೧
ಸದುವಿನಯದ ತುಂಬಿದ ಕೊಡ
ತಂದಳು ನೀಲಾಂಬಿಕೆ,
ಕಲ್ಯಾಣದ ಅಂಗಳದಲಿ
ತಳಿ ಹೊಡೆದಳು ಛಂದಕೆ.
ಸಮಚಿತ್ತದ ರಂಗೋಲಿಯು
ಒಳಹೊರಗೂ ಧೂಪವು,
ಹಾರಾಡುವ ಹೊಸತಿಲಲ್ಲಿ
ಹೊಯ್ದಾಡದ ದೀಪವು.
೨
ಮಹಾಮನೆಯ ಮಹಾತಾಯಿ
ಮಾಸದ ಮಡಿ ಹಾಸಲು,
ದಾಸೋಹಕೆ ಮೀಸಲಾದ
ತೃಪ್ತಿಯ ನಗೆ ಸೂಸಲು,
ಎಲ್ಲೆಲ್ಲಿಯ ಗಣ ತಿಂಥಿಣಿ
ತಣಿದು ಹಾಡಿ ಹರಸಲು
ಭಕ್ತಿಯ ಭಂಡಾರ ತುಂಬಿ
ಹರಡಿರು ಬೆಳುದಿಂಗಳು.
೩
ಅಯ್ಯನ ಕೈ ನೋವುದೆನಲು
ಆಭರಣವ ಕೊಟ್ಟಳು-
ಅನುಭಾವದ ಅಲಂಕಾರ
ಆಚರಣೆಯ ತೊಟ್ಟಳು.
ನೆರಳಾದಳು ಬಸವಣ್ಣನ
ಹರಳಾದಳು ಬೆರಳಿಗೆ,
ಅರಳಾದಳು ಲಿಂಗದಲ್ಲಿ
ಪರಿಮಳಿಸುತ ಪೂಜೆಗೆ.
೪
ಏನು ನೋವೊ ಹೇಳಲಿಲ್ಲ
ಕೇಳಲಿಲ್ಲ ಮಡದಿಗೆ
ಹಾಗೆ ಹೊರಟು ಹೋದರಣ್ಣ
ಕಲ್ಯಾಣದ ಹುಡದಿಗೆ.
ಕೂಡಲದಲಿ ನೀರು ಹರಿದು
ತಿಳಿಗೊಂಡಿತು ಬನ್ನಿರಿ-
ನೀಲಾಂಬಿಕೆ ನೆನಪಾದಳು
ಬೇಗನೆ ಕರೆತನ್ನಿರಿ.
೫
ಕರಸ್ಥಲದಿ ಬಸವರೂಪು
ಪರಿಣಾಮವ ಮೀರಿಸಿ,
ಬಸವಯ್ಯನು ಮಾಡಿದಾಟ
ಲಿಂಗದೆಡೆಗೆ ತೋರಿಸಿ,
ಅಲ್ಲಿ ಇಲ್ಲಿ ಉಭಯವಳಿದು
ಅಂಗೈಯಲಿ ಸಂಗಮ
ಅಲ್ಲಿದ್ದರು, ಇಲ್ಲಿಲ್ಲವೆ?
ಜಗದ ಜೀವ ಜಂಗಮ.
೬
ನೀಲಾಂಬೆಯ ನಿಲವಿನಲ್ಲಿ
ಮಹಾಲಿಂಗ ಹೊಳೆಯಲು
ಬಸವಣ್ಣನ ಭಕ್ತಿ ಕಲಶ
ಸಂಗಮನಡಿ ತೊಳೆಯಲು-
ಗಾಳಿಯಲ್ಲಿ ಗಾಳಿಯಾಗಿ
ಮಹಾಬೆಳಗು ಸಂದಿತು:
ಪ್ರಾಣಲಿಂಗದಲ್ಲಿ ಕರಗಿ
ನೀಲಾಂಬರ ಮಿಂಚಿತು.
*****
೧೯೬೯