ನಸುಕಿನಲ್ಲಿ ಎಲ್ಲರಿಗಿಂತ ಮೊದಲೇ
ಎಲ್ಲಿಂದಲೋ ಕೂಗಿದ್ದು ಕೋಗಿಲೆಯೇ-
ಎಂದು ಕಿವಿ ನಂಬದಾಯ್ತು.
ಮನೆಯ ಪಕ್ಕದಲಿ ಹಕ್ಕಿ ಚಿಲಿಪಿಗುಟ್ಟಿದಾಗ-
ನಾಭಿ ಮೂಲದಿಂದ ಕಹಳೆಯ ಪಾಂಗಿನಂತೆ ಹೊಮ್ಮಿದ ‘ಕುಹೂ’
ಅದೇ ಅದೇ ಎಂದು ಖಾತ್ರಿಯಾಯ್ತು.
ಮಬ್ಬುಗತ್ತಲೆಯನ್ನು ಭೇದಿಸಿ ನಮಾಜಿನ ಆವಾಜು
ಆಕಾಶಕ್ಕೇರಿ ಇಳಿದಾಗ,
ದೂರದಿಂದ ಧಾವಿಸಿ ಬರುತ್ತಿದ್ದ ರೈಲಿನ ಸಿಳ್ಳು
ದಿಗಂತದ ನಸುಗೆಂಪನ್ನು ತಿದ್ದಿ ತೀಡಿ
ದೀರ್ಘರೇಖೆಯನ್ನೆಳೆದಾಗ,
ಸಂಧಿಕಾಲಕ್ಕೆ ಪ್ರಯಾಣ ಸಮೀಪಿಸಿತ್ತು.
ನಗರದ ಕೋಳಿಗಳಿಗೆ
ಬೀಸಾಗಿ, ಪಟಪಟ ರೆಕ್ಕೆ ಬಡಿದು
ಕೊರಳೆತ್ತಿ ಕೂಗುವಭ್ಯಾಸ ಮರೆತೇ ಹೋಗಿದೆ.
ಎಡೆಬಿಡದೆ ತತ್ತಿ ಇಡುವುದೊಂದೇ ಅವಕ್ಕೆ
ಮನುಷ್ಯ ವಹಿಸಿಕೊಟ್ಟಿರುವ ಕುಟುಂಬ ಯೋಜನೆ.
ಅದಕ್ಕಾಗಿ ಪಂಜರದಲ್ಲೆ ಪೌಷ್ಟಿಕಾಹಾರ, ಜೋಪಾಸನೆ.
ಕೋಗಿಲೆಯೊಂದು ಮಾತ್ರ ಇದುವರೆಗೆ
ಯಾರ ಕೈಗೂ ಸಿಗದೆ
ಸ್ವಚ್ಛಂದ ಹಾಡಿ ಬದುಕುತ್ತಿರುವುದೇ ಆಶ್ಚರ್ಯ.
ಕೋಗಿಲೆ-ನಮಾಜು-ರೈಲು
ಕಲೆ-ಧರ್ಮ-ವಿಜ್ಞಾನದ ಪೈಲು
ಪರಸ್ಪರ ಸಂಧಿಸಿ, ಸ್ಪಂದಿಸಿ ದಿನವೂ
ಹೀಗೆ ಬೆಳಗಾದರೆ? –
ಎಂದು ಪ್ರಶ್ನೆಯ ಬೆತ್ತ ಹಿಡಿದು
ಬೆಳಗಿನ ವಿಹಾರಕ್ಕೆ ನಾನು ಹೊರಬಿದ್ದೆ.
*****