ನಾಯಕರ ಬೆಟ್ಟ ಕುಸಿಯುತ್ತಿದೆ

ನಾಯಕರ ಬೆಟ್ಟ ಕುಸಿಯಲಾರಂಭಿಸಿದ್ದು ಇತ್ತೀಚಿಗೆ. ಹೀಗೆಂದೇ ದೇಶದಲ್ಲಿ ಎಲ್ಲೆಲ್ಲೂ ಆತಂಕ ಗಾಬರಿ ವ್ಯಕ್ತವಾಗುತ್ತಿದೆ. ಮಲೆನಾಡಿನ ಪಶ್ಚಿಮ ಘಟ್ಟಗಳ ನಡುವೆ ಇದೊಂದು ಪ್ರಶಾಂತವಾದ ಸ್ಥಳ. ಸುಮಾರು ಆರು ನೂರು ಏಳು ನೂರು ಅಡಿ ಎತ್ತರದ ಬೆಟ್ಟ. ಮೇಲಿನ ಜಾಗ ಕೂಡ ವಿಸ್ತಾರವಾದುದಲ್ಲ. ನಾಯಕರ ಒಂದೇ ಒಂದು ಭಾರೀ ಮನೆ. ಅವರ ಆಳು ಕಾಳುಗಳ ಒಂದೆರಡು ಮನೆಗಳು. ಒಂದು ಈಜು ಕೊಳ. ಟೆನ್ನಿಸ್ ಆಟದ ಬಯಲು. ಕಾರಿನ ಶೆಡ್ಡು ಇತ್ಯಾದಿ. ಕೆಳಗಿನಿಂದ ಮೇಲಕ್ಕೆ ಸುತ್ತಿಕೊಂಡು ಹೋಗುವ ಒಂದು ಟಾರು ರಸ್ತೆ. ಪ್ರಕೃತಿಯ ವೈಚಿತ್ರ್ಯ ಅನ್ನೋ ಹಾಗೆ ಈ ನಾಯಕರ ಬೆಟ್ಟ ಕಾಣುತ್ತಿತ್ತು. ಬೆಟ್ಟದ ತುದಿಯಲ್ಲಷ್ಟೇ ಒಂದೆರಡು ಮರಗಳಿದ್ದವು. ಕೆಳಗಿನಿಂದ ಮೇಲಿನವರೆಗೆ ಸಪೂರಾಗುತ್ತ ಹೋದ ಕುತುಬ್‌ಮಿನಾರಿನಂತೆ ಇದರ ಮೈ ಗೋಚರಿಸುತ್ತಿತ್ತು. ಇದರ ಮೇಲೆಲ್ಲ ಗಿಡಗಳು ಪೊದೆಗಳು ಹುಲ್ಲು ಬೆಳೆದಿತ್ತು. ದೂರದಿಂದ ಈ ಬೆಟ್ಟ ಹಚ್ಚಿಟ್ಟ ಹಸಿರು ಮೇಣದ ಬತ್ತಿಯ ಹಾಗೆ ಕಾಣುತ್ತಿತ್ತು. ಮೇಲಿನ ನಾಯಕರ ಮಹಡಿ ಮನೆ ಉರಿಯುತ್ತಿರುವ ಜ್ವಾಲೆಯಂತೆ ತೋರುತ್ತಿತ್ತು.

ಸುತ್ತಮುತ್ತಲಿನ ಬೆಟ್ಟ ಗುಡ್ಡಗಳು ಮಲಗಿರುವ ಮದ್ದಾನೆಯಂತೆ. ಕಾಡು ಕೋಣಗಳಂತೆ ಬಿದ್ದುಕೊಂಡಿರಲು ಇದೊಂದೇ ಹೀಗೆ ಧುತ್ತೆಂದು ಎದ್ದು ನಿಂತದ್ದು ದೇಶದ ಪ್ರಕೃತಿಪ್ರಿಯರಿಗೆ, ಪ್ರವಾಸಿಗಳಿಗೆ ಒಂದು ಆಕರ್ಷಣೆಯೇ ಆಗಿತ್ತು. ಆಕಾಶವನ್ನು ತಿವಿಯುವಂತೆ ನಿಂತ ಈ ಬೆಟ್ಟವನ್ನು ನೋಡಲು, ಅದರ ಸೊಬಗನ್ನು ಸವಿಯಲು ಸಾಕಷ್ಟು ಜನ ಬಂದು ಹೋಗುತ್ತಿದ್ದರು. ಈ ಬೆಟ್ಟದ ಸನಿಹದಲ್ಲೇ ಮೂರು ನಾಲ್ಕು ಕಡೆಗಳಲ್ಲಿ ಸರ್ಕಾರ ವೀಕ್ಷಕ ತಾಣಗಳನ್ನು ನಿರ್ಮಿಸಿ ಜನ ಇದನ್ನು ನೋಡುವಂತೆ ಅನುಕೂಲ ಕಲ್ಪಿಸಿಕೊಟ್ಟಿತ್ತು.

ಹಾಗೆಂದು ಈ ಬೆಟ್ಟದ ಮೇಲೆ ಹೋಗಲು ಬೇರೆ ಯಾರಿಗೂ ಅವಕಾಶವಿರಲಿಲ್ಲ. ಬೆಟ್ಟದ ಬುಡದಲ್ಲಿಯೇ ಒಂದು ಕಬ್ಬಿಣದ ಗೇಟು ರಸ್ತೆಗೆ ಅಡ್ಡಲಾಗಿ ಕಾಣುತ್ತಿತ್ತು. ಈ ಗೇಟಿನ ಬಳಿ ಸದಾ ಕಾವಲು ಕಾಯುವ ಆರಕ್ಷಕರು ಕೈಯಲ್ಲಿ ಬಂದೂಕು ಹಿಡಿದು ಗಸ್ತು ತಿರುಗುತ್ತಿದ್ದರು. ನಾಯಕರು ನಾಯಕರ ಪರಿವಾರ ಅವರಿಗೆ ಬೇಕಾದವರಿಗಷ್ಟೇ ಈ ಗೇಟಿನ ಮೂಲಕ ಒಳಗೆ ಹೋಗಲು ಅಪ್ಪಣೆ ದೊರೆಯುತ್ತಿತ್ತು. ಹೀಗಾಗಿ ಈ ಬೆಟ್ಟದ ಮೇಲಿನಿಂದ ಸುತ್ತಲಿನ ದೃಶ್ಯ ಹೇಗೆ ಕಾಣುತ್ತದೆಂದಾಗಲಿ, ಆ ಬೆಟ್ಟದ ಮೇಲೆ ಏನೇನಿದೆ ಎಂಬುದಾಗಲಿ ಹೆಚ್ಚು ಜನರಿಗೆ ತಿಳಿದಿರಲಿಲ್ಲ.

