ಪ್ರಜಾತಾಂತ್ರಿಕ ನ್ಯಾಯಾಧೀಶ

-ಬರ್ಟೋಲ್ಟ್ ಬ್ರೆಕ್ಟ್

ಅಮೆರಿಕಾದ ಪ್ರಜೆಗಳಾಗಲು ಬಯಸುವವರನ್ನು ಪರೀಕ್ಷಿಸುವ ನ್ಯಾಯಾಧೀಶನೊಬ್ಬ ಇದ್ದ. ಅವನ ಮುಂದೆ ಒಬ್ಬ ಇಟಾಲಿಯನ್ ಅಡುಗೆಭಟ್ಟ ಅರ್ಜಿ ಕೊಟ್ಟು ನಿಂತ. ಅವನಿಗೆ ಇಂಗ್ಲಿಷ್ ಗೊತ್ತಿರಲೇ ಬೇಕಲ್ಲ? ಜಡ್ಜಿ ಕೇಳಿದ: ‘ಎಂಟನೇ ಅಮೆಂಡ್‌ಮೆಂಟ್ ಏನು ಹೇಳುತ್ತೆ?’ ಚೂರೋ ಪಾರೊ ಇಂಗ್ಲಿಷ್ ಕಲಿತು ಬಂದಿದ್ದ ಇಟಾಲಿಯನ್ ಪಾಕಪ್ರವೀಣ ತಡವುತ್ತ ಉತ್ತರಕೊಟ್ಟ: `೧೪೯೨’. ಇಂಗ್ಲಿಷ್‌ ಭಾಷೆಯೇ ಅವನಿಗೆ ಗೊತ್ತಿಲ್ಲವೆಂದು ಅರ್ಜಿ ರದ್ದಾಯಿತು. ಅಮೆರಿಕಾಕ್ಕು ಹೊಸರುಚಿಯ ಇಟಾಲಿಯನ್ ಊಟ ಬೇಡವೆ? ಮೂರು ತಿಂಗಳು ಇಂಗ್ಲಿಷ್ ಕಲಿತು ನಮ್ಮ ಇಟಾಲಿಯನ್ ಅಡುಗೆಭಟ್ಟ ಜಡ್ಜಿನ ಎದುರು ಕೈಕಟ್ಟಿ ತಿರುಗಿ ಅದೇ ವಿನಯದಲ್ಲಿ ನಿಂತ. ಜಡ್ಜಿ ಪ್ರಶ್ನೆ ಬದಲಾಯಿಸಿದ: ‘ಸಿವಿಲ್ ವಾರ್‌ದಲ್ಲಿ ಗೆದ್ದ ಜನರಲ್ ಯಾರು?’ ದಿಟ್ಟದನಿಯಲ್ಲಿ ಇಟಾಲಿಯನ್ ಉತ್ತರಿಸಿದ: ‘೧೪೯೨’, ಮತ್ತೆ ಯಥಾಪ್ರಕಾರ ಅರ್ಜಿ ರದ್ದಾಯಿತು. ಮರಳಿಯತ್ನವ ಮಾಡು ಎಂಬುದರಲ್ಲಿ ನಂಬಿಕೆಯಿದ್ದ ಅಡುಗೆಯವನು ಮತ್ತೆ ಮೂರು ತಿಂಗಳನಂತರ ಬಂದ. ಜಡ್ಜಿ ಕೇಳಿದ: ‘ಎಷ್ಟು ವರ್ಷ ಅಮೆರಿಕಾದ ಚುನಾಯಿತ ಅಧ್ಯಕ್ಷನ ಅವಧಿ?’ ಅದೇ ಉತ್ತರ: ‘೧೪೯೨’, ಜಡ್ಜಿಗೆ ಅರ್ಥವಾಯಿತು. ಇವನು ಹೊಸ ಭಾಷೆ ಕಲಿಯಲಾರ. ‘ಹೇಗೆ ಬದುಕುತ್ತಿ?’ ಎಂದ. `ಕಷ್ಟಪಟ್ಟು ದುಡಿಮೆ ಮಾಡಿ’ ಮಾತಿಗೆ ತಡಕಾಡುತ್ತ ಈ ಪಾಕಪ್ರವೀಣ ಇಟಾಲಿಯನ್ ಹಾಗೂ ಹೀಗೂ ಹೇಗೋ ಅಂದ. ‘ಮೂರು ತಿಂಗಳು ಬಿಟ್ಟು ಮತ್ತೆ ಬಾ’ ಎಂದ ಜಡ್ಜಿ. ನಾಲ್ಕನೇ ಬಾರಿ ಬಂದವನನ್ನು ಜಡ್ಜಿ ಕೇಳಿದ: ‘ಅಮೆರಿಕಾ ದೇಶ ಡಿಸ್ಕವರ್ ಆದದ್ದು ಯಾವಾಗ?’ ನಮ್ಮ ಇಟಾಲಿಯನ್‌ನದು ಮತ್ತೆ ಅದೇ ಉತ್ತರ: `೧೯೪೨’.

ಸರಿಯಾದ ಉತ್ತರ ಕೊಟ್ಟನೆಂದು ಇಟಾಲಿಯನ್‌ಗೆ ಅಮೆರಿಕಾದ ಸಿಟಿಝನ್ ಶಿಪ್ಪು ಸಿಕ್ಕಿತು.
*****