ವಾಗ್ದೇವಿ

ರಾಗ — ಕಲ್ಯಾಣಿ
ತಾಳ — ಝಂಪೆ

ವರವ ಕೊಡು ಎನಗೆ ವಾಗ್ದೇವಿ – ನಿನ್ನ |
ಚರಣಕಮಲಂಗಳನು ದಯಮಾಡು ದೇವಿ ||ಪ||

ಶಿವಮೊಗದ ನಸುನಗೆಯ ಬಾಲೆ |
ಎಸೆವ ಕರ್ಣದಿ ಮುತ್ತಿನೋಲೆ ||
ನಸುನಗುವ ಪಲ್ಲ ಗುಣಶೀಲೆ – ದೇವಿ – |
ಬಿಸಜಾಕ್ಷಿ ಎನ್ನ ಹೃದಯದೊಳು ನಿಂದವಳೆ ||೧||

ಇಂಪುಸೊಂಪಿನ ಚಂದ್ರಬಿಂಬೆ |
ಕೆಂಪುತುಟಿ ನಾಸಿಕದ ರಂಭೆ ||
ಜಂಪುಮದನನ ಪೂರ್ಣಶಕ್ತಿ ಬೊಂಬೆ – ಒಳ್ಳೆ |
ಸಂಪಿಗೆಯ ಮುಡಿಗಿಟ್ಟ ಶಾರದಾಂಬೆ ||೨||

ರವಿ ಕೋಟಿ ತೇಜಪ್ರಕಾಶೆ – ಮಹಾ – |
ಕವಿಜನರ ಹೃತ್ಕಮಲವಾಸೆ ||
ಅವಿರಳಾಪುರಿಯ ಸಿರಿ ಕಾಗಿನೆಲೆಯಾದಿ ಕೇ – |
ಶವನಸುತನಿಗೆ ಸನ್ನುತದ ರಾಣಿವಾಸೆ ||೩||


ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.