ಈ ಬೆಟ್ಟ ಈ ಸ್ಥಳದಲ್ಲಿ ಶತಮಾನಗಳಿಂದ ಇತ್ತು ಎಂಬ ಬಗ್ಗೆ ಸಂದೇಹವಿಲ್ಲ. ಹಿಂದೆ, ಬಹಳ ಹಿಂದೆ ಈ ಬೆಟ್ಟದ ಮೇಲೆ ವಿಜಯನಗರದ ಅರಸರು ವಿಹಾರಕ್ಕಾಗಿ ಅರಮನೆಯನ್ನು ಕಟ್ಟಿಕೊಂಡಿದ್ದರಂತೆ. ಇದಕ್ಕೆ ಆಧಾರವಾಗಿ ಒಂದೆರಡು ಶಿಲಾಶಾಸನಗಳು ಈಗಲೂ ಇಲ್ಲಿ ಗಿಡ ಪೊದೆಗಳ ಮರೆಯಲ್ಲಿ ನಿಂತಿವೆ ಅನ್ನುತ್ತಾರೆ. ವಿಜಯನಗರದ ಅರಸರ ನಂತರ ಮೊನ್ನೆ ಮೊನ್ನೆ ಟಿಪ್ಪು ಸುಲ್ತಾನ ಕೂಡ ಇಲ್ಲಿ ಬಂದು ತಂಗುತ್ತಿದ್ದ ಅನ್ನುವುದಕ್ಕೆ ಆಧಾರವಾಗಿ ಮೂಲೆಯಲ್ಲಿ ಒಂದು ನಮಾಜಿನ ಮಂಟಪವಿರುವುದೇ ಸಾಕ್ಷಿ. ನಂತರ ಬ್ರಿಟಿಷರು ಈ ಗುಡ್ಡವನ್ನೇರಿದರು. ಇದಕ್ಕೆ ಆಧಾರವೆಂದರೆ ಬೆಟ್ಟದ ಮತ್ತೊಂದು ಮೂಲೆಯಲ್ಲಿರುವ ಶಿಲುಬೆ. ಇವರೆಲ್ಲರ ಕತೆ ಮುಗಿದ ಮೇಲೆ ಈ ಬೆಟ್ಟವನ್ನೇರಿದವರು ನಮ್ಮ ನಾಯಕರು.

ರಾಜಧಾನಿಗಿಂತ ಈ ಬೆಟ್ಟವೇ ಸುರಕ್ಷಿತ ಎಂದು ನಾಯಕರು ನಿರ್ಧರಿಸಿದರು. ಅಲ್ಲದೆ ಜನತೆಯ ಸಾವಿರಾರು ಸಮಸ್ಯೆಗಳನ್ನು ಬಿಡಿಸಲು, ಈ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಜನತೆಯನ್ನು ಕಿತ್ತು ತಿನ್ನುತ್ತಿರುವ ಬಡತನ, ಅಜ್ಞಾನ, ರೋಗ, ಮೌಢ್ಯ, ಶೋಷಣೆ ಇತ್ಯಾದಿಗಳಿಂದ ಜನತೆಯನ್ನು ಪಾರುಮಾಡಲು ಪರಿಹಾರ ಶೋಧಿಸಲು ಇಂತಹ ತಾಣ ಬೇಕೇಬೇಕು ಎಂದು ನಾಯಕರಿಗೆ ಅನಿಸಿದ್ದರಿಂದ ನಾಯಕರು ತಮ್ಮ ವಾಸಕ್ಕೆ ಬೆಟ್ಟವನ್ನು ಆರಿಸಿಕೊಂಡರು.

ಹೀಗಾಗಿ ಕೂಡಲೇ ಈ ಬೆಟ್ಟಕ್ಕೆ ವಾಹನ ರಸ್ತೆಯಾಯಿತು. ಹಿಂದಿನ ಮೆಟ್ಟಿಲು ದಾರಿ ಕುದುರೆ ಏರಿಗಳನ್ನು ನಾಶಮಾಡಿ ಸುಂದರವಾದ ಟಾರುರಸ್ತೆಯನ್ನು ನಿರ್ಮಾಣ ಮಾಡಿದರು. ಸಿಕ್ಕವರೆಲ್ಲ ಒಳಗೆ ಬಂದು ಧಾಂದಲೆ ಮಾಡದಿರಲೆಂದು ಕೆಳಗೆ ಗೇಟು ಇರಿಸಿದರು. ಅದನ್ನು ಕಾಯಲು ಆರಕ್ಷಕ ಪಡೆ ಬಂದಿತು. ನಾಯಕರ ಬೆಟ್ಟವನ್ನು ನಾಯಕರ ಅಧಿಕೃತ ನಿವಾಸವೆಂದು ಸಾರಲಾಯಿತು. ಬೆಟ್ಟದ ಮೇಲಿನ ವ್ಯವಸ್ಥೆಗಳಲ್ಲಿ ಅತ್ಯಾಧುನಿಕ ಬದಲಾವಣೆಗಳಾದವು. ಟಿಪ್ಪು, ಬ್ರಿಟಿಷರು ಮಾಡಿಕೊಂಡಿದ್ದ ಹಿಂದಿನ ವ್ಯವಸ್ಥೆಗಳನ್ನೆಲ್ಲ ಕಿತ್ತುಹಾಕಲಾಯಿತು. ನಾಯಕರು ತಮ್ಮ ಪರಿವಾರದವರೊಡನೆ, ಸ್ನೇಹಿತರೊಡನೆ ಈ ಬೆಟ್ಟದ ಮೇಲಿನ ಬಂಗಲೆಯಲ್ಲಿ ವಾಸಿಸುತ್ತ ದೇಶದ ಸಮಸ್ಯೆಗಳಿಗೆ ಪರಿಹಾರ ಹುಡುಕತೊಡಗಿದರು.

ಈ ಕೆಲಸ ಆರಂಭವಾಗಿ ಕೆಲ ವರ್ಷಗಳಾಗಿವೆ ಅನ್ನುವಾಗ, ಆಗ ಈ ಕದ ಗಾಬರಿಯ ಸುದ್ದಿ ಬಂದಿವೆ. ನಾಯಕರ ಬೆಟ್ಟ ಕುಸಿಯುತ್ತಿದೆ.

ಈ ನಾಯಕರ ಬೆಟ್ಟದ ಕೆಳಗೆ ಒಂದು ಹಳ್ಳಿ ಇದೆ. ಬೆಟ್ಟದ ಹಳ್ಳಿ ಎಂದೇ ಅದರ ಹೆಸರು. ಬೆಟ್ಟದ ಬುಡಕ್ಕೆ ಅಂಟಿಕೊಂಡಂತೆ ಬೆಟ್ಟದ ಸುತ್ತಲೂ ಹತ್ತು ಮನೆಗಳಿವೆ. ಶತಮಾನಗಳಿಂದ ಈ ಹಳ್ಳಿ ಇಲ್ಲಿದೆ ಎಂದು ನಂಬಲು ಕೂಡ ಹಲವು ಆಧಾರಗಳಿವೆ. ವಿಜಯನಗರದ ಅರಸರ ಕಾಲದ ಒಂದು ಕೆರೆ, ಒಂದು ಹಾಳು ಗುಡಿ, ಫಿರಂಗಿಗಳು ಈ ಹಳ್ಳಿಯ ಬಳಿ ದೊರೆಯುತ್ತದೆ. ಈ ಹಳ್ಳಿ ಮನೆಗಳಲ್ಲಿ ವಾಸವಾಗಿರುವ ಜನ ಕೂಡ ತಾವು ಶತಮಾನಗಳಿಂದ ಇಲ್ಲಿ ಇದ್ದುದಾಗಿ ಹೇಳುತ್ತಾರೆ. ನಮ್ಮ ತಾತ ಮುತ್ತಾತ ಕೂಡ ಇಲ್ಲೇ ಇದ್ದು ಸತ್ತದ್ದು ಎನ್ನುತ್ತಾರೆ.

