡಿಯಾಗಬಹುದು-ಈ ಅಡ್ಡಿಗಳು ನಿವಾರಣೆಗೆ ಅಸಾಧ್ಯವಲ್ಲವೆಂದು ಆಗಲೇ ಹೇಳಿದೆ. ಆದರೆ, ಇಲ್ಲಿ ಪ್ರಸ್ತುತವೆಂದರೆ, ಒಂದು ಭಾಷೆಯನ್ನು ಆಡಳಿತ ಮಾಧ್ಯಮವಾಗಿಸಲು ಯಾವುದೇ ಸಮಸ್ಯೆಗಳೂ ಇಲ್ಲ, ಕನ್ನಡದ ಬಗ್ಗೆ ಅಡ್ಡಿಯಾಗಿರುವ ಏಕೈಕ ಅಂಶವೆಂದರೆ, ಸಂಕಲ್ಪದ ಅಭಾವ.
ಅಧಿಕಾರಿಗಳಿಗೆ ಇಂಗ್ಲಿಷಿನಲ್ಲಿ ಪತ್ರ ಬರೆದು, ಪರಿಪತ್ರಗಳನ್ನು ಹೊರಡಿಸಿ ಅಭ್ಯಾಸವಾಗಿ ಬಿಟ್ಟಿರುವುದರಿಂದ, ಶುದ್ಧವೋ ಅಶುದ್ಧವೋ ಇಂಗ್ಲಿಷ್ ಅವರಿಗೆ ಸುಲಭವಾಗುತ್ತದೆ. ಆದರೆ, ಮನಸ್ಸು ಮಾಡಿದರೆ, ಆರಂಭದಲ್ಲಿ ಸ್ವಲ್ಪ ಕಿರಿಕಿರಿಯಾದರೂ ಸ್ವಲ್ಪ ಕಾಲದಲ್ಲೇ ಕನ್ನಡದಲ್ಲಿ ಪತ್ರಗಳನ್ನು ಬರೆಯುವ ಮಾದರಿ ನಿರ್ಮಾಣವಾಯಿತೆಂದರೆ ತೀರಿತು. ಪಾರಿಭಾಷಿಕ ಶಬ್ಧಗಳ ಸಂಖ್ಯೆ ಆಡಳಿತ ಕ್ಷೇತ್ರದಲ್ಲಿ ಕಡಮೆಯಾದರೂ ಅವು ಉಂಟು. ಅಂತಹ ಕಡೆ ಈಗಾಗಲೇ ಬಳಕೆಗೆ ಬಂದಿರುವ ಪದಗಳನ್ನು ಉಳಿಸಿಕೊಂಡು, ಉಳಿದಂತೆ ಇಂಗ್ಲಿಷ್ ಪದಗಳನ್ನು ತದ್ಭವಗೊಳಿಸಿ ಬಳಸಬಹುದು. ಇದೂ ಆರಂಭದಲ್ಲಿ ವಿಚಿತ್ರವಾಗಿ ಕಂಡರೂ ಕ್ರಮೇಣ ಅವೇ ಸಹಜ ಕನ್ನಡ ಪದಗಳಾಗಿ ಪರಿಣಮಿಸುತ್ತವೆ. ರೈತ, ಇರಂಗು, ಕೋರ್ಟು, ನೋಟೀಸು, ಹರಾಜು, ಬಿಕ್ಕಲಂ(=ಬಿ ಕಾಲಮ್, ಃ ಅoಟumಟಿ), ಲಾಯರು, ವಕೀಲ, ಅಮಲ್ದಾರ್ ಇವು ಯಾವುವೂ ಅಚ್ಚಗನ್ನಡವಲ್ಲ. ಭಾರತೀಯವೂ ಅಲ್ಲ. ಆದರೆ ಅವು ಬಳಕೆಯಿಂದಾಗಿ ಕನ್ನಡ ಪದಗಳ ಜೊತೆ ತೀರ ಸಹಜವಾಗಿ ಹೊಂದಿಕೊಂಡು ವಾಕ್ಯಗಳಲ್ಲಿ ಬಳಕೆಯಾಗುತ್ತಿವೆ, ಕನ್ನಡವು ಸ್ವೀಕರಣದ ಭಾಷೆಯಾಗಿರುವುದರಿಂದ ಅದಕ್ಕೆ ಅನ್ಯಭಾಷೆಗಳಿಂದ ತತ್ಸಮ ರೂಪದಲ್ಲೋ ತದ್ಭವ ರೂಪದಲ್ಲೋ ಪದಗಳನ್ನು ಸ್ವೀಕರಿಸಲು ಸಂಕೋಚವೆಂಬುದೇ ಇಲ್ಲ. ಆಡಳಿತಕ್ಕೆ ಸಂಬಂಧಿಸಿದಂತೆ ಪತ್ರ, ಕರಪತ್ರ, ಜಾಹಿರಾತು, ಪರಿಪತ್ರ, ನೋಟೀಸು, ಅರ್ಜಿ ಇತ್ಯಾದಿ ಯಾವುದೇ ಬರಹವನ್ನು ಕನ್ನಡದಲ್ಲಿ ತಯಾರಿಸಬಹುದು.
