ಮಾಮರದ ಆಸರದಿ ಮೇಲೇರಿ ಕುಡಿಚಾಚಿ
ಬೆಳ್ಳಿ ಹೂಗಳ ಹರವಿ ಅತ್ತಿತ್ತಲಿಣಿಕಿ,
ಮಾಂದಳಿರ ಮುದ್ದಾಡಿ ರಂಬೆಯಲಿ ನೇತಾಡಿ
ಸುಳಿಗಾಳಿ ಸುಳುವಿನಲಿ ಜೀಕಿ ಜೀಕಿ-
ನೀಲಗಗನದ ಆಚೆ ನೀಲಿಮೆಯ ಬಳಿ ಸಾರಿ
ಬೆಣ್ಣೆ-ಬೆಟ್ಟದ ಮೋಡಗರ್ಭಗುಡಿ ಸೀಳಿ,
ಗರಿಗೆದರಿ ಎದೆದುಂಬಿ ಚಿಕ್ಕೆಲೋಕವ ಸುತ್ತಿ
ಹಾಡುತಿಹ ಹಕ್ಕಿಗಳ ಇಂಚರವ ಕೇಳಿ-
ಮೋಡಪಡೆ ಮಳೆಗರೆಯೆ ತುಂತುರಿನ ಸೊದೆ ಹೀರಿ
ಬಣ್ಣ ಬಣ್ಣದ ಬುಗ್ಗೆ ಬಿಲ್ಲಿನಂತಾಗಿ,
ಜಗವೆಲ್ಲ ತಿರುಗಾಡಿ ತೆಂಗುಗರಿಗಳ ನಡುವೆ
ತೂರಿ ಮರ್ಮರಗೈವ ಎಲರಿನಿಂ ತೂಗಿ-
ಚಂದಿರನ ಚೆಲುಮೊಗದ ಕಾಂತಿ ಬೆಳುದಿಂಗಳಿನ
ಹಾಲ್ಗುಡಿದು ಹಾಯಾಗಿ ಕಣ್ಣುಗಳ ಮುಚ್ಚಿ,
ಹೊಂಗನಸ ಕಾಣುತ್ತ ಜಿಯ್‌ಗುಡುವ ಹೆಗ್ಗಾಡ
ಜೋಗುಳದ ಲಲ್ಲೆಯಲಿ ಮೈಮರೆತು ಮೆಚ್ಚಿ-
ನಿದ್ರೆಗೈದಿಹ ಕಾಡಮಲ್ಲಿಗೆಯ ಕಣ್ಣೊರಸು
ತುಂಬಿ ಗುಂಗುಂಗಾನಗೈದು ಬಂದಿಹುದು;
ಅರಳುಗಳ ನೀಡವ್ವ, ಒಲಿದು ಬಂದಿಹನಾತ
ತುಂಬು-ಹೃದಯದಿ ತುಂಬು ಬೊಗಸೆಯಲಿ ತುಂಬು.
*****