ಈ ಜನ ದರಿದ್ರರಲ್ಲಿ ದರಿದ್ರರು. ಇವರ ಮೈಯಲ್ಲಿ ನಾಲ್ಕು ಬೊಗಸೆ ರಕ್ತ ನಾಲ್ಕು ಕಂಟದಷ್ಟು ಮಾಂಸ ಸಿಕ್ಕರೆ ಹೆಚ್ಚು. ಗಾಳಿಯಲ್ಲಿ ತೇಲಾಡಿಕೊಂಡೇ ಈ ಜನ ಬದುಕುತ್ತಾರೆ. ಹೊಟ್ಟೆಗೆ ಕೂಡ ಇವರು ತಿನ್ನುವುದು ಗಾಳಿಯನ್ನೇ. ಮೈ ತುಂಬ ಬಟ್ಟೆಯನ್ನು ಕಂಡವರಲ್ಲ. ಗಂಡಸರಿಗೆಲ್ಲ ತೊಡೆ ಸಂದಿಯಲ್ಲಿ ತೂಗಾಡುವ ಒಂದೊಂದು ಲಂಗೋಟಿ. ಹೆಂಗಸರಿಗೆ ತುಂಡು ಸೀರೆ. ಮಕ್ಕಳಿಗೆ ಏನೂ ಇಲ್ಲ. ನೀರು ಕಂಡವರಲ್ಲ. ಮೈ ಸದಾ ಕೊಳೆತು ನಾರುತ್ತಿರುತ್ತದೆ. ಕಜ್ಜಿಯೇ ಮೊದಲಾದ ರೋಗಗಳು ಇವರಲ್ಲಿ ಸಾಮಾನ್ಯ. ದೊಡ್ಡವರಲ್ಲಿ ಹಲವರಿಗೆ ದಮ್ಮು, ಕೆಮ್ಮು, ಕ್ಷಯ, ವಾತ, ಪಿತ್ತ, ಮೂಲವ್ಯಾಧಿ, ಕುಷ್ಠ – ಹೀಗೆ ದೊಡ್ಡ ರೋಗಗಳು. ಬೆಟ್ಟದ ಹಳ್ಳಿಗೆ ಆಸ್ಪತ್ರೆ ಇಲ್ಲ. ರಸ್ತೆ ಇಲ್ಲ. ಮೋಟಾರು ಅಲ್ಲಿಗೆ ಬರೋದಿಲ್ಲ. ಹೊರಗಿನವರಿಗೆ ಯಾರಿಗೂ ಇಲ್ಲೊಂದು ಹಳ್ಳಿ ಇದೆ ಅನ್ನುವ ವಿಷಯವೇ ಗೊತ್ತಿಲ್ಲ.

ಹಿಂದೆಲ್ಲಾ ಈ ಹಳ್ಳಿಗೆ ರಾಜಗೌರವ ಇತ್ತಂತೆ. ಹೀಗೆಂದು ಹಳ್ಳಿಯ ಹಿರಿಯ ಫಕೀರಣ್ಣ ಆಗಾಗ್ಗೆ ಹೇಳುವುದುಂಟು. ಅವನ ಅಜ್ಜ ಹೇಳುತ್ತಿದ್ದುದನ್ನು ಈತ ಕನವರಿಸಿಕೊಳ್ಳುತ್ತಾನೆ. ವಿಜಯನಗರದ ಅರಸರು ಹಳ್ಳಿಯ ಜನರಿಗೆ ಪಡಿ ಹಂಚುತ್ತಿದ್ದರಂತೆ. ಬೊಕ್ಕಸದಿಂದ ಹಣ ಕೊಡುತ್ತಿದ್ದರಂತೆ. ಈಗ ಹಾಳುಬಿದ್ದಿರುವ ಕೆರೆಯನ್ನು ವಿಜಯನಗರದ ಮಂತ್ರಿ ಬೊಪ್ಪಣ್ಣ ಕಟ್ಟಿಸಿದ್ದು ಎಂದು ಹೇಳುತ್ತಾರೆ. ನಂತರ ಕೂಡ ಈ ಹಳ್ಳಿಯ ಜನರ ಸ್ಥಿತಿ ಅನುಕೂಲಕರವಾಗಿಯೇ ಇತ್ತಂತೆ. ಬ್ರಿಟಿಷರು ಕೂಡ ಈ ಹಳ್ಳಿಯನ್ನು ಮರೆತಿರಲಿಲ್ಲ. ಈಗ ಮಾತ್ರ ಹಳ್ಳಿಯ ಬಗ್ಗೆ ಯಾರಿಗೂ ಗಮನವಿಲ್ಲ.

ಹಳ್ಳಿ ಮನೆಗಳ ಎದುರು ಗೇಣಗಲ ಜಮೀನಿದೆ. ಈ ಜಮೀನಿನಲ್ಲಿ ಹಳ್ಳಿ ಜನ ನವಣೆ, ರಾಗಿ ಬೆಳೆದುಕೊಳ್ಳುತ್ತಾರೆ. ಕೆರೆ ಹೂಳುಬಿದ್ದಿದೆ. ಬಾವಿಯಲ್ಲಿ ನೀರಿಲ್ಲ. ಬೆಟ್ಟದ ಮೇಲಿನಿಂದ ಬರುವ ನೀರನ್ನೇ ಕುಡಿಯಲು ಈ ಜನ ಉಪಯೋಗಿಸಬೇಕು.

ಜೊತೆಗೆ ಈ ಜನರಿಗೆ ತಲೆತಲಾಂತರದಿಂದ ಬಂದ ಒಂದು ಕೆಲಸವಿದೆ. ಅದು ನಾಯಕರ ಬೆಟ್ಟಕ್ಕೆ ಮಣ್ಣು ಮೆತ್ತುವ ಕೆಲಸ. ಬೆಟ್ಟದ ಹಳ್ಳಿಯ ಹತ್ತು ಮನೆಗಳೂ ಬೆಟ್ಟದ ಬುಡಕ್ಕೆ ಅಂಟಿಕೊಂಡಿದೆ ಎಂದು ಹೇಳಿದೆವಲ್ಲ. ಈ ಮನೆಗಳ ಹಿಂಬದಿಯ ಗೋಡೆಯೇ ನಾಯಕರ ಬೆಟ್ಟದ ಬೆನ್ನು. ಈ ಬೆನ್ನಿಗೆ ಗೋಡೆ ಕುಸಿಯದ ಹಾಗೆ, ಬಿರುಕು ಬಿಡದ ಹಾಗೆ, ಬಿರಿಯದ ಹಾಗೆ, ಹಿಸಿದು ಬೀಳದ ಹಾಗೆ ಈ ಜನ ನೋಡಿಕೊಳ್ಳಬೇಕು. ಹೀಗೇನಾದರೂ ಬೆಟ್ಟದ ಬುಡ ಜರಿದರೆ ಕುಸಿದರೆ ತಮ್ಮ ಹಳ್ಳಿಯೇ ನಾಶವಾಗಿಬಿಡುತ್ತದೆ ಎಂಬುದು ಇವರ ಭೀತಿ. ಇದು ಸತ್ಯವೂ ಹೌದು. ಈ ಜನ ಬೆಟ್ಟದ ಬುಡ ಕುಸಿಯಲು ಅವಕಾಶ ಮಾಡಿಕೊಟ್ಟರೆ ಇಡೀ ಬೆಟ್ಟ ಈ ಹಳ್ಳಿಯ ಮೇಲೆ ಕವಚಿಕೊಳ್ಳುತ್ತದೆ. ಇಡೀ ಹಳ್ಳಿ ನಾಶವಾಗುತ್ತದೆ. ಹಾಗೆಂದೇ ಈ ಜನ ಯಾವ ಕೆಲಸ ಮರೆತರೂ ಬೆಟ್ಟದ ಬುಡಕ್ಕೆ ಮಣ್ಣು ಮೆತ್ತುವ ಕೆಲಸ ಬಿಡುವುದಿಲ್ಲ.

