ಕೋಗಿಲೆ


ಈಗ ತಾನೆ
ಬಂದಿತೇನೆ
ಮಧುರ ಕಂಠ ಕೋಗಿಲೇ?
ಜಗದ ಬಿನದ
ನಿನ್ನ ಮುದದ
ಗಾನವಾಯ್ತೆ ಒಮ್ಮೆಲೇ!


ಕೆಂಪು ತಳಿರು
ಕಂಪಿನಲರು
ಸೂಸುತಿಹುದು ಮಾಮರಾ
ಅಲ್ಲಿ ಕುಳಿತು
ಎಲ್ಲ ಮರೆತು
ಉಲಿಯುತಿರುವೆ ಸುಮಧುರಾ


ಗಾನ ಕೇಳಿ
ಮೌನ ತಾಳಿ
ಮೂಕವಾಯ್ತು ಭಾವನಾ
ಮನುಜಲೋಕ
ದಿವಿಜನಾಕ
ಗೈದ ಕುಹೂ ಕೂಜನಾ


ಎದೆಯು ಮಿಡಿದು
ತಾಳ ಹಿಡಿದು
ಕುಣಿಯುತಿಹುದು ಈ ಚಣಾ;
ರಸದ ಕಡಲು
ಹಿಗ್ಗಿನೊಡಲು
ತರತರಂಗ ಬಾಜನಾ.


ರಸದ ಚಿಲುಮೆ
ಹರಿಸಿ, ಒಲುಮೆ
ಸುಧೆಯ ನೀಡು ಕೋಗಿಲೇ
ಮೌನ ಧ್ಯಾನ
ನಿನಗೆ ಊನ
ಕುಕಿಲು ಜಾಣ ಕೋಗಿಲೆ.
*****