ಕಾನಡ
ನೀನ್ಯಾಕೋ, ನಿನ್ನ ಹಂಗ್ಯಾಕೋ ಪ
ನಿನ್ನ ನಾಮದ ಬಲವೊಂದಿದ್ದರೆ ಸಾಕೊ ಅ
ಆ ಮರ ಈ ಮರ ಧ್ಯಾನಿಸುತಿರುವಾಗ
ರಾಮ ರಾಮ ಎಂಬ ನಾಮವೆ ಕಾಯ್ತೊ ೧
ಬಾಲೆಯ ಸಭೆಯಲಿ ಸೀರೆಯ ಸೆಳೆವಾಗ
ಬಾಲಕೃಷ್ಣನೆಂಬ ನಾಮವೆ ಕಾಯ್ತೊ ೨
ಯಮನ ದೂತರು ಬಂದು ಅಜಾಮಿಳನೆಳೆವಾಗ
ನಾರಾಯಣನೆಂಬ ನಾಮವೆ ಕಾಯ್ತೊ ೩
ಕರಿ ಮಕರಿಗೆ ಸಿಕ್ಕಿ ಮೊರೆಯಿಡುತಿರುವಾಗ
ಆದಿಮೂಲನೆಂಬ ನಾಮವೆ ಕಾಯ್ತೊ ೪
ಪ್ರಹ್ಲಾದನ ಪಿತ ಬಾಧಿಸುತಿರುವಾಗ
ನಾರಸಿಂಹನೆಂಬ ನಾಮವೆ ಕಾಯ್ತೊ ೫
ಹಸುಳೆ ಆ ಧ್ರುವರಾಯ ಅಡವಿಗೆ ಪೋಪಾಗ
ವಾಸುದೇವನೆಮಬ ನಾಮವೆ ಕಾಯ್ತೊ ೬
ನಿನ್ನ ನಾಮಕೆ ಸರಿ ಯಾವುದು ಕಾಣೇನೊ
ಘನ ಮಹಿಮ ಸಿರಿ ಪುರಂದರವಿಠಲ ೭
*****