ಸಮೀರನ ದಿನ

ಸಮೀರನಿಗೆ ಮೊಟ್ಟಮೊದಲ ಬಾರಿಗೆ ತನ್ನ ಹುಮ್ಮಸ್ಸಿನಲ್ಲೇ ಒಂಥರದ ನಾಟಕೀಯತೆಯ ಭಾಸವಾಗತೊಡಗಿತು. ತನ್ನ ಆರ್ಭಟ ಉನ್ಮಾದ ಎಚ್ಚರ ಕೇಕೆಗಳ ಮುಖಾಂತರವೇ ಈ ಜಗತ್ತನ್ನು ಅಥವಾ ತನ್ನನ್ನು ಇರಿಸಿಕೊಳ್ಳಬಲ್ಲೆ ಎಂಬಂತೆ-ಎಂದೂ ಜೋಲುಮೋರೆಗೆ ಎಡೆಗೊಡದ, ನೋವಿನ ನೆನಪುಗಳ ಬಳಿಯೂ ಸುಳಿಯದ ಸಮೀರ ಈಗ ಗೆಲುವಿಗೆ ಬೇಸತ್ತವನಂತೆ ಆಡತೊಡಗಿದ. ಮತ್ತು ಎಂದಿನಂತೆ ರಾಜಕಾರಣಿಗಳ ಗೊಡವೆಗೆ ಹೋಗಲಿಲ್ಲ. ಆಗುತ್ತಿರುವುದಷ್ಟೇ ನಿಜ ಎಂದುಕೊಂಡು ಭ್ರಮೆಯನ್ನೂ ಒಂದು ಆಗುವಿಕೆಯೆಂದು ಪರಿಗಣಿಸುವ ಸಮೀರನಿಗೆ ಯಾಕೋ ವಿನಾಕಾರಣ ವಿಚಿತ್ರ ಶಂಕೆಯೊಂದು ಬಾಧಿಸಿದಂತೆ ಅನಿಸತೊಡಗಿತು. ಸರಕ್ಕನೆ ನಿದ್ದೆಯಿಂದೆಚ್ಚೆತ್ತವನಂತೆ ಈಗಷ್ಟೇ ಅವನು ಕೆಲಸಕ್ಕೆ ರಾಜಿನಾಮೆ ಕೊಟ್ಟಿದ್ದ. ತನ್ನ ಮೇಜರ್‌ನೊಂದಿಗೆ ಸಾಕಷ್ಟು ವಾದಿಸಿ, ನಂತರ ತನ್ನ ವಾದ ಮಾಡುವ ಪರಿ ಮತ್ತು ರಾಜಿನಾಮೆಯ ಇರಾದೆ ಇವುಗಳ ಪರಸ್ಪರ ಹೊಂದುವುದಿಲ್ಲ ಎಂಬುದರ ಅರಿವಾಗಿ “ನಾಳೆಯಿಂದ ನಾನು ಬರುವುದಿಲ್ಲ-ನಿಮಗೆ ಬೇಕಾಗಿರಲಿ ಇಲ್ಲದಿರಲಿ”-ಎಂದು ಸಾರಿ, ಆಫೀಸಿನ ತನ್ನ ಸ್ನೇಹಿತರನ್ನು ಕಾಣದೆ, ಇದೇನೂ ಮಹಾ ವಿಶೇಷವಲ್ಲ ಎಂಬುದನ್ನೇ ಸಾರುವವನಂತೆ ಕೆಫಿಟೇರಿಯದಲ್ಲಿ ವಾಡಿಕೆಯಂತೆ ಸತತ ಮೂರು ಕಪ್ ಚಹಾ ಕುಡಿದು-ಡಿಸ್‌ಪೇಚ್ ಸೆಕ್ಷೆನ್ನಿಗೆ ಹೋಗಿ ಶ್ರೀಲೇಖಾಳನ್ನು ಹೊರಕರೆದು ಹಸಿರುಗಿಡದ ಚಿಗುರೆಲೆಗಳ ಹಿಂದೆ “ಐ ಡಿಡ್ ಇಟ್” ಎಂದು ಅವಳ ಕೆನ್ನೆ ಚಿವುಟಿ, ಎಂತು ಪ್ರತಿಕ್ರಿಯಿಸಬೇಕೆಂಬ ತಬ್ಬಿಬ್ಬಿನಲ್ಲಿ ಅವಳನ್ನು ಬಿಟ್ಟು-ಹೊರಬಿದ್ದು-ಶಹರದ ಕಡೆ ಧಾವಿಸುತ್ತಿದ್ದ ಕಾರೊಂದರಲ್ಲಿ ಲಿಫ್ಟ್ ಪಡೆದು ದಾದರ್ ಟಿ.ಟಿ.ಯಲ್ಲಿಳಿದ.

ರಸ್ತೆಯ ತುಂಬ ಒಂದಿಷ್ಟು ಮಳೆ ನಿಂತಿತ್ತು. ಆಕಾಶದಲ್ಲಿಯೂ ವೇಳೆಗೆ ಮಂಕು ಹಿಡಿಸುವಂತೆ ಮೋಡಗಳು ಹೊಂದಿಕೊಂಡಿದ್ದವು. ಇನ್ನು ಮುಂದೆನು? “ಹೊಟ್ಟೆ ಹೊರಕೊಳ್ಳುವ ಚಾಕರಿ ಬೇಡ ಎಂದು ಬಿಟ್ಟಾಯಿತು ಮುಂದೇನು?” ಇತ್ಯಾದಿ ಸಹಜ ಪ್ರಶ್ನೆಗಳು ಏಳಲಿಲ್ಲ. ಸದ್ಯ ಪ್ರವೀಣ ಊರಲಿಲ್ಲ. ಔರಂಗಾಬಾದ್‌ಗೆ ಹೋಗಿದ್ದಾನೆ. ಇಲ್ಲವಾದರೆ ಅವನೊಂದಿಗೆ ಈ ಕುರಿತು ಮಾತಾಡುವ ಕಿರಿಕಿರಿ ಇರುತ್ತಿತ್ತು. ಪ್ರವೀಣನಿಗೋ ಪ್ರತಿ ಘಟನೆಗೂ ಪ್ರತಿ ಹೆಜ್ಜೆಗೂ ಪೂರ್ವನಿಯೋಜಿತ ಸಿದ್ಧತೆಗಳಿರಬೇಕು. ಸ್ಪಷ್ಟತೆ ಇರಬೇಕು. ಇಂಥ ಪ್ರಸಂಗಗಳೂ ಅನಿರೀಕ್ಷಿತವಾಗದಷ್ಟು ಎಲ್ಲ ಸಾಫುಸಪಾಟಾಗಿರಬೇಕು. ಅವನು ಸ್ವಪ್ನಗಳನ್ನು ಕಾಣುತ್ತಾನೋ ಇಲ್ಲವೋ ಎಂದು ಎಷ್ಟೋ ಸಲ ಸಮೀರನಿಗೆ ಶಂಕೆಯಾದುದುಂಟು. ಅವನ ಇಂಥ ಸಮೀಕರಣ ಮನೋವೃತ್ತಿ ಮತ್ತು ಕ್ಲೆರಿಟಿಮೆನಿಯಾದಿಂದಲೇ ಈತನಕ ಅವನು ಯಾವ ಪ್ರೇಮದಲ್ಲೂ ಬಿದ್ದ ಲಕ್ಷಣಗಳಿಲ್ಲ. ಆದರೆ ಅಪಘಾತಗಳ ಎದುರು ಆತ್ಮಹತ್ಯೆಗಳ ಎದುರು ಪ್ರವೀಣ ಪೆಚ್ಚಾಗುತ್ತಿದ್ದ. ಹದಿನೆಂಟು ವರುಷಗಳ ಗಂಡಹೆಂಡಿರ ಒಡನಾಟವೊಂದು ಮುರಿದು ಹೋಯಿತು ಎಂದರೆ ಅಂಥ ಸಂಗತಿಗಳನ್ನು ಎಂತು ಕುದುರಿಸಬೇಕೆಂದು ಪತ್ತೆ ಹತ್ತದೇ ಮೈಮುರಿದು ಬಿಡುತ್ತಿದ್ದ. ಸಮೀರನ ಖುಷಿಯ ಲವಲವಿಕೆಯ ನಿಲುವು ಪ್ರವೀಣನಿಗೆ ಅನಿಮಂತ್ರಿತವೆನಿಸುತ್ತಿತ್ತು. ಪ್ರವೀಣನ ಪ್ರಕಾರ ಸಮೀರನದು ಸುಳ್ಳುಪ್ರಪಂಚ. ಯಾವುದನ್ನು ಸ್ಪಷ್ಟ ಕುರುಹುಗಳಲ್ಲಿ ಸ್ಮಾರಕಗಳಾಗಿ ಇಡಲಾರೆವೋ ಅವೆಲ್ಲ ಸುಳ್ಳು ಎಂದವನ ವಾದ. ಸಮೀರನಿಗೂ ಪ್ರವೀಣನ ಇಂಥ ಗಣಿತ ಮನೋವೃತ್ತಿಯ ಕುರಿತು ವಿಶ್ಲೇಷಿಸುವುದೂ ಒಂದು ಅರ್ಥಹೀನ ಕೆಲಸ. ಅಂತೆಯೇ ಎಲ್ಲವನ್ನೂ ಬಿಟ್ಟುಬಿಡುತ್ತಿದ್ದ. ಕೆಣಕಲ್ಪಟ್ಟರೂ ಸುಮ್ಮನುಳಿಯುತ್ತಿದ್ದ. “ಎಲ್ಲವನ್ನು ಬಿಟ್ಟುಬಿಡೋ ಅವೆಲ್ಲ ತಂತಾನೇ ಬೆಳೆಯುತ್ತವೆ” ಎಂದವನು ಅಮೂರ್ತ ಪಂಡಿತನಂತೆ ಮಾತಾಡಿದರೆ ಪ್ರವೀಣ “ದುಡ್ಡು?” ಎನ್ನುತ್ತಿದ್ದ. ಅದಕ್ಕೆ ಸಮೀರ “ದುಡ್ಡನ್ನು ಬ್ಯಾಂಕಲ್ಲಿ ಬಿಟ್ಟುಬಿಡು. ಅದು ಅಲ್ಲಿ ಬೆಳೀತದೆ” ಎಂದುಬಿಡುತ್ತಿದ್ದ. ಇಷ್ಟೆಲ್ಲಾ ಆದರೂ ಗಿದದಂತೆ ಮರದಂತೆ ಉಳಿದ ಪ್ರಾಣಿಗಳಂತೆ ಹಾಯಾಗಿ ಉಳಿಯಲಿಕ್ಕೆ ಅಧೀರನಾಗುತ್ತಿದ್ದ. ಯಾಕೋ ನೆರವು ಅನಿವಾರ್ಯವಾದದ್ದನ್ನು ಮನಗಂಡು ಒಳಗೆಲ್ಲೋ ಅಧೀರನಾಗುತ್ತಿದ್ದ. ಯಾಕೋ ಈಗ ಪ್ರವೀಣನಿರದಿದ್ದುದೇ ಒಳ್ಳೆಯದಾಯಿತು ಎಂದನಿಸತೊಡಗಿತು ಅವನಿಗೆ. ದಾದರ್ ಸ್ಟೇಷನ್ನಿನ ಹೊರಗಿನ ಇರಾಣಿಯಲ್ಲಿ ಎರಡು ಕಪ್ ಚಹಾ ಕುಡಿದ. ಕುಡಿಯುವಾಗ ತಾನು ಕೆಲಸಕ್ಕೆ ಸೇರಿದ ದಿನಾಂಕ ಜ್ಞಾಪಿಸಿಕೊಳ್ಳಲು ಯತ್ನಿಸಿದ. ಯಾವಾಗಲೂ ತನ್ನ ಮಾರ್ಕುಗಳು ತಾರೀಖುಗಳು ಎಲ್.ಐ.ಸಿ. ಮುಂತಾದ ನಂಬರುಗಳು ಯಾಕೆ ತನಗೇ ನೆನಪಿಗೆ ಬರುವುದಿಲ್ಲ ಎಂದು ಅಚ್ಚರಿಗೊಂಡ. ತನಗೆ ಬರುತ್ತಿದ್ದ ಸಂಬಳವೂ ಅವನಿಗೆ ಸರಿಯಾಗಿ ಗೊತ್ತಿರಲಿಲ್ಲ. ಎಷ್ಟೋ ಸಲ ಹಣವಿದೆಯೆಂದು ಯಾರಿಗೋ ಚೆಕ್ ಬರೆದುಕೊಟ್ಟು ಅವರ ಚೆಕ್ ಬೌನ್ಸ್ ಆದದ್ದುಂಟು ಅಥವಾ ಹಣವಿಲ್ಲವೆಂದು ತಿಂಗಳಕೊನೆಯೆಂದು ಸುಮ್ಮನೆ ಅವನು ಒಂದೂಟ ಮಾಡಿದ್ದೂ ಉಂಟು. ಸದ್ಯ ತನ್ನ ಜನ್ಮ ದಿನಾಂಕವೊಂದು ನೆನಪಿದೆ, ಚಹಾ ಕುಡಿದು ಹೊರಬಿದ್ದು ಸೇತುವೆದಾಟಿ ಪಶಿಮಕ್ಕೆ ಬಂದು ತೀರಾ ಇಕ್ಕಟ್ಟಾದ ದಾದರ ತರಕಾರಿ ಮಾರ್ಕೆಟ್ಟಿನಲ್ಲಿ ನಡೆದ. ಅವನಿಗೆ ಯಾವಾಗಲೂ ತುಂಬಿ ಕಂಗೊಳಿಸುವ ತರಕಾರಿ ಮಾರುಕಟ್ಟೆಗಳಲ್ಲಿ ನಡೆಯುವದೆಂದರೆ ಖುಷಿ. ವಿಶಾಲವಾಗಿ ತುಂಬಿ ಯೌವನ ಆರೋಗ್ಯ ಸೂಸುವ ತರಕಾರಿ ಮಳಿಗೆಗಳ ಎದುರು ನಿಂತು ಬಟಾಣಿ, ಗೋಬಿ, ತೊಪ್ಪಲುಪಲ್ಲೆ, ನುಗ್ಗೀಕಾಯಿಗಳನ್ನು ನೋಡಿ ನೋಡಿ ಸಾಗುತ್ತಿದ್ದ. ಮೂಗಿಗೆ ಹಸಿ ತರಕಾರಿಯ ಕೊತ್ತಂಬರಿಯ ಘಾಟು-ಕಿವಿಗೆ ತಕ್ಕಡಿಯ ಕಟಕಟಸದ್ದುಗಳು-ಬಗ್ಗಿ ಬಗ್ಗಿ ಚೌಕಾಶಿ ಮಾಡುವ ತುಂಬಿದ ತುರುಬಿನ ಹೆಂಗಸರು-ಕಳೆದುಹೋದವರಂತೆ ನಿಂತ ಅವರ ಮಕ್ಕಳು-ತರಕಾರಿಗಳ ನಡುವೆಯೇ ಇಟ್ಟ ಗ್ಲಾಸಿನಿಂದ ಚಾ ಕುಡಿಯುವ ಭಯ್ಯಾಗಳು ಅವರ ನೆರೆತ ಕೂದಲುಗಳು-ಒಟ್ಟಾರೆ ಈ ಒಂದು ಹಸಿರು ವಾಣಿಜ್ಯ ಅವನಿಗೆ ವಿಲಕ್ಷಣವೆನಿಸುತ್ತಿತು. ಎಂಯ್ಹ ತಾಜಾತನಕ್ಕೂ ಅವನು ಮಾರುಹೋಗುತ್ತಿದ್ದ. ಅಂತೆಯೇ ಅವೇ ಅವೇ ಹೋಟಲುಗಳ ಅದೇ ಅದೇ ಚನಾಮಸಾಲಾ, ಆಲೂಮಟರ್, ಭರ್ತಾ, ಬುರ್ಜಿ, ದಪ್ಪರೋಟಿಗಳು-ಅಥವಾ ಉಡುಪಿ ಹೋಟಲುಗಳ ಸಿನೆಮಾದಂತಿರುವ ಸಕಲಕಲಾವಲ್ಲಭ ರೈಸ್‌ಪ್ಲೇಟ್‌ಗಳು ಅವನಿಗೆ ಬೇಸರ ಉಂಟುಮಾಡಿದ್ದವು. ಎಕ್ಸ್‌ಟ್ರಾ ಚಟ್ನಿ ಎಕ್ಸ್‌ಟ್ರಾ ಧಯೀ ಎಕ್ಸ್‌ಟ್ರಾ ಮಜ್ಜಿಗೆಗಳ ಲೋಕಕ್ಕೆ ಅವನು ಹೇಸಿಗೆಪಟ್ಟು ಹೋಗಿದ್ದ. ಹೀಗಾಗಿ ಅವನು ಆಗಾಗ ಠಾಣಾದ ಸರೋವರದ ಬದಿಗೆ ಯಾವುದೋ ಮರಾಠೀ ಮುದುಕನ ಮುರುಕು ಬಾಕಡಾದ ಅಂಗಡಿಯಲ್ಲಿ ಚಪಾತಿಗಳನ್ನೂ ಭಾಜಿಯನ್ನೂ ಕೊಂಡು ಮನೆಗೆ ಬರುತ್ತಿದ್ದ. ಅಥವಾ ಹಣ್ಣುಗಳನ್ನು ತಿಂದು ಹಾಲು ಕುಡಿಯುತ್ತಿದ್ದ.

