ರಾಗ — ಕಾಂಬೋದಿ ತಾಳ — ಝಂಪೆ
ನೀ ಮಾಯೆಯೊಳಗೊ ನಿನ್ನೊಳು ಮಾಯೆಯೊ |
ನೀ ದೇಹದೊಳಗೊ ನಿನ್ನೊಳು ದೇಹವೊ ||ಪ||
ಬಯಲು ಆಲಯದೊಳಗೊ ಆಲಯದೊಳಗೆ ಬಯಲೊ |
ಬಯಲು ಆಲಯವೆರಡು ನಯನದೊಳಗೊ ||
ನಯನ ಬುದ್ಧಿಯ ಒಳಗೊ ಬುದ್ಧಿ ನಯನದ ಒಳಗೊ |
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ ||೧||
ಸವಿಯು ಸಕ್ಕರೆಯೊಳಗೊ ಸಕ್ಕರೆಯು ಸವಿಯೊಳಗೊ |
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ ||
ಜಿಹ್ವೆ ಬುದ್ಧಿಯ ಒಳಗೊ ಬುದ್ಧಿ ಜಿಹ್ವೆಯ ಒಳಗೊ
ಜಿಹ್ವೆ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ ||೨||
ಕುಸುಮದೊಳು ಗಂಧವೋ ಗಂಧದೊಳು ಕುಸುಮವೊ |
ಕುಸುಮ ಗಂಧಗಳೆರಡು ಘ್ರಾಣದೊಳಗೋ ||
ಅಸಮಭವ ಕಾಗಿನೆಲೆಯಾದಿಕೇಶವರಾಯ|
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೊ ||೩||