ರಾಗ — ಕಲ್ಯಾಣಿ ತಾಳ — ಅಟ್ಟ
ದಾಸನಾಗಬೇಕು – ಸಾದಾಶಿವನ |
ದಾಸನಾಗಬೇಕು ||ಪ||
ದಾಸನಾಗಬೇಕು ಕ್ಲೇಶಪಂಚಕವಳಿದು |
ಆಸೆಯಲ್ಲಿ ಮನ ಸೂಸದೆ ಸರ್ವದಾ ||ಅ.ಪ.||
ಮನದ ಕಲ್ಮಷ ಕಳೆದು ಶ್ರೀಮಹೇ – |
ಶನ ಮಹಿಮೆಯ ತಿಳಿದು ||
ಇನಿತು ಇನಿಜಗವೆಲ್ಲ ಈಶ್ವರಮಯವೆಂದು |
ಘನವಾದ ಮೋಹದ ಗಡಿಯನು ದಾಟುತ ||೧||
ತನುವು ಅಸ್ಥಿರವೆನ್ನುತ ತಿಳಿದು ಶಂಕ – |
ರನ ಹೃದಯವ ಕಾಣುತ ||
ಘನವಾದ ಇಂದ್ರಜಾಲದ ಮಾಯೆಯೆನ್ನುತ |
ಬಿನುಗು ಸಂಸಾರದ ಮಮತೆಯ ಬಿಡುತ ||೨||
ಆರುಚಕ್ರದಿ ಮೆರೆವ ಅಖಂಡನ |
ಮೂರು ಗುಣುವ ತಿಳಿದು ||
ಆರು ಮೂರು ಹದಿನಾರು ತತ್ತ್ವವ ಮೀರಿ |
ತೋರುವ ಕಾಗಿನೆಲೆಯಾದಿ ಕೇಶವನಡಿ ||೩||