ಸೇಲ್ಸ್‌ರೆಪ್ ಅಂದಮೇಲೆ ಕಾಲಿಗೆ ಗಾಲಿಗಳನ್ನು ಕಟ್ಟಿಸಿಕೊಂಡೇ ಬಂದವನಾಗಿರಬೇಕು ಎಂದು ಪ್ರಾರಂಭಿಕ ದಿನಗಳಲ್ಲಿ ಗಿರಿಗಿರಿ ತಿರುಗಿದವನು ಈಗಿತ್ತಲಾಗಿ ತೀರ ಅನ್ಯಮನಸ್ಕನಾಗಿ ತಿರುಗುತ್ತಿದ್ದ. ಊರಿಂದೂರಿಗೆ ಹೋಟೆಲುಗಳನ್ನು ಬದಲಾಯಿಸಿ, ಶೂಗಳನ್ನು ಬದಲಾಯಿಸಿ, ಕಿಸೆಯಲ್ಲಿ ಪಾಕೀಟು, ಬೆಲ್ಟುಗಳನ್ನು ಬದಲಾಯಿಸಿ, ಬೇಸತ್ತ. ಕೆಲವೊಮ್ಮೆಯಂತೂ ‘ಶೂ’, ಕೈಲಿ ಬ್ಯಾಗು, ಕಿಸೆಯಲ್ಲಿ ಪಾಕೀಟು, ಬೆಲ್ಟು ಎಲ್ಲ ಸೆರಿ ತಾನೊಂದು ಹದ ಮಾಡಿದ ಚರ್ಮದ ವ್ಯಾಪಾರಿಯೇನೋ ಎಂದೆನಿಸತೊಡಗಿತ್ತು ಅವನಿಗೆ. ಕೆಟ್ಟಕೆಟ್ಟ ಊರುಗಳಲ್ಲಿ ಕೆಟ್ಟ ಕೆಟ್ಟ ವೆಂಡರ್‌ಗಳೊಂದಿಗೆ ಜುಜುಬಿ ಮಾತುಕತೆ ಪುಸಲಾಯಿಸುವಿಕೆ-ಅನಾಮಿಕ ಹೋಟೆಲುಗಳಲ್ಲಿ ಕಮಟು ದಿಂಬುಗಳ ರಾತ್ರಿ-ಅಸಾಧ್ಯ ಸೆಖೆಯ ಥೇಟರುಗಳಲ್ಲಿ ಹಿಂದೆಂದೋ ನೋಡಿದ ಚಿತ್ರದ ಪೇಲವ ಮರು ಆಟ-ಕಾಡುವ ಹ್ಯಾಂಗೋವರ್‌ಗಳು. ಸದ್ಯ ಜನಪದ ಇರುವಲ್ಲಿ ಹುಡುಗಿಯರೂ ಇರುತ್ತಾರಲ್ಲ ಅಷ್ಟು ಸಾಕು-ಎನ್ನುತ್ತಿದ್ದ. ಊರು ಎಂಥದೇ ಇರಲಿ ಕಣ್ಣಿಗೆ ಬೀಳಲು ಒಂದೆರಡು ಕಂಗೊಳಿಸುವ ಸಿಹಿ ಹುಡುಗಿಯರು ಇದ್ದರೆ ಸಾಕು ಬದುಕಬಲ್ಲೆ ಎಂದುಕೊಳ್ಳುತ್ತಿದ್ದ. ನಂತರ ರಾತ್ರಿ ಅಸಾಧ್ಯ ಕಾಮೋದ್ರೇಕದ ನಡುವೆ ಶಾರ್ಟ್‌ಕಟ್ ಶಮನಕ್ಕೆ ಉದ್ಯುಕ್ತನಾದಾಗ ಹುಡುಗಿಯರ ಮೋರೆಗಳೇ ನೆನಪಾಗದೆ ಗೊಂದಲಗೊಳ್ಳುತ್ತಿದ್ದ. ಮಾತುಕತೆಗೆ ತೊಡಗಿದ ಎರಡೇ ನಿಮಿಷಗಳಲ್ಲಿ ಸರಸರ ಹಗ್ಗ ಹಿಡಿದು ಹುಡುಗಿಯರ ಕಣ್ಣುಗಳ ಮೂಲಕ ಹೃದಯದೊಳಗೆ ಇಳಿದುಬಿಡುತ್ತಿದ್ದ. ಪ್ರವೀಣನಿಗೆ ಇದು ಸರಿಬೀಳುತ್ತಿರಲಿಲ್ಲ. ಬೇಕಿದ್ದರೆ ಒಂದು ಹುಡುಗಿಯನ್ನು ಗಂಟು ಹಾಕಿಕೋ, ಅವಳೊಂದಿಗೆ ಏನು ಬೇಕೋ ಮಾಡಿಕೋ. ಜಗತ್ತಿನ ಎಲ್ಲಾ ಹುಡುಗಿಯರೊಂದಿಗಿನ ಈ ಪ್ರಕಾಂಡ ಪ್ರೇಮದ ಮರುಳಿಗೆ ಅರ್ಥವಿಲ್ಲ ಎನ್ನುತ್ತಿದ್ದ. ಆಗೆಲ್ಲ ಸಮೀರ ಅವನೆಡೆ ಕನಿಕರದಿಂದ ನೋಡುತ್ತಿದ್ದ.

ಸಮೀರನ ನಿರಂಬಳ ನಡವಳಿಕೆಯಿಂದ, ಕಣ್ಣಿನೊಳಗಿನ ಹೊಳಪಿಂದ, ಆಪ್ತ ಪ್ರಪಂಚಕ್ಕೇ ಧುಮುಕುವ ಎಗ್ಗಿಲ್ಲದ ಆತ್ಮೀಯತೆಯಿಂದ, ಮಂದಿ ಅವನನ್ನು ಹಚ್ಚಿಕೊಂಡಿದ್ದರು. ಅಥವಾ ಹಾಗೆಂದು ತಿಳಿದುಕೊಂಡಿದ್ದರು. ಎಷ್ಟೆಲ್ಲಾ ಮಂದಿಗೆ ಏನೆಲ್ಲಾ ವಾಗ್ದಾನ ಮಾಡಿ ಸಮೀರ ನಂತರ ಕಳೆದುಹೋಗುತ್ತಿದ್ದ. ಇದನ್ನರಿತ ಪ್ರವೀಣ ಅವನಿಗೆ “ಮಂದಿ ನಿನ್ನಿಂದ ಬಲವಾದ ಅಪೇಕ್ಷೆಯನ್ನು ಹೊಂದುತ್ತಾರೆ. ಅವನ್ನು ಈಡೇರಿಸಲಾಗದಿದ್ದಲ್ಲಿ ಯಾಕಾದರೂ ಅಪೇಕ್ಷೆಗಳನ್ನು ಎಬ್ಬಿಸುತ್ತೀ?” ಎಂದು ಭಾಷಣ ಕೊಡುವಾಗ ಈ ಮಾತಿನ ಹಿಂದೆ ಎಲ್ಲೋ ಸಣ್ಣ ಅಸೂಯೆಯ ಸೆಲೆ ತೋರಿ ಬಂದು ಸಮೀರನಿಗೆ ಅವನ ಕುರಿತು ಪಾಪ ಅನಿಸುತ್ತಿತ್ತು. ನಕ್ಕುಬಿಡುತ್ತಿದ್ದ. ಈ ಅಪೇಕ್ಷೆಗಳೇನೋ ಮಹಾ ಇರುತ್ತಿರಲಿಲ್ಲ. ಇವನು ಬರುತ್ತಾನೆಂದು ಅವರು ಮೀನುಗೀನು ತಂದು ಅಡಿಗೆ ಮಾಡಿಟ್ಟು ಕಾಯುವುದು. ಇವನಿಗೆ ಬೇಕಾದುದೆಂದು ಲೈಬ್ರರಿಯಲ್ಲಿ ಜಗಳಾಡಿ ಇವನಿಗಾಗಿ ಪುಸ್ತಕಗಳನ್ನು ತರುವುದು. ಪರೀಕ್ಷೆ ಮುಗಿಸಿದ ಮಕ್ಕಳು ಸಮೀರ ‘ಜಂಗಲ್ ಬುಕ್’ಗೆ ಒಯ್ಯುತ್ತಾನೆಂದು ಕಾಯುವುದು. ಅವರ ಹುಟ್ಟಿದ ಹಬ್ಬಕ್ಕೆ ಇವನಿಂದ ಗ್ರೀಟಿಂಗ್ಸ್‌ಗಾಗಿ ಕಾಯುವುದು. ಇವನು ಬಿಟ್ಟು ಬಂದ ಶರ್ಟ್‌ಗಳಿಗೆ ಗುಂಡಿ ಹೊಲಿದು ತೊಳೆದು ಇಸ್ತ್ರಿ ಮಾಡಿಟ್ಟು