ಮುಟಿಗೆಯಳತೆಯ ಬರಿಯ ಅಸ್ತಿ ಚರ್ಮದಲಿನಿತು.
ಔಂಸು ತೂಕದ ರಕ್ತ ಮಾಂಸವೆರಡನು ಬೆರಸು;
ಉಕ್ಕುತಿಹ ಒಲುಮೆ ಕಡಲಗಲದೆದೆಯನ್ನಿರಿಸು;
ಅಂತದಕೆ ಕಡಲಾಳ ನಿಷ್ಪಾಪ ಮನವಿತ್ತು
ಅಂಟಿಸೆರಡಾನೆಕಿವಿ….. ಮಿಳ್ಮಿಳದ ಕಣ್ಣೆರಡು
ತಾಯನಪ್ಪಿದ ಕೂಸಿನೆಳನಗೆಯ ಬಣ್ಣಗೊಡು;
ಹಿಮಶಿಖರದೆತ್ತರದ ಬಿತ್ತರದ ಆತ್ಮವಿಡು;
ಜೇನಿಗೂ ಇನಿದಾಗಿ ನುಡಿವ ನಾಲಗೆ ನೀಡು.
ತಿನಿಸುಗಳೆ? – ಆಡಹಾಲುತ್ತತ್ತಿ ಸಾಬಕ್ಕಿ;
ತುಂಬೀಗ ನೊಂದೆದೆಯ ಕಂಬನಿಯನಂಚುಮಟ;
ಸೆರೆಮನೆಯಲಟ್ಟಿದನು ವರುಷವಿಪ್ಪತ್ತು ದಿಟ;
ಹರಿಜನನು ಮುಗುಚಿಡಲಿ ಸಂಭಾರವನ್ನಿಕ್ಕಿ.
ಕೊಡು ಕೈಗೆ ತೆಳುಗೋಲ, ಮೈಗೆ ಚಿಂದಿಯ ಉಡುಪು;
ಜಗದ ಉದ್ಧಾರಕನು; ಕಾಣಿರಿವನೇ ಬಾಪು*
*****
*ಶ್ರೀ ಟಿ.ಪಿ. ಕೈಲಾಸಂ ಅವರ ‘Recipe’