ಕುಡಿಯಲು, ಸ್ನಾನ ಮಾಡಲು, ತಿಕ ತೊಳೆಯಲು ನೀರಿಲ್ಲವಾದರೂ ಮಣ್ಣು ಕಲೆಸಲು ನೀರು ಹೊಂದಿಸಿಕೊಳ್ಳುತ್ತಾರೆ. ಗದ್ದೆಯ ಅಂಟು ಮಣ್ಣನ್ನೇ ಅಗೆದು, ಕಲೆಸಿ, ತುಳಿದು ಉಂಡೆಕಟ್ಟುತ್ತಾರೆ. ಹೀಗೆ ಕಟ್ಟಿದ ಉಂಡೆಗಳನ್ನು ತಂದು ಬೆಟ್ಟದ ಬುಡವನ್ನು ಭದ್ರಪಡಿಸುತ್ತಾರೆ. ಬುಡದ ಗೋಡೆಗೆ ಮೆತ್ತಿ ಮೆತ್ತಿ ಬೆಟ್ಟವನ್ನು ಗಟ್ಟಿಯಾಗಿಸುತ್ತಾರೆ. ಕೈಲಾಗದ ಫಕೀರಣ್ಣ, ಸೊಂಟ ಬಿದ್ದಿರುವ ಮಾರಜ್ಜ, ಪಾರ್ಶ್ವವಾಯು ಪೀಡಿತ ದಾಮಯ್ಯ, ಬಾವಿ ಕಟ್ಟೆ ಮರಿಯ, ಕೆರೆಕೋಡಿ ಹನುಮಜ್ಜ, ಬೇಲಿಗದ್ದೆ ಕಾಳಮ್ಮ, ತುಟಿಹರಕಿ ಕರಿಯಮ್ಮ ಹೀಗೆ ಎಲ್ಲ ಹತ್ತು ಮನೆಗಳವರು ಸದಾ ತಮ್ಮ ನೋಟವನ್ನು ಹಿಂಬದಿಯ ಗೋಡೆಯ ಮೇಲೆ ಇರಿಸಿಕೊಂಡೇ ಬದುಕುತ್ತಾರೆ. ಬೆಳಿಗ್ಗೆ ಎದ್ದಾಗೊಮ್ಮೆ ನಡುನೆತ್ತಿಗೆ ಸೂರ್ಯ ಬಂದಾಗೊಮ್ಮೆ ರಾತ್ರಿ ಮಲಗುವಾಗೊಮ್ಮೆ ಈ ಗೋಡೆಯನ್ನು ಅವರು ನೋಡಿಯೇ ನೋಡುತ್ತಾರೆ. ಹೀಗೆ ನೋಡಬೇಕೆಂದು ಹಿರಿಯರು ಶಾಸ್ತ್ರ ಬೇರೆ ಮಾಡಿದ್ದಾರೆ. ಗೋಡೆ ದೇವರು ಗೋಡೆ ದೇವರು ಈ ಗೋಡೆಯನ್ನವರು ಕರೆಯುತ್ತಾರೆ. ಹಬ್ಬ ಹರಿದಿನಗಳಲ್ಲಿ ಈ ಗೋಡೆ ದೇವರಿಗೆ ಸುಣ್ಣ ಹಚ್ಚುತ್ತಾರೆ. ಮಾವಿನ ಎಲೆ, ಚೆಂಡು ಹೂವು ತಂದು ಈ ಗೋಡೆಯನ್ನು ಪೂಜಿಸುತ್ತಾರೆ. ಗೋಡೆ ಗೋಡೆ ದೇವರು ಬಿರುಕುಬಿಟ್ಟರೆ, ಗೋಡೆಯಿಂದ ಮಣ್ಣು ಉದುರಿದರೆ, ಹೆಂಟೆ ಬಿದ್ದರೆ ಗೋಡೆ ದೇವರ ಮೈಯಿಂದ ಕಲ್ಲು ಜರಿದು ಬಿದ್ದರೆ ಅಪಶಕುನ ಎಂದು ನಂಬುತ್ತಾರೆ. ಈ ಗೋಡೆಯನ್ನು ಇಲಿ ಹೆಗ್ಗಣ ಕೊರೆಯಬಾರದು, ಈ ಗೋಡೆಯ ಮೇಲೆ ಗಿಡ ಮರ ಬೆಳೆಯಬಾರದು, ಗೆದ್ದಲು ಹತ್ತಬಾರದು ಎಂಬ ನಂಬಿಕೆ ಬೇರೆ ಇದೆ. ಆಗಾಗ್ಗೆ ಹನ್ನೆರಡು ವರ್ಷಕ್ಕೊಂದು ಬಾರಿ ಈ ಗೋಡೆಗೆ ಸುಣ್ಣ ಬೆಲ್ಲ ಸುಟ್ಟ ಇಟ್ಟಿಗೆ ಇತ್ಯಾದಿ ಅರೆದು ಗಾರೆ ಮಾಡಿ ಹಚ್ಚಬೇಕು ಎಂಬ ನಂಬಿಕೆ ಕೂಡ ಜನರಲ್ಲಿದೆ. ಒಟ್ಟಿನಲ್ಲಿ ಈ ಹತ್ತು ಮನೆಗಳಲ್ಲಿಯ ಜನರ ಜೀವನದಲ್ಲಿ ಈ ನಾಯಕರ ಬೆಟ್ಟದ ಬುಡವನ್ನು ರಕ್ಷಿಸಿ ಇಡುವುದರಲ್ಲೇ ಸವೆದು ಹೋಗುತ್ತದೆ.

