ರಾಗ — ಕಾಂಬೋದಿ ತಾಳ — ಝಂಪೆ
ತಲ್ಲಣಿಸದಿರು ಕಂಡೆಯಾ ತಾಳು ಮನವೆ – ಸ್ವಾಮಿ |
ನಿಲ್ಲದಲೆ ರಕ್ಷಿಸುವ ಸಂದೇಹ ಬೇಡ ||ಪ||
ಬೆಟದಾ ತುದಿಯಲ್ಲಿ ಬೆಳೆದ ವೃಕ್ಷಂಗಳಿಗೆ |
ಕಟ್ಟೆಕಟ್ಟುತ ನೀರ ಹೊಯ್ವರಾರು? ||
ಹುಟ್ಟಿಸಿದ ಸ್ವಾಮಿ ತಾ ಹೊಣೆಗಾರನಾದ ಮೇಲೆ |
ಕೊಟ್ಟು ರಕ್ಷಿಸುವನು ಇದಕೆ ಸಂದೇಹ ಬೇಡ ||೧||
ಅಡವಿಯೊಳಗಾಡುವ ಮೃಗಜಾತಿ ಪಕ್ಷಿಗಳಿಗೆ |
ಅಡಿಗಡಿಗೆ ಆಹಾರವಿತ್ತವರದಾರು? ||
ಪಡೆದ ಜನನಿಯಂತೆ ಸಾರಥಿಯಾಗಿ ತಾ |
ಬಿಡದೆ ರಕ್ಷಿಸುವನು ಇದಕೆ ಸಂದೇಹ ಬೇಡ ||೨||
ಕಲ್ಲೊಳಗೆ ಪುಟ್ಟಿ ಕೂಗುವ ಮಂಡುಕಂಗಳಿಗೆ |
ಅಲ್ಲಿ ಹೋಗಿ ಆಹಾರವಿತ್ತವರದಾರು? ||
ಬಲ್ಲಿದನು ಕಾಗಿನೆಲೆಯಾದಿಕೇಶವರಾಯ |
ನಿಲ್ಲದೇ ರಕ್ಷಿಪನು ಇದಕೆ ಸಂದೇಹ ಬೇಡ ||೩||
*****