ಆಕಾಶಬುಟ್ಟಿ


ಹೊಗೆ ತುಂಬಿ
ನಗೆ ತುಂಬಿ
ಬಣ್ಣ ಬಣ್ಣದ ನವಿರು ಕಾಗದದ ಬುಟ್ಟಿಯಲಿ
ಜೀವ ತುಂಬಿ,
ದೂರ ಹಾರುವದೆಂಬ ಭರವಸೆಯ ನಂಬಿ,
ನಮ್ಮ ಹಿರಿಯಾಸೆಗಳ ಉರಿವ ಕಕ್ಕಡವಿಟ್ಟು
ಉತ್ಸಾಹ ಸಾಹಸಕೆ ರೂಪುಗೊಟ್ಟು
ಮೇಲುನಾಡಿಗೆ ತೇಲಬಿಟ್ಟೆವಿದೊ ಚೈತನ್ಯದಾಕಾಶಬುಟ್ಟಿ!
ಏರುವದೊ
ಇಳಿಯುವದೊ
ಗಾಳಿಯಾಘಾತದಲಿ ಜೋಲಿ ಹೊಡೆದುರುಳುವದೊ?
ಮೈ ಸುಟ್ಟುಕೊಳ್ಳುವದೊ,
ಕಾಣಲಾರದ ಕೊಳ್ಳದಾಳದಲಿ ಬೀಳುವದೊ-
ಆರು ಕಂಡಿಹರಿದನು?
ತಿಳಿಯಲಾರದ ಹದನು!
ಆದರೂ ಆದರೂ ಹಾರಿಸಿದೆವಿದನು!
ಹುಡುಗತನದುತ್ಸಾಹ ಕೊನೆಬಲ್ಲುದೇನು?


ಆಕಾಶದ ಪ್ರಕಾಶದಲಿ ಎದೆಯ ತೆರೆದು
ಇಳೆಯ ಬಾಳಿನ ಹಂಗು ನೂಲು ಹರಿದು
ಮೇಲೆ ತೇಲಾಡುವುದ ಕಣ್ಣಾರೆ ಕಂಡು
ನನ್ನ ಬಗೆಯಾಶೆಗಳು ರೆಕ್ಕೆಗೊಂಡು
ಅಂಧಂ ತಮಸ್ಸಿನಲು ಬೆಳಕನುಂಡು
ಮುಗಿಲಲ್ಲಿ ಬಿತ್ತಿರುವ ಮುತ್ತುಗಳ ಬೆಳೆಯ
ಹಾಲುಗಳನು ಬಯಸಿ ಹಾರುತಿವೆ ಗೆಳೆಯ!
ಅದೊ! ನೋಡು ನೋಡು
ಚಿಕ್ಕೆಗುರಿ ಬೆಂಬತ್ತಿ ಸಾಗಿರುವ ಕಿರುದೀಪಕಾವ ಕೇಡು?
ಇಳೆಯ ಬಾಳರಳಿ ಬಂಗಾರ ಭರಣಿಯು ತೇಲಿ
ಬೆಳ್ಳಿ ಚಿಕ್ಕಗೆ ತೆಕ್ಕೆ ಹಾಕಿಹುದು ನೋಡು!
ಬೆಳಕು ಬೆಳಕಿಗೆ ಮುತ್ತು ಕೊಟ್ಟಿಹುದು
ಆ ಪ್ರೀತಿ ಸೌರಭವೆ ತೋಳಬಂದಿ!
ಸೌಂದರ್ಯದಾನಂದವಿಲ್ಲಿ ಬಂದಿ.


ದೀನ ಮಾನವ ರಚಿತ ಆಕಾಶಬುಟ್ಟಿ
ದಾನವರ ಬಿರುಗಾಳಿ ದಾಳಿಯನು ಮೆಟ್ಟಿ
ಬಾನವರನಪ್ಪಿ ಒಂದಾಗಿಹುದು ನೋಡು!
ನೋಡಿದೆಯ ಕವಿಯೆ?
ಊರ್ಧ್ವಮುಖಿಗಲ್ಲದಿದು ಉಳಿದವರಿಗಳವೆ?
ಆತ್ಮ ಬಲದೆದುರು ಮೇಣುಳಿದ ಬಲವೆ?

ಆಕಾಶಬುಟ್ಟಿಯೊಲು ಏಕಾಕಿಯಾದರೂ
ಎದೆಗೆದೆಯ ಹೊಂದೀಪ ಉದ್ದೀಪನಂಗೊಂಡು
ಬಾಳದ್ವೀಪವ ಬೆಳಗುವಂತೆ ಹಾಡು
ಎಂದೆಂದು ನೀನಿಂಥ ಹಾಡ ಹಾಡು|
*****