ಈ ವಿಷಯ ನಾಯಕರಿಗೆ ಗೊತ್ತಿಲ್ಲವೆಂದಲ್ಲ. ಅವರಿಗೂ ಗೊತ್ತಿದೆಯಂತೆ. ಹೀಗೆಂದು ಈ ಹಳ್ಳಿ ಜನರ ಅಭಿವೃದ್ಧಿಗಾಗಿ ಅವರು ಒಂದು ಯೋಜನೆಯನ್ನು ಸಿದ್ಧಪಡಿಸುತ್ತಿದ್ದಾರಂತೆ, ಈ ಯೋಜನೆ ಸಂಪೂರ್ಣವಾಗಿ ಸಿದ್ಧವಾದಾಗ ಈ ಹಳ್ಳಿ ಜನರ ಕಷ್ಟ ದೂರವಾಗುತ್ತದೆ. ಇವರ ರೋಗರುಜಿನಗಳೆಲ್ಲ ಓಡಿ ಹೋಗುತ್ತವೆ. ಎಲ್ಲರಿಗೂ ಶಿಕ್ಷಣ ದೊರೆಯುತ್ತದೆ. ಎಲ್ಲರಿಗೂ ಸಾಕಷ್ಟು ಹೊಲ ಗದ್ದೆಗಳು ಸಿಗುತ್ತದೆ. ಬಡತನವೆನ್ನುವುದೇ ಇರುವುದಿಲ್ಲ. ಹಳ್ಳಿಯಲ್ಲಿ ಹಾಲು ಹಯನು ಹರಿಯುತ್ತದೆ. ಹಳ್ಳಿಗೆ ಬಸ್ಸು ಬರುತ್ತದೆ. ಆಸ್ಪತ್ರೆ, ನಲ್ಲಿ, ವಿದ್ಯುತ್‌ದೀಪ, ಸಿನೀಮಾ, ರೇಡಿಯೋ ಎಲ್ಲ ಬರುತ್ತದೆ ಎಂದು ನಾಯಕರೇ ಹೇಳಿದ್ದಾರೆ. ಆದರೆ ಈ ಮಾತು ಹೇಳಿ ಆಗಲೇ ಮೂರು “ಐದು ವರ್ಷಗಳು” ಉರುಳಿಹೋಗಿವೆ. ಏನೂ ಆಗಿಲ್ಲ. ಏನೂ ಬಂದಿಲ್ಲ. ಜನ ಗೋಡೆ ದೇವರ ಪೂಜೆ ಮಾಡುತ್ತಾ ಬಡವರಾಗಿ ಮುದುಕರಾಗಿ ಹೋಗುತ್ತಿದ್ದಾರೆ. ಹಳಬರು ಸತ್ತು, ಹೊಸಬರು ಮುದುಕರಾಗುತ್ತಿದ್ದಾರೆ.

ಈ ಸಂದರ್ಭದಲೇ ಕೇಳಿ ಬಂದಿದೆ ಈ ಸುದ್ದಿ – ನಾಯಕರ ಬೆಟ್ಟ ಕುಸಿಯುತ್ತಿದೆಯಂತೆ!

ಈ ಬಗೆಯ ಮಾತು ಹಿಂದೆಂದೂ ಕಿವಿಗೆ ಬಿದ್ದಿರಲಿಲ್ಲ, ಹೀಗೆ ಆದೀತೆಂದು ಕೂಡ ಯಾರೂ ಅಂದುಕೊಂಡಿರಲಿಲ್ಲ. ಈ ಬಗೆಯ ಭಯಾನಕ ಕಲ್ಪನೆ ಅವರ ಮನಸ್ಸಿನಲ್ಲಿ ಮೂಡುವುದು ಕೂಡ ಸಾಧ್ಯವಿರಲಿಲ್ಲ. ಆದರೂ ಕೂಡ ಈ ಮಾತು ಕೇಳಿ ಬಂದಿತ್ತು. ನಾಯಕರ ಗುಡ್ಡ ಕುಸಿಯಲಾರಂಭಿಸಿತ್ತು. ಇದಕ್ಕೆ ಕಾರಣ ಕೆರೆಕೋಡಿ ಹನುಮನ ಮಗ ದ್ಯಾವ ಎಂಬುದು ಹಳ್ಳಿಯ ಎಲ್ಲರಿಗೂ ಗೊತ್ತಿತ್ತು.

ದ್ಯಾವ ಹಳ್ಳಿಯಲ್ಲಿ ಇದ್ದವನಲ್ಲ, ಅವನಿಗೆ ಎಂಟೋ ಒಂಬತ್ತೋ ವರ್ಷವಾಗಿದ್ದಾಗ ಅವನು ಹಳ್ಳಿಯಿಂದ ಓಡಿ ಹೋಗಿದ್ದ. ಕೆರೆಕೋಡಿ ಹನುಮನ ಮಗ ಓಡಿ ಹೋದನೆಂದು ಗೋಳಾಡಲಿಲ್ಲ. ಇಲ್ಲಿ ಸುಖವಾಗಿದ್ದರೆ ಮಗ ಓಡಿ ಹೋಗಿ ಏನು ಕಷ್ಟ ಅನುಭವಿಸಿದ್ದಾನೋ ಆತಂಕಪಡಬಹುದು. ಆದರೆ ಇಲ್ಲಿ ನಿತ್ಯ ನರಕ, ಓಡಿ ಹೋದ ಕಡೆಯಲ್ಲಾದರೂ ಅವರು ಸುಖವಾಗಿ ಇರಲಿ ಎಂದು ದ್ಯಾವ ಗೋಡೆ ದೇವರಿಗೆ ಕೈ ಮುಗಿದ.

ಹೀಗೆ ಓಡಿ ಹೋದ ದ್ಯಾವ ಅಷ್ಟು ಎತ್ತರಕ್ಕೆ ಬೆಳೆದಾಗ ತಿರುಗಿ ಬಂದ. ತುಟಿ ಮೇಲೆ ಚಿಗುರು ಮೀಸೆ. ಕಣ್ಣಿನಲ್ಲಿ ಹೊಳಪು, ತೋಳಿನಲ್ಲಿ ಪುಟಿದೇಳುವ ಮಾಂಸಖಂಡ, ಒಳ್ಳೆಯ ಅಂಗಿ ಪಂಚೆ, ಕಾಲಲ್ಲಿ ಮೆಟ್ಟು, ದ್ಯಾವನನ್ನು ನೋಡಿ ಹಳ್ಳಿ ಮಂದಿಗೆಲ್ಲ ಸಂತಸ ಸಂಭ್ರಮ.