ಅದನ್ನು ಅರಸಿ ಇವನು ಬಂದಾನೆಂದು ಕಾಯುವುದು, ಇತ್ಯಾದಿ. ಹಾಗಂತ ಈ ಎಲ್ಲ ಮಂದಿಗೆ ಇವನನ್ನು ಹಚ್ಚಿಕೊಳ್ಳುವ ಮತ್‌ಲಬೀ ಕಡ್ಡಾಯವಿದ್ದಿದ್ದಿಲ್ಲ. ಅಂದರೆ ಅವರಿಗೆ ಮದುವೆಗೆ ಬಂದ ಮಗಳಿರಲಿಲ್ಲ ಅಥವಾ ಅವನು ಅವರ ಯಾರಿಗೂ ನೌಕರಿ ಕೊಡಿಸಬಹುದಾಗಿರಲಿಲ್ಲ. ಆದರೆ ‘ಬರುತ್ತೇನೆ’ ಎಂದು ಹೊರಬಿದ್ದ ಸಮೀರ ಮತ್ತೆ ಅವರಲ್ಲಿ ಹೋಗುವುದು ಇವನಿಗಾಗಿ ಹೊಂದಿಸಿಟ್ಟ ಭಾವನಾತ್ಮಕ ಆಟಿಗೆಗಳ ಪ್ರಪಂಚವನ್ನು ಅವರು ತೆಗೆದಿಟ್ಟ ನಂತರವೇ. ನಂತರ ಅವರಿಗೆ ತಬ್ಬಿಬ್ಬು. ಹೊಸ ಸ್ವೀಕಾರಗಳಿಗೆ ಬೇಸರ, ಎಲ್ಲೋ ತಾವು ಹಳತಾಗುತ್ತ ತಾಜಾತನ ಕಳೆದುಕೊಂದಂಥ ಭಾವ. “ಅವರು ನಿನ್ನಿಂದ ಅಪೇಕ್ಷೆಗಳನ್ನು ಹೊಂದುವುದಕ್ಕೂ ಮತ್ತು ನಾನು ಅವುಗಳನ್ನು ಈಡೇರಿಸುವುದಕ್ಕೂ ಸಂಬಂಧವೇ ಇಲ್ಲ. ಅವರು ನನಗೆ ಗೊತ್ತಿಲ್ಲದಂತೆ ನನ್ನಿಂದ ಅಪೇಕ್ಷೆಗಳನ್ನು ಇಟ್ಟುಕೊಳ್ಳುವ ಕ್ರಿಯೆಯಲ್ಲೇ ನಾನು ಅವರ ಅಪೇಕ್ಷೆಗಳನ್ನು ಈಡೇರಿಸಿದ್ದೇನೆ” ಎನ್ನುವ ಸಮೀರನ ಸರಣಿ ಪ್ರವೀಣನಿಗೆ ನಿಲುಕುತ್ತಿರಲಿಲ್ಲ. “ಇಂಥ ಅಪೇಕ್ಷೆಗಳನ್ನು ಈಡೇರಿಸುತ್ತ, ಗಣಿತಗಳಿಗೆ ಉತ್ತರಕೊಟ್ಟಂತೆ ಒಡನಾಡುತ್ತ ಹೋದರೆ ಇಡೀ ಸಂಬಂಧವನ್ನೆ ನಾನು ಸಂಕ್ಷಿಪ್ತಗೊಳಿಸಿದಂತಾಗಬಹುದು. ಇಷ್ಟಾಗಿಯೂ ನಾನು ಅವರನ್ನೆಲ್ಲ ಕಂಡೇ ಇರಲಿಲ್ಲ ಎಂದಿಟ್ಟುಕೋ, ಆಗ ಅವರ ಬದುಕು ಅಪೂರ್ಣವಿರುತ್ತಿತ್ತೇ? ಇಲ್ಲಲ್ಲ? ಅಂದ ಮೇಲೆ?” ಎಂದು ಬಿಡುತ್ತಿದ್ದ. ಕನಸುಗಳಲ್ಲಿ ಕಾಯುವಿಕೆಗಳಲ್ಲಿ ಇರುವುದಕ್ಕಿಂತ ಹೆಚ್ಚೇನೂ ಸುಖ ಈಡೇರುವಿಕೆಯಲ್ಲಿ ಇಲ್ಲದೇ ಇರಬಹುದು ಎಂದು ಸಮೀರನಿಗೆ ಅನಿಸುತ್ತಿತ್ತು. ತಾನು ಬೇಜವಾಬ್ದಾರಿ ಎಂದು ಎಲ್ಲ ಜನ ಜರೆಯುತ್ತಿದ್ದರೂ ವಿವಂಚಿತನಾಗದ ಸಮೀರ ಒಳಗೆಲ್ಲೋ ಈ ಐಹಿಕ ಜಗತ್ತಿನಲ್ಲಿ ಇರಬೇಕಾದ ಜವಾಬ್ದಾರಿಯ ಕಡ್ಡಾಯಕ್ಕೆ ಖಿನ್ನನಾಗುತ್ತಿದ್ದ. ಅದೇ ರೀತಿ ಮಂದಿ ಅವನನ್ನು ತಪ್ಪು ತಿಳಿದುಕೊಂಡಾಗ ಅವನ ಬಿಡಿ ನಡವಳಿಕೆಗಳಿಂದ ಅವನ ಆಶಯಗಳನ್ನು ತಪ್ಪಾಗಿ ಅಳೆಯುವಾಗ ಅವನಿಗೆ ತೀರ ಖೇದವೆನಿಸುತ್ತಿತ್ತು.

ಅವನು ಓಡಾಡುವ ಊರಲ್ಲೆಲ್ಲ ಅವನಿಗೆ ಒಡನಾಡಿಗಳು. ಮೊದಲು ಮೂರು ವರುಷ ಸೂರತ್ ಆನಂದ್ ಬರೋಡ. ಈಗ ಕಳೆದೆರಡು ವರುಷಗಳಿಂದ ಮುಂಬಯಿ. ಇಲ್ಲಿಯೂ ಎಷ್ಟೆಲ್ಲ ಕುಟುಂಬಗಳಲ್ಲಿ ಹೊಕ್ಕು ಹೊರಬಂದಿದ್ದಾನೆ. ಎಷ್ಟೇಲ್ಲಾ ಆಪರೇಷನ್ ಥೇಟರುಗಳ ಹೊರಗೆ ಕಾದಿದ್ದಾನೆ. ಎಷ್ಟೆಲ್ಲ ಮದುವೆಗಳಲ್ಲಿ ಐಸ್‌ಕ್ರೀಂ ಹಂಚಿದ್ದಾನೆ. ಒಮ್ಮೆ ಸಿಕ್ಕಾಗ ನಾಡಿದ್ದೇ ಬರುವೆ ಎಂದು ಹೇಳುತ್ತಾನೆ. ಮಕ್ಕಳಿಗೆ ಎಲ್ಲೋ ಕರೆದುಕೊಂಡು ಹೋಗುವೆ ಎನ್ನುತ್ತಾನೆ. ತನ್ನ ನಾನಾವಟಿಯಿಂದ ಯಾವುದೋ ಡಾಕ್ಟರು ಗೆಳೆಯನ ಮೂಲಕ ಯಾರಯಾರದೋ ಚೆಕಪ್ ಮಾಡಿಸುತ್ತೇನೆ ಅನ್ನುತ್ತಾನೆ. ನಂತರ ಕಳೆದುಹೋಗುತ್ತಾನೆ. ಇಲ್ಲಿ ಮಕ್ಕಳು ಕಾಯುತ್ತಾರೆ. ಮರೆತ ಎಂದು ಬೇಜಾರು ಪಡುತ್ತಾರೆ. ದೊಡ್ಡವರು ಬೇಜವಾಬ್ದಾರಿ ಮನುಷ್ಯ ಎಂದು ಆಡಿಕೊಂಡು ಊಟ ಮಾಡುತ್ತಾರೆ ಅವನು ಆಗ ಬೇರೆ ಯಾವುದೋ ಕುಟುಂಬದಲ್ಲಿ ಒಂದಾಗುತ್ತಿದ್ದಿರಬಹುದು. ಮತ್ತೆ ಇವರೆಲ್ಲರೂ ಯಾವುದೋ ಮದುವೆಯಲ್ಲಿ ಸೇರಿದಾಗ ಅವನು ತಮಗೆ ಜಾಸ್ತಿ ಆಪ್ತ ಎಂದು ಪೈಪೋಟಿ ನಡೆಸುತ್ತಾರೆ. ನಂತರ ದಣಿಯುತ್ತಾರೆ. ಸಮೀರ ಎಷ್ಟೋ ಸಲ ಅಬ್ಬರದಲ್ಲಿ “ನಾಳೆ ನಾನು ಸತ್ತರೆ ನನ್ನ ಪಾಲಿಗೆ ಈ ಜಗತ್ತೇ ಇಲ್ಲವಾಗುತ್ತದೆ ಅಂದಾಗ ಈ ಜಗತ್ತಿನ ಕೇಂದ್ರ ನಾನೇ. ನನಗೇ ಕೂತಲ್ಲಿ ಐಷಾರಾಮೌಗಳು ಬೇಕು. ಅದೃಷ್ಟ ಗಿದೃಷ್ಟಗಳೆಲ್ಲ ಸುಳ್ಳು ದರಿದ್ರ ಪದಗಳು” ಎಂದೆಲ್ಲ ನುಡಿದು ಸ್ನೇಹಿತರಿಗೆ ವಿಚಿತ್ರ ಅನಿಸುತ್ತಿದ್ದ ಅಥವಾ ಅವರೇ ಉಚ್ಚರಿಸಲು ಹೆದರುತ್ತಿದ್ದ ಸಂಗತಿಗಳನ್ನು ಅವರಿಗೆ ಆಡಿ ತೋರಿಸಿ-ಅವರ ಮುಗಿದು ಹೋದ ಸಾಧ್ಯತೆಗಳಿಗೆ ಅವರು ಜವಾಬ್ದಾರರಲ್ಲ ಎಂಬಂಥ ಮನವರಿಕೆ ಹುಟ್ಟಿಸಿ-ಅವರನ್ನು ಬಿಡುಗಡೆ ಮಾಡಿಬಿಡುತ್ತಿದ್ದ. ನಂತರ ಅವರೆಲ್ಲ ಹವೆಯಲ್ಲಿ ನಡೆದಂತೆ ನಡೆದು ಗಾಳಿಪಟಗಳಂತೆ ತಮ್ಮ ತಮ್ಮ ದಾರಗಳಗುಂಟ ತಮ್ಮ ತಮ್ಮ ಮನೆ ಸೇರುತ್ತಿದ್ದರು. “ಅರೇ ನಮ್ಮ ಸಮೀರ ಅಂದರೆ ಮಜಾ. ಅವನಿದ್ದರೆ ಹೊತ್ತು ಹೋಗುತ್ತದೆ” ಎಂದು ಅವನ ಅಭಾರ ಮನ್ನಿಸಿ ಕೃತಾರ್ಥರಾಗುತ್ತಿದ್ದರು. ಎಷ್ಟೋ ಜನ ತಮ್ಮ ಮನೆಮಂದಿಯೆಲ್ಲ ಸಮೀರನ ಪುಷ್ಕಳತೆಗೆ ಮಾರುಹೋಗುವುದನ್ನು ಸಹಿಸದೆ ಹೆದರಿ ಮತ್ತೆ ಅವನನ್ನು ಮನೆಗೆ ಕರೆಯದೆ ‘ಅವನು ಕುಡುಕ, ಅವನ ನಡತೆ ಸರಿಯಿಲ್ಲ’ ಎಂದು ಬಚಾವಾಗುತ್ತಿದ್ದರು. ಸಮೀರ ಮಾತ್ರ ಎಲ್ಲ ಕಡೆ ಹೊರ ಬಂದವ ತನಗೆ ತಾನೇ ಸಿಕ್ಕದೇ ನಿದ್ದೆ ಹೋಗುತ್ತಿದ್ದ. ಗೆಳೆಯರು ಬಂಧುಗಳು ಅದೂ ಇದೂ ಎಂಬ ಚಕ್ಕರ್‌ನಲ್ಲಿ ತನಗೆ ಏಕಾಂತವೇ ಸಿಗುವುದಿಲ್ಲ ಎಂದು ಉರ್ದುಕವಿಯಂತೆ ಹೇಳಿದರೂ ಏಕಾಂತ ಸಿಕ್ಕಾಗ ಆ ಏಕಾಂತ ಏಕ ಕಾಲಕ್ಕೆ ಒಡ್ಡುವ ಅನಂತ ಸಾಧ್ಯತೆಗಳಿಗೆ ಮತ್ತು ಶೂನ್ಯಕ್ಕೆ ಹೆದರಿ ಅರಗಿಸಿಕೊಳ್ಳಲಾರದೇ ಅಸ್ವಸ್ಥನಾಗುತ್ತಿದ್ದ. ಹೊರಬಿದ್ದು ಎಂದೂ ಹಾಯದ ಬೀದಿಗಳಲ್ಲಿ ಹಾಯುತ್ತಿದ್ದ. ಪಾನವಾಲರೊಡನೆ ಹರಟೆ ಹೊಡೆಯುತ್ತಿದ್ದ. ಬೀದಿ ಬದಿ ಕಾದ ಸೂಳೆಯರನ್ನು ಕರೆದು ಅವರಿಗೆ ಇರಾನಿ ಹೋಟೆಲುಗಳಲ್ಲಿ ಬನ್‌ಪಾವ್ ತಿನ್ನಿಸುತ್ತಿದ್ದ. ಅವರು ಬಾ ಎಂದು ಕರೆದರೆ ಇಂದಲ್ಲ ನಾಳೆ ಎನ್ನುತ್ತಿದ್ದ. ಹೀಗಾಗಿ ಮಾತಾಡುವಾಗ, ಘಟಿಸುವಾಗ, ಪುಟಿಯುವಾಗ ನಗುವಾಗ ತನಗೆ ಸಿಗುತ್ತಿದ್ದ ಸಮೀರನ ಹೊರತಾಗಿ ಬೇರೆ ಸಮೀರ ತನ್ನೊಳಗಿದ್ದಾನೆಯೆ? ಇದ್ದರೆ ಅವನೆಂಥವನು ಎಂದು ಗಲಿಬಿಲಿಗೊಳ್ಳುತ್ತಿದ್ದ. ಮತ್ತೆ ಎಷ್ಟೋ ತಿಂಗಳುಗಳ ನಂತರ ಒಡನಾಡಿಗಳ ಮನೆಗೆ ಹೋಗಿ ಆ ಪಲ್ಯ ಮಾಡಿ ಈ ಪಲ್ಯ ಮಾಡಿ ಎಂದು ಮಾಡಿಸಿ ಉಂಡು ಬರುತ್ತಿದ್ದ. ಒಮ್ಮೊಮ್ಮೆ ಬಾಯ್ತಪ್ಪಿ ಅಂದ ಮಾತಿಗೆ ಮತ್ತೊಬ್ಬರಿಗೆ ಬೇಸರ ಆಗಿರಬಹುದೇನೋ ಎಂದು ನಿದ್ದೆಗೆಟ್ಟು ಹಳಹಳಿಸಿ ನಂತರ ಮುಂದಿನ ಭೇಟಿಯಲ್ಲಿ ಅವರಿಗೆ ಇದರಿಂದ ಕಿಂಚಿತ್ ಬಾಧೆಯೂ ಆಗದಿದ್ದುದನ್ನು ಕಂಡು ವಿಚಿತ್ರ ನಿರಂಬಳ- ಆ ನಿರಂಬಳದಲ್ಲೂ ಅವರ ಜಾಗದಲ್ಲಿ ತಾನಿದ್ದರೆ ತನಗೆ ಬೇಸರವಾಗುತ್ತಿತ್ತಲ್ಲ. ಅಂದರೆ ತಾನೆಂದುಕೊಂಡಹಾಗೆ ಅವರು ತನ್ನನ್ನು ಬಗೆಯುತ್ತಿಲ್ಲ ಎಂಬ ನಿರಾಸೆಯಾಗಿ ಕೊರಗುತ್ತಿದ ಮತ್ತು ನಂತರ ಇಂಥ ಕೊರಗುಗಳೇ ತನ್ನ ವೈಶಿಷ್ಟ್ಯವೇನೋ ಎಂದು ಮತ್ತೆ ಪ್ರಸನ್ನವಾಗುತ್ತಿದ್ದ. ಪ್ರವೀಣ ಮಾತ್ರ ಇವನ ಆಸೆ ಬಿಟ್ಟವನಂತೆ ‘ನೋಡು ನಿನ್ನ ಸೇಲ್ಸ್‌ರೆಪ್ ಜಾಬಿನಿಂದ ನೀನೆಷ್ಟು ಅನಿಶ್ಚಿತನಾಗಿರುವೆ. ಕೆಲಸ ಬದಲಿಸು, ಎಲ್ಲ ಸರಿಹೋಗುತ್ತದೆ. ನೀನು ಬೆಳೆಯಲೂ ಬಹುದು’-ಎಂದ. ಈ ‘ಬೆಳವಣಿಗೆ’ ಯ ಪರಿಕಲ್ಪನೆಯ ಅರ್ಥ ಅವನಿಗಾಗಲಿಲ್ಲ.