ಆದರೆ ಈಗ ಆಗುತ್ತಿರುವಂತೆ ಬಹುತೇಕ ಆಡಳಿತವು ಇಂಗ್ಲಿಷಿನಲ್ಲಿ ನಡೆಯುತ್ತಿದೆ. ಅಧಿಕಾರಿಗಳ ಆಲಸ್ಯ, ಸಾಮಾನ್ಯ ಜನರ ಅಸಡ್ಡೆ ಎಲ್ಲವೂ ಮೇಳವಿಸಿ, ಅನ್ಯಾಯ ಮಾತ್ರ ಅವಿದ್ಯಾವಂತರಾದ ಹಳ್ಳಿಗರಿಗೆ ಯಥೇಷ್ಟವಾಗಿ ಆಗುತ್ತಿದೆ. ಭಾಷೆಯೂ ಸೊರಗುತ್ತಿದೆ. ಶಿಕ್ಷಣ ಮಾಧ್ಯಮ, ಆಡಳಿತ ಕ್ಷೇತ್ರ ಇಲ್ಲೆಲ್ಲ ಕನ್ನಡವು ಹೆಚ್ಚು ಹೆಚ್ಚು ಬಳಕೆಯಾಗುತ್ತಿದ್ದರೆ ಮತ್ತೆ ಮತ್ತೆ ಬಳಸುತ್ತಿದ್ದರೆ ಹೊಳೆ ಹೊಳೆಯುವ ಕತ್ತಿಯಂತೆ ಝಗಝಗಿಸುತ್ತ ಹರಿತವಾಗಿರುತ್ತದೆ. ಈ ವಿಷಯದಲ್ಲಿ ಮುಖ್ಯ ಹೊಣೆಯನ್ನು ಒಂದು ಕಡೆ ಸರ್ಕಾರ, ಇನ್ನೊಂದು ಕಡೆ ಸಾಮಾನ್ಯ ಜನತೆಯ ಮುಖವಾಣಿಯಾಗಿ ವಿಧಾನಸೌಧದಲ್ಲಿ ಕುಳಿತುಕೊಳ್ಳುವ ಪ್ರತಿನಿಧಿಗಳು ಹೊರಬೇಕು. ಜನತೆಯ ಪ್ರತಿನಿಧಿಗಳು ತಮ್ಮ ತಮ್ಮ ಕ್ಷುದ್ರ ಕಚ್ಚಾಟ ಸ್ವಾರ್ಥಗಳನ್ನು ಬಿಟ್ಟು ಸರ್ಕಾರದ ಮೇಲೆ ಅಧಿಕಾರಿಗಳ ಮೇಲೆ ಕನ್ನಡಪರವಾದ ಒತ್ತಡವನ್ನು ಹಾಕಬೇಕು. ಸರ್ಕಾರ ಕಟ್ಟುನಿಟ್ಟಾಗಿ ಕನ್ನಡವನ್ನು ಆಡಳಿತ ಭಾಷೆಯಾಗಿ ಜಾರಿಗೆ ತರುವಲ್ಲಿ ದೃಢಮನಸ್ಸು ಮಾಡಬೇಕು. ಎಲ್ಲ ಇಂಗ್ಲಿಷ್ ಬೆರಳಚ್ಚು ಯಂತ್ರಗಳನ್ನು ಒಂದೇ ಸಾರಿಗೆ ಹಿಂತೆಗೆದುಕೊಳ್ಳಬೇಕು. ‘ಕ್ರಮೇಣ’ ಎನ್ನುವ ಮಾತಿಗೆ ಅನಿರ್ದಿಷ್ಟ ಎಂಬರ್ಥವು ಪ್ರಾಪ್ತವಾಗುತ್ತದೆಯೆಂಬುದು ಎಲ್ಲರಿಗೂ ತಿಳಿದ ವಿಷಯ. ಇಂಗ್ಲಿಷ್ ಬೆರಳಚ್ಚು ಯಂತ್ರಗಳನ್ನು ಒಮ್ಮೆಗೇ ಹಿಂದಕ್ಕೆ ತೆಗೆದುಕೊಂಡು, ಬೇಕಾದರೆ ಕ್ರಮೇಣ ಅಲ್ಲಿಗೆ ಕನ್ನಡ ಬೆರಳಚ್ಚು ಯಂತ್ರಗಳನ್ನು ಸರಬರಾಜು ಮಾಡಬೇಕು. ವಿಧಾನಸೌಧದ ಎಲ್ಲ ಮಂತ್ರಿಗಳು ಕನ್ನಡದಲ್ಲಿ ಟಿಪ್ಪಣಿಯಿರದಿದ್ದರೆ ಆ ಕಡತವನ್ನು ನೋಡುವುದಿಲ್ಲವೆಂದು ಪ್ರತಿಜ್ಞೆ ಮಾಡಬೇಕು. ಕನ್ನಡದಲ್ಲಿ ವ್ಯವಹರಿಸದ ಅಧಿಕಾರಿಗಳಿಗೆ ಎಚ್ಚರಿಕೆ, ಬಡ್ತಿ ತಡೆ, ಇತ್ಯಾದಿ ಬೆದರಿಕೆಗಳನ್ನು ಹಾಕಬೇಕು; ಸಂದರ್ಭ ಬಿದ್ದರೆ ಶಿಕ್ಷಿಸಬೇಕು. ಇಂತಹ ಕಡೆ ಜನತೆಯ ಪ್ರತಿನಿಧಿಗಳು ಮತ್ತು ಜನ ಕಾನೂನು ಮಾಡಲಾಗದ ಪರಿಣಾಮವನ್ನು ತಮ್ಮ ಒತ್ತಡದ ಮೂಲಕ ಮಾಡಬಲ್ಲರು. ಸರ್ಕಾರಿ ಮುದ್ರಣಾಲಯಕ್ಕೆ ಎಲ್ಲ ಬಗೆಯ ಸರ್ಕಾರೀ ಪತ್ರಗಳು, ಗೆಜೆಟ್, ಪ್ರಕಟಣೆ, ಅರ್ಜಿ ನಮೂನೆ ಇತ್ಯಾದಿ ಏನೇನು ಇದೆ ಎಲ್ಲವೂ ಬರಿಯ ಕನ್ನಡದಲ್ಲೇ ಇರಬೇಕೆಂದು ತಿಳಿಸಿ, ಇಂಗ್ಲಿಷ್ ಭಾಷೆಯವು ಬಂದರೆ ಅಚ್ಚುಮಾಡದೆ ಹಿಂದಕ್ಕೆ ಕಳುಹಿಸಲು ನಿರ್ದೇಶಿಸಬೇಕು. ಇಂಗ್ಲಿಷ್‌ನಲ್ಲಿ ಬಂದ ಅರ್ಜಿಗಳ ಮೇಲೆ, ಮುಂದಕ್ಕೆ ಅಂತಹ ಅರ್ಜಿ ಕನ್ನಡೇತರ ಭಾಷೆಯಲ್ಲಿ ಬಂದರೆ ಉತ್ತರ ತಡವಾಗಬಹುದೆಂಬ ಎಚ್ಚರದ ಮುದ್ರೆ ಒತ್ತಿ ಹಿಂದಕ್ಕೆ ಕಳುಹಿಸಬೇಕು. ಇಲ್ಲೆಲ್ಲ ಒಂದು ದೃಢಮನಸ್ಸಿನ ಕಾರ್‍ಯ ನಡೆಯಬೇಕೇ ಹೊರತು, ಕಾಟಾಚಾರಕ್ಕೆ ಜನತೆಯ ಕಣ್ಣೊರೆಸಲು ಏನೋ ಮಾಡಿ, ಯಾರನ್ನೋ ಬಯ್ದು, ಏನೋ ಸಬೂಬು ಹೇಳುವುದು ತಪ್ಪಬೇಕು.
ಈಗ ಹಾಲಿ ನಡೆಯುತ್ತಿರುವುದು-ಕನ್ನಡಕ್ಕೆ ಅಪ್ಪಟ ಮೋಸ.
ಸರ್ಕಾರ, ಅಧಿಕಾರಿಗಳು ಎಂದೂ ಎಚ್ಚರಗೊಳ್ಳುವುದಿಲ್ಲ. ಜನತೆ ಮಲಗಿರುವಾಗ ಅವರ ಸ್ಥಾನ, ಸಂಬಳ, ಸಾರಿಗೆ, ಮೇಲುಸಂಪಾದನೆ, ಎಲ್ಲ ಸುರಕ್ಷಿತ. ಜನತೆ ಎಚ್ಚರಗೊಂಡು ಕೈಯಲ್ಲಿ ಚಾಟಿ ಹಿಡಿದಾಗ ಎಲ್ಲರೂ ಜಾಗೃತರಾಗುತ್ತಾರೆ. ಕನ್ನಡದ ಹಲವು ಸಮಸ್ಯೆಗಳ ಪರಿಹಾರ ಕನ್ನಡ ಯಶಸ್ವಿಯಾಗಿ ಆಡಳಿತ ಭಾಷೆಯಾಗುವುದರಲ್ಲಿದೆ. ಅದರ ಬೆನ್ನಲ್ಲೇ ಕನ್ನಡವು ಶಿಕ್ಷಣ ಮಾಧ್ಯಮವಾಗಬೇಕು. ಸದ್ಯದಲ್ಲಿ ಕರ್ನಾಟಕ ಅನ್ಯಭಾಷಿಕರ ವಸಾಹತುವಿನಂತಿದೆ. ಕನ್ನಡ ಆಡಳಿತದಲ್ಲಿ ಶಿಕ್ಷಣದಲ್ಲಿ ಸರ್ವಮಾನ್ಯವಾಗಿ ಬೆಳಗದೆ ನಿಜವಾದ ಕರ್ನಾಟಕವನ್ನು ಕಾಣಲಾರೆವು.
*****