ದ್ಯಾವ ಬಂದವನೇ ಮನೆ ಮನೆಗೆ ಹೋಗಿಬಂದ. ಜಗಲಿಯ ಮೇಲೆ ಕುಳಿತು ಫಕೀರಜ್ಜ, ಮಾರಣ್ಣ, ದಾಮಯ್ಯ, ಮರಿಯ, ಕಾಳಮ್ಮ, ಕರಿಯಮ್ಮರ ಹತ್ತಿರ ಮಾತನಾಡಿದ. ಕಜ್ಜಿ ಹತ್ತಿದ ಮಕ್ಕಳನ್ನು ಮಾತನಾಡಿಸಿದ. ರೋಗ ಪೀಡಿತರ ಬಳಿ ಹೋಗಿ ಕುಳಿತು ಕ್ಷೇಮ ಸಮಾಚಾರ ಕೇಳಿದ. ಹಿಂದಿನ ಅದೇನನ್ನೊ ನೆನಪಿಸಿಕೊಂಡವನ ಹಾಗೆ ಮನೆಗಳ ಒಳಹೊಕ್ಕು ಗೋಡೆಯ ಎದುರು ನಿಂತು ನೋಡಿದ. ಆ ಜನ ಬೆದರಿಕಂಗಾಲಾಗುವಂತೆ ಒಂದು ಪ್ರಶ್ನೆ ಹೇಳಿದ – “ಇದೇನು? ಈ ಗೋಡೆಗೆ ಮಣ್ಣು ಮೆತ್ತಿ ನೀವೇಕೆ ಭದ್ರಪಡಿಸಬೇಕು? ಇದನ್ನು ದೇವರೆಂದು ಏಕೆ ಪೂಜೆ ಮಾಡಬೇಕು?” ಜನ ಹೆದರಿದರು. “ಹೀಗೆ ಕೇಳಲುಂಟೆ ಮಗ?” ಎಂದು ಪ್ರಶ್ನಿಸಿದರು. ಇಲ್ಲ, ಇಲ್ಲ, ಇದರಲ್ಲಿ ಬೇರೆ ಏನೋ ಕರಾಮತ್ತಿದೆ ಎಂದು ತಲೆ ಕೊಡವಿಕೊಂಡು ಹೊರಟ. ಹೊರಟವ ಮತ್ತೆ ಆ ರಾತ್ರಿ ಹಳ್ಳಿಯಿಂದ ಕಾಣೆಯಾದ. ಹೀಗ ಕಾಣೆಯಾದವನು ಹಳ್ಳಿಯಲ್ಲಿ ಕಾಣಿಸಿಕೊಂಡಿದ್ದು ಮೂರನೇ ದಿನ. ಈ ಬಾರಿ ದ್ಯಾವ ವ್ಯಗ್ರನಾಗಿದ್ದ, ಉಗ್ರನಾಗಿದ್ದ. ಹಳ್ಳಿಗರ ಮೋರೆ ಮೂತಿ ನೋಡದೆ ಬೈಯುತ್ತಿದ್ದ, ಹಳಿಯುತ್ತಿದ್ದ. ಆ ರಾತ್ರಿ ಹಳ್ಳಿಯ ಎಲ್ಲರೂ ತನ್ನ ಮನೆ ಅಂಗಳದಲ್ಲಿ ನೆರೆಯಬೇಕೆಂದು ಹೇಳಿ ಕಳುಹಿಸಿದ. ದ್ಯಾವನ ಮೇಲೆ ಅದೇಕೋ ವಿಶ್ವಾಸ ಇರಿಸಿಕೊಂಡಿದ್ದ ಜನ ಬಂದರು. ಮುದುಕರು, ರೋಗಗ್ರಸ್ತರು, ಉಸುರಿಲ್ಲದವರು ತೆವಳಿಕೊಂಡು, ನಡೆದುಕೊಂಡು ಬಂದರು. ಹೆಂಗಸರು, ಗಂಡಸರು, ಬಾವಿಕಟ್ಟೆ ಕೆರೆದಂಡೆಯನ್ನು ಬಳಸಿಕೊಂಡುಬಂದರು. ಎದೆ ಬತ್ತಿ ಹೋದ ತರುಣಿಯರು, ಸೊಂಟದಲ್ಲಿ ಬಲವಿಲ್ಲದ ತರುಣರು ಬಂದರು. ತಲೆಯ ಮೇಲೆ ಕವಚಿಕೊಂಡ ಆಕಾಶದಲ್ಲಿ ನಕ್ಷತ್ರಗಳು ಮಿನುಗುತ್ತಿರಲು ತನ್ನ ಅಂಗಳದಲ್ಲಿ ನೆರೆದ ತನ್ನವರನ್ನು ಬಿಡಿಬಿಡಿಯಾಗಿ ದಿಟ್ಟಿಸಿ ನೋಡಿದ. ದ್ಯಾವ, ಎದೆಯ ಮೇಲೆ ಕಾಡುಹಂದಿ ದವಡೆಯೂರಿದ ಹಾಗೆ ನೋವಾಗಿ ಎದೆಯೊತ್ತಿಕೊಂಡ, ಕೊಂಚ ಸಾವರಿಸಿಕೊಂಡು ಮಾತನಾಡತೊಡಗಿದ. ವಿಷಯವನ್ನು ಗೋಡೆ ದೇವರಿಂದಲೇ ಆರಂಭಿಸಿದ.
“ಗೋಡೆ ಬಿರುಕು ಬಿಡ್ತು ಅಂದರೆ ಹೊಲದಾಗಿರೋ ಹಸೀಮಣ್ಣನ್ನು ಒಯ್ದು ಗೋಡೆಗೆ ಮೆತ್ತೀರ. ಆ ಗೋಡೇನ ದೇವ್ರು ಅಂತ ಕರ್‍ದು ದೈವ ಅಂತ ಕರ್ದು ಕೈ ಮುಗೀತೀರ – ಗುಡ್ಡ ಕುಸೀಬಾರ್‍ದು ಅಂತ ಇದೆಲ್ಲಾ ಮಾಡ್ತಿರಾ…. ನಿಮಗೆ ಉಡಾಕೆ ಬಟ್ಟೆ ಇಲ್ಲ…. ಉಣ್ಣಾಕೆ ಕೂಳಿಲ್ಲ…. ಕುಡಿಯಾಕೆ ನೀರಿಲ್ಲ…. ನೀವೆಲ್ಲ ಮನುಷ್ರು ಅನ್ನೋದೆ ನಿಮಗೆ ಮರೆತು ಹೋಗೈತೆ. ನಿಮ್ಮನ್ನೆಲ್ಲ ಈ ದುರವಸ್ಥೆಗೆ ತಳ್ಳಿ ನಿಮ್ಮಿಂದ ಈ ಬೆಟ್ಟಾನ ಭದ್ರಪಡಿಸಿಕೊಂಡು…. ಬುಡ ಘಟ್ಟಿಯಾಗೈತೆ ಅನ್ನೋ ನಂಬಿಕೇಲೆ ಬೆಟ್ಟದ ಮೇಲೆ ನಾಯಕರು ಏನ ಮಾಡ್ತಾವ್ರೆ ಗೊತ್ತ ನಿಮಗೆ…. ಗೊತ್ತ ನಿಮಗೆ….?”
ದ್ಯಾವ ತನ್ನವರ ಕಣ್ಣಲ್ಲಿ ಕಣ್ಣಿಟ್ಟು ನೋಡಿದ. ಅವರ ಹೃದಯಗಳಲ್ಲಿ ಇಣುಕಿದ. ಪ್ರತಿಯೊಬ್ಬರ ಅಂತಃಕರಣಕ್ಕೆ ಕೈಹಾಕಿದ.
“ಏನು ಹೇಳು ಮಗ…. ಅದೂ ಕೇಳಿಬಿಡುವ ಹೇಳು….”
ಎಂದು ಫಕೀರಣ್ಣ ಕೇಳಿದ. ಉಳಿದವರು ದನಿಗೂಡಿಸಿದರು.

ದ್ಯಾವ ಹೇಳಲಾರಂಭಿಸಿದ, ತಾನು ಮನೆಬಿಟ್ಟು ನಾಯಕರ ಬೆಟ್ಟವನ್ನೇರಲು ಹೋದುದನ್ನು ವಿವರವಾಗಿ ಬಣ್ಣಿಸಲಾರಂಭಿಸಿದ.

ಬೆಟ್ಟದ ಬುಡದಲ್ಲಿಯೇ ಕಬ್ಬಿಣದ ಗೇಟು. ಗೇಟಿನ ಮುಂದೆ ಕಾವಲು ಕಾಯುವ ಆರಕ್ಷಕರು, ಅವರ ಕೈಯಲ್ಲಿ ಬಂದೂಕುಗಳು, ದ್ಯಾವ ಮರದ ಮರೆಯಲ್ಲಿ ನಿಂತು ಕಾದ. ಆರಕ್ಷಕರ ಪಹರೆ ಬಿಗಿಯಾಗಿತ್ತು. ಅವರ ಕಣ್ಣು ತಪ್ಪಿಸಿ ಒಳಗೆ ಹೋಗುವಂತಿಲ್ಲ. ಆದರೂ ಒಳಗೆ ಹೋಗಬೇಕು, ಮೇಲೆ ಹೊಗಿ ನೋಡಬೆಕು ಎಂಬ ಆಸೆ ಇವನಿಗೆ. ಗೇಟಿನ ಮೂಲಕ ಒಳಗೆ ಹೋಗಬೇಕೆಂಬ ಪ್ರಯತ್ನ ಕೈ ಬಿಟ್ಟ. ಗೇಟಿನಿಂದ ಕೊಂಚ ದೂರ ಸರಿದ. ಕಡಿದಾದ ಬೆಟ್ಟ ಕೊನೆಯದಾಗಿ ತುಟಿ ಹರಕಿ ಕರಿಯಮ್ಮನ ಮನೆ. ಅವಳ ಮನೆ ಹಿಂಬದಿಗೆ ಹೋದ. ಅಲ್ಲಿಂದ ಬೆಟ್ಟವನ್ನೇರತೊಡಗಿದ. ಗಿಡ ಬಳ್ಳಿ ಹಿಡಿದು ಹತ್ತಿದ. ನಡುವೆ ಕೆಳಗೆ ಜಾರಿಬಿದ್ದ. ಮಂಡಿ, ಕಾಲು ತರಚಿಕೊಂಡು ರಕ್ತ ತೊಟ್ಟಿಕ್ಕಿತು. ಆದರೂ ಹತ್ತಿದ. ಹಟ ಬಿಡಲಿಲ್ಲ. ಅರ್ಧ ಬೆಟ್ಟವನ್ನೇರಿದಾಗ ಸುತ್ತಿಕೊಂಡು ಮೇಲೇರುವ ಟಾರು ರಸ್ತೆ ಸಿಕ್ಕಿತು, ಈ ರಸ್ತೆ ಹಿಡಿದು ಸಾಗಿದ ಮೇಲೆ.

ಸ್ವರ್ಗವನ್ನು ಅವನು ನೋಡಿರಲಿಲ್ಲ. ಸ್ವರ್ಗದಲ್ಲಿ ಎಲ್ಲ ಇದೆ ಎಂದು ಕೇಳಿದ್ದ. ಜನ ಹೇಳುವ ಸ್ವರ್ಗ ಇದೇ ಇರಬಹುದು ಅನಿಸಿತು. ಕಣ್ಣು ಕುಕ್ಕುವ ಬಣ್ಣ ಬಣ್ಣದ ದೀಪಗಳು ಬಗೆ ಬಗೆಯ ಗಿಡಗಳಲ್ಲಿ ಬಣ್ಣದ ಅರಳಿದ ಹೂವುಗಳು, ಎಲ್ಲೆಲ್ಲೂ ಹೂದೋಟಗಳು, ಚಿಮ್ಮುವ ಕಾರಂಜಿಗಳು, ಲತಾಮಂಟಪಗಳು, ಮರಗಳಿಗೆ ತೂಗುಬಿದ್ದ ಉಯ್ಯಾಲೆಗಳು.

ದ್ಯಾವ ಕದ್ದು ನೋಡುತ್ತ ಸಾಗಿದ. ನಾಯಕ ಪರಿವಾರ ಮಕ್ಕಳು, ಸ್ನೇಹಿತರು, ಬಳಗದವರು, ಬೆಟ್ಟದಲ್ಲಿ ಎಲ್ಲೆಲ್ಲೂ ಅವರೆ. ಈಜುಕೊಳದಲ್ಲಿ ಅರೆನಗ್ನರಾಗಿ ಈಜುತ್ತಿರುವ ತರುಣಿಯರು, ಅವರಿಗೆ ತೆಕ್ಕೆಬಿದ್ದಿರುವ ಗಂಡಸರು.
ಆಟದ ಮೈದಾನದಲ್ಲಿ ಕೇಕೆ ಹಾಕುತ್ತ ಆಡುತ್ತಿರುವ ಜನ.

ಕ್ಲಬ್ಬಿನಲ್ಲಿ ಒಳಾಂಗಣ ಕ್ರೀಡೆಯಲ್ಲಿ ಮಗ್ನರಾಗಿರುವವರು.
ಸಣ್ಣ ಚಲನಚಿತ್ರ ಮಂದಿರದಲ್ಲಿ ಚಿತ್ರಾಸಕ್ತರು.

