ಕರೆಯದಿದ್ದರು ನಾವು ನೀನು ಬಂದೇ ಬರುವಿ
ಅಲ್ಲವೆ? ಬಾ ಮತ್ತೆ, ಬಾ ಯುಗಾದಿ;
ಎಂಥ ಬಿಸಿಲೊಳು ಬಂದೆ!
ಬೇಕೆ ಬಾಯಾರಿಕೆಗೆ ಬೇವು-ಬೆಲ್ಲ?
ಚಹಕೆ ಸಕ್ಕರೆಯಿಲ್ಲ; ನಡೆದೀತೆ ಬರಿಯ ತಣ್ಣೀರ ಗುಟುಕು?
ಇದು ಹೋದ ವರುಷವೇ ಕೊಂಡ ಬಾಳದ ಬೇರ ಬೀಸಣಿಗೆ
ನೀರು ಚಿಮುಕಿಸಿದೆ; ತಣ್ಣಗೆ ಬೀಸಿಕೊ.
ಇಲ್ಲಿ ಪಾಟಿಯ ಕಲ್ಲ ಮೇಲೆ ಹಾಸಿದೆ, ಸ್ವಲ್ಪ ಅಡ್ಡಾಗಿ ಏಳು;
ಆಮೇಲೆ ಮಾತಾಡೋಣ, ಕುಳಿತು ಹಾಯಾಗಿ.
ಒಂದು ಯುಗವಾಗಿ ಹೋಯಿತಲ್ಲವೆ ನಾವು ಭೆಟ್ಟಿಯಾಗಿ!
* * *
ಜೆಟ್ ವಿಮಾನ, ಹೆಲಿಕಾಪ್ಟರ್, ಉಗಿಹಡಗ, ಬೋಟು
ಎಮ್.ಎಸ್.ಎಮ್. ರೈಲು, ಕಾರು ಕೊನೆಗೆ ಎಸ್.ಟಿ. ಬಸ್ಸು?-
ಯಾವ ವಾಹನದಲ್ಲೂ ಬರಲಿಲ್ಲವೆ? ನೋಡಿದರೆ ಇಳಿವಯಸ್ಸು
ಕೊನೆಗೆ ಎತ್ತಿನ ಬಂಡಿ ಹತ್ತಿ ಬಂದೆಯ, ಹಿರಿಯ,
ಎಲೆಯಡಿಕೆ ಜಗಿದು, ಕಥೆ ಹೇಳಿ, ಲಾವಣಿ ಹಾಡಿಕೊಂಡು?
ಬಂದೊಡನೆ ನಿನ್ನ ಗುರುತಿಸಲಿಲ್ಲವ ಇಲ್ಲಿ ಯಾರೂ?
(ಬಗಲಗಸೆ ಅಂಗಿ ತಲೆಗೆ ಹೆಡಿಗೆಯ ರುಮಾಲು)
ಮರೆತು ಬಿಡಬೇಕೆ ಇಷ್ಟು ಬೇಗ ಮುಂಚಿನ ಹಾದಿ
ಅಥವಾ ಕಂಡೆಯ ಬೇರೆ ಅದಲು ಬದಲು?
ವರುಷಗಟ್ಟಲೆ ಎತ್ತಲೋ ಕಣ್ಮರೆಯಾಗಿ ಹೋಗುವ ನಿನಗೆ ಹೇಗೆ ಗೊತ್ತು-
ಇಲ್ಲಿ, ಒಳಗೊಳಗೆ ನಡೆಯುತಿರುವ ಮಸಲತ್ತು,
ನಿಮಿಷ ನಿಮಿಷಕ್ಕೆ ಹೊಸ ಹೊಸ ವೇಷ ಧರಿಸಿ ಓಡುವ ಜಗತ್ತು
ಹಾಗೆ ನೋಡಿದರೆ, ನಮಗಿಲ್ಲಿ ಏನಿದೆ ಹೇಳು ವಿಶೇಷ ಸವಲತ್ತು?
ಇಂದೊ ನಾಳೆಯೊ ವಲಸೆ ಹೋಗುವರು ನಮ್ಮ ಜನ
ಚಂದ್ರ ತಾರಾಲೋಕ ಹುಡುಕಿಕೊಂಡು
(ಬಹುಶಃ) ಕವಿಗಳನ್ನೂ ಜೊತೆಗೆ ಕರೆದುಕೊಂಡು,
* * *
ವರುಷ ವರುಷಕ್ಕೊಮ್ಮೆ ಬಯಲಟ್ಟದಲಿ ತೊಟ್ಟು ಬರುವ ಭರ್ಜರಿವೇಷ
ಓ ಚೈತ್ಯ ಪುರುಷ!
ಬಿರುಗಾಳಿ, ಕೋಲ್ಮಿಂಚು, ಆಣೆಕಲ್ಲಿನ ಮಳೆಯು, ಗುಡುಗು, ಸಂತೋಷ;
ಹೇಗಿಹುದು ಪಂಚಾಂಗದಲ್ಲಿ ಹೊಸ ವರುಷ?
ಕೋಗಿಲೆಯು ಮಾತ್ರ ಬಿಟ್ಟೂ ಬಿಡದೆ ತನ್ನ ಜಾಹೀರಾತು ಪ್ರಕಟಿಸಿದೆ.
ಅಚ್ಚಾಗಿಹುದು ಕೆಳಗಿನ ಕವಿತೆ
ಚೈತ್ರ ಪತ್ರಿಕೆಯ ವಿಶೇಷ ಸಂಚಿಕೆಯ ಮೊದಲ ಪುಟದ ಮೇಲೆ:
ತಳಿತ ಮಾವು ಮುಗುಳಾದ ಬೇವು
ಹುಲುಗಲದ ತುಂಬ ಹೂವು;
ಬೇಗೆ ಹತ್ತಿ ಮೈಸುಟ್ಟ ಕಾಡು
ಮರೆತಿಹುದು ಎಲ್ಲ ನೋವು
ಅರ್‍ಧ ಹಸಿರು, ಇನ್ನರ್‍ಧ ಹಳದಿ
ಅಂಚಿನಲಿ ಚಿಗುರುಗೆಂಪು;
ಬಿಸಿಲ ಬೇಗೆಗೀ ನೆಳಲ ತಂಪು
ತಂಗಾಳಿ ತಂದ ಜೊಂಪು.
ಬಂತು ಗಾಳಿ ಕೆಂಧೂಳಿ-ಗೂಳಿ
ಮುಗಿಲುದ್ದ ಹೋಳಿಯಾಡಿ,
ಬೆಣಚುಗಲ್ಲ ಬಿಳಿ ಮೋಡದಲ್ಲಿ
ಕುಡಿಮಿಂಚು ಜೀವತಾಳಿ!
ಮೊದಲ ಮಳೆಗೆ ನೀರಡಿಸಿ ನಿಂತ
ಇಳಗಾಯ್ತು ಮೊದಲ ಕೂಟ;
ಸಾಕು ಎನಿಸಿ ಸಾಕಾಗಲಿಲ್ಲ
ಹೊಸ ಋತುವಿನೊಡನೆ ಬೇಟಿ.
* * *
ನೆನೆಸಿದೊಡನೆಯೆ ಕನಸಿನಲ್ಲಿ ಬಂದವ ನೀನು
ಬಾ ಯುಗಾದಿ; ‘ಶತಂ ಜೀವೇಮ ಶರದಃ’
ನೂರು ವರುಷದ ಮೆದುಳ ಮಡಿಕೆಯೊಳಗೇನಿಹುದೊ-
ಹಬ್ಬ ಹುಣ್ಣಿಮೆಗೊಮ್ಮೆ ಬಿಚ್ಚಿ ಬಿಸಿಲಿಗೆ ಹಾಕಿ,
ಮಡಿಚಿ ಪೆಟ್ಟಿಗೆಯೊಳಗೆ ಇಟ್ಟುದಷ್ಟೆ!
ನುಸಿ ಮುಟ್ಟಿದರೆ ಅದರ ಗತಿಯೇನು? ಮೊದಲೆ ರೇಶಿಮೆಯ ಬಟ್ಟೆ-
ಇರಲಿ; ದಾರಿಯಲಿ ಬರುವಾಗ ಎಡಬಲಕೆ ಕಂಡುದೇನು?-
ಎಲೆಯುದುರಿ ರಸವಾರಿ ಕೊಂಬೆಗೈಗಳ ಚಾಚಿ
ಬಾನಿಳೆಯ ನಡುವೆ ಜೋತಾಡುತಿರುವೀ ಅಸ್ಥಿಪಂಜರಗಳು?
ಸ್ವಲ್ಪ ತಾಳು-
ಯುಗ ಯುಗಕ್ಕೊಮ್ಮೆ ಸಂಭವಿಸಿ ಬಂದರು ಅವಗೆ
ದುಂಬಾಲು ಬೀಳುವ ಮಂದಿ ಎಷ್ಟು ಹೇಳು.
ಸ್ವತಃ ನೀನೇ ಎಷ್ಟು ಸಲ ಬಂದು ಹೋದೆಯೋ ಈ ಹಿಂದೆ
ಬರಲಿರುವೆಯೊ ಮತ್ತೆ ಇನ್ನು ಮುಂದೆ;
ಮಹಡಿ, ಗೋಪುರ, ಗುಡಿಲು, ಕೋಟೆ, ಕೊತ್ತಳ, ಬೀಳು
ಕೊಳಚೆ, ಗೊಬ್ಬರ ಗುಂಡಿ, ಒಗ್ಗಾಲಿ ಬಂಡಿ-
ನೀ ಬರುವ ಮುನ್ನವೇ ನಡೆದಿತ್ತು ನೀ ಬರುವ ದಾರಿಯ ರಿಪೇರಿ;
ಮುಂದೆ ಬರುವಾಗೆಲ್ಲ ಬಲು ಹುಷಾರಿ!
ಮರೆಯದಿರು, ಕನಿಷ್ಠ ವರುಷಕೊಂದಾದರೂ ಬೇಕು ನಮಗೆ ಹೊಸ ಮಾದರಿ.
* * *
ಯುಗ ಯುಗದ ಹಾದಿಯಲಿ ನೆಳಲು ಬಿಚ್ಚಿದ ಬೋಧಿ
ಆಗಾಗ ಬಂದು ವಿಶ್ರಾಂತಿ ಪಡೆಯುವವಿಲ್ಲಿ ಈ ಜಗದ ಕರುಣೆ ಶಾಂತಿ;
ಎದೆಯ ಗುಹೆಯಲ್ಲಿ ಮಿಣುಕುತಿದೆ ‘ಕಲ್ಯಾಣವೆಂಬ ಪ್ರಣತಿ’
ಒಳಗು ಹೊರಗೆಲ್ಲ ಒಂದೆ ರೀತಿ.
ಯುದ್ಧ ರಂಗದಲಿ ಸನ್ನದ್ಧವಾಗಿದೆ ರಥವು
ಎಲ್ಲಿ ಆ ಸಾರಥಿ?
“ಓಡ್ಯಾವ ಏಳು ಕುದುರೀ ಮಬ್ಬು ಕೆದರೀ
ಮೂಡ್ಯಾವ ಏಳು ಬಣ್ಣಾ ತುಂಬಿ ಕಣ್ಣಾ
ನೋಡ್ಯಾವ ಬಯಲ ಸುತ್ತೀ ಬೆಳಕು ಬಿತ್ತೀ”
….. ಓ! ಇದು ಈಗ ನಮ್ಮ ಸರತಿ.
*****