ಆದರೂ ಇರಲಿ ಅಂತ ಒಂದೆರದು ತಿಂಗಳು ಬ್ಯಾಂಕು, ಎಕ್ಸಿಕ್ಯೂಟಿವ್, ಕಾಪಿರೈಟರ್ ಇತ್ಯಾದಿಗಳಿಗೆ ಅರ್ಜಿ ಹಾಕಿದ. ಸಂದರ್ಶನಗಳಿಗೆ ಹೋಗಿ ‘ನಿಮ್ಮಪ್ಪನ ಗಂಟೇನು ಹೋಗುತ್ತದೆ’ ಎನ್ನುವ ರೀತಿಯಲ್ಲಿ ಮಾತಾಡಿ ತಾನೇನೋ ಮಹಾಗೆಂಡೆ ಇದ್ದೇನೆ-ಎನೋ ಜುಜುಬಿ ನಿರುಪಾಯಕ್ಕೆ ನಿಮ್ಮ ಜಾಬ್‌ನ ಅವಶ್ಯಕತೆ ಇದೆ-ಎಂದೆಲ್ಲಾ ಹೇಳಿ ಅವರನ್ನು ಮುಜುಗರದಲ್ಲಿ ಮುಳುಗಿಸಿ ಬಂದ: ‘ಬಿಸಿನೆಸ್ ಮಾಡು’ ಎಂದವರಿಗೆಲ್ಲ ‘ಐ ಹೇಟ್ ಮನೀ’- ಎಂದ. ತನ್ನ ಸಹೋದ್ಯೋಗಿಗಳಿಗೆಲ್ಲ ತಾನು ಫುಲ್‌ಟೈಮ್ ಪೇಂಟರ್ ಆಗುತ್ತೇನೆ ಎಂದು ಹಲುಬಿದ. ಒಂದು ದಿನವಂತೂ ಒಂದಿಷ್ಟು ಎಣ್ಣೆ ಬಣ್ಣಗಳನ್ನು ತಂದು ಮೈ ಮೇಲೆ ದೇವಿ ಬಂದವನಂತೆ ಮನೆಯ ಒಳಗಡೆ ಬಾತ್‌ರೂಂ ಟೈಲ್, ಬಾಗಿಲು ಎಲ್ಲವುಗಳ ಮೇಲೆ ಮನಬಂದಂತೆ ಕುಂಚ ಎಳೆದು-ಮನೆಯ ಒಡೆಯನಿಂದ ಬೈಸಿಕೊಂಡು ಮನೆಯ ಪುನರ್ ವೈಟ್‌ವಾಶಿಂಗ್‌ಗೆಂದು ದಂಡತೆತ್ತ. ಆಪ್ತರ ಪಾರ್ಟಿಗಳಲ್ಲಿ ‘ಪ್ರೀತಿಸುವ ಸಾಮರ್ಥ್ಯ ಕಳಕೊಂಡವರಷ್ಟೆ ‘ನಿಮ್ಮರ್ಥ’ದಲ್ಲಿ ದೊಡ್ಡವರಾಗುತ್ತಾರೆ”-ಗಳಂಥ ಕೋಟೇಬಲ್ ಕೋಟ್‌ಗಳನ್ನು ಉದುರಿಸಿದ. ಪ್ರತೀ ಒಳ್ಳೆಯದೆಂದು ಅನಿಸಿಕೊಂಡ ಸಿನೇಮಾ ನೋಡಿದಾಗ “ಇದೆಂಥದ್ದು? ಇದರಪ್ಪನಂಥ ಪರಿಣಾಮ ನಾನು ಕೊಡಬಲ್ಲೆ”-ಎಂದನಿಸಿತು ಅವನಿಗೆ. ಸ್ಕ್ರಿಪ್ಟ್ ಬರೆದು ಮಾರಿ ದುಡ್ಡು ಮಾಡಿ ಬದುಕುವೆ ಎಂದು ಎಷ್ಟೋ ರಾತ್ರಿ ಮಲಗುವ ಮುನ್ನ ನಿರ್ಧರಿಸಿ ಮರುದಿನ ಮರೆತು ಹೋದ. ಒಂದು ದಿನ “ಈ ವಿಜಯ್ ತೆಂಡೂಲ್ಕರ್ ಗಿಂಡೂಲ್ಕರ್ ಎಲ್ಲ ಇಲ್ಲೇ ಉಳಿಯುತ್ತಾರೆ. ಆಚೆಗೆ ಹೋಗುವುದೇ ಇಲ್ಲ”-ಎಂದು ಹೇಳಿದಾಗ ಅವನ ಪಂಚರಂಗೀ ಗೆಳತಿಯೊಬ್ಬಳು “ಎಲ್ಲಿ ಫಾರಿನ್ನಿಗೋ?” ಎಂದು ಕೇಳಿ ಬಿಟ್ಟಾಗ “ಹೆತ್ತೇರಿಕೀ” ಎಂದು ಅವಳ ಬ್ಲೌಸಿನೊಳಗೆ ಕೈಹಾಕಿ ಅವಳನ್ನು ಮನೆಗೆ ಕಳಿಸಿದ. ಎಲ್ಲರಿಗೂ ಅವನು ಒಂದೆರಡು ದಿನಗಳ ಮಾತಿಗೆ ಎಲ್ಲಿಂದಲೋ ವಲಸೆ ಬಂದವನಂತೆ ಕಾಣುತ್ತಿದ್ದ ಅವನ ವರಸೆಯಿಂದ ಅವನ ಸಾಕಷ್ಟು ಸಮೀಪದ ಹುಡುಗಿಯರೂ ಭರವಸೆ ತೆಗೆದರು. ಮದುವೆಯ ಮಾತು ಬಂದರೆ ರೇಗಿದ. ಹುಡುಗಿಯರೊಂದಿಗೆ ಕಾಫೀ ಕಲಾ ಪ್ರದರ್ಶನ ಥೇಟರ್ ವರ್ಕ್‌ಶಾಪ್ ಒಂದೇ ಕೊಡೆಯೊಳಗೆ ಸಮುದ್ರ ನೋಡುತ್ತ ಒಂದೇ ಸುಟ್ಟ ಗೋವಿನ ಜೋಳ ಮೆಲ್ಲುತ್ತ ಕಣ್ಣಾಲಿಗಳಲ್ಲಿ ಪಿಸುಮಾತುಗಳ ಪ್ರಥಮ ಹಂತ ಮುಗಿದು ತೊಗಲುಗೊಂಬೆಯಾಟದ ಅವಸ್ಥೆ ಬಂದಾಗ ಅವರ ಕಿವಿಯಲ್ಲಿ “ಈಗ ನನ್ನ ಜಾಗದಲ್ಲಿ ಯಾರಿದ್ದರೂ ನಡೆಯುತ್ತಿತ್ತಲ್ಲವೆ ನಿನಗೆ? ನನ್ನ ಹೆಸರು ಹೇಳು ನೋಡುವಾ?” ಎಂದು ಕೇಳಿ ಆವೇಶ ಇಳಿಸಿಬಿಡುತ್ತಿದ್ದ. “ನಾನೊಬ್ಬ ದಕ್ಕಿದ ಗಂಡಾದದ್ದಕ್ಕೆ ನನ್ನೊಡನಿರುವೆಯೋ?” ಎಂದು ಗದ್ಗದಿತವಾಗಿ ಕೇಳುತ್ತಿದ್ದ. ವಿಶ್ ಮಾಡಲು ಬಂದ ಹುಡುಗಿಯೊಬ್ಬಳು ಅವಳ ಗೌನಿನೊಳಗೆ ತನ್ನ ಕೈ ಸರಿದದ್ದೆ ಜಗತ್ತಿನ ಜತೆ ತನ್ನ ಜನ್ಮದಿನವನ್ನೂ ಮರೆತುಬಿಟ್ಟಾಗ-‘ಈ ದರಿದ್ರ ಜಗತ್ತು ನನ್ನ ಅರ್ಹತೆಗೆ ತಕ್ಕುದೇ ಅಲ್ಲ”-ಎಂದು ಅತ್ತುಬಿಟ್ಟ. ಹೋಟೆಲೊಂದರಲ್ಲಿ ಆಶ್‌ಟ್ರೇದೊಳಗಿಂದ ಮುಗಿದ ತುಂಡುಗಳನ್ನು ಶೇಖರಿಸಿ ಕಿಸೆಯಲ್ಲಿಟ್ಟು ಸೇದುವ ಮುದಿ ವೇಟರನ್ನು ನೋಡಿದ ಮೇಲೆ ಸಿಗರೇಟನ್ನು ಬಿಟ್ಟುಬಿಟ್ಟ. ಮರುದಿನ ಈ ಕುರಿತು ಗೆಳೆಯರಲ್ಲಿ ಹೇಳುವಾಗ-ಹೀಗೆ ಹೇಳುವದರಿಂದ ಆ ವೃದ್ಧನ ಆಸ್ತಿತ್ವದ ಘನತೆಯನ್ನು ಕಳೆಯುತ್ತಿದ್ದೆನೆ ಅನಿಸಿಬಿಟ್ಟು ಸುದ್ದಿಯನ್ನು ಅರ್ಧಕ್ಕೇ ನಿಲ್ಲಿಸಿಬಿಟ್ಟ. ದೊಡ್ದದೊಡ್ಡ ಕನ್ನಡಿಗಳ ಇರಾಣಿ ಹೋಟೆಲುಗಳಲ್ಲಿ ಕೂತು ಬಿಯರ್ ಕುಡಿಯುವಾಗ ಗೊತ್ತಿದ್ದ ಗೊತ್ತಿರದ ಕಣ್ಣಿಗೆ ನಿದ್ದ ಬೀಳುತ್ತಿರುವ ಎಲ್ಲ ವ್ಯಕ್ತಿಗಳ ಮೇಲೆ ಪ್ರೀತಿ ಉಕ್ಕಿ ಹರಿದು ಗದ್ಗದಿತನಾದ. ನಂತರ ನಿವೃತ್ತ ಬಂಗಾಲಿ ಕವಿಯಂತೆ ಸೂರ್ಯಾಸ್ತ ನೋಡಿದ.