ಬಂಗಲೆಯಲ್ಲಿ ನಾಯಕರ ದರ್ಶನ. ನೆಲಕ್ಕೆ ಹಾಸಿದ ಅಮೃತಶಿಲೆಯ ಕಲ್ಲುಗಳು. ಗೋಡೆಗೆ ಇಳಿಬಿದ್ದಿರುವ ರೇಶಿಮೆಯ ಪರದೆಗಳೂ. ಗಾಳಿಯಲ್ಲಿ ತೇಲುತ್ತಿರುವ ಸುಗಂಧ, ಮಂಚದ ಮೇಲೆ ಮಲ್ಲಿಗೆಯ ರಾಶಿ, ಅಕ್ಕಪಕ್ಕದಲ್ಲಿ ಪೂರ್ಣ ನಗ್ನರಾಗಿರುವ ಮೈಕೈ ತುಂಬಿಕೊಂಡಿರುವ ಹುಡುಗಿಯರು, ನಡುವೆ ನಾಯಕರು: ಮುಂದೆ ಕಾಲು ಮೇಲೆತ್ತಿಕೊಂಡು ಮಲಗಿರುವ ಕೋಳಿ, ಪುಕ್ಕ ತೆಗೆದು ಮಸಾಲೆ ಹಾಕಿ ಬೇಯಿಸಿದ್ದರಿಂದ ಇನ್ನೂ ಹಬೆಯಾಡುತ್ತಿದೆ. ಕೋಳಿಯ ಮಗ್ಗುಲಲ್ಲಿ ನೊರೆ ಕಾರುತ್ತಿರುವ ತುಂಬಿದ ಗಾಜಿನ ಲೋಟ. ನಾಯಕರು ಹುಡುಗಿಯರನ್ನು ಅಪ್ಪಿ ಹಿಸುಕಿ ನಗುತ್ತಿದ್ದಾರೆ. ಕೋಳಿಯ ಎಳೆ ಮಾಂಸವನ್ನು ಒಂದು ಬಾರಿ ಕಿತ್ತು ತಿನ್ನುತ್ತಾರೆ. ಹಾಗೆ ನೊರೆಗೆ ಬಾಯಿ ಹಾಕುತ್ತಾರೆ. ಮತ್ತೆ ಹುಡುಗಿಯೊಂದನ್ನು ಹತ್ತಿರ ಎಳೆದುಕೊಳ್ಳುತ್ತಾರೆ.
ದ್ಯಾವ ನೋಡಿದ. ಕದ್ದು ನೋಡಿದ.
ಇಲ್ಲಿ ನಾಯಕರು.
ಅಲ್ಲಿ ನಾಯಕರ ಹೆಂಡತಿ.
ಮತ್ತೊಂದು ಕಡೆ ನಾಯಕರ ಮಗಳು.
ಇನ್ನೊಂದು ಕಡೆ ನಾಯಕರ ಮಗ.
ಮಗದೊಂದು ಕಡೆ ನಾಯಕರ ಪರಿವಾರ, ಬಳಗ!
ನಾಯಕರ ಬೆಟ್ಟದಲ್ಲೆಲ್ಲಾ ಮೋಜು, ಮಜ. ಸುಖದ ತೇಗು. ಸಂತಸದ ಹೂಂಕಾರ. ಆನಂದದ ನರಳಾಟ. ತೃಪ್ತಿಯ ಏದುಸಿರು. ವಿವಿಧ ಬಗೆಯ ಹೂಂಕಾರಗಳು ತ್ಕಾರಗಳು.
“ಅಯ್ಯೋ ನನ್ನ ಬಡಪಾಯಿ ಜನರೆ…. ನೀವಿಲ್ಲಿ ಬೆಟ್ಟದ ಬುಡಕ್ಕೆ ಮಣ್ಣು ಮೆತ್ತಿ ಬೆಟ್ಟಾನ ಗಟ್ಟಿ ಮಾಡ್ತಿದೀರ…. ಅಲ್ಲಿ ನಾಯಕರು ಅವರ ಬಳಗ ಅವರ ಪರಿವಾರ ಅವರ ಸ್ನೇಹಿತರು ಏನು ಮಾಡ್ತಿದಾರೆ ನೋಡಿ…. ನೋಡಿ….”
ದ್ಯಾವ ಕೂಗಿ ಹೇಳಿದ. ತನ್ನ ತಲೆಗೂದಲನ್ನು ಕಿತ್ತುಕೊಂಡ.
ಫಕೀರಣ್ಣ ನಡುವೆ ಬಾಯಿ ಹಾಕಿದ.
“ದ್ಯಾವ…. ಮಗಾ…. ನಮಗೋಸ್ಕರ ಏನೋ ಮಾಡ್ತೀವಿ ಅಂತಾನೆ ನಾಯಕರು ಹೇಳ್ತವ್ರೆ….”
“ಹೇಳಿದ್ದು ಯಾವಾಗ…. ಎಷ್ಟೋರ್ಷ ಆಯಿತು…. ಮೂರು ಐದು ವರ್ಷ….” ದ್ಯಾವ ನಕ್ಕ. ವ್ಯಂಗ್ಯವಾಗಿ ನಕ್ಕ.
“ಇಂತಹ ಐದು ವರ್ಷಗಳು ಮೂರಲ್ಲ…. ಆರು ಕಳೆದುಹೋದರು ಅವರು ನಿಮಗಾಗಿ ಏನೂ ಮಾಡೋದಿಲ್ಲ…. ನೆನಪಿರಲಿ – ನೀವು ಎಲ್ಲೀ ತನಕ ಬುಡಕ್ಕೆ ಮಣ್ಣು
ಮೆತ್ತಿ ನಾಯಕರ ಬೆಟ್ಟಾನ ಭದ್ರವಾಗಿ ಕಾಪಾಡ್ತಾ ಇರ್ತಿರೋ ಅಲ್ಲಿ ತನಕ…. ನಾಯಕರು ಅಲ್ಲಿ ಸುಖವಾಗಿರ್ತಾರೆ…. ನೀವಿಲ್ಲಿ ಹೀಗೆ ಈವತ್ತಿನ ಹಾಗೇ ಊಟ ಬಟ್ಟೆಗೆ ಗತಿ ಇಲ್ದೆ ಸಾಯ್ತಿರತೀರಿ….”
“ಹಾಗಾದ್ರೆ…. ಹಾಗಾದ್ರೆ…. ನಾವು ಏನು ಮಾಡಬೇಕು ಮಗ…. ಅದಾರ ಹೇಳು….” ಥಟ್ಟನೆದ್ದು ನಿಂತ ದ್ಯಾವ.
“ನಾನು ಹೇಳಿದ ಹಾಗೆ ಮಾಡ್ತೀರಾ….”
“ಓ ಹೇಳು ಮಗ…. ಹೇಳು….”
ದ್ಯಾವ ತನ್ನವರೆಲ್ಲರನ್ನು ವಿಶ್ವಾಸದಿಂದ ಪ್ರೀತಿಯಿಂದ ಆತ್ಮೀಯತೆಯಿಂದ ನೋಡುತ್ತ ಹೇಳಲಾರಂಭಿಸಿದ. ಅವರು ಕೇಳುತ್ತ ಕುಳಿತರು.
ಇದಾದ ನಂತರವೇ ಆ ಸುದ್ದಿ ಹೊರಟಿದ್ದು. ನಾಯಕರ ಬೆಟ್ಟ ಕುಸಿಯುತ್ತಿದೆ ಎಂಬ ಸುದ್ದಿ.

ಬೆಟ್ಟದ ಮೇಲೆ ಯುವತಿಯರ ನಡುವೆ ಮೈ ಮರೆತು ಮಲಗಿದ್ದ ನಾಯಕರು ದಡಬಡಿಸಿ ಎದ್ದು ಕಿಟಕಿಯಿಂದ ಹೊರಗೆ ನೋಡುತ್ತಾರೆ. ನಿಜಕ್ಕೂ ಬೆಟ್ಟ ಕುಸಿಯುತ್ತಿದೆ. ದೇವರೇ ದೇವರೇ ಎಂದು ಅವರು ಕಚ್ಚಿಕೊಂಡ ಯುವತಿಯನ್ನು ತಳ್ಳಿ ಬಟ್ಟೆ ಹುಡುಕಿಕೊಂಡು ಹೊರಡುತ್ತಾರೆ. ಅಷ್ಟು ಹೊತ್ತಿಗೆ ಅರಮನೆ ಬಿರುಕು ಬಿಡುತ್ತದೆ. ಈಜುಕೊಳ ಒಡೆಯುತ್ತದೆ. ಟಾರು ಇಬ್ಛಾಗವಾಗುತ್ತದೆ. ನಾಯಕರು ದೇವರೇ ದೇವರೇ ಎಂದು ಕೂಗುತ್ತಾರೆ. ಅವರ ಪರಿವಾರ, ಬಳಗ, ಸ್ನೇಹಿತರು ದನಿಗೂಡಿಸುತ್ತಾರೆ, ದೇವರೆ…. ದೇವ…. ದೇ….
*****
[೧೯೮೨]
ಕೀಲಿಕರಣ ದೋಶ ತಿದ್ದುಪಡಿ: ಶ್ರೀಕಾಂತ ಮಿಶ್ರಿಕೋಟಿ

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

This site uses Akismet to reduce spam. Learn how your comment data is processed.