ಈವತ್ತು ರಾಜಿನಾಮೆ ಕೊಟ್ಟಿದ್ದು ಹೌದೋ ಅಲ್ಲವೋ ಎಂಬಂಥ ಅನುಮಾನ ಸಮೀರನಿಗೆ ಆಯಿತು. ರಾಜಿನಾಮೆ ಅಂಥ ಮಹತ್ವದ ಘಟನೆಯೇ ಅಲ್ಲ ಅಂತ ಅನಿಸುವದು ಎಂಥ ರೋಗದ ಲಕ್ಷಣ ಎಂದು ಚಿಂತಿತನಾದ. ರಸ್ತೆಗಳೆಲ್ಲ ಮಳೆಯಲ್ಲಿ ನೆನೆದಿದ್ದವು. ಮಕ್ಕಳ ಉಡುಪುಗಳನ್ನು ಮಾರುವ ಬೀದಿ ಅಂಗಡಿಯೊಂದು ಪೂರ್ತಿ ತೊಯ್ದುಹೋಗಿತ್ತು. ಜಗತ್ತು ಅತ್ಯಂತ ಸಂತ ಸನ್ನಿಯ ಸ್ಥಿತಿಯಲ್ಲಿ ಮುಂದುವರೆಯುತ್ತಿತ್ತು. ಬೂಟ್‌ಪಾಲೀಶ್ ಮಕ್ಕಳು ಮಳೆಗಾಲವಾದ್ದರಿಂದ ಪಾಲೀಶಿನ ಡಬ್ಬಿಗಳನ್ನು ಸಂದಿಗೊಂದಿಗಳಲ್ಲಿ ಅಡಗಿಸಿ ನಿರ್ಗತಿಕರಾಗಿ ನಿದ್ದೆ ಹೋಗಿದ್ದರು. ತನ್ನ ಮನಸ್ಸು ತನ್ನದೇ ಆಗಿ ನಿಲ್ಲುವುದು ಅಂದರೆ ಅಂದರೆ ಏನು? ಸಮೀರನಿಗೆ ದೀನ ಕುತೂಹಲ ಉಂಟಾಯಿತು. ಪೇಪರುಗಳಲ್ಲಿ ದೊಡ್ಡ ಸಾಧನೆ ಸಿದ್ಧಿ ಮಾಡಿದವರ, ವಿಖ್ಯಾತ ಸಾಧಕರ, ಲೇಖಕರ, ಸಂಗೀತಗಾರರ, ನಟರ, ಸಾಹಸಿಗಳ ವಯಸ್ಸು ಅವನನ್ನು ಆಕರ್ಷಿಸುತ್ತಿತ್ತು. ಅವರ ವಯಸ್ಸು ತನಗಿಂತ ಎಷ್ಟೋ ಹೆಚ್ಚಾಗಿದ್ದರೆ ಅವನಿಗೆ ನಿರುಂಬಳ ಅನಿಸುತ್ತಿತ್ತು. ತನಗಿನ್ನೂ ಅವಕಾಶವಿದೆ ಅನಿಸುತ್ತಿತ್ತು. ಕೊಲೆಗಾರರು ಕಳ್ಳರು ತನಗಿಂತ ಎಷ್ಟೋ ಸಣ್ಣವರಿದ್ದ ಸುದ್ದಿ ಓದಿದಾಗ ಅವನಿಗೆ ತಲ್ಲಣವೆನಿಸುತ್ತಿತ್ತು. ತಾನು ಹುಟ್ಟಿದಾಗ ಅವರ್‍ಯಾರೂ ಹುಟ್ಟಲಿಲ್ಲ. ತನ್ನೆದುರೇ ಹುಟ್ಟಿ ಅವರು ಹೀಗಾದರಲ್ಲ ಎನಿಸಿ ವಿಚಿತ್ರ ಹೆದರಿಕೆ ಅನಿಸುತ್ತಿತ್ತು. ಹೆರಿಗೆಯ ವೇಳೆಯಲ್ಲಿ ಅಸುನೀಗಿದ ಹೆಂಗಸರ ಕುರಿತು ಸಮೀರನಿಗೆ ಅತೀವ ದುಃಖವೆನಿಸುತ್ತಿತ್ತು.

ಮಳೆಯಲ್ಲಿ ನಿಂತ ಸಮುದ್ರವನ್ನು ನೋಡುವುದು ಸಮೀರನಿಗೆ ಅತಿ ಪ್ರೀತಿ. ನೋಡುವಾ ಎನಿಸಿ ದಾದರಿನಿಂದ ರೈಲು ಹಿಡಿದು ವಿಲೆಪಾರ್ಲೆಯಲ್ಲಿಳಿದ. ಜುಹೂ ಬೀಚಿಗೆ ಹೋಗುವ ಬಸ್ಸಿಗಾಗಿ ಕಾದ. ತುಂತುರು ಮಳೆಯಲ್ಲಿ ಸ್ಟಾಪಿನಲ್ಲಿ ಜನ ಒತ್ತಾಗಿ ನಿಂತಿದ್ದರು. ಮಳೆಯ ತೇವ ಮಬ್ಬು ಬೆಳಕುಗಳು ಸಮೀರನನ್ನು ಉದ್ರೇಕಿಸಿದವು. ಮೈ ಝುಮ್ಮೆನಿಸುವ ಹಳೆಯ ನೆನಪಿನ ಕ್ಷೀಣ ಪುಳಕಗಳು ರೋಮಾಂಚನಗಳು ಆಪ್ತ ವಾಸನೆಗಳು ಅವನನ್ನು ಹಿಡಿದವು. ಇಂಥ ಕೆಲವೇ ಕ್ಷಣಗಳಲ್ಲಿ ನೆನಪುಗಳು ಅವನಲ್ಲಿ ಪ್ರಜ್ವಲಿಸುತ್ತ ಬೆಳಗುತ್ತವೆ. ಬೇರೆಯೇ ಆದ ಅಮೀರ ಇಲ್ಲ. ಘಟನೆಗಳು ಸರಳವಾಗಿ ತನ್ನೊಳಗೆ ಬಂದು ಪುನಃ ಹಸಿರು ಹಳದಿ ಕೆಂಪು ಸಿಗ್ನಲ್ಲುಗಳ ಪಾಸ್‌ಬುಕ್ಕುಗಳ ಜಗತ್ತಿಗೆ ಮರಳಿ ಹೋಗುತ್ತವೆ. ಓದಿದ ಒಂದೆರಡು ಸಾಲುಗಳು, ಮುದ್ದಿಟ್ಟ ದೇವರಂಥ ಮಕ್ಕಳು, ಎಲ್ಲೋ ಮುರುಕು ಮೋಡದ ಮಳೆಯಲ್ಲಿ ನೆನೆದು ತಡವಾಗಿ ಮನೆ ಸೇರಿದಾಗ ಕೇಳಿಬಂದ ಹಾಡುಗಲೂ, ಸ್ನೇಹಿತ ದಂಪತಿಗಳಾದ ಹರ್ಷ ಮತ್ತು ವಿಭಾ ಗರ್ಭಪಾತದ ವಿಚಾರವನ್ನು ಬಿಟ್ಟುಕೊಟ್ಟು ಚೊಚ್ಚಲು ಮಗುವನ್ನು ಬರಮಾಡಿಕೊಳ್ಳಲು ನಿರ್ಧರಿಸಿದಾಗ ಮೂವರ ಕಣ್ಣಲ್ಲಿ ಒಡೆದು ಬಂದ ನೀರು-ಇವೆಲ್ಲ ಬೇರೆ ಬೇರೆಯಾಗಿಯೂ ಒಟ್ಟಾರೆ ಬೆಳೆಯುತ್ತ ಹೋಗುವ ಸಮೀರನಾಗುತ್ತಾನೆ. ಕ್ಯೂದಲ್ಲಿ ಅವನೆದುರು ಪುಟ್ಟ ಗರ್ಭಿಣಿಯೊಬ್ಬಳು ಗಂಡನೊಂದಿಗೆ ನಿಂತಿದ್ದಳು. ಅವಳಿಗೂ ಈ ಮಳೆಯಲ್ಲಿ ಬೀಚಿಗೆ ಹೋಗುವ ಆಸೆ ಬಂದಿರಬೇಕು. ಮಳೆಯಿಂದ ಆಕೆ ತೊಯ್ಯದಂತೆ ಗಂಡ ಅವಳನ್ನು ವಿವಿಧ ಬಗೆಬಗೆಯಾಗಿ ರಕ್ಷಿಸುತ್ತಿದ್ದ. ಅಷ್ಟರಲ್ಲಿ ಗರ್ಭಿಣಿ-ಭಿಕ್ಷುಕಿಯೊಬ್ಬಳು ಬೇಡುತ್ತ ಬಂದಳು. ಅವನೆದುರು ನಿಂತ ಗರ್ಭಿಣಿ ಆ ಭಿಕ್ಷುಕಿಯನ್ನು ಕರೆದು ದುಡ್ಡುಕೊಟ್ಟಳು. ಅವರೀರ್ವರೂ ಅತೀವ ಮಮತೆಯಿಂದ ಪರಸ್ಪರ ನೋಡಿದರು. ನಂತರ ಭಿಕ್ಷುಕಿ ತನ್ನ ಒರಟು ಕೈಯಿಂದ ಆ ಪುಟ್ಟ ಬಸುರಿಯ ಕೆನ್ನೆಯನ್ನು ಸವರಿ “ಪೆಹಲಾ ಹೈ ಕ್ಯಾ? ಡರಾನಾ ನಹೀಂ ಮೇರಾ ಚೌಥಾ ಹೈ” ಎಂದು ಅತೀವ ಖುಷಿಯಲ್ಲಿ ಹೇಳಿ ಹೋದಳು. ಜೋರಾಗಿ ಮಳೆ ಬಂತು. ತಪ ತಪ ಹೊಯ್ಯುತ್ತ ಮಳೆ ಅಪ್ಪಳಿಸುವ ರಸ್ತೆಯಲ್ಲಿ ಹಾರುತ್ತ ಹಾರುತ್ತ ಅವಳು ಇಲ್ಲವಾದಳು.

ಸ್ಟಾಪಿನ ಅತೀ ಸಮೀಪ ಬಂದ ಬಸ್ಸಿನಲ್ಲಿ ಎಲ್ಲರೂ ತುಂಬಿಕೊಂಡರು. ಯಾಕೋ ಸಮೀರ ಬಾಲ್ಯದ ತನ್ನ ಶಾಲೆಯನ್ನು ನೆನೆಸಿಕೊಂಡ. ಶಾಲೆಯ ಪ್ಯೂನ್ ಶಂಕರನಿಗೆ ಹೆಬ್ಬೆರಳುಗಳೇ ಇದ್ದಿರಲಿಲ್ಲ. ಆದರೂ ಅವನು ಚೋಟು ಕೈಗಳಲ್ಲೇ ನಕಾಶೆಗಳನ್ನು ತರುತ್ತಿದ್ದ ಚೋಟು ಕೈಗಳಿಂದಲೇ ಗಂಟೆ ಬಾರಿಸುತ್ತಿದ್ದ ಮತ್ತು ಶಾರದಾಪೂಜೆಯ ಭಜನೆಯಲ್ಲಿ ಎಲ್ಲರಿಗಿಂತ ಮಿಗಿಲಾಗಿ ಮೈಮರೆತು ಆವೇಶದಿಂದ ಕುಣಿಯುತ್ತಿದ್ದ. ಅವನ ಮೋರೆಯಲ್ಲಿ ತುಳುಕುತ್ತಿದ ಮೈಮರೆವಿನ ಕಳೆಯಲ್ಲಿ ಶಂಕರ ತೀರ ಬೆರೆಯೇ ಆಗಿ ಕಾಣುತ್ತಿದ್ದ. ಒಮ್ಮೆಯಂತೂ ಭಜನೆಯ ನಂತರ ಮೊಟ್ಟ ಮೊದಲ ಬಾರಿಗೆ ತನ್ನೊಂದಿಗೆ ಐದಾರು ಮಕ್ಕಳನ್ನೂ ಅಪ್ಪಿಕೊಂಡಿದ್ದ. ಅವನ ಮಕ್ಕಳು ಈಗ ಶಾಲೆಗೆ ಕಲಿಯಲು ಬಂದಿರಬಹುದೇನೋ. ಅವನು ರಿಟೈಯರ್ ಕೂಡ ಆಗಿರಬಹುದು. ಬಿಡುಗಡೆಗೊಳಿಸುತ್ತ ಹೋಗುವ ಕ್ಷಣಗಳೇ ತನ್ನನ್ನು ನಿಲ್ಲಿಸುತ್ತವೆ ಎಂದು ಸಮೀರನಿಗೆ ಅನಿಸಿತು. ಬಹುಶಃ ಬಿಡುಗಡೆಯನ್ನೇ ನಾವು ಸುಖವೆನ್ನುತ್ತೇವೆ.

ಜುಹೂ ಬೀಚಿನಲ್ಲಿ ಜನ ಇರಲಿಲ್ಲ. ಬರೀ ಮಳಲು ಕಡಲು ಮತ್ತು ಎಲ್ಲವನ್ನೂ ಎಡೆಬಿಡದೆ ಒಂದುಗೂಡಿಸುವ ಮಳೆ. ಯಾವ ಹೆಸರುಗಳಿಲ್ಲ ಈಗ. ಸ್ಮಾರಕಗಳಿಲ್ಲ. ಪುರಾವೆಗಳಿಲ್ಲ. ಇದ್ದಿದ್ದು ಧಾರೆ ಅಕಾರದಾಚೆಗಿನ ಧಾರೆ. ನನ್ನೊಳಗಿನ ಚಿಲುಮೆಗಳನ್ನು ಮೀಟಲು ಜಗತ್ತೇ ನಿಂತಿರುವಾಗ ಬರೀ ನೋಕರಿ ಚಾಕರಿ ಅಂಕಿತ ನಾಮಗಳ ಕ್ಷುಲ್ಲಕ-ಕೊಂಡಿಗಳ ಬಿಡುಗಡೆಯ ಭ್ರಮೆಯಲ್ಲಿ ನಾನೇಕೆ ಸಣ್ಣಗಾಗಲಿ? ಈಗ ಎಷ್ಟೆಲ್ಲಾ ರೈಲುಗಳು ತುಂಬಿ ಹೊರಡುತ್ತಿವೆ. ಎಷ್ಟೆಲ್ಲಾ ಒಲೆಗಳಲ್ಲಿ ಆಹಾರ ಬೇಯುತ್ತಿದೆ. ಎಷ್ಟೊಂದು ಆಪರೇಷನ್ ಥೇಟರುಗಳಲ್ಲಿ ಯಾಜ್ಞಿಕರಂತೆ ಬೆವರುತ್ತ ಡಾಕ್ಟರುಗಳು ಹೋರಾಡುತ್ತಿದ್ದಾರೆ. ಎಷ್ಟೊಂದು ಹುಡುಗಿಯರ ಮಗ್ಗುಲುಗಳಲ್ಲಿ ತಾಯ್ತನದ ಪುಲಕದ ಕುಡಿ ಮೂಡುತ್ತಿದೆ. ಸಮೀರ ತೆರೆಗಳ ನಡುವೆ ನಿಂತ. ಎದುರಿನ ದಟ್ಟ ಸಮುದ್ರದಲ್ಲಿ ಧಾರಕಾರವಾಗಿ ಮಳೆ ಸುರಿಯುತ್ತಿತ್ತು. ಎಲ್ಲ ಕಡೆಯಿಂದ ಮೋಡಗಳು ಅವನೆಡೆಗೇ ಬರುತ್ತಿದ್ದವು. ಖುಷಿ ಉಕ್ಕಿ ಬಂದಂತೆ “ಯೇ‌ಏ‌ಏ‌ಏ‌ಏ” ಎಂದು ಮೈಮರೆತು ಮನಮರೆತು ಕೂಗಿದ